ಕುಂದಾಪುರದಲ್ಲೊಂದು ಅಮಾನವೀಯ ಘಟನೆ

ನಿತ್ಯಾನಂದಸ್ವಾಮಿ

ಉಡುಪಿ ಜಿಲ್ಲೆಯ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜ್ ಪ್ರಾಂಶುಪಾಲರು ಕಾಲೇಜಿನ ಗೇಟ್‌ನಲ್ಲೇ ತಡೆದು ಪ್ರವೇಶ ನಿರಾಕರಿಸಿದ ಅಮಾನವೀಯ ಘಟನೆ ನಡೆದಿದೆ. ಇದರಿಂದ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಯರು ಇಡಿ ದಿನ ತರಗತಿಯಿಂದ ವಂಚಿತರಾಗಿ ಕಾಲೇಜು ಆವರಣದ ಹೊರಗೆ ಕುಳಿತು ಸಂಜೆ ವೇಳೆ ಮನೆಗೆ ಹಿಂತಿರುಗುತ್ತಿದ್ದಾರೆ. ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜಿಗೆ ಬಂದಿರುವುದನ್ನು ನೆಪ ಮಾಡಿಕೊಂಡು ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಈ ಆಮಾನವೀಯ ಕೃತ್ಯವನ್ನು ಎಸಗಿದ್ದಾರೆ.

ಸ್ಕಾರ್ಪ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದು ಅಪರಾಧವಲ್ಲ. ಸ್ಕಾರ್ಪ್ ಧರಿಸಿದ ವಿದ್ಯಾರ್ಥಿನಿಯರು ಶಾಲಾ ಕಾಲೇಜು ತರಗತಿಗಳಿಗೆ ಪ್ರವೇಶಸಬಾರದು ಎಂದು ನಿಷೇದ ಹೇರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಸ್ಕಾರ್ಫ್ ಧರಿಸುವುದು ಧಾರ್ಮಿಕ ಆಚರಣೆಯಲ್ಲ. ಅದು ದಾರ್ಮಿಕ ಸಂಕೇತವೇನಲ್ಲ. ಬಿಸಿಲು, ಚಳಿಯನ್ನು ಎದುರಿಸಲು ಅದು ಸಹಕಾರಿಯಾಗುತ್ತದೆ. ಇಂದು ಹೆಚ್ಚುತ್ತಿರುವ ಯುವತಿಯರ ಮೇಲಿನ ದೌರ್ಜನ್ಯವನ್ನು ಸ್ವಲ್ಪಮಟ್ಟಿಗಾದರು ತಡೆಗಟ್ಟಲು ವಿದ್ಯಾರ್ಥಿನಿಯರಿಗೆ ಅದು ನೆರವಾಗುತ್ತದೆ. ಉತ್ತರ ಕರ್ನಾಟಕದ ಬೀದರ್, ಕಲಬುರಗಿ ಮೊದಲಾದ ಜಿಲ್ಲೆಗಳ ಹಿಂದು ಯುವತಿಯರು ಸಹ ಸ್ಕಾರ್ಫ್ ಧರಿಸಿ ತಮ್ಮ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹೆಣ್ಣು ಮಕ್ಕಳ ಈ ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳದ ರಾಕ್ಷಸ ಪ್ರವೃತ್ತಿಯುಳ್ಳವರು ನಮ್ಮ ನಡುವೆ ಇದ್ದಾರೆ ಎನ್ನುವುದೇ ಕಳವಳಕಾರಿ ಸಂಗತಿಯಾಗಿದೆ. ವಿದ್ಯಾರ್ಥಿನಿಯರು ತಮ್ಮನ್ನು ಚುಡಾಯಿಸುತ್ತಿರುವ ಪುಂಡರಿಂದ ಸುರಕ್ಷಿತರಾಗಿರಲು ಸ್ಕಾರ್ಫ್ ಧರಿಸಿದರೆ ಏನು ತಪ್ಪು? ಕುಂದಾಪುರದ ಕಾಲೇಜ್ ಪ್ರಾಂಶುಪಾಲರಿಗೆ ಹೆಣ್ಣು ಮಕ್ಕಳಿದ್ದರೆ ಅವರು ಸ್ಕಾರ್ಫ್ ಧರಿಸುವುದನ್ನು ಬೆಂಬಲಿಸುತ್ತಿದ್ದರೆ ಅಥವ ವಿರೋಧಿಸುತ್ತಿದರೆ?

ಸ್ಕಾರ್ಫ್ ಧರಿಸುವುದು ಯಾವುದೋ ಒಂದು ಧರ್ಮದ ಸಂಕೇತವಾಗಿದ್ದರೆ ಶಾಲೆ ಕಾಲೇಜುಗಳಲ್ಲಿ ಅದನ್ನು ನಿಷೇಧಿಸಬಹುದು. ಆದರೆ ಹಿಂದುಗಳಿಗೆ ಮಾತ್ರ ಅನ್ವಯಿಸುವ ಸರಸ್ವತಿ ಪೂಜೆ, ಗಣೇಶ ಉತ್ಸವ, ಸೂರ್ಯ ನಮಸ್ಕಾರ ದಂತಹ ಧಾರ್ಮಿಕ ಆಚರಣೆಗಳನ್ನು ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ನಡೆಸುವುದು ತಪ್ಪು. ಆದರೆ ಅಂತಹ ಧಾರ್ಮಿಕ ಕ್ರಿಯೆಗಳು ಶಾಲೆ ಕಾಲೇಜುಗಳಲ್ಲಿ ಈಗ ಮೊದಲಿಗಿಂತ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತವೆ. ಬಿಜೆಪಿ ಸರ್ಕಾರದ ಕುಮ್ಮಕ್ಕು ಇದಕ್ಕೆ ಕಾರಣವಾಗಿದೆ. ನಮ್ಮ ಜಾತ್ಯಾತೀತ, ಧರ್ಮನಿರಪೇಕ್ಷ ಮನಸ್ಸಿನವರು ಸಹ ಪ್ರಶ್ನಿಸುವುದಿಲ್ಲ. ಸ್ಕಾರ್ಫ್ ಧರಿಸಿಕೊಂಡು ಶಾಲೆ ಕಾಲೇಜಿಗೆ ಬರುವ ನಮ್ಮ ಹೆಣ್ಣು ಮಕ್ಕಳ ಆತಂತಕದ ಪರವಾಗಿ ದ್ವನಿ ಎತ್ತುತ್ತಿಲ್ಲ.

ಅತ್ತ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜು ಆವರಣ ಪ್ರವೇಶಿಸುತ್ತಿದ್ದಂತೆ ಒಂದಷ್ಟು ವಿದ್ಯಾರ್ಥಿಗಳು ಬ್ಯಾಗಿನಲ್ಲಿ ತಂದಿದ್ದ ಕೇಸರಿ ಶಾಲುಗಳನ್ನು ಧರಿಸಿ ತರಗತಿಗಳಲ್ಲಿ ಒಡಾಡಲು ಆರಂಭಿಸಿದರು. ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಈ ಕೆಲವು ವಿದ್ಯಾರ್ಥಿಗಳು ಬಿಗುವಿನ ವಾತಾವರಣ ನಿರ್ಮಿಸಿದರು. ಇದನ್ನೆಲ್ಲ ಗಮನಿಸಿದರೆ ಇದ್ಯಾವುದೂ ಆಕಸ್ಮಿಕವಲ್ಲ ಎಂಬುದು ಸ್ವಷ್ಟವಾಗುತ್ತದೆ. ಇಡೀ ಘಟನೆ ಪೂರ್ವಯೋಜಿತವಾಗಿದ್ದು ಸಂಘ ಪರಿವಾರ ಮತ್ತು ಬಿಜೆಪಿಯ ಫಿತೂರಿಯ ಭಾಗವಾಗಿತ್ತೆಂದು ಯಾರಿಗೂ ತಿಳಿಯದೆ ಇರುವಂತಿರಲಿಲ್ಲ. ಸಂಘ ಪರಿವಾರ ಮತ್ತು ಬಿಜೆಪಿಯ ಹತಾಶೆಯ ಪರಿಣಾಮವಾಗಿ ಇಂತಹದೊಂದು ಪ್ರಕರಣ ಕುಂದಾಪುರದಲ್ಲಿ ಸೃಷ್ಟಿಯಾಗಿ ಅದರ ಪರಿಣಾಮ ಇಡೀ ರಾಜ್ಯ ತುಂಬ ಹರಡುವಂತೆ ಮಾಡಲಾದ ಹುನ್ನಾರ ಇದಾಗಿತ್ತು. ಇಂದು ರಾಜ್ಯದ ಆರ್ಥಿಕತೆ ಕುಸಿದಿದೆ. ನಿರುದ್ಯೋಗ ಉಲ್ಬಣಗೊಂಡಿದೆ. ರಾಜ್ಯದಲ್ಲಿ ಅನಗತ್ಯವಾದ ಲಾಕ್‌ಡೌನ್ ಹೇರಲಾಯಿತು. ಕರಾವಳಿಯಲ್ಲಿ ಹಿಂದು ಮತ್ತು ಮುಸಲ್ಮಾನರ ನಡುವೆ ದ್ವೇಷವನ್ನು ಕೆರಳಿಸುವಂತೆ ಮಾಡುವುದು ಅವರ ಉದ್ವೇಶವಾಗಿತ್ತು. ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಮೋದಿ ಸರಕಾರ ಅವಕಾಶ ಕೊಡದೆ ಅವಮಾನ ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಜನ ಅನ್ಯಾಯದ ವಿರುದ್ಧ ಬೀದಿಗಿಳಿದಾಗಲೇ ಸಂಘ ಪರಿವಾರಕ್ಕೆ ತನ್ನ ತಪ್ಪಿನ ಅರಿವಾಗಿತ್ತು. ಅದಕ್ಕೆ ಪ್ರತಿಯಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಹಿಂದು ಮತ್ತು ಮುಸಲ್ಮಾನರ ನಡುವೆ ಗಲಾಟೆ ಎಬ್ಬಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳ ನಡುವೆ ಸ್ಕಾರ್ಫ್ ಧರಿಸುವ ಹೆಸರಿನಲ್ಲಿ ವಿವಾದವೊಂದನ್ನು ಹುಟ್ಟು ಹಾಕಲಾಗಿದೆ.

ಈಗ ಹೈಕೋರ್ಟಿನ ಆದೇಶಕ್ಕೆ ಕಾಯಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ವತ್ತಾರರು ಹೇಳಿಕೆ ನೀಡಿದ್ದಾರೆ. ಸರ್ಕಾರ ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ಜಾತಿ ಧರ್ಮಗಳಿಂದ ಮುಕ್ತಗೊಳಿಸಿ ಭಾರತವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಮಾರ್ಪಡಿಸಬೇಕು. ಶಾಲೆ ಕಾಲೇಜುಗಳಲ್ಲಿ ಸ್ಕಾರ್ಫ್ ಧರಿಸುವ ಹಕ್ಕು ವಿದ್ಯಾರ್ಥಿನಿಯರಿಗೆ ನೀಡದೆ ಅನ್ಯಾಯ ಮಾಡಬಾರದು. ಸರಕಾರ ವಿದ್ಯಾರ್ಥಿನಿಯರ ವ್ಯಕ್ತಿಗತ ಹಕ್ಕುಗಳಿಗೆ ಧಕ್ಕೆ ಉಂಟುಮಾಡದೆ ಅವರ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು. ಮುಸಲ್ಮಾನ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸುವುದನ್ನು ನೆಪಮಾಡಿಕೊಂಡು ಇವರು ಕೇಸರಿ ಶಾಲು ಧರಿಸುವ ಹೊಸ ಪದ್ಧತಿಗಳಿಗೆ ಆಸ್ಪದ ನೀಡಬಾರದು. ಕೇಸರಿ ಶಾಲು, ಕೇಸರಿ ಬಾವುಟ ಹಿಂದುತ್ವದ ಸಂಕೇತಗಳಾಗಿವೆ. ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷ ಬೆಳೆಸಲು ಪ್ರಯತ್ನ ಪಡುವರಿಗೆ ಅವಕಾಶ ನೀಡಬಾರದು. ಆದರೆ ಬಿಜೆಪಿ ಸರ್ಕಾರದಿಂದ ಇಂತಹ ಆರೋಗ್ಯಕರ ನಡೆ ಸಾಧ್ಯವೆ? ಸಾಧ್ಯವಿಲ್ಲ ಎಂಬುದು ಈಗಾಗಲೇ ಸ್ವಷ್ಟವಾಗುತ್ತದೆ. ಸರ್ಕಾರ ಸ್ಕಾರ್ಫ್ ನಿಷೇಧಿಸಿ ಆದೇಶ ನೀಡಿದೆ. ಇದು ಸರ್ಕಾರದ ಅವಸರದ ತೀರ್ಮಾನ ಮಾಡಿದೆ. ಸ್ಕಾರ್ಫ್ ಧರಿಸುವುದು ಧಾರ್ಮಿಕ ಕ್ರಿಯೆ ಅಲ್ಲ. ವಿದ್ಯಾರ್ಥಿನಿಯರಿಗೆ ತಮ್ಮ ರಕ್ಷಣೆಗಾಗಿ ಸ್ಕಾರ್ಫ್ ಧರಿಸುವುದನ್ನು ತಡೆಯುವುದು ಸರಿಯಲ್ಲ. ಧಾರ್ಮಿಕ ಆಚರಣೆಗೆ ಆಸ್ಪದ ಇರಬಾರದು. ಕೇಸರಿ ಶಾಲು ಧಾರ್ಮಿಕ ಸಂಕೇತ. ಅದನ್ನು ಹಿಂದುತ್ವದ ಪುಂಡರು ಶಾಲಾ ಸಮವಸ್ತ್ರದ ಭಾಗವಾಗಿಸಲು ಹಿಂಜರಿಯಲಾರರು. ಭಾರತ ಹಿಂದುಗಳ ದೇಶ ಎಂದೂ ಇಲ್ಲಿ ವಾಸಿಸುವವರು ಹಿಂದು ಆಚರಣೆಗಳನ್ನು ಒಪ್ಪಿಕೊಳ್ಳಬೇಕು ಎಂಬ ದೌರ್ಜನ್ಯದ ಹಿಂದುತ್ವವನ್ನು ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಬೆಳಸಲಾಗುತ್ತಿದೆ. ಮುಗ್ಧ ವಿದ್ಯಾರ್ಥಿಗಳ ಶುದ್ಧ ಮನಸ್ಸುಗಳನ್ನು ಹಾಳುಮಾಡಲಾಗುತ್ತದೆ. ದೇಶ ಪ್ರೇಮಿಗಳು ಈ ಅಪಾಯವನ್ನು ಮನವರಿಕೆ ಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *