ಪ್ರಕಾಶ್ ಕಾರಟ್
‘ಎಲ್ಐಸಿಯ ಲಿಸ್ಟಿಂಗ್ ಮತ್ತು ಅದರ ಬಂಡವಾಳ ವಾಪಸ್ ಪಡೆಯುವುದರಿಂದ ದುರ್ಬಲ ಜನವಿಭಾಗಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಂಸ್ಥೆಯಾಗಿ ಅದರ ಪಾತ್ರ ಆಮೂಲಾಗ್ರವಾಗಿ ಬದಲಾಗುತ್ತದೆ. ಕೋಟ್ಯಂತರ ಸಂಖ್ಯೆಯ ಸಣ್ಣ ಪಾಲಿಸಿದಾರರ ಪ್ರಮುಖ ಪಾತ್ರವನ್ನು ಇದು ನಗಣ್ಯಗೊಳಿಸಿ. ಲಾಭ ಬಡುಕ ಶ್ರೀಮಂತ ಹೂಡಿಕೆದಾರರ ಪರವಾಗಿ ಪಾತ್ರ ನಿರ್ವಹಿಸುವಂತೆ ಮಾಡುತ್ತದೆ. ಪರೋಕ್ಷವಾಗಿ, ಕುಟುಂಬಗಳ ಉಳಿತಾಯದ ಬೃಹತ್ ಮೊತ್ತದ ನಿಯಂತ್ರಣವನ್ನು ವಿದೇಶಿ ಹೂಡಿಕೆದಾರರ ಸಹಿತ ಖಾಸಗಿಯವರಿಗೆ ಹಸ್ತಾಂತರಿಸುವ ವಿವೇಚನಾರಹಿತ ಕ್ರಮವಾಗಲಿದೆ’ ಎಂದು ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಸಾರ್ವಜನಿಕ ಸೇವೆಗಳ ಕುರಿತ ಜನತಾ ಆಯೋಗವು ಹೇಳಿದೆ.
ಎಲ್ಐಸಿ ಮತ್ತು ಸಾರ್ವಜನಿಕ ವಲಯವನ್ನು ಬುಡಮೇಲು ಮಾಡುವ ಈ ಪ್ರಕ್ರಿಯೆ ನಿಲ್ಲಬೇಕು. ಈ ಆಕ್ರಮಣವನ್ನು ತಡೆಯ ಬೇಕಾದರೆ ಎಲ್ಲ ಜನತಾಂತ್ರಿಕ ಮತ್ತು ದೇಶಪ್ರೇಮಿ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ಒಂದಾಗಿ ನಿಲ್ಲುವುದು ಅಗತ್ಯ. ವಿಶಾಲ ಹೋರಾಟವಾಗಿ ಅದು ಬೆಳೆದು ಬರಬೇಕು. ಹಾಗೂ ದುಡಿಯುವ ವರ್ಗದ ಸಂಘಟಿತ ಸಂಘರ್ಷದ ಭಾಗವಾಗಬೇಕು.
ಮೋದಿ ಸರ್ಕಾರದ ಖಾಸಗೀಕರಣ ಅಭಿಯಾನದ ಅತಿ ಕೆಟ್ಟ ಮುಖ ಈಗ ಬಯಲಿಗೆ ಬರುತ್ತಿದೆ. ಹಣಕಾಸು ಕ್ಷೇತ್ರದ ಮುಕುಟಮಣಿಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡುವ ಸಂಬಂಧದ (ಇನಿಷಿಯಲ್ ಪಬ್ಲಿಕ್ ಆಫರಿಂಗ್-ಐಪಿಒ) ವಿವರಗಳನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಭಾರತದಲ್ಲಿ ಜೀವ ವಿಮಾ ಸಂಸ್ಕೃತಿಯನ್ನು ಹರಡುವಲ್ಲಿ ಮುಂಚೂಣಿ ಪಾತ್ರ ವಹಿಸಿರುವ ಎಲ್ಐಸಿ ಒಂದು ವಿಶಿಷ್ಟ ನಿಗಮವಾಗಿದೆ. ಎಲ್ಐಸಿ ಮೂಲಕ ಸಾಧಿಸಲಾದ ಜೀವ ವಿಮೆಯ ವ್ಯಾಪಕ ಕವರೇಜ್, ಸರ್ಕಾರಿ ಬೆಂಬಲಿತ ಯಾವುದೇ ಸಾಮಾಜಿಕ ಭದ್ರತಾ ಯೋಜನೆ ಇಲ್ಲದ ಹಿನ್ನೆಲೆಯಲ್ಲಿ ಒಂದು ಮಹತ್ವದ ಅಂಶವಾಗಿದೆ. ಅದು ಜನರಿಗೆ, ಅದರಲ್ಲೂ ಮುಖ್ಯವಾಗಿ ಬಡವರಿಗೆ ಹಾಗೂ ಇತರ ದುರ್ಬಲ ವರ್ಗಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.
ವಿಶಿಷ್ಟ ಸಂರಚನೆ ಹೊಂದಿರುವ ಎಲ್ಐಸಿಗೆ ಜನ ಸಾಮಾನ್ಯರಿಗೆ ವಿಮೆ ಒದಗಿಸಲು ಸಾಧ್ಯವಾಗಿದೆ. ನಿಗಮದ ಪ್ರಮುಖ ಹೂಡಿಕೆದಾರನಾದ ಭಾರತ ಸರ್ಕಾರಕ್ಕೆ ನಿಗಮದ ಲಾಭದಲ್ಲಿ ಸಿಗುವ ಪಾಲು ಶೇಕಡ ಐದು ಮಾತ್ರವಾಗಿದೆ. ಶೇಕಡ 95 ಲಾಭಾಂಶವು ಪಾಲಿಸಿದಾರರಿಗೆ ನೀಡುವುದು ಕಡ್ಡಾಯವಾಗಿದೆ. ಈಗ ಬಂಡವಾಳ ವಾಪಸಾತಿ ಹಿನ್ನೆಲೆಯಲ್ಲಿ ಅದನ್ನು ಶೇಕಡ 90ಕ್ಕೆ ಇಳಿಸಲಾಗಿದೆ. ಈ ರೀತಿಯಾಗಿ, ಇತರ ಕಂಪೆನಿಗಳಂತಲ್ಲದೆ, ಹೆಚ್ಚಿನ ಲಾಭಾಂಶವನ್ನು ಷೇರುದಾರರ ಬದಲು ಪಾಲಿಸಿದಾರರಿಗೇ ನೀಡಲಾಗುತ್ತದೆ.
1956ರಲ್ಲಿ ಎಲ್ಐಸಿ ಸ್ಥಾಪನೆಯಾಯಿತು. ವ್ಯಾಪಕವಾಗಿ ವಿಮಾ ಕವರೇಜ್ ನೀಡುವ ತನ್ನ ಘೋಷಿತ ಉದ್ದೇಶವನ್ನು ಅದು ಉಳಿಸಿಕೊಂಡಿದೆ. ಅದರಲ್ಲೂ ‘ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕವರೇಜ್ ನೀಡುವ ಗುರಿಯನ್ನು ಈಡೇರಿಸಿದೆ’.
ವಿಮಾ ಕ್ಷೇತ್ರಕ್ಕೆ ಖಾಸಗಿಯವರ ಪ್ರವೇಶಕ್ಕೆ ಅವಕಾಶ ನೀಡಿದ ನಂತರವೂ ಜೀವ ವಿಮೆ ವ್ಯವಹಾರ ವಲಯದಲ್ಲಿ ಮೇಲುಗೈ ಉಳಿಸಿಕೊಳ್ಳಲು ಎಲ್ಐಸಿ ಯಶಸ್ವಿಯಾಗಿದೆ. ಜೀವ ವಿಮೆ ಪಾಲಿಸಿ ನೀಡಿಕೆ ವಿಚಾರದಲ್ಲಿ ಈ ಕ್ಷೇತ್ರದ ಒಟ್ಟು ಪಾಲಿಸಿಗಳಲ್ಲಿ ಮುಕ್ಕಾಲು ಪಾಲು ಎಲ್ಐಸಿಯದ್ದೇ ಆಗಿದೆ. 2020-21ರಲ್ಲಿ ಎಲ್ಐಸಿ 3.03 ಲಕ್ಷ ಕೋಟಿ ರೂಪಾಯಿ ಪ್ರೀಮಿಯಂ ಆದಾಯ ಗಳಿಸಿತ್ತು. ಸುಮಾರು 40 ಕೋಟಿ ಪಾಲಿಸಿದಾರರು ಅದರ ಆಧಾರವಾಗಿದ್ದಾರೆ. ಸ್ಥಾಪನೆಯಾದಾಗಿನಿಂದ ಸರ್ಕಾರಕ್ಕೆ ಎಲ್ಐಸಿ 28,695 ಕೋಟಿ ರೂಪಾಯಿ ಡಿವಿಡೆಂಡ್ ಪಾವತಿಸಿದೆ. ಬ್ಯಾಂಕ್ಗಳು ಮತ್ತು ಇತರ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಗಣನೀಯ ಬಂಡವಾಳ ಹೂಡಿಕೆ ಮಾಡಿದೆ. ಮೂಲಸೌಕರ್ಯ ಮತ್ತು ರಾಜ್ಯಗಳಲ್ಲಿ ಸಾಮಾಜಿಕ ವಲಯದ ಯೋಜನೆಗಳಲ್ಲಿ ನಿಗಮದ ಪಾಲು ಗಣನೀಯವಾಗಿದೆ. 2020-21ರಲ್ಲಿ ಇದರ ಕೊಡುಗೆ 26,322 ಕೋಟಿ ರೂಪಾಯಿ ಆಗಿದೆ.
ಎಲ್ಐಸಿ ಸ್ವರೂಪದಲ್ಲಿ ಪ್ರತಿಗಾಮಿ ಬದಲಾವಣೆ
ಇಂಥ ಒಂದು ಅಭೂತಪೂರ್ವವಾದ ಸಾರ್ವಜನಿಕ ವಲಯದ ನಿಗಮವನ್ನು ಈಗ ಖಾಸಗಿ ಹೂಡಿಕೆದಾರರಿಗೆ ಮುಕ್ತಗೊಳಿಸಲಾಗಿದೆ. ಭಾರತೀಯ ಹಾಗೂ ವಿದೇಶಿ ಕಂಪೆನಿಗಳಿಗೆ ಅದನ್ನು ತೆರೆದಿಡಲಾಗಿದೆ. ಷೇರು ಮಾರಾಟಕ್ಕೆ ಅನುಕೂಲವಾಗುವಂತೆ ಎಲ್ಐಸಿಯನ್ನು ಸ್ಟಾಕ್ ಎಕ್ಸ್ಚೇಂಜಿನಲ್ಲಿ ಪಟ್ಟಿ ಮಾಡಲು (ಲಿಸ್ಟಿಂಗ್) 2021-22ರ ಹಣಕಾಸು ಮಸೂದೆ ಮೂಲಕ ಎಲ್ಐಸಿ ಕಾನೂನನ್ನು ತಿದ್ದುಪಡಿ ಮಾಡಲಾಗಿದೆ. ಮುಂದಿನ ದಶಕದಲ್ಲಿ ಖಾಸಗಿಗೆ ಅನುಕೂಲವಾಗುವಂತೆ ತನ್ನ ಪಾಲನ್ನು ದುರ್ಬಲಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಮೊದಲ ಐಪಿಒದಿಂದ ಮುಂದಿನ ಐದು ವರ್ಷದಲ್ಲಿ ಸರ್ಕಾರದ ಪಾಲನ್ನು ಶೇಕಡ 75ಕ್ಕೆ ಇಳಿಸಲಾಗುತ್ತದೆ. ಅದರ ನಂತರ, ಸರ್ಕಾರ ಶೇಕಡ 51 ಪಾಲನ್ನು ಮಾತ್ರ ಉಳಿಸಿಕೊಳ್ಳುವುದಾಗಿ ಪ್ರಕಟಿಸಿದೆ.
ಇದರಿಂದಾಗಿ ಎಲ್ಐಸಿಯ ಸ್ವರೂಪ ಗಣನೀಯವಾಗಿ ಬದಲಾಗಲಿದೆ; ಎಲ್ಐಸಿಯನ್ನು ಸಾಮಾಜಿಕ ಕಲ್ಯಾಣದ ಗುರಿಗಳಿಂದ ವಿಮುಖವಾಗುವಂತೆ ಭಾರತೀಯ ಹಾಗೂ ವಿದೇಶಿ ಕಂಪೆನಿಗಳು ಒತ್ತಡ ಹೇರಲಿವೆ. ಸಂವಿಧಾನದ ನಿರ್ದೇಶಕ ತತ್ವಗಳಿಗೆ ಅನುಗುಣವಾಗಿ ಎಲ್ಐಸಿ ಈ ಸಮಾಜ ಕಲ್ಯಾಣ ನಿಯಮಗಳನ್ನು ಅನುಸರಿಸುತ್ತಿದೆ.
ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಸಾರ್ವಜನಿಕ ಸೇವೆಗಳ ಕುರಿತ ಜನತಾ ಆಯೋಗವು ಎಲ್ಐಸಿ ಐಪಿಒ ಬಗ್ಗೆ ಹೀಗೆ ಹೇಳಿದೆ: ‘ಎಲ್ಐಸಿಯ ಲಿಸ್ಟಿಂಗ್ ಮತ್ತು ಅದರ ಬಂಡವಾಳ ವಾಪಸ್ ಪಡೆಯುವುದುರಿಂದ ದುರ್ಬಲ ಜನವಿಭಾಗಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಂಸ್ಥೆಯಾಗಿ ಅದರ ಪಾತ್ರವನ್ನು ಆಮೂಲಾಗ್ರವಾಗಿ ಬದಲಾಯಿಸುತ್ತದೆ. ಕೋಟ್ಯಂತರ ಸಂಖ್ಯೆಯ ಸಣ್ಣ ಪಾಲಿಸಿದಾರರ ಪ್ರಮುಖ ಪಾತ್ರವನ್ನು ನಗಣ್ಯಗೊಳಿಸುತ್ತದೆ. ಲಾಭ ಬಡುಕ ಶ್ರೀಮಂತ ಹೂಡಿಕೆದಾರರ ಪರವಾಗಿ ಪಾತ್ರ ನಿರ್ವಹಿಸಲಿದೆ. ಪರೋಕ್ಷವಾಗಿ, ಕುಟುಂಬಗಳ ಉಳಿತಾಯದ ಬೃಹತ್ ಮೊತ್ತದ ನಿಯಂತ್ರಣವನ್ನು ವಿದೇಶಿ ಹೂಡಿಕೆದಾರರ ಸಹಿತ ಖಾಸಗಿಯವರಿಗೆ ಹಸ್ತಾಂತರಿಸುವ ವಿವೇಚನಾರಹಿತ ಕ್ರಮವಾಗಲಿದೆ’.
ಅಪಾರದರ್ಶಕ ಮೌಲ್ಯಮಾಪನ ಕ್ರಿಯೆ
ಎಲ್ಐಸಿ ಐಪಿಒಗೆ ಅದರ ಮೌಲ್ಯವನ್ನು ನಿರ್ಧರಿಸುವ ಪ್ರಕ್ರಿಯೆ ಅಪಾರದರ್ಶಕವಾಗಿದೆ. ಅದನ್ನು ಸಾರ್ವಜನಿಕಗೊಳಿಸಿಲ್ಲ ಕೂಡ. ನಿಗಮದ ಮೌಲ್ಯ 15 ಲಕ್ಷ ಕೋಟಿ ರೂಪಾಯಿ ಹಾಗೂ ಅಂತರ್ಗತ(ಎಂಬೆಡೆಡ್) ಮೌಲ್ಯ ನಾಲ್ಕು ಲಕ್ಷ ಕೋಟಿ ರೂಪಾಯಿ ಎಂದು ಮೌಲ್ಯಮಾಪನ ಮಾಡಲಾಗಿದೆ ಎನ್ನಲಾಗಿದ್ದು ಇದು ತೀರಾ ಅಪಮೌಲ್ಯೀಕರಣವಾಗಿದೆ(ಅಂಡರ್ವ್ಯಾಲ್ಯುಯೇಶನ್). ಈ ರೀತಿಯಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಆಸ್ತಿಪಾಸ್ತಿ ಮೌಲ್ಯವನ್ನು ಅಪಮೌಲ್ಯಗೊಳಿಸಿ ಅಗ್ಗದ ಬೆಲೆಗೆ ಖಾಸಗಿಯವರಿಗೆ ಮಾರುವುದು ಮೋದಿ ಸರ್ಕಾರದ ಖಯಾಲಿಯಾಗಿ ಬಿಟ್ಟಿದೆ. ಈ ಪ್ರಕ್ರಿಯೆಯ ಮುಂದುವರಿಕೆ ಭಾಗವಾದ ಎಲ್ಐಸಿ ಖಾಸಗೀಕರಣದಿಂದ ಖಾಸಗಿ ಕ್ಷೇತ್ರದವರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ.
ಬಂಡವಾಳ ವಾಪಸಾತಿಯ ಹಗರಣ ಮತ್ತು ಕೇಂದ್ರೀಯ ಪಿಎಸ್ಯುಗಳ ಖಾಸಗೀಕರಣಕ್ಕೆ ಕೇಂದ್ರೀಯ ಇಲೆಕ್ಟಾçನಿಕ್ಸ್ ಸಂಸ್ಥೆಯ (ಸಿಇಎಲ್) ಈಚಿನ ಮಾರಾಟವು ಮತ್ತೊಮ್ಮೆ ಕಣ್ಣಿಗೆ ರಾಚುವಂಥ ಉದಾಹರಣೆಯಾಗಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಅಧೀನದ ಈ ಸಂಸ್ಥೆಯನ್ನು ಕೇವಲ 210 ಕೋಟಿ ರೂಪಾಯಿಗೆ ನಂದಲಾಲ್ ಫೈನಾನ್ಸ್ ಅಂಡ್ ಲೀಸಿಂಗ್ ಪ್ರೈವೇಟ್ ಲಿಮಿಟೆಡ್ಗೆ ಮಾರಲಾಗಿದೆ. ಸಿಇಎಲ್ ಭಾರತದಲ್ಲಿ ಸೌರ ಸೆಲ್ಗಳು, ಸೌರ ವಿದ್ಯುತ್ ಸ್ಥಾವರಗಳು, ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಡಿಫೆನ್ಸ್ ಅಪ್ಲಿಕೇಶನ್ಗಳಲ್ಲಿ ಮೂಲಭೂತ ಉತ್ಪಾದನೆಗಳ ಅಭಿವೃದ್ಧಿಯ ಆದ್ಯ ಪ್ರವರ್ತಕವಾಗಿದೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು.
ಸಿಇಎಲ್ ಉದಾಹರಣೆ
ಅನುಮಾನಾಸ್ಪದ ಇತಿಹಾಸವುಳ್ಳ ಒಂದು ಟ್ರೇಡಿಂಗ್ ಕಂಪೆನಿಗೆ ಇಂಥ ಒಂದು ಮಹತ್ವದ ಕೇಂದ್ರೀಯ ಸಾರ್ವಜನಿಕ ವಲಯದ (ಸಿಪಿಎಸ್ಯು) ಉದ್ದಿಮೆಯನ್ನು ಮಾರಾಟ ಮಾಡಲಾಗಿದೆ. ಈ ಕಂಪೆನಿಗೆ ಗಟ್ಟಿಯಾದ ಆಸ್ತಿಪಾಸ್ತಿಯೂ ಇಲ್ಲ. ತಂತ್ರಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯನ್ನು ನಡೆಸುವ ಅರ್ಹತೆಯೂ ಇಲ್ಲ ಎನ್ನುವುದು ಗಮನಾರ್ಹ. ಸಿಇಎಲ್ ಹೊಂದಿರುವ ಸುಮಾರು 50 ಎಕರೆ ಜಮೀನಿನ ಪ್ರಸಕ್ತ ಮಾರುಕಟ್ಟೆ ಮೌಲ್ಯವೇ 440 ಕೋಟಿ ರೂಪಾಯಿ ಆಗುತ್ತದೆ. 2021ರ ಹಣಕಾಸು ವರ್ಷದಲ್ಲಿ ಅದು ಗಳಿಸಿದ ಒಟ್ಟು ಲಾಭ 124 ಕೋಟಿ ರೂಪಾಯಿ. ಒಂದು ಕಂಪೆನಿಯನ್ನು ಈ ರೀತಿಯಲ್ಲಿ ಅಗ್ಗದ ಬೆಲೆಗೆ ಮಾರಿದ ಹಗರಣದ ವಿರುದ್ಧ ಕೇಳಿ ಬಂದ ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಕಂಪೆನಿಯನ್ನು ಖಾಸಗಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ.
ಸಿಪಿಎಸ್ಯುಗಳನ್ನು ಮಾರಾಟ ಮಾಡುವುದು ಹಾಗೂ ರಾಷ್ಟ್ರೀಯ ಆಸ್ತಿಗಳನ್ನು ಭಾರತೀಯ ಹಾಗೂ ವಿದೇಶಿ ಕಾರ್ಪೊರೇಟ್ಗಳಿಗೆ ಹಸ್ತಾಂತರಿಸುವುದು ದೇಶದ ಆರ್ಥಿಕ ಸಾರ್ವಭೌಮತ್ವವನ್ನು ನಾಶ ಮಾಡುವ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಕುರಿತ ಸಂವಿಧಾನದ ನಿರ್ದೇಶಕ ತತ್ವಗಳನ್ನು ಬುಡಮೇಲು ಮಾಡುವ ಮೋದಿ ಸರ್ಕಾರದ ವಿನಾಶಕಾರಿ ಯೋಜನೆಯ ಭಾಗವಾಗಿದೆ. ಹಲವು ದಶಕಗಳಿಂದ ಕಷ್ಟಪಟ್ಟು ಕಟ್ಟಿ ಬೆಳೆಸಿದ ಜನರ ಸಂಪನ್ಮೂಲಗಳನ್ನು ಲೂಟಿ ಮಾಡಲು ಅದು ಹಾದಿ ಮಾಡಿಕೊಡುತ್ತಿದೆ.
ಎಲ್ಐಸಿ ಮತ್ತು ಸಾರ್ವಜನಿಕ ವಲಯವನ್ನು ಬುಡಮೇಲು ಮಾಡುವ ಪ್ರಕ್ರಿಯೆ ನಿಲ್ಲಬೇಕು. ಈ ಆಕ್ರಮಣವನ್ನು ತಡೆಯ ಬೇಕಾದರೆ ಎಲ್ಲ ಜನತಾಂತ್ರಿಕ ಮತ್ತು ದೇಶಪ್ರೇಮಿ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ಒಂದಾಗಿ ನಿಲ್ಲುವುದು ಅಗತ್ಯ. ಎಲ್ಐಸಿ, ಸಾಮಾನ್ಯ ವಿಮೆ(ಜನರಲ್ ಇನ್ಶೂರೆನ್ಸ್) ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳ ನೌಕರರು ಖಾಸಗೀಕರಣದ ವಿರುದ್ಧ ಹೋರಾಟದ ಹಾದಿಯಲ್ಲಿದ್ದಾರೆ. ಕೇಂದ್ರೀಯ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಎಲ್ಲ ಕಾರ್ಮಿಕರು ಮತ್ತು ನೌಕರರನ್ನು ಒಳಗೊಂಡ ವಿಶಾಲ ಹೋರಾಟವಾಗಿ ಅದು ಬೆಳೆದು ಬರಬೇಕು. ಹಾಗೂ ದುಡಿಯುವ ವರ್ಗದ ಸಂಘಟಿತ ಸಂಘರ್ಷದ ಭಾಗವಾಗಬೇಕು. ಕೇಂದ್ರೀಯ ಟ್ರೇಡ್ ಯೂನಿಯನ್ಗಳು ಕರೆ ನೀಡಿರುವ ಫೆಬ್ರವರಿ 23-24ರ ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವು ಈ ಹೋರಾಟದಲ್ಲಿ ಒಂದು ಪ್ರಮುಖ ಹಂತವಾಗಲಿದೆ.
ಅನು: ವಿಶ್ವ