ಲಗಾಮು ಇಲ್ಲದ ಮಂತ್ರಿಗಳು

ನಿತ್ಯಾನಂದಸ್ವಾಮಿ

ಭಗವಾಧ್ವಜ ಮುಂದೆ ನೂರು ಇನ್ನೂರು ವರ್ಷಗಳ ನಂತರ ರಾಷ್ಟ್ರ ಧ್ವಜ ಆಗಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ ಎಂದು ವರದಿಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರ ಇಂತಹ ಬೇಜವಾಬ್ದಾರಿ ಮಾತುಗಳಿಂದ ಪ್ರಚೋದನೆ ಪಡೆದು ಕರಾವಳಿಯ ಕೆಲವು ಕಾಲೇಜು ವಿದ್ಯಾರ್ಥಿಗಳ ನಡುವೆ ಉಂಟಾದ ವಿವಾದ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಿಕೊಂಡಿದೆ.

ಸಚಿವ ಈಶ್ವರಪ್ಪ ಇಂತಹ ಪ್ರಚೋದನಾಕಾರಿ ಮಾತುಗಳನ್ನು ಆಡುವುದರಲ್ಲಿ ನಿಸ್ಸೀಮರು. ಕಾಲೇಜು ಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿದ ಬಗ್ಗೆ ಅವರ ಸಮರ್ಥನೆ ಶಿಕ್ಷಾರ್ಹ ಅಪರಾಧವಾಗಿದೆ. ರಾಷ್ಟ್ರಧ್ವಜಕ್ಕೆ ಅವರು ಎಸಗಿದ ಅವಮಾನವಾಗಿದೆ. ಬೆಂಕಿಗೆ ತುಪ್ಪ ಸುರಿದಂತೆ, ಇವರ ಮಗ ಸೂರತ್‌ನಿಂದ 50 ಲಕ್ಷ ಕೇಸರಿ ಶಾಲುಗಳನ್ನು ತರಿಸಿ ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎನ್ನಲಾಗುತ್ತದೆ. ಕೇಸರಿ ಶಾಲು ಹಂಚಿರುವುದರಲ್ಲಿ ತಪ್ಪೇನಿಲ್ಲ ಎಂದು ಮಂತ್ರಿಗಳು ತಮ್ಮ ಮಗನ ಸಂವಿಧಾನ ವಿರೋಧಿ ಕೃತ್ಯವನ್ನು ಬೆಂಬಲಿಸಿ ಅಂತಹ ಪುಂಡರಿಗೆ ಕುಮ್ಮಕ್ಕು ನೀಡಿದ್ದಾರೆ.

ಹಿಂದುಗಳು ಬಳಸುವ ಕೇಸರಿ ಬಣ್ಣದ ಬಾವುಟಗಳನ್ನು ಉಳಿದ ಧರ್ಮಿಯರೂ ಸಹ ಇಷ್ಟು ದಿನ ಗೌರವದಿಂದ ಕಾಣುತ್ತಿದ್ದರು. ಅದನ್ನು ನಾಶ ಮಾಡುವ ಉದ್ದೇಶ ಯಾರಲ್ಲಿಯೂ ಇರುತ್ತಿರಲಿಲ್ಲ. ಆದರೆ ಬಾಬ್ರಿ ಮಸೀದಿಯನ್ನು ದ್ವಂಸ ಮಾಡಲು ಹೋಗಿದ್ದ ಕರಸೇವಕರ(?) ಕೈಯಲ್ಲಿ ಇಂತಹ ಕೇಸರಿ ಧ್ವಜಗಳನ್ನು ದೇಶ ಕಂಡ ನಂತರ ಆ ಬಾವುಟದ ಬಗ್ಗೆ ಜನರ ದೃಷ್ಟಿ ಬದಲಾಯಿತು. ಅದೊಂದು ಆಕ್ರಮಣಕಾರಿ ಸಿದ್ಧಾಂತವನ್ನು ಪ್ರತಿಪಾದಿಸುವವರ ಲಾಂಛನವಾಯಿತು. ಕೇಸರಿ ಬಾವುಟದ ಬಗ್ಗೆ ಇದುವರೆಗೆ ಇದ್ದ ಗೌರವ ಮಾಯವಾಯಿತು. ಅದೊಂದು ಭಯ ಹುಟ್ಟಿಸುವ ಸಂಕೇತವಾಯಿತು.

ಆದಾಗ್ಯೂ ಶಾಲೆ ಕಾಲೇಜುಗಳಲ್ಲಿ ಅಂತಹ ವಾತಾವರಣ ಈಗಷ್ಟೇ ತೀವ್ರಗೊಂಡಿದೆ. ಕರಾವಳಿಯ ಜಿಲ್ಲೆಗಳಲ್ಲಿ ಅದು ಗೋಚರಿಸುತ್ತದೆ. ಭೀತಿ ಹುಟ್ಟಿಸುತ್ತದೆ. ಭೀತಿ ಹುಟ್ಟಿಸುವುದು ಅವರ ಉದ್ದೇಶವೇ ಆಗಿದೆ. ಇಲ್ಲಿಯವರೆಗೆ ಹಿಂದು ಮತ್ತು ಮುಸಲ್ಮಾನ ವಿದ್ಯಾರ್ಥಿ ವಿದ್ಯಾರ್ಥಿನೀಯರು ಅಣ್ಣ ತಮ್ಮಂದಿರಂತೆ, ಅಕ್ಕ ತಂಗಿಯರಂತೆ ಇದ್ದವರು ಈಗ ಪರಸ್ಪರ ವೈರಿಗಳಂತೆ ಕಾದಾಡಲು ಮುಂದಾಗುತ್ತಿದ್ದಾರೆ. ಕೇಸರಿ ಶಾಲು, ಕೇಸರಿ ಬಾವುಟ ಇಂದು ಭಯಾನಕ ಬೆಂಕಿಯನ್ನು ನೆನಪಿಸುತ್ತದೆ. ಕರಾವಳಿ ಜಿಲ್ಲೆಗಳನ್ನು ಕೇಸರಿ ಪ್ರಯೋಗ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿದ್ದ ಪ್ರೀತಿ ವಿಶ್ವಾಸ ನಾಶಮಾಡಲಾಗುತ್ತಿದೆ. ಕೇಸರಿ ಶಾಲು ಧರಿಸಲು ನಿರಾಕರಿಸುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗುತ್ತದೆ. ತಮ್ಮ ರಕ್ಷಣೆಗಾಗಿ ಮುಖಕ್ಕೆ ಕಟ್ಟಿಕೊಳ್ಳುವ ಹಿಜಾಬ್ ಮುಸ್ಲಿಂ ಹೆಣ್ಣು ಮಕ್ಕಳ ದೌರ್ಜನ್ಯಕ್ಕೆ ಕಾರಣವಾಗುತ್ತಿದೆ.

ಯಾಕೆ ಹೀಗೆ? ಬಲಹೀನರ ಮೇಲೆ ದೌರ್ಜನ್ಯ ಎಸಗುವುದು ಯಾಕೆ? ಅವರು ತಮ್ಮ ಪಾಡಿಗೆ ತಾವು ಶಿರವಸ್ತ್ರ ಧರಿಸುವುದನ್ನು ಯಾಕೆ ಸಹಿಸಲಾಗುತ್ತಿಲ್ಲ? ತಲೆಯ ಮೇಲೆ ಬಟ್ಟೆ ಮುಚ್ಚಿಕೊಳ್ಳುವುದು ಒಂದಲ್ಲ ಒಂದು ರೀತಿಯಲ್ಲಿ ಎಲ್ಲ ಸಂಸ್ಕೃತಿಗಳಲ್ಲಿ ಕಾಣುತ್ತೇವೆ. ಹಿಂದು ಮಹಿಳೆ ತಾನು ತೊಟ್ಟ ಸೀರೆಯ ಸೆರಗನ್ನು ತಲೆಗೆ ಮುಚ್ಚಿಕೊಳ್ಳುತ್ತಾಳೆ. ಮುಸ್ಲಿಂ ಸಮುದಾಯದ ಪುಟ್ಟ ಹುಡುಗಿಯು ಸಹ ಶಾಲೆಗೆ (ಮದರಾಸ) ಹೋಗುವಾಗ ತಲೆಗೆ ಒಂದು ಬಟ್ಟೆಯ ತುಂಡನ್ನಾದರೂ ಕಟ್ಟಿಕೊಳ್ಳುತ್ತಾಳೆ. ಕ್ರಿಶ್ಚಿಯನ್ ಹುಡುಗಿಯರು ಚರ್ಚಿಗೆ ಹೋಗುವಾಗ ತಲೆಯನ್ನು ಕಪ್ಪು ಅಥವ ಬಿಳಿ ವೇಲ್‌ನಿಂದ ಮುಚ್ಚಿಕೊಳ್ಳುತ್ತಾರೆ. ಹೀಗೆ ತಲೆ ಮುಖ ಮುಚ್ಚಿಕೊಳ್ಳುವ ಬೇರೆ ಬೇರೆ ಪದ್ಧತಿಗಳು ನಮ್ಮ ವಿಭಿನ್ನ ಸಂಸ್ಕೃತಿಯಲ್ಲಿ ಇವೆ. ಇದ್ಯಾವುದೂ ಆಕ್ಷೇಪಾರ್ಹವಾಗಿ ನಮಗೆ ಇದುವರೆಗೂ ಕಂಡಿಲ್ಲ. ಈಗ ಕೆಲವು ಹೆಣ್ಣಮಕ್ಕಳನ್ನು ಪ್ರತ್ಯೇಕವಾಗಿ ಕಾಣುವ ಪ್ರವೃತ್ತಿಯನ್ನು ಬೆಳೆಸಲಾಗುತ್ತದೆ. ಈ ದ್ವೇಷ ಸಾಧನೆ, ಅಸಹಿಷ್ಟುತೆಗೆ ಕೇಸರಿ ಶಾಲು, ಕೇಸರಿ ಧ್ವಜವನ್ನು ಬಳಸಲಾಗುತ್ತದೆ. ವಿದ್ಯಾರ್ಥಿಗಳು ಆವೇಶಕ್ಕೆ ಒಳಗಾಗಿ, ಸಂಯಮದಿಂದ ವರ್ತಿಸುವ ಬದಲು ಇದುವರೆಗೆ ಸ್ನೇಹಿತರಾಗಿದ್ದವರನ್ನು ದ್ವೇಷಿಸಲು ಆರಂಭಿಸುತ್ತಿದ್ದಾರೆ. ಈ ವಾತಾವರಣ ವಿಕೋಪಕ್ಕೆ ಹೋಗುವ ಮೊದಲೇ ತಡೆಗಟ್ಟಬೇಕು. ಈ ಬೆಳವಣಿಗೆ ದೇಶದ ಹಿತಕ್ಕೆ ವಿರೋಧಿಯಾಗಿದೆ. ಲಗಾಮು ಇಲ್ಲದ ಮಂತ್ರಿಗಳ ಮಾತುಗಳ ಬಗ್ಗೆ ಎಚ್ಚರ ಇರಬೇಕು.

Leave a Reply

Your email address will not be published. Required fields are marked *