ಸಿಪಿಐ, ಸಿಪಿಐ(ಎಂ), ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್)-(ಲಿಬರೇಷನ್), ಎಐಎಫ್‌ಬಿ, ಆರ್‌ಪಿಐ(ಅಂಬೇಡ್ಕರ್ ವಾದ), ಸ್ವರಾಜ್ ಇಂಡಿಯಾ ಸೇರಿ 7 ಪಕ್ಷಗಳು 2022ರ ಜನವರಿ 24 ರಂದು ರಾಜ್ಯಾದ್ಯಂತ ಮನೆ ಮನೆಯಿಂದಲೇ ಪ್ರತಿಭಜನೆ ನಡೆಸಿ ಸರ್ಕಾರವು ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಕ್ರಮವಹಿಸಬೇಕು ಮತ್ತು ಪರಿಹಾರವನ್ನು ಒದಗಿಸಬೇಕೆಂದು ಕರೆ ನೀಡಿದೆ.
ಜೀವ ರಕ್ಷಿಸಿ – ಜೀವನ ಉಳಿಸಿ – ಜೀವಿಸಲು ಬಿಡಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿ 15 ಅಂಶಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಪಕ್ಷಗಳು ಒತ್ತಾಯಿಸಿವೆ. ಇಂದು ಏಳು ಪಕ್ಷದ ಮುಖಂಡರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬೇಡಿಕೆಗಳನ್ನು ವಿವರಿಸಿದ್ದಾರೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ಸಿಪಿಐ ರಾಜ್ಯ ಮುಖಂಡ ಪಿ.ವಿ.ಲೋಕೇಶ್, ಎಸ್‌ಯುಸಿಐ(ಸಿ) ಮುಖಂಡ ಎಂ.ಎನ್.ಶ್ರೀರಾಮ್, ಸಿಪಿಐ(ಎಂಎಲ್)-(ಲಿಬರೇಷನ್) ಮುಖಂಡ ಅಪ್ಪಣ್ಣ, ಆರ್‌ಪಿಐ (ಅಂಬೇಡ್ಕರ್‌ವಾದ) ರಾಜ್ಯ ಅಧ್ಯಕ್ಷ ಮೋಹನ್ ರಾಜ್ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಎನ್.ಉಮೇಶ್ ಸ್ವಾಗತಿಸಿದರು ಮತ್ತು ಎಸ್‌ಯುಸಿಐ(ಸಿ) ಮುಖಂಡ ಜ್ಞಾನ ಮೂರ್ತಿ ವಂದಿಸಿದರು.
ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿರುವ ಬಹಿರಂಗ ಮನವಿ ಪತ್ರದ ವಿವರಣೆ ಈ ಕೆಳಗೆ ನೀಡಲಾಗಿದೆ.
————————————————————————————————
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) –ಸಿಪಿಐ(ಎಂ)
ಭಾರತ ಕಮ್ಯುನಿಸ್ಟ್ ಪಕ್ಷ –ಸಿಪಿಐ
ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ (ಕಮ್ಯುನಿಸ್ಟ್)- ಎಸ್‌ಯುಸಿಐ(ಸಿ)
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್‌ವಾದಿ) (ಲಿಬರೇಷನ್) –ಸಿಪಿಐ(ಎಂಎಲ್)-(ಲಿಬರೇಷನ್)
ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ – ಎಐಎಫ್‌ಬಿ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಂಬೇಡ್ಕರ್‌ವಾದ) –ಆರ್‌ಪಿಐ
ಸ್ವರಾಜ್ ಇಂಡಿಯಾ
ರಾಜ್ಯ ಘಟಕಗಳು, ಬೆಂಗಳೂರು
ದಿನಾಂಕ :22.01.2022
ಇವರಿಗೆ,
ಶ್ರೀ ಬಸವರಾಜ್ ಎಸ್.ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
ಮಾನ್ಯರೇ,
ವಿಷಯ: ಕೋವಿಡ್ 3ನೇ ಅಲೆ : ಎದುರಿಸಲು ವಹಿಸಬೇಕಾದ ಕ್ರಮಗಳ ಕುರಿತು ಏಳು ಪಕ್ಷಗಳ ಜಂಟಿ ಮನವಿ
ರಾಷ್ಟ್ರ ಹಾಗೂ ರಾಜ್ಯವು ವಿಶಿಷ್ಟ ಹಾಗೂ ವಿಭಿನ್ನ ಪರಿಸ್ಥಿತಿಯನ್ನು ಕೋವಿಡ್-19 ಸಾಂಕ್ರಾಮಿಕದಿಂದ ಎದುರಿಸುತ್ತಿದೆ. ಕೋವಿಡ್ ಮೊದಲನೇ ಅಲೆಯ ವೇಳೆಯಲ್ಲಿ ಮತ್ತು ಎರಡನೇ ಅಲೆಯ ವೇಳೆಯಲ್ಲಿ ಏಳು ಪಕ್ಷಗಳು ಅಂದಿನ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ಕೋವಿಡ್-19 ರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಒತ್ತಾಯಗಳನ್ನು ಮಾಡಲಾಗಿತ್ತು. ಆದರೆ ಅಂದಿನ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಕ್ರಮವಹಿಸಲಿಲ್ಲ. ಪರಿಣಾಮವಾಗಿ ರಾಜ್ಯದ ಜನತೆ ಹಾಗೂ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಒಳಪಟ್ಟಿದೆ.
ಪ್ರಸ್ತುತ ಮೂರನೇ ಅಲೆಯ ಪರಿಣಾಮವಾಗಿ ರಾಜ್ಯದಲ್ಲಿ ಕೋವಿಡ್ ಪಾಸಿಟೀವಿಟಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾಷ್ಟ್ರದಲ್ಲಿ ಶೇಕಡ 10 ರಿಂದ 20 ರಷ್ಟು ಕೋವಿಡ್ ದೃಢ ದರ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವು ಸೇರಿದೆ ಎಂಬುದು ಆತಂಕಕಾರಿ ಅಂಶವಾಗಿದೆ. 20-01-2022ರ ವರದಿಯಂತೆ ರಾಜ್ಯದಲ್ಲಿ ಒಟ್ಟು 33,76,953 ಸೋಂಕಿತರಿದ್ದು 38,515 ಸಾವುಗಳು ಸಂಭವಿಸಿವೆ. ಪ್ರಸಕ್ತ 2,93,231 ಸಕ್ರಿಯ ಪ್ರಕರಣಗಳಿದ್ದು ಜನವರಿ 20 ರಂದು 47,754 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂಬ ಅಂಶವು ಮತ್ತಷ್ಟು ಆತಂಕಕಾರಿಯಾಗಿದೆ. ಕೋವಿಡ್ ಸೋಂಕಿತರಲ್ಲಿ 96 ಶೇಕಡ ಮನೆಯಲ್ಲೇ ಪ್ರತ್ಯೇಕ ವಾಸದ ಆರೈಕೆಯಲ್ಲಿದ್ದು, ರಾಜ್ಯ ಸರ್ಕಾರದಿಂದ ಅವರಿಗೆ ಸಿಗುತ್ತಿರುವ ನೆರವು ಅತ್ಯಲ್ಪವಾಗಿದೆ. ಇತ್ತೀಚೆಗೆ ಜನವರಿ 18ರಂದು ಹೊರಡಿಸಿರುವ ಆದೇಶದಂತೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ವಿತರಿಸಬೇಕೆಂದು ಆದೇಶಿಸಲಾಗಿದೆ. ರಾಜ್ಯದ ಕೋವಿಡ್ ಸೋಂಕಿತರಲ್ಲಿ ಸುಮಾರು 69 ಶೇಕಡ (2,01,714) ಬೆಂಗಳೂರು ನಗರ ಜಿಲ್ಲೆಯಲ್ಲೇ ಇದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ಕಾರಣದಿಂದಾಗಿ ರಾಜ್ಯದ ಆರ್ಥಿಕತೆಯ ಮೇಲೆ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಏಳು ಪಕ್ಷಗಳು ಜಂಟಿಯಾಗಿ ಈ ಕೆಳಗಿನ ಸಲಹೆಗಳನ್ನು ಬೇಡಿಕೆಗಳ ರೂಪದಲ್ಲಿ ಸಲ್ಲಿಸುತ್ತಿವೆ. ಅವುಗಳನ್ನು ಆಧರಿಸಿ ಕ್ರಮವಹಿಸಬೇಕೆಂದು ಮನವಿ ಮಾಡುತ್ತಿದ್ದೇವೆ.
ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ:
ಕಳೆದೆರೆಡು ಅಲೆಗಳಿಂದ ಮತ್ತು ಸಂಬಂಧಿತ ಲಾಕ್‌ಡೌನ್ ಪರಿಣಾಮವಾಗಿ ಹಾಗೂ ಕೇಂದ್ರ ರಾಜ್ಯ ಸರ್ಕಾರಗಳ ನವ ಉದಾರವಾದಿ ನೀತಿಗಳಿಂದಾಗಿ 2011-12 ರ ಸ್ಥಿರ ಬೆಲೆಗಳ ಆಧಾರದಲ್ಲಿ ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು ಪ್ರಥಮ ಬಾರಿಗೆ 2020-21ರಲ್ಲಿ ಶೇಕಡ -2.6 ರಷ್ಟು ಋಣಾತ್ಮಕ ಬೆಳವಣಿಗೆಯನ್ನು ಕಂಡಿದೆ. 2021-22ರಲ್ಲಿ ಮತ್ತು 2022-23ರಲ್ಲಿ ಇದು ಮತ್ತಷ್ಟು ಋಣಾತ್ಮಕವಾಗಿರುವ ಸಾಧ್ಯತೆಗಳಿವೆ. ಸಂಘಟಿತ ವಲಯದ ಅತಿ ಹೆಚ್ಚು ಉದ್ಯೋಗ ಒದಗಿಸುವ ಕೈಗಾರಿಕಾ ವಲಯವು ಶೇಕಡ -5.1 ರಷ್ಟು ಮತ್ತು ಸೇವಾ ವಲಯವು ಶೇಕಡ -3.1 ರಷ್ಟು ನಕಾರಾತ್ಮಕ ಬೆಳವಣಿಗೆಯನ್ನು ಕಂಡಿವೆ. ರಾಜ್ಯದ ಅತಿ ಸಣ್ಣ ಕೈಗಾರಿಕೆಗಳಲ್ಲಿ 13,348 ಮತ್ತು ಸಣ್ಣ ಕೈಗಾರಿಕೆಗಳಲ್ಲೆ 1,793 ಕೈಗಾರಿಕೆಗಳು ಮುಚ್ಚಲ್ಪಟ್ಟಿದ್ದು ಒಟ್ಟು 1,71,639 ಉದ್ಯೋಗಗಳು ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳು 2020-21 ರ ಸಾಲಿನಲ್ಲಿ ನಷ್ಟವಾಗಿವೆ. ರಾಜ್ಯದ ಎಂಎಸ್‌ಎಂಇಗಳಲ್ಲಿ 2017-18ರಲ್ಲಿ ಪ್ರತಿ ಉದ್ಯಮಕ್ಕೆ 9.08 ಇದ್ದ ಉದ್ಯೋಗಿಗಳ ಸಂಖ್ಯೆಯು 2020-21 ರಲ್ಲಿ 6.6 ಕ್ಕೆ ಕುಸಿದಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ನಡೆಸಿದ ಸರ್ವೇ ಪ್ರಕಾರ 2020 ಏಪ್ರಿಲ್‌ನಲ್ಲಿ ರಾಜ್ಯದಲ್ಲಿನ ನಿರುದ್ಯೋಗ ದರವು ಶೇಕಡ 26.3 ರಷ್ಟು ಏರಿಕೆಯಾಗಿದ್ದು ಶೇಕಡ 29.8 ಕ್ಕೆ ತಲುಪಿರುವುದು ಆತಂಕಕಾರಿ ವಿಷಯ. ರಾಷ್ಟ್ರೀಯ ನಿರುದ್ಯೋಗ ಸರಾಸರಿಯು ಶೇಕಡ 23.5 ರಷ್ಟು ಇರುವಾಗ ರಾಜ್ಯದ ನಿರುದ್ಯೋಗ ದರವು ಶೇಕಡ 29.8 ರಷ್ಟು ಇರುವುದು ಮತ್ತಷ್ಟು ಆತಂಕಕಾರಿ ವಿಷಯವಾಗಿದೆ.
ಪ್ರತಿ ಹಣಕಾಸು ವರ್ಷದಲ್ಲಿ ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ಕೃಷಿ ವಲಯವು ನೀಡುತ್ತಿದ್ದ ಕೊಡುಗೆಯ ಪಾಲು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಾ ಬಂದಿತ್ತು. ಆದರೆ 2019-20 ಮತ್ತು 2020-21ರಲ್ಲಿ ಕೋವಿಡ್-19 ಮತ್ತು ಲಾಕ್‌ಡೌನ್‌ನಿಂದಾಗಿ ಕೈಗಾರಿಕೆ ಮತ್ತು ಸೇವಾ ವಲಯದ ಕೊಡುಗೆಯು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಸಾಪೇಕ್ಷವಾಗಿ ಕೃಷಿ ವಲಯದ ಕೊಡುಗೆಯು ಏರಿಕೆ ಕಾಣುತ್ತಿದೆ. ಆದರೂ ಸಹಾ 2019-20ರಲ್ಲಿ ಶೇಕಡ 12.3 ರಷ್ಟಿದ್ದ ಕೃಷಿ ವಲಯದ ಕೊಡುಗೆಯು 2020-21ರಲ್ಲಿ 6.4 ಕ್ಕೆ ಕುಸಿದಿದೆ. ಆದರೆ 2019ರ ರಾಷ್ಟ್ರೀಯ ಸ್ಯಾಂಪಲ್ ಸರ್ವೇ ವರದಿಯಂತೆ ಗ್ರಾಮೀಣ ಭಾರತದಲ್ಲಿನ ಕೃಷಿ ಕುಟುಂಬಗಳು ಮತ್ತು ಭೂಮಿ ಹಾಗೂ ಜಾನುವಾರು ಹಿಡುವಳಿ ಕುರಿತ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ ಒಟ್ಟು 77.50 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ ಕೃಷಿಯೇತ್ತರ ಕುಟುಂಬಗಳು 35.08 ಲಕ್ಷಗಳಾಗಿವೆ. ಅಂದರೆ ಶೇಕಡ 45.2 ರಷ್ಟು ಕುಟುಂಬಗಳು ಕೃಷಿಯೇತ್ತರ ಆದಾಯ ಮೂಲಗಳನ್ನು ಹೊಂದಿರುವ ಕುಟುಂಬಗಳಾಗಿವೆ. ಕೋವಿಡ್ ಲಾಕ್‌ಡೌನ್ ಪರಿಣಾಮವಾಗಿ ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ದೊಡ್ಡ ಪ್ರಮಾಣದ ಅಸಂಘಟಿತ ಕಾರ್ಮಿಕರು ಮರುವಲಸೆ ಹೋಗಿದ್ದಾರೆ. ಅವರು ಪೂರ್ಣ ಪ್ರಮಾಣದಲ್ಲಿ ನಗರಗಳಿಗೆ ಹಿಂತಿರುಗಿಲ್ಲ. ಇವರ ಒತ್ತಡವು ಗ್ರಾಮೀಣ ಪ್ರದೇಶದ ಆರ್ಥಿಕತೆಯ ಮೇಲೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿನ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಾರಿಯು ಸಹಾ ಅತ್ಯಂತ ನಿರಾಶಾದಾಯಕವಾಗಿದೆ. 2019-20 ರಲ್ಲಿ ಪ್ರತಿ ಕುಟುಂಬಕ್ಕೆ 42 ಸರಾಸರಿ ಮಾನವ ದಿನಗಳ ಕೆಲಸ ಒದಗಿಸಿದ್ದರೆ. 2020-21ರ ಡಿಸೆಂಬರ್ ವೇಳೆಗೆ 42.33 ಸರಾಸರಿ ಮಾನವ ದಿನಗಳ ಕೆಲಸ ಒದಗಿಸಲಾಗಿದೆ. ಯೋಜನೆಯಂತೆ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗವನ್ನು ಖಾತ್ರಿಯಾಗಿ ಒದಗಿಸಬೇಕಿದೆ. 2019-20 ರಲ್ಲಿ 21,241 ಕುಟುಂಬಗಳಿಗೆ ಮತ್ತು 2020-21 ರಲ್ಲಿ 30,028 ಕುಟುಂಬಗಳಿಗೆ ಮಾತ್ರ 100 ದಿನಗಳ ಉದ್ಯೋಗಗಳನ್ನು ಪೂರೈಸಲಾಗಿದೆ. ಆದರೆ ಈ ಒಂದು ವರ್ಷದ ಕಾಲಾವಧಿಯಲ್ಲಿ 7.44 ಲಕ್ಷ ಕುಟುಂಬಗಳು ಹೆಚ್ಚುವರಿಯಾಗಿ ಉದ್ಯೋಗ ಚೀಟಿಯನ್ನು ಉದ್ಯೋಗ ಬಯಸಿ ಪಡೆದಿವೆ ಎಂಬುದು ಪರಿಸ್ಥಿತಿಯ ತೀವ್ರತೆಯನ್ನು ತೋರುತ್ತದೆ.
ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ರಾಜ್ಯ ಸರ್ಕಾರವು ರೂಪಿಸಿ ಅಂಗೀಕರಿಸಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಭೂ ಕಂದಾಯ ತಿದ್ದುಪಡಿ ಕಾಯ್ದೆ, ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳು ರಾಜ್ಯದ ಗ್ರಾಮೀಣ ಆರ್ಥಿಕತೆಯ ಮೇಲಿನ ಪರಿಸ್ಥಿತಿಯನ್ನು ಮತ್ತಷ್ಟು ದುಸ್ಥಿತಿಗೆ ದೂಡಲಿವೆ. ಈಗಾಗಲೇ ಎಪಿಎಂಸಿ ಮಾರುಕಟ್ಟೆಗಳು ಇದರ ಪರಿಣಮಗಳನ್ನು ಎದುರಿಸುತ್ತಿವೆ. ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಭೂಮಿ ಮಾರಾಟ ನೋಂದಾವಣಿಯು ರಾಜ್ಯದ ಉಪನೋಂದಾವಣಿ ಕಚೇರಿಗಳಲ್ಲಿ ಶೇಕಡ 71 ಹೆಚ್ಚಳಗೊಂಡಿರುವ ವರದಿಗಳಿವೆ. ಕೇಂದ್ರ ಸರ್ಕಾರವು ರೂಪಿಸಿದ್ದ ಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅವುಗಳಿಗೆ ಪೂರಕವಾಗಿ ರೂಪಿಸಿದ್ದ ಮೇಲಿನ ತಿದ್ದುಪಡಿ ಕಾಯ್ದೆಗಳು ಕೇಂದ್ರದ ಕೃಷಿ ಕಾಯ್ದೆಗಳು ಉಂಟು ಮಾಡುತ್ತಿದ್ದ ದುಷ್ಪರಿಣಾಮವನ್ನೇ ಸದರಿ ರಾಜ್ಯದ ಶಾಸನಗಳು ಉಂಟು ಮಾಡಲಿವೆ ಎಂಬುದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಮನಗಾಣಬೇಕೆಂದು ಕೋರುತ್ತೇವೆ.
ರಾಜ್ಯದ ಕೈಗಾರಿಕೆಗಳಲ್ಲಿನ 2017-18ರ ಸಾಲಿನ ನಿವ್ವಳ ಮೌಲ್ಯವರ್ಧನೆಯಲ್ಲಿನ ಮಾಲೀಕರ ನಿವ್ವಳ ಲಾಭದ ಪಾಲು ಶೇಕಡ 45.70 ಆದರೆ ಕಾರ್ಮಿಕರ ವೇತನದ ಪಾಲು ಶೇಕಡ 18.04 ರಷ್ಟಾಗಿದೆ. ರಾಜ್ಯದಲ್ಲಿ 20ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ವಿದ್ಯುತ್ ಚಾಲಿತ ಕಾರ್ಖಾನೆಗಳ ಪ್ರಮಾಣ ಶೇಕಡ 41.36 ರಷ್ಟಾಗಿದ್ದರೆ ವಿದ್ಯುತ್ ರಹಿತ 40 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳ ಪಾಲು ಶೇಕಡ 64.20 ರಷ್ಟಾಗಿದೆ. 300ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳ ಪ್ರಮಾಣವು ಶೇಕಡ 90.76 ರಷ್ಟಾಗಿದೆ. ರಾಜ್ಯ ಸರ್ಕಾರವು ಈ ಹಿಂದೆ ಕೋವಿಡ್ ಕಾಲಾವಧಿಯಲ್ಲಿ ಕೈಗಾರಿಕಾ ಉದ್ಯೋಗಗಳ ಸ್ಥಾಯಿ ಆದೇಶಗಳ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದಾಗಿ ನಿಶ್ಚಿತ ಅವಧಿಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮಾಲೀಕರಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಪರಿಣಾಮವಾಗಿ ಹಲವು ಕಾರ್ಖಾನೆಗಳಲ್ಲಿ ಖಾಯಂ ಕಾರ್ಮಿಕರನ್ನು ಬಲವಂತದ ಸ್ವಯಂ ನಿವೃತ್ತಿಯ ಮೇಲೆ ಹೊರದೂಡಿ ನಿಶ್ಚಿತಾವಧಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪ್ರವೃತ್ತಿಯು ಹೆಚ್ಚುತ್ತಿದೆ. ಕೇಂದ್ರ ಸರ್ಕಾರವು ರೂಪಿಸಿರುವ ಪಾಪರಿಕೆ ಮತ್ತು ದಿವಾಳಿ ಸಂಹಿತೆ (ಐ ಅಂಡ್ ಬಿ ಕೋಡ್) ಬಳಸಿ ಹಲವು ಕಾರ್ಖಾನೆಗಳು ಯಾವುದೇ ಪರಿಹಾರ ನೀಡದೆ ಕಾರ್ಮಿಕರನ್ನು ಬೀದಿಗೆ ತಳ್ಳುವ ಅಥವಾ ಕಡಿಮೆ ವೇತನಕ್ಕೆ ಮತ್ತೆ ಹೊಸದಾಗಿ ನೇಮಿಸಿಕೊಳ್ಳುವ ಪ್ರವೃತ್ತಿಯಲ್ಲಿ ತೊಡಗಿವೆ. ಕೇಂದ್ರದ ನೂತನ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರವು ನಿಯಮಾವಳಿಗಳನ್ನು ರೂಪಿಸುವಲ್ಲಿ ತೊಡಗಿದೆ. ನೂತನ ಕಾರ್ಮಿಕ ಸಂಹಿತೆಗಳು ಜಾರಿಯಾದಲ್ಲಿ ರಾಜ್ಯದ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳು ಇಲ್ಲದಾಗಲಿವೆ. ಮಾತ್ರವಲ್ಲದೆ ರಾಜ್ಯದ ಆರ್ಥಿಕತೆಯೂ ಇದರಿಂದಾಗಿ ಬಾಧಿತವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. 2020 ಮತ್ತು 2021 ರಲ್ಲಿ ರಾಜ್ಯ ಸರ್ಕಾರವು ಪ್ರಕಟಿಸಿರುವ ಕೋವಿಡ್-19 ಲಾಕ್‌ಡೌನ್ ಪರಿಹಾರ ಹಣವು ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ತಲುಪಿಲ್ಲ.
ಕೋವಿಡ್ ಅಲೆಗಳಿಂದಾಗಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿಯು ಅತ್ಯಂತ ದುಸ್ಥಿತಿಗೆ ತಲುಪಿದೆ. ಪೋಷಕರ ಆದಾಯಗಳಲ್ಲಿನ ಇಳಿಕೆಯಿಂದಾಗಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹರಿದು ಬರುತ್ತಿರುವುದನ್ನು ಗಮನಿಸಬಹುದಾಗಿದೆ. 6 ರಿಂದ 14 ವರ್ಷದ ವಯೋಮಾನದ ಮಕ್ಕಳಲ್ಲಿ 2020 ರಲ್ಲಿ ಶೇಕಡ 68.6 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದರೆ 2020ರಲ್ಲಿ ಶೇಕಡ 77.7 ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಮನೆಗಳಲ್ಲಿ ಸ್ಮಾರ್ಟ್ ಫೋನ್ ಹೊಂದಿದ್ದು ಶಾಲೆಗಳಿಗೆ ದಾಖಲಾಗಿರುವ ಮಕ್ಕಳ ಪ್ರಮಾಣ 2018 ರಲ್ಲಿ ಶೇಕಡ 43.1 ರಷ್ಟಿದ್ದದ್ದು, 2021 ರಲ್ಲಿ ಶೇಕಡ 71.6 ಕ್ಕೆ ಹೆಚ್ಚಳವಾಗಿದೆ. ಅದರಲ್ಲಿ ಎಲ್ಲಾ ಸಮಯದಲ್ಲೂ ಸ್ಮಾರ್ಟ್ ಫೋನ್ ಲಭ್ಯತೆ ಹೊಂದಿದ್ದ ಮಕ್ಕಳ ಪ್ರಮಾಣ ಶೇಕಡ 35.6 ರಷ್ಟಾಗಿದೆ. ಕೆಲವೊಮ್ಮೆ ಲಭ್ಯತೆ ಹೊಂದಿದವರ ಪ್ರಮಾಣ ಶೇಕಡ 52.7 ರಷ್ಟಾಗಿದೆ. ರಾಜ್ಯದ ಶೇಕಡ 34.1 ಮಕ್ಕಳು ಮಾತ್ರ ಆನ್‌ಲೈನ್ ಶಿಕ್ಷಣ ಮತ್ತು ಶೇಕಡ 43.9 ಮಕ್ಕಳು ದೂರ ಶಿಕ್ಷಣ ಮೂಲಕ ಕಲಿಕೆಯ ಚಟುವಟಿಕೆಗಳನ್ನು ಮನೆಯಿಂದ ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಮುಚ್ಚಿರುವ ಮತ್ತು ಆನ್‌ಲೈನ್ ಮೂಲಕ ಅಥವಾ ದೂರ ಶಿಕ್ಷಣ ಮೂಲಕ ಶಿಕ್ಷಣ ನೀಡುವ ಸರ್ಕಾರದ ಕ್ರಮಗಳು ಪರಿಣಾಮಕಾರಿಯಾಗಿ ತಲುಪುತ್ತಿಲ್ಲ ಎಂಬುದನ್ನು ರಾಜ್ಯ ಸರ್ಕಾರವು ಮನಗಾಣಬೇಕಿದೆ.
ಕೋವಿಡ್ ಸೋಂಕಿತರ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ ಆರೈಕೆಯಲ್ಲೇ ಶೇಕಡ 96 ರಷ್ಟು ಸೋಂಕಿತರು ಪ್ರತ್ಯೇಕ ವಾಸದಲ್ಲಿದ್ದರೂ ಅವರಿಗೆ ಅಗತ್ಯ ನೆರವು ಲಭಿಸುತ್ತಿಲ್ಲ. ಪರಿಣಾಮವಾಗಿ ಪ್ರತ್ಯೇಕ ವಾಸದಲ್ಲಿರುವ ಸೋಂಕಿತರ ಪರಿಸ್ಥಿತಿಯು ಮತ್ತಷ್ಟು ದುಸ್ಥಿತಿಗೆ ದೂಡಲ್ಪಡುತ್ತಿದೆ. ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದ್ದರೂ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇಂದಿಗೂ ಸಹಾ ಅಂತರ ಕಾಯ್ದುಕೊಂಡು ಪ್ರಯಾಣಿಕರಿಗೆ ಸೇವೆ ಒದಗಿಸುವ, ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸುವ, ಪ್ರತಿ ಟ್ರಿಪ್‌ನ ನಂತರ ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಇಲ್ಲದಾಗಿದೆ. ದೊಡ್ಡ ಸಂಖ್ಯೆಯಲ್ಲಿರುವ ಅಸಂಘಟಿತ ವಲಯದ ಶ್ರಮಿಕರಿಗೆ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳು ಲಭ್ಯವಿಲ್ಲದಾಗಿದೆ. ಕೋವಿಡ್ ಮೊದಲನೆ ಮತ್ತು ಎರಡನೆ ಅಲೆಯ ವೇಳೆ ಸೋಂಕಿತರಿಗೆ ಹಾಸಿಗೆ, ಆಮ್ಲಜನಕ, ಐಸಿಯು, ಔಷಧಿ ಒದಗಿಸುವಲ್ಲಿ ಕೊರತೆಗಳು, ಖಾಸಗಿ ಆಸ್ಪತ್ರೆಗಳ ಅಸಹಕಾರವು, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕಾದ ಅವಶ್ಯಕತೆಯನ್ನು ಎತ್ತಿ ತೋರಿದೆ.
ರಾಜ್ಯದ ಜನತೆ ಜೀವ ರಕ್ಷಿಸಿಕೊಳ್ಳಲು ಮತ್ತು ಜೀವನ ಉಳಿಸಿಕೊಳ್ಳಲು ಸಾಹಸ ಪಡುತ್ತಿರುವಾಗ, ರಾಜ್ಯದ ಜನತೆಯ ಐಕ್ಯತೆಯನ್ನು ಕಾಪಾಡಬೇಕಾದ, ಜೀವ ರಕ್ಷಿಸಿ-ಜೀವನ ಉಳಿಸಬೇಕಾದ ರಾಜ್ಯ ಸರ್ಕಾರವು ಜನತೆಯನ್ನು ಜಾತಿ ಮತ್ತು ಮತ ಧರ್ಮಗಳ ಆಧಾರಿತವಾಗಿ ವಿಭಜಕ ಕೆಲಸದಲ್ಲಿ ತೊಡಗಿರುವ ಶಕ್ತಿಗಳಿಗೆ ಸಹಕಾರಿಯಾಗಿ ಕ್ರಮವಹಿಸುತ್ತಿರುವುದನ್ನು ಏಳು ಪಕ್ಷಗಳು ಖಂಡಿಸುತ್ತವೆ. ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿರುವ ಧಾರ್ಮಿಕ ಸ್ವಾತಂತ್ರ ಹಕ್ಕುಗಳ ಸಂರಕ್ಷಣಾ ವಿಧೇಯಕ-2021, ವಾಸ್ತವದಲ್ಲಿ ಮತಾಂತರ ನಿಷೇಧ ಕಾಯ್ದೆಯಾಗಿದೆ. ಇದು ಭಾರತದ ಸಂವಿಧಾನದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಇಲ್ಲದಾಗಿಸಿ, ಕೋಮು ದೃವೀಕರಣಕ್ಕೆ ಅನುವುಗೊಳಿಸಿ ಜನತೆಯನ್ನು ಜೀವಿಸಲು ಬಿಡದ ಕ್ರಮವಾಗಿದೆ.
21-01-2022 ರಂದು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಮದುವೆ ಸಮಾರಂಭಗಳಿಗೆ 200 ರವರೆಗೆ ಗರಿಷ್ಠ ಜನರ ಸೇರುವಿಕೆಗೆ ಅವಕಾಶ ಕಲ್ಪಿಸಿರುವಾಗ ಮತ್ತು ವಾರಾಂತ್ಯದ ಕರ್ಫ್ಯೂ ಮರು ತೆರವುಗೊಳಿಸಿರುವಾಗ ರಾಜಕೀಯ ಸಮಾರಂಭ ಹಾಗೂ ಜನರ ಹೋರಾಟಗಳಿಗೆ ಮಾತ್ರ ಅವಕಾಶ ಕಲ್ಪಿಸದಿರುವ ಕ್ರಮವು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧದ ಧ್ವನಿ ಅಡಗಿಸುವ ಕ್ರಮವಾಗಿದೆ. ಕೂಡಲೆ ಪ್ರತಿಭಟನೆ, ಹೋರಾಟ, ಧರಣಿ, ಮೆರವಣಿಗೆ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು.
ಈ ಎಲ್ಲಾ ಹಿನ್ನೆಲೆಯಲ್ಲಿ ಏಳು ಪಕ್ಷಗಳು ಹಮ್ಮಿಕೊಂಡಿರುವ “ಜೀವ ರಕ್ಷಿಸಿ-ಜೀವನ ಉಳಿಸಿ-ಜೀವಿಸಲು ಬಿಡಿ” ಅಭಿಯಾನದ ಭಾಗವಾಗಿ ಈ ಕೆಳಗಿನಂತೆ ತಮ್ಮಲ್ಲಿ ಮನವಿ ಮಾಡುತ್ತೇವೆ.
- ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ಲಾಕ್‌ಡೌನ್, ವಾರಾಂತ್ಯ ಕರ್ಫ್ಯೂ ಸಂತ್ರಸ್ಥರಿಗೆ ಪರಿಹಾರ ಒದಗಿಸಬೇಕು. ಸಾರ್ವತ್ರಿಕವಾಗಿ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಿಸಬೇಕು.
- ಮನೆ ಆರೈಕೆಯಲ್ಲಿರುವ ಸೋಂಕಿತರಿಗೆ ಅಗತ್ಯ ನೆರವು ನೀಡಬೇಕು. ವಾರ್ಡುವಾರು ನಿರ್ದಿಷ್ಟ ನೌಕರರನ್ನು ನಿಯೋಜಿಸಿ, ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿ ಉಚಿತ ಪೌಷ್ಠಿಕ ಆಹಾರ ಒದಗಿಸಬೇಕು.
- ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಿ ಮೃತರ ಕುಟುಂಬದವರಿಗೆ ತಲಾ 4 ಲಕ್ಷ ಪರಿಹಾರ ನೀಡಬೇಕು. ಕೋವಿಡ್ ವಾರಿಯರ್ಸ್ ಗಳ ಜೀವನ ಭದ್ರತೆಗೆ ಅಗತ್ಯ ಕ್ರಮವಹಿಸಬೇಕು.
- ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚಿಸಬೇಕು. ಆರೋಗ್ಯ ವಲಯಕ್ಕೆ ಬಜೆಟ್ ಅನುದಾನವನ್ನು ಹೆಚ್ಚಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು.
- ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೂ 10 ಸಾವಿರ ನೇರ ನಗದು ವರ್ಗಾವಣೆ ಮಾಡುವ ಮೂಲಕ ಜನತೆಯಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ರಾಜ್ಯದ ಆರ್ಥಿಕತೆಯನ್ನು ಪುನರ್‌ಶ್ಚೇತನಗೊಳಿಸಬೇಕು.
- ಪ್ರತಿ ಕುಟುಂಬಕ್ಕೂ ತಲಾ 10 ಕೆ.ಜಿ ಉಚಿತ ಪಡಿತರ ವಿತರಿಸಬೇಕು.
- 200 ದಿನಗಳ ಉದ್ಯೋಗಗಳನ್ನು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಒದಗಿಸಬೇಕು. ಕೂಲಿಯನ್ನು ರೂ.600 ಕ್ಕೆ ಹೆಚ್ಚಿಸಬೇಕು. ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ ನಗರಗಳಿಂದ ಗ್ರಾಮೀಣ ಪ್ರದೇಶಕ್ಕೆ ಅಸಂಘಟಿತರ ಮರುವಲಸೆಯನ್ನು ತಡೆಯಬೇಕು.
- ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅಗತ್ಯ ಕ್ರಮವಹಿಸಬೇಕು. ಕೋವಿಡ್‌ನಿಂದಾಗಿ ಉಂಟಾಗಿರುವ ಜನತೆಯ ಆದಾಯ ಕೊರತೆಯ ಹಿನ್ನೆಲೆಯಲ್ಲಿ ಎಲ್ಲಾ ಶುಲ್ಕಗಳನ್ನು ಮನ್ನಾ ಮಾಡಬೇಕು. ವಿದ್ಯಾರ್ಥಿಗಳ ಹಾಸ್ಟೆಲ್ ಭತ್ಯೆ, ಅಕ್ಷರ ದಾಸೋಹ ಪಡಿತರ, ಸ್ಕಾಲರ್‌ಶಿಪ್ ಹಾಗೂ ಫೆಲೋಶಿಪ್‌ಗಳನ್ನು ವಿದ್ಯಾರ್ಥಿಗಳಿಗೆ ಅಥವಾ ಅವರ ಕುಟುಂಬಗಳಿಗೆ ಪಾವತಿಸಬೇಕು.
- ಕಾರ್ಮಿಕ ವಿರೋಧಿ, ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಬಾರದು. ಕಾರ್ಮಿಕ ಸಂಘಗಳ ಮಾನ್ಯತೆಗೆ, ಗುತ್ತಿಗೆ ಮುಂತಾದ ಖಾಯಂಯೇತ್ತರರ ಖಾಯಂಗೆ, ಅಸಂಘಟಿತರಿಗೆ ಶಾಸನಬದ್ಧ ಭವಿಷ್ಯ ನಿಧಿಗಾಗಿ ಶಾಸನ ರೂಪಿಸಬೇಕು.
- ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆ, ಭೂ ಕಂದಾಯ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸ್ಸಿನಂತೆ ನಿಗದಿಪಡಿಸಿ ಜಾರಿಗೊಳಿಸುವ ಶಾಸನ ರೂಪಿಸಬೇಕು.
- ಮತಾಂತರ ನಿಷೇಧ ವಿಧೇಯಕವನ್ನು ಹಿಂಪಡೆಯಬೇಕು.
- ಬೆಲೆ ಏರಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕು.
- ರೈತರ, ಕೂಲಿಕಾರರ ಹಾಗೂ ಕಾರ್ಮಿಕರ ಸಾಲಗಳನ್ನು ಮತ್ತು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಪಡೆದಿರುವ ಸಾಲಗಳನ್ನು ಮನ್ನಾ ಮಾಡಬೇಕು. ರೈತರ ಹಾಗೂ ಕೂಲಿಕಾರರಿಗೆ ಪ್ರಕೃತಿ ವಿಕೋಪಗಳಿಂದುಂಟಾದ ಸಾಲಕ್ಕೆ ಪರಿಹಾರ ಒದಗಿಸುವ ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು.
- ಜಲ ಜೀವನ್ ಮಿಷಿನ್ ಯೋಜನೆಯಡಿಯಲ್ಲಿ ಗ್ರಾಮೀಣ ಕುಡಿಯುವ ನೀರಿಗೆ ಮೀಟರ್ ಅಳವಡಿಸಿ ಜನರಿಂದ ಶುಲ್ಕ ವಸೂಲಿ ಮಾಡುವ ಶಿಫಾರಸನ್ನು ಹಿಂತೆಗೆದುಕೊಳ್ಳಿ.
- ರಾಜ್ಯದ ಶಿಕ್ಷಣವನ್ನು ವ್ಯಾಪಾರೀಕರಣ ಮತ್ತು ವಾಣಿಜ್ಯೀಕರಣಕ್ಕೆ ಮುಕ್ತವಾಗಿ ತೆರೆದಿಡುವ ಹಾಗೂ ಶಿಕ್ಷಣದಲ್ಲಿನ ಧರ್ಮನಿರಪೇಕ್ಷ ಮೌಲ್ಯಗಳನ್ನು ಇಲ್ಲದಾಗಿಸುವ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಬಾರದು.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿಗಳು,
ಯು. ಬಸವರಾಜ, ಕಾರ್ಯದರ್ಶಿ, ಸಿಪಿಐ(ಎಂ)
ಸಾಥಿ ಸುಂದರೇಶ್, ಕಾರ್ಯದರ್ಶಿ, ಸಿಪಿಐ
ಕೆ. ಉಮಾ, ಕಾರ್ಯದರ್ಶಿ, ಎಸ್‌ಯುಸಿಐ(ಸಿ)
ಕ್ಲಿಫ್ಟನ್ ಡಿ ರೋಜಾರಿಯೋ, ಕಾರ್ಯದರ್ಶಿ, ಸಿಪಿಐ(ಎಂಎಲ್) (ಲಿಬರೇಷನ್)
ಜಿ. ಆರ್. ಶಿವಶಂಕರ್, ಕಾರ್ಯದರ್ಶಿ, ಎಐಎಫ್‌ಬಿ
ಚಾಮರಸ ಮಾಲೀ ಪಾಟೀಲ, ಅಧ್ಯಕ್ಷರು, ಸ್ವರಾಜ್ ಇಂಡಿಯಾ
ಮೋಹನ್ ರಾಜ್, ಅಧ್ಯಕ್ಷರು, ಆರ್‌ಪಿಐ (ಅಂಬೇಡ್ಕರ್‌ವಾದ)