ಐದು ವಿಧಾನಸಭಾ ಚುನಾವಣೆಗಳು ಪ್ರಕಟವಾಗಿರುವ ಬೆನ್ನಲ್ಲೇ ನೌಕರರ ಭವಿಷ್ಯನಿಧಿಯ ಮೇಲಿನ ಬಡ್ಡಿ ದರವನ್ನು 8.5%ದಿಂದ 8.1%ಕ್ಕೆ ಇಳಿಸುವ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲೆ ಗುರಿಯಿಡುವ ಆರೆಸ್ಸೆಸ್ನ ವಾರ್ಷಿಕ ವರದಿ ಬಿಡುಗಡೆ ಮಾಡಲಾಗಿದೆ. ಮೊದಲನೆಯದ್ದು ಒಂದು ಕ್ರೂರನಡೆಯಾದರೆ, ಎರಡನೆಯದ್ದು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅನಿಷ್ಟಕಾರಿಯಾದ ನಡೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ವರ್ಣಿಸಿದೆ.
ಮಾರ್ಚ್ 12-13ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್ ಬ್ಯುರೊ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯನ್ನು ಈ ಮುಂದೆ ಕೊಡಲಾಗಿದೆ:
ಇತ್ತೀಚಿನ ವಿಧಾನಸಭೆ ಚುನಾವಣೆಗಳು
ಬಿಜೆಪಿಯು ತಾನು ಅಧಿಕಾರದಲ್ಲಿದ ಎಲ್ಲ ರಾಜ್ಯಗಳಲ್ಲಿ ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಆಯ್ಕೆಯಾಗಿದೆ. ಕೋಮು ಧ್ರುವೀಕರಣವನ್ನು ತೀವ್ರಗೊಳಿಸಿ, ಮಾಧ್ಯಮದ ದೊಡ್ಡ ವಿಭಾಗಗಳ ಮೇಲಿನ ನಿಯಂತ್ರಣ ಮತ್ತು ಅಪಾರ ಹಣಬಲದಿಂದ ಬಿಜೆಪಿ ಇಳಿದ ಬಹುಮತದಿಂದ ಸರ್ಕಾರವನ್ನು ಉಳಿಸಿಕೊಂಡಿದೆ.
ಉತ್ತರಾಖಂಡ, ಗೋವಾ ಮತ್ತು ಮಣಿಪುರ ಚುನಾವಣೆಗಳನ್ನೂ ಬಿಜೆಪಿ ಗೆದ್ದಿದೆ.
ಪಂಜಾಬಿನ ಜನತೆ ಎರಡು ಪಾರಂಪರಿಕ ಪಕ್ಷಗಳಾದ ಕಾಂಗ್ರೆಸ್ ಮತ್ತು ಅಕಾಲಿದಳವನ್ನು ತಿರಸ್ಕರಿಸಿ ಆಮ್ ಆದ್ಮಿ ಪಾರ್ಟಿ(ಎಎಪಿ)ಗೆ ಮತ ನೀಡಿದ್ದಾರೆ. ಒಂದು ನಿರ್ಣಾಯಕ ಬದಲಾವಣೆಗೆ ಪಂಜಾಬಿನ ಜನತೆ ಮತ ಹಾಕಿದ್ದು, ಎಎಪಿ ಭರ್ಜರಿ ಜಯ ಪಡೆದಿದೆ.
ಈ ಫಲಿತಾಂಶಗಳು ಬಲಪಂಥೀಯ ರಾಜಕೀಯದ ಪ್ರಾಬಲ್ಯ ಮುಂದುವರಿಯುತ್ತಿರುವುದನ್ನು ತೋರಿಸುತ್ತವೆ. ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಜಂಟಿಯಾಗಿ ಹಿಂದುತ್ವ-ಕಾರ್ಪೊರೇಟ್ ಆಳ್ವಿಕೆ, ಅದರ ಧೋರಣೆಗಳು, ಬೆಳೆಯುತ್ತಿರುವ ನಿರಂಕುಶಾಧಿಕಾರದ ಹಾಗೂ ಫ್ಯಾಸಿಸ್ಟ್ ತೆರನ ದಾಳಿಗಳ ವಿರುದ್ದ ಹೋರಾಟದ ತಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ ನೀಡಿದೆ.
ತ್ರಿಪುರಾದಲ್ಲಿ ಸಿಪಿಐ(ಎಂ) ವಿರುದ್ಧ ಬಿಜೆಪಿಯ ಫ್ಯಾಸಿಸ್ಟ್ ತೆರನ ಹಿಂಸಾಚಾರ
ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ಕೂಡಲೇ, ತ್ರಿಪುರಾದಲ್ಲಿ ಬಿಜೆಪಿಯು ಸಿಪಿಐ(ಎಂ) ಕಾರ್ಯಕರ್ತರ ವಿರುದ್ಧ ದುಷ್ಟ ಫ್ಯಾಸಿಸ್ಟ್ ತೆರನ ದಾಳಿಗಳನ್ನು ಹರಿಯ ಬಿಟ್ಟಿತು ಮತ್ತು ರಾಜ್ಯಾದ್ಯಂತ ಅನೇಕ ಸಿಪಿಐ(ಎಂ) ಕಚೇರಿಗಳ ಮೇಲೆ ಮನಬಂದಂತೆ ದಾಳಿ ನಡೆಸಿತು. ರಾಜ್ಯದಲ್ಲಿ ಈ ಭಯೋತ್ಪಾದನೆಯ ರಾಜಕೀಯವನ್ನು ಹರಿಯಬಿಟ್ಟಿರುವುದನ್ನು ಸಿಪಿಐ(ಎಂ)ನ ಪಾಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಬಿಜೆಪಿಯು ಈ ಹಿಂದೆಯೂ ಸಿಪಿಐ(ಎಂ) ವಿರುದ್ಧ ಸತತವಾಗಿ ಇಂತಹ ಭಯೋತ್ಪಾದನೆಯಲ್ಲಿ ತೊಡಗಿತ್ತು. ಆದರೆ ಮತ್ತೊಮ್ಮೆ ಅದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಬೆದರಿಸುವಲ್ಲಿ ವಿಫಲವಾಗುತ್ತದೆ ಎಂದು ಅದು ಹೇಳಿದೆ.
ಭವಿಷ್ಯ ನಿಧಿ ಬಡ್ಡಿದರಗಳ ತೀವ್ರ ಕಡಿತಕ್ಕೆ ಖಂಡನೆ
ಈ ಚುನಾವಣಾ ಫಲಿತಾಂಶಗಳ ನಂತರ ಬಿಜೆಪಿ ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ(ಇಪಿಎಫ್) ಬಡ್ಡಿದರವನ್ನು ಕಳೆದ ವರ್ಷದ ಶೇಕಡಾ 8.5 ರಿಂದ ಶೇಕಡಾ 8.1ಕ್ಕೆ ಇಳಿಸುವ ಮೂಲಕ ದುಡಿಯುವ ಜನರ ಮೇಲೆ ಮತ್ತಷ್ಟು ದುಷ್ಟ ದಾಳಿಗಳನ್ನು ನಡೆಸಿದೆ. ಇದು ಕ್ರೂರತನ, ಏಕೆಂದರೆ, ಹೆಚ್ಚುತ್ತಿರುವ ಉದ್ಯೋಗ ನಷ್ಟಗಳು, ಬೆಲೆ ಏರಿಕೆಯ ನಾಗಾಲೋಟ ಇತ್ಯಾದಿಗಳಿಂದ ಹೆಚ್ಚುತ್ತಿರುವ ಸಂಕಷ್ಟಗಳ ಹಿನ್ನೆಲೆಯಲ್ಲಿ ಇದು ಬಂದಿದೆ.
ಜನರ ಜೀವನೋಪಾಯದ ಮೇಲಿನ ಈ ದಾಳಿಯ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಲು ಎಲ್ಲಾ ಸಿಪಿಐ(ಎಂ) ಘಟಕಗಳಿಗೆ ಪೊಲಿಟ್ ಬ್ಯೂರೋ ಕರೆ ನೀಡಿದೆ.
ಕೋಮು ಧ್ರುವೀಕರಣ ಮತ್ತಷ್ಟು ತೀಕ್ಷ್ಣ
ಆರೆಸ್ಸೆಸ್, ಈ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಘೋಷಿಸಿದ ಕೂಡಲೇ ಬಿಡುಗಡೆ ಮಾಡಿರುವ ತನ್ನ 2022ರ ವಾರ್ಷಿಕ ವರದಿಯಲ್ಲಿ “ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ್ಯ”ದ ಹೆಸರಿನಲ್ಲಿ ದೇಶದಲ್ಲಿ “ಧಾರ್ಮಿಕ ಮತಾಂಧತೆ ಬೆಳೆಯುತ್ತಿದೆ” ಎಂದು ಆರೋಪಿಸಿ “ಒಂದು ನಿರ್ದಿಷ್ಟ ಸಮುದಾಯವು ಸರ್ಕಾರಿ ಯಂತ್ರವನ್ನು ಪ್ರವೇಶಿಸುವ” ವಿಸ್ತಾರವಾದ ಯೋಜನೆಗಳಿವೆ” ಎಂದು ಸಾರಿದೆ. “ಈ ಪಿಡುಗನ್ನು ಸೋಲಿಸಲು” “ಸಂಘಟಿತ ಶಕ್ತಿಯೊಂದಿಗೆ ಎಲ್ಲಾ ಪ್ರಯತ್ನಗಳು” ನಡೆಯಬೇಕೆಂದು ಆರೆಸ್ಸೆಸ್ ಕರೆ ನೀಡಿದೆ. ಇದು ಅನಿಷ್ಟಕಾರಿ, ಅಲ್ಪಸಂಖ್ಯಾತ ಸಮುದಾಯದ ಮೇಲೆ ಗುರಿಯಿಡುವ ಮತ್ತೊಂದು ಕುತಂತ್ರದ ನಡೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಎಲ್ಲಾ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳು ಕೋಮು ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲಿಕ್ಕೆ ಸಂವಿಧಾನದ ಖಾತರಿಗಳು ಮತ್ತು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯಲು ಮುಂದೆ ಬರಬೇಕು ಎಂದು ಪೊಲಿಟ್ ಬ್ಯುರೊ ಕರೆ ನೀಡಿದೆ. ಇದು ಭಾರತದ ಏಕತೆ ಮತ್ತು ಸಮಗ್ರತೆಗೆ ಬಹು ಮುಖ್ಯವಾಗಿದೆ ಎಂದು ಅದು ಹೇಳಿದೆ.
ಪಕ್ಷದ 23ನೇ ಮಹಾಧಿವೇಶನದ ರಾಜಕೀಯ ಸಂಘಟನಾ ವರದಿ
ಮಾರ್ಚ್ 25 ರಿಂದ 27ರ ವರೆಗೆ ನಡೆಯುವ ಪಕ್ಷದ ಕೇಂದ್ರ ಸಮಿತಿಯ ಸಭೆಯ ಪರಿಶೀಲನೆಗೆ ಸಲ್ಲಿಸುವ ರಾಜಕೀಯ ಸಂಘಟನಾ ವರದಿಯನ್ನು ಪೊಲಿಟ್ ಬ್ಯುರೊ ಚರ್ಚಿಸಿತು.
ಸಿಪಿಐ(ಎಂ)ನ 23ನೇ ಮಹಾಧಿವೇಶನ 2022ರ ಏಪ್ರಿಲ್ 6-10ರವರೆಗೆ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ.