ನಿತ್ಯಾನಂದಸ್ವಾಮಿ
ಧಾರ್ಮಿಕ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತ ಮುಸಲ್ಮಾನರಿಗೆ ನ್ಯಾಯ ಸಿಕ್ಕಿತೆ? ಇಲ್ಲ. ಅದು ಸಾಧ್ಯವಿಲ್ಲ ಎಂದು ಇತ್ತೀಚಿನ ಹಿಜಾಬ್ ಕುರಿತಾದ ಬೆಳವಣಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಇಲ್ಲಿ ನ್ಯಾಯಾಲಯ ನೀಡುವ ತೀರ್ಪುಗಳನ್ನು ಸಹ ಅಲ್ಪಸಂಖ್ಯಾತರ ವಿರುದ್ಧ ತಪ್ಪಾಗಿ ಅರ್ಥೈಸಲಾಗುತ್ತದೆ. ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವ ಕುರಿತಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ತೀರ್ಪನ್ನು ಕಾಲೇಜಿನ ಶಿಕ್ಷಕಿಯರಿಗೂ ಅನ್ವಯಿಸಿ ಸತಾಯಿಸಲಾಗುತ್ತಿದೆ.
ಚಾಂದಿನಿ ತುಮಕೂರು ನಗರದ ಜೈನ್ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕಿ. ಕಳೆದ ಮೂರು ವರ್ಷಗಳಿಂದ ಅವರು ಹಿಜಾಬ್ ಧರಿಸಿಯೇ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು. ಇಲ್ಲಿಯವರೆಗೂ ಏನೂ ತೊಂದರೆ ಆಗಿರಲಿಲ್ಲ. ಆದರೆ 2022ರ ಫೆಬ್ರುವರಿ 16ರಂದು ಬುಧವಾರ ಕಾಲೇಜಿನ ಪ್ರಾಂಶುಪಾಲರು ಅವರನ್ನು ಕರೆಯಿಸಿ ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಸಂಕೇತದ ಬಟ್ಟೆ ಧರಿಸಿ ಕಾಲೇಜಿನಲ್ಲಿ ಪಾಠ ಮಾಡಬಾರದು ಎಂದು ಆದೇಶ ಬಂದಿದೆ ಎಂದು ಹೇಳಿದ್ದಾರೆ. ಪ್ರಾಂಶುಪಾಲರ ಅನಿರೀಕ್ಷಿತ ಮಾತುಗಳಿಂದ ನೊಂದ ಉಪನ್ಯಾಸಕಿ ರಾಜೀನಾಮೆ ಕೊಟ್ಟಿದ್ದಾರೆ. ಉಪನ್ಯಾಸಕಿಯ ಮಾತುಗಳಲ್ಲೇ ಹೇಳುವುದಾದರೆ “ಹಿಜಾಬ್ ನನ್ನ ಹಕ್ಕು. ಹಾಗಾಗಿ ನಾನು ಹಿಜಾಬ್ ತೆಗೆಯುವುದಿಲ್ಲ. ಈ ಬೆಳವಣಿಗೆಯಿಂದಾಗಿ ನನ್ನ ಆತ್ಮಗೌರವಕ್ಕೆ ಧಕ್ಕೆ ಉಂಟಾಗಿದೆ. ಹಾಗಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ.”
ಹೈಕೋರ್ಟಿನ ಆದೇಶದ ವ್ಯಾಪ್ತಿ ಮೀರಿ ವಿದ್ಯಾರ್ಥಿಯರ ಮೇಲೆ ಕ್ರಮಕೈಗೊಳ್ಳುತ್ತಿರುವುದು ಖಂಡನೀಯವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಗಮನದಲ್ಲಿರಿಸಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ಜಾರಿಗೊಳಿಸಿರಬಹುದು. ಕಾಲೇಜು ಅಭಿವೃದ್ಧಿ ಸಮಿತಿಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮವಸ್ತ್ರ ನಿಗದಿಪಡಿಸಿದ ಕಾಲೇಜುಗಳಿಗೆ ಮಾತ್ರ ಕೋರ್ಟ್ ಆದೇಶ ಅನ್ವಯಿಸುತ್ತದೆ. ಆದರೆ ಪ್ರತಿಯೊಂದು ಕಾಲೇಜು, ಪ್ರತಿಯೊಂದು ಶಿಕ್ಷಣ ಸಂಸ್ಥೆ ಆದೇಶವನ್ನು ಭಿನ್ನ ಭಿನ್ನವಾಗಿ ಅರ್ಥೈಸಿ ಹಿಜಾಬ್ ನಿಷೇಧವನ್ನು ಜಾರಿಗೊಳಿಸುತ್ತಿದೆ. ಪೊಲೀಸ್ ಸಿಬ್ಬಂದಿ ಮೂಲಕ ವಿದ್ಯಾರ್ಥಿನಿಯರನ್ನು ಬೆದರಿಸಲಾಗುತ್ತಿದೆ. ಆದೇಶದಲ್ಲಿ ತರಗತಿ ಕೊಠಡಿ ಎಂದು ಹೇಳಲಾಗಿದ್ದರೂ ವಿದ್ಯಾರ್ಥಿನಿಯರನ್ನು ಕಾಲೇಜಿನ ಬಾಗಿಲಿನಲ್ಲಿಯೇ ತಡೆದು ನಿಲ್ಲಿಸಲಾಗುತ್ತದೆ. ಅನಗತ್ಯ ಲಾಠಿ ಪ್ರಹಾರ ಮಾಡಿ ವಿದ್ಯಾರ್ಥಿ ಗುಂಪುಗಳನ್ನು ಒಂದರ ವಿರುದ್ಧ ಇನ್ನೊಂದನ್ನು ಪ್ರಚೋದಿಸಲಾಗುತ್ತದೆ. ಉರ್ದು ಶಾಲೆಗಳಲ್ಲಿಯೂ ಹಿಜಾಬ್ ನಿರ್ಬಂಧಿಸಲಾಗುತ್ತಿದೆ. ಪದವಿ ಕಾಲೇಜುಗಳಲ್ಲಿ ಸಹ ಹಿಜಾಬ್ ನಿರ್ಬಂಧಿಸಿ ವಿದ್ಯಾರ್ಥಿಗಳನ್ನು ರೊಚ್ಚಿಗೆಬ್ಬಿಸಲಾಗುತ್ತಿದೆ. ಇದೆಲ್ಲವೂ ಬಹುಸಂಖ್ಯಾತರಿಗೆ ದೊರೆಯುತ್ತಿರುವ ಕುಮ್ಮಕ್ಕಿನಿಂದ.
ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಾಳಿ ದೌರ್ಜನ್ಯ ಹೆಚ್ಚುತ್ತಲೇ ಇದೆ. ಅವರಿಗೆ ಈ ವ್ಯವಸ್ಥೆಯಲ್ಲಿ ನ್ಯಾಯ ದೊರೆಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರಿಂದಾಗಿ ಅಲ್ಪಸಂಖ್ಯಾತ ಸಮುದಾಯ ತೀವ್ರ ಆತಂಕಕ್ಕೆ ಒಳಗಾಗುತ್ತಿದೆ. ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅವರಿಗೆ ನ್ಯಾಯ ಸಿಗಲಿಲ್ಲ. ಇದೊಂದು ಘೋರ ಕಾನೂನು ಉಲ್ಲಂಘನೆಯ ಪ್ರಶ್ನೆ ಎಂದು ಒಪ್ಪಿಕೊಳ್ಳಲಾಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಮುಂಬೈ ಸರಣಿ ಬಾಂಬ್ ಸ್ಟೋಟದಲ್ಲಿ ಸಾವಿರಾರು ಮುಸಲ್ಮಾನರು ಹತ್ಯೆಗೀಡಾದರೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. ಗುಜರಾತ್ ಗಲಭೆ ಪ್ರಕರಣದಲ್ಲಿ 2,000ಕ್ಕೂ ಹೆಚ್ಚು ಮುಸಲ್ಮಾನರು ಹತರಾಗಿದ್ದರೂ ಕೊಲೆಗಡುಕರಿಗೆ ಶಿಕ್ಷೆಯಾಗಿಲ್ಲ. ಲವ್ ಜಿಹಾದ್ ಸುಳ್ಳು ಆರೋಪಕ್ಕೆ ಸಿಕ್ಕಿಹಾಕಿಕೊಂಡು ಎಷ್ಟೊಂದು ಅಮಾಯಕ ಮುಸಲ್ಮಾನ ಯುವಕರು ವಿಚಾರಣೆ ಇಲ್ಲದೆ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ? ಗೋ ಮಾಂಸವನ್ನು ಆಹಾರವಾಗಿ ಸೇವಿಸಿದ ಕಾರಣಕ್ಕಾಗಿ ಎಷ್ಟೊಂದು ಅಮಾಯಕರನ್ನು ಥಳಿಸಿ ಸಾಯಿಸಲಾಗಿದೆ?
ಈಗ ಮುಗ್ಧ ಮುಸಲ್ಮಾನ ವಿದ್ಯಾರ್ಥಿನೀಯರನ್ನು ಹಿಂಸೆಗೆ ಗುರಿಪಡಿಸಲು ಹೊರಟಿದ್ದಾರೆ. ಅಣ್ಣ ತಮ್ಮಂದಿರಂತೆ, ಅಕ್ಕತಂಗಿಯರಂತೆ ಒಟ್ಟಾಗಿ, ಶಾಲೆ ಕಾಲೇಜುಗಳಿಗೆ ಹೋಗುತ್ತಾ ಬರುತ್ತಾ ಇದ್ದ ನಮ್ಮ ಮಕ್ಕಳ ನಡುವೆ ದ್ವೇಷದ ಬೀಜ ಬಿತ್ತುತ್ತಿದ್ದಾರೆ. ಇದು ದೇಶವನ್ನು ಒಡೆಯುವ ಸಂಚು. ಮುಂದಿನ ನಮ್ಮ ಪೀಳಿಗೆಯನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸುವ ಕುತಂತ್ರ. ಕೊರೊನಾ ಸಂದರ್ಭದಲ್ಲಿ ಎಷ್ಟೊಂದು ಅನಾಥ ಶವಗಳನ್ನು ಹಿಂದು, ಮುಸಲ್ಮಾನ ಎಂಬ ಬೇಧವಿಲ್ಲದೆ ಎಲ್ಲರೂ ಸೇರಿ ಅಂತ್ಯ ಸಂಸ್ಕಾರ ಮಾಡಿರಲಿಲ್ಲವೆ? ಈ ಸೌಹಾರ್ಧತೆ ಉಳಿಯುವಂತಾದರೆ ಯಾರಿಗೆ ಏನು ನಷ್ಟ? ಅವರವರ ಧಾರ್ಮಿಕ ಆಚರಣೆಗಳ ಬಗ್ಗೆ ನಮಗೇಕೆ ದ್ವೇಷ? ಸಣ್ಣವರಿಗೆ, ದುರ್ಬಲರಿಗೆ, ಮಹಿಳೆಯರಿಗೆ ಹೆಚ್ಚಿನ ಕಾಳಜಿ ತೋರುವುದು ನಮ್ಮ ಸಂಸ್ಕೃತಿಯ ಭಾಗವಲ್ಲವೆ? ವಿದ್ಯಾರ್ಥಿ ವಿದ್ಯಾರ್ಥಿನೀಯರೆ, ದ್ವೇಷವನ್ನು ಬಿತ್ತುವವರ ಬಗ್ಗೆ, ಕೋಮುವಾದದ ಬೆಂಕಿ ಹಚ್ಚುವವರ ಬಗ್ಗೆ ಎಚ್ಚರಿಕೆಯಿಂದ ಇರೋಣ. ಅಂತವರು ನಮ್ಮ ಶತ್ರುಗಳು, ದೇಶದ ಶತ್ರುಗಳು. ನಮ್ಮ ನಾಡು ಶಾಂತಿಯ ತೋಟವಾಗಿರಲಿ. ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ನಮ್ಮ ಕಾಳಜಿ ಆದರ್ಶಪ್ರಾಯವಾಗಿರಲಿ.