ಕೇರಳ ರಾಜ್ಯ ಸರಕಾರ ಸೂಚಿಸಿದ ಶ್ರೀ ನಾರಾಯಣ ಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ ಕೇಂದ್ರ ಸರಕಾರ, ಸಾಮಾಜಿಕ ಬದಲಾವಣೆಯ ಹರಿಕಾರ ಶ್ರೀ ನಾರಾಯಣ ಗುರುಗಳಿಗೆ ಅಪಚಾರವೆಸಗಿದೆ. ಆ ಮೂಲಕ ಹಿಂದುಳಿದ ಹಾಗೂ ಶೋಷಿತ ಜನ ಸಮುದಾಯಗಳನ್ನು ಅಪಮಾನಿಸಿದೆ. ಇದು ದೇಶ ಮಟ್ಟದಲ್ಲಿ ವ್ಯಾಪಕವಾಗಿ ಖಂಡನೆಗೆ ಹಾಗೂ ಠೀಕೆಗೊಳಗಾಗಿದೆ. ಕೇಂದ್ರ ಸರಕಾರ ಮತ್ತು ಬಿಜೆಪಿಯು ಆ ಕುರಿತು ಸಮರ್ಪಕ ಕಾರಣ ನೀಡಿ ತಮ್ಮನ್ನು ಸಮರ್ಥಿಸಿಕೊಳ್ಳುವಲ್ಲಿ ಘೋರವಾಗಿ ವಿಫಲವಾಗಿವೆ.
ಇದರಿಂದಾಗಿ, ಹಿಂದುಳಿದ ಹಾಗೂ ಶೋಷಿತ ಜನ ಸಮುದಾಯಗಳ ನಡುವೆ ತನಗೆ ರಾಜಕೀಯವಾಗಿ ಹಿನ್ನಡೆಯಾಗಬಹುದೆಂದು ಬೆದರಿದ ಬಿಜೆಪಿ ತನ್ನ ತಪ್ಪನ್ನು ಜನತೆಯ ನಡುವೆ ಮುಚ್ಚಿಕೊಳ್ಳಲು ಮತ್ತು ಆ ವಿಚಾರವನ್ನು ಮರೆ ಮಾಚಲು ಹಲವು ಸುಳ್ಳುಗಳನ್ನು ಮತ್ತು ಆ ಕುರಿತು ಪ್ರಶ್ನಿಸಿದವರ ಹಾಗೂ ಪಕ್ಷಗಳ ಮೇಲೆ ಆಧಾರ ರಹಿತ ಆಪಾದನೆಗಳನ್ನು ಮಾಡುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಬಿಜೆಪಿಯ ಜನ ವಿರೋಧಿ ನಡೆಯನ್ನು ಬಲವಾಗಿ ಖಂಡಿಸುತ್ತದೆ.
ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿಗೆ, ಶ್ರೀ ನಾರಾಯಣ ಗುರುಗಳ ಕುರಿತು ಅಪಾರ ಗೌರವವಿದೆಯೆಂದು ಅದರ ಮುಖಂಡತ್ವ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ನಿಜವಾಗಲೂ ತಮ್ಮ ಪಕ್ಷಕ್ಕೆ ಹಾಗೂ ಸರಕಾರಗಳಿಗೆ ಗೌರವವಿದ್ದರೇ, ಯಾಕೆ ಕೇರಳ ಸರಕಾರದ ಸ್ಥಬ್ದ ಚಿತ್ರವನ್ನು ನಿರಾಕರಿಸಲಾಯಿತು? ಯಾಕೆ ಶ್ರೀ ನಾರಾಯಣ ಗುರುಗಳ ಪ್ರತಿಮೆಯ ಜಾಗದಲ್ಲಿ ಬದಲಿ ಪ್ರತಿಮೆ ಇಡಲು ಸೂಚಿಸಲಾಯಿತು? ಎಂಬ ಕುರಿತು ಸ್ಪಷ್ಠನೆ ನೀಡಬೇಕಲ್ಲವೇ? ಅದು ಬಿಟ್ಟು, ಪ್ರಗತಿಪರರ ಹಾಗೂ ಸಾಮಾಜಿಕ ಬದಲಾವಣೆಯ ಹರಿಕಾರರ ಕುರಿತ ಕೇಂದ್ರ ಸರಕಾರದ ಮಲಿನ ಜನವಿರೋಧಿ ನಿಲುಮೆಯನ್ನು ಪ್ರಶ್ನಿಸಿದವರ ಮೇಲೆ ಆಧಾರ ರಹಿತ ಸುಳ್ಳು ಅಪಾದನೆಗಳನ್ನು ಮಾಡುವ ಮೂಲಕ, ವಿಷಯಾಂತರ ಕೆಲಸದಲ್ಲಿ ತೊಡಗಿರುವುದು ಸರಿಯೇ? ಆ ಮೂಲಕ ತನ್ನ ತಪ್ಪನ್ನು ಬಿಜೆಪಿ ಅಪ್ರತ್ಯಕ್ಷವಾಗಿ ಒಪ್ಪಿಕೊಂಡಂತಲ್ಲವೇ? ಎಂದು ಸಿಪಿಐ(ಎಂ) ಪ್ರಶ್ನಿಸುತ್ತದೆ.
ಹಿಂದುಳಿದವರು, ಶೋಷಿತ ಜನ ಸಮುದಾಯಗಳು ಎಚ್ಚೆತ್ತುಕೊಂಡಿವೆ. ಜಾತಿ ತಾರತಮ್ಯ, ಅಸ್ಪೃಶ್ಯಾಚರಣೆ ಹಾಗೂ ಲಿಂಗ ತಾರತಮ್ಯಗಳಿಂದ ನಲುಗುವ ಶೋಷಿತ ಜನ ಸಮುದಾಯಗಳನ್ನು ಇಂತಹ ಆಧಾರ ರಹಿತ ಸುಳ್ಳುಗಳ ಮೂಲಕ ಇನ್ನೆಷ್ಠು ದಿನ ವಂಚಿಸಲು ಸಾಧ್ಯ?! ಎಂದಿದೆ ಮತ್ತು ಇದು ಬಿಜೆಪಿ ಮತ್ತು ಅದರ ನಾಯಕ ಆರ್.ಎಸ್.ಎಸ್.ಗಳು ಹಿಡಿದಿರುವ ಅಧಃಪತನದ ಹಾದಿಯನ್ನು ತೆರೆದು ತೋರುತ್ತದೆ ಎಂದು ಸ್ಪಷ್ಟ ಪಡಿಸಿದೆ.
ಸ್ವತಃ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರು ಮೂರು ವರ್ಷಗಳಿಗೊಮ್ಮೆ ಸ್ಥಬ್ದ ಚಿತ್ರ ಆಯ್ಕೆ ಮಾಡಲಾಗುತ್ತದೆ ಎಂದು ರಾಜ್ಯದ ಜನತೆಗೆ ಸುಳ್ಳು ಹೇಳುತ್ತಾರೆ. ಆದರೇ ಮುಖ್ಯಮಂತ್ರಿಗಳು ಕಳೆದ ಒಂದು ದಶಕದಿಂದ ನಿರಂತರವಾಗಿ ಪ್ರತಿವರ್ಷ ಕರ್ನಾಟಕದ ಸ್ಥಬ್ದ ಚಿತ್ರ ಆಯ್ಕೆಯಾಗುತ್ತಿದೆ ಎನ್ನುವ ಮೂಲಕ ತಮ್ಮ ಸಂಪುಟದ ಸಚಿವರ ಮಾತನ್ನು ಅಲ್ಲಗಳೆಯುತ್ತಾರೆ.
ಕೇರಳದಲ್ಲಿ ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಅಪಮಾನ ಮಾಡಿದ ಕೇಸಿನಲ್ಲಿ ಬಂಧನಕ್ಕೊಳಗಾದವರು ಯಾರು? ಹಿಂದೂ ಮತಾಂಧರೇ ಹೊರತು ಬೇರೆಯವರಲ್ಲಾ ಎಂಬುದನ್ನು ನೆನಪಿಸಿದೆ.
ದೇಶದ ರೈತರು – ಕಾರ್ಮಿಕರ ನಿರಂತರವಾದ ಸಮರ ಶೀಲ ಹೋರಾಟಕ್ಕೆ ಮಣಿದು, ರೈತರು, ಕೂಲಿಕಾರರು ಹಾಗೂ ಕಸುಬುದಾರರ ಕೈನಿಂದ ವ್ಯವಸಾಯವನ್ನು ಕಿತ್ತುಕೊಂಡು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ವರ್ಗಾಯಿಸುವ ರೈತ ವಿರೋಧಿ ಕಾಯ್ದೆಗಳನ್ನು, ಪ್ರಧಾನ ಮಂತ್ರಿಗಳು ದೇಶದ ಮುಂದೆ ಮಂಡಿಯೂರಿ ಕೈ ಮುಗಿದು ಕ್ಷಮೆ ಕೇಳಿ ವಾಪಾಸು ಪಡೆಯಲಿಲ್ಲವೇ? ಅದೇ ರೀತಿ, ಅದಕ್ಕೂ ಮುನ್ನ ಚಳುವಳಿಗಳನ್ನು ದಮನ ಮಾಡಲು ಮತ್ತು ಆಧಾರ ರಹಿತವಾಗಿ ಚಳುವಳಿಕಾರರನ್ನು ನಿಂದಿಸುವ ಮೂಲಕ ದೇಶದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡಲಿಲ್ಲವೇ?
ಪ್ರಧಾನ ಮಂತ್ರಿಗಳೇ ತಪ್ಪೆಂದು ಒಪ್ಪಿಕೊಂಡು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆದಿರುವಾಗ, ನಮ್ಮ ರಾಜ್ಯ ಸರಕಾರ ಅವುಗಳ ಜಾರಿಯ ಮೂರು ಕಾಯ್ದೆಗಳನ್ನು ಹಾಗೆ ಉಳಿಸಿಕೊಂಡು ವಂಚಿಸುತ್ತಿಲ್ಲವೇ? ಮತ್ತು ಅದು ಕರ್ನಾಟಕದ ರೈತ- ಕಾರ್ಮಿಕರು ಮೂತಿಗೆ ಇಕ್ಕುವುದನ್ನು ನಿರ್ಲಜ್ಯತನದಿಂದ ಕಾಯುತ್ತಿಲ್ಲವೇ?! ಎಂದು ಸಿಪಿಐ(ಎಂ) ಛೇಡಿಸಿದೆ.
ಹೀಗಾಗಿ ಬಿಜೆಪಿ ತಪ್ಪು ಮಾಡುವುದು ಮತ್ತು ಅದನ್ನು ಸಮರ್ಥಿಸಿಕೊಳ್ಳುವುದು ಮತ್ತು ವಿಷಾಯಾಂತರ ಮಾಡಿ ಜನತೆಯ ದಾರಿ ತಪ್ಪಿಸಲು ಯತ್ನಿಸುವುದು ಅದರ ಜಾಯಮಾನವಾಗಿದೆ.
ಈಗಲಾದರೂ, ಕೇಂದ್ರ ಸರಕಾರ ಹಾಗೂ ಬಿಜೆಪಿ ತನ್ನ ತಪ್ಪನ್ನು ತಿದ್ದಿಕೊಂಡು ಕೇರಳ ಸರಕಾರದ ಶ್ರೀ ನಾರಾಯಣ ಗುರು ಸ್ಥಬ್ದ ಚಿತ್ರವನ್ನು ಒಪ್ಪಿಕೊಳ್ಳಬೇಕೆಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ