ಕರ್ನಾಟಕ ರಾಜ್ಯ ಸರಕಾರ ೨೦೨೨-೨೩ರ ಸಾಲಿಗೆ, ರಾಜ್ಯದ ಜನತೆಯ ಮೇಲೆ ಹೊಸದಾಗಿ ೭೨,೦೦೦ ಕೋಟಿ ರೂಪಾಯಿಗಳ ಸಾಲದ ಹೊರೆಯನ್ನು ಹೊರಿಸಿದ ೨,೬೫,೭೨೦ ಕೋಟಿ ರೂ.ಗಳ ಬಜೆಟ್ ಮಂಡಿಸಿದೆ.
ಸತತ ಅತೀವೃಷ್ಟಿ, ಪ್ರವಾಹ ಹಾಗೂ ಕೋವಿಡ್ ಸಂಕಷ್ಠದಿಂದ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ರಾಜ್ಯವನ್ನು, ಸಂಕಷ್ಟ ಹಾಗೂ ಬಿಕ್ಕಟ್ಟಿನಿಂದ ಮೇಲೆತ್ತುವ ಯಾವುದೇ ಪ್ರಸ್ಥಾಪಗಳನ್ನು ಬಜೆಟ್ ಹೊಂದಿಲ್ಲ. ಬದಲಿಗೆ ಜನತೆಯ ಸಂಕಷ್ಠವನ್ನು ಮತ್ತಷ್ಠು ಹೆಚ್ಚಿಸುವ ಬಜೆಟ್ ಇದಾಗಿದೆಯೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ.
ಬಜೆಟ್‌ನ ದಿಶೆ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಕ್ಕೆ ಪೂರಕವಾಗಿಯೇ ಮುಂದುವರೆದಿದೆ. ಆದ್ದರಿಂದಲೇ, ಇದರಲ್ಲಿ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-೨೦೨೦, ಎಪಿಎಂಸಿ ತಿದ್ದುಪಡಿ ಕಾಯ್ದೆ-೨೦೨೦ ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-೨೦೨೦ ಇವುಗಳನ್ನು ಮತ್ತು ಕಾರ್ಮಿಕ ಸಂಹಿತೆಗಳ ಜಾರಿಯನ್ನು ತಡೆಯುವ ಮತ್ತು ಜನ ವಿರೋಧಿ ಹೊಸ ಶಿಕ್ಷಣ ನೀತಿಯನ್ನು ವಾಪಾಸು ಪಡೆಯುವ ಪ್ರಸ್ಥಾಪಗಳನ್ನು ಮಾಡಲಿಲ್ಲ. ಬದಲಿಗೆ ಅವುಗಳ ಜಾರಿಗೆ ಪೂರಕ ಕ್ರಮಗಳನ್ನು ವಹಿಸಲಾಗಿದೆ.
ರಾಜ್ಯದ ಜನತೆಯ ತಲಾ ಆದಾಯವನ್ನು ಹೆಚ್ಚಿಸುವ ಉದ್ಯೋಗಾವಕಾಶಗಳ ಕುರಿತಾಗಲೀ, ಕನಿಷ್ಠ ವೇತನ ರೂ.೨೧,೦೦೦ ಕ್ಕೆ ಹೆಚ್ಚಿಸುವ ಮತ್ತು ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನದ ಪ್ರಸ್ತಾಪಗಳು ಇಲ್ಲ. ಜನತೆಯನ್ನು ಋಣ ಭಾರದಿಂದ ಮುಕ್ತಗೊಳಿಸುವ ಇಲ್ಲವಾಗಿವೆ.
ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತರಿಗೆ ಹಾಗೂ ಗ್ರಾಮ ಸೇವಕರಿಗೆ ತಲಾ ೧,೦೦೦ ರೂ. ಗಳಷ್ಠು ಗೌರವ ವೇತನ ಹೆಚ್ಚಳದ ಪ್ರಸ್ಥಾಪ ಬಿಟ್ಟರೇ, ಉಳಿದ ಭಾಗ ಬಹುತೇಕ ಜನತೆಯನ್ನು ಒಡೆದಾಳುವ ಕೋಮುವಾದಕ್ಕೆ ಹಾಗೂ ಜಾತಿವಾದಕ್ಕೆ ಕುಮ್ಮಕ್ಕು ನೀಡುವಂತಹ ಬಜೆಟ್ ಇದಾಗಿದೆ.
ರೈತರಿಗೆ ತಲಾ ಎಕರೆಗೆ ೨೫೦ ರೂ. ಗಳ ಮತ್ತು ೬೦೦ ರೂ. ಗಳನ್ನು ಪಡೆಯುವ ದುರ್ಬಲ ಮಾಶಾಸನ ಫಲಾನುಭವಿಗಳಿಗೆ ಕೇವಲ ೨೦೦ ರೂ. ಗಳ ಹೆಚ್ಚಳವನ್ನು ಬಹಳ ಕನಿಕರದಿಂದ ಮಾಡಲಾಗಿದೆ. ಕಳೆದ ವಾರವಷ್ಠೇ ರಾಜ್ಯ ಸರ್ಕಾರ ತನ್ನ ಮಂತ್ರಿ ಮಂಡಲದ ಹಾಗೂ ಶಾಸಕರ ವೇತನವನ್ನು ಮಾಸಿಕ ೨೦ ರಿಂದ ೫೦ ಸಾವಿರದಷ್ಟು ಹೆಚ್ಚಿಸಿಕೊಂಡಿರುವುದಕ್ಕೆ ಹೋಲಿಸಿದರೇ ಇದು ಒಂದು ರೀತಿಯ ಅಪಹಾಸ್ಯದಂತೆ ಕಾಣುತ್ತದೆ.
ಕೋವಿಡ್ ಸಂಕಷ್ಠದಲ್ಲಿರುವಾಗ ದೇವದಾಸಿ ಮಹಿಳೆಯರು ಸೇರಿದಂತೆ ಹಲವು ಸಮುದಾಯಗಳ ಮಾಶಾಸನವನ್ನು ಕಳೆದ ೯ ತಿಂಗಳಿಂದ ನೀಡದೇ ಬಾಕಿ ಉಳಿಸಿಕೊಂಡಿದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ತಕ್ಷಣವೇ ರಾಜ್ಯದ ಜನತೆಯ ತಲಾ ಆದಾಯವನ್ನು ಹೆಚ್ಚಿಸುವುದಕ್ಕೆ ಮತ್ತು ರಾಜ್ಯವನ್ನು ಕಾರ್ಪೊರೇಟ್ ಲೂಟಿಕೋರತನದಿಂದ ಮುಕ್ತ ಮಾಡುವ ಬಜೆಟ್ ಆಗಿ ಬದಲಾಯಿಸುವಂತೆ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.
ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ