ತಾರತಮ್ಯವಿಲ್ಲದ ಸಾರ್ವತ್ರಿಕ ಶಿಕ್ಷಣದ ಹಕ್ಕಿಗೆ ಹೊಡೆತ-ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪು

ತರಗತಿಗಳಲ್ಲಿ ಹಿಜಾಬ್ ಅಥವಾ ಶಿರವಸ್ತ್ರ ಬಳಕೆಯನ್ನು ನಿಷೇಧಿಸುವ ಕರ್ನಾಟಕ ಸರಕಾರದ ಆದೇಶವನ್ನು ಎತ್ತಿ ಹಿಡಿದಿರುವ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು ದುರದೃಷ್ಠಕರವಾದುದಾಗಿದೆ. ಇದು ಜನತೆಯು ತಾರತಮ್ಯವಿಲ್ಲದೆ ಸಾರ್ವತ್ರಿಕ ಶಿಕ್ಷಣ ಪಡೆಯುವ ಹಕ್ಕಿಗೆ ಹೊಡೆತ ನೀಡಲಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತನ್ನ ಆತಂಕವನ್ನು ವ್ಯಕ್ತಪಡಿಸುತ್ತದೆ.

ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ಪಡೆಯುವ ಹಕ್ಕು ಭಾರತದ ಸಂವಿಧಾನವು ಖಾತರಿಗೊಳಿಸಿರುವ ಹಕ್ಕಾಗಿದೆ. ಈ ತೀರ್ಪಿನಲ್ಲಿ, ಇದನ್ನು ಖಾತ್ರಿಗೊಳಿಸದ ಹಲವು ಪ್ರಶ್ನಾರ್ಹ ಆಯಾಮಗಳಿವೆ. ತರಗತಿಗಳಲ್ಲಿ ಹಿಜಾಬ್ ಬಳಕೆಯನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ದೋಷಪೂರ್ಣವೆಂದೇ ಹೇಳಬಹುದಾದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದರ ತಕ್ಷಣದ ಪರಿಣಾಮವೆಂದರೆ, ಇದು ರಾಜ್ಯದ ಶಿಕ್ಷಣ ಸಂಸ್ಥೆಗಳಿಂದ ಮುಸ್ಲಿಂ ಯುವತಿಯರನ್ನು ಗಣನೀಯವಾಗಿ ಹೊರದಬ್ಬುತ್ತದೆ.

ಭಾರತದ ಹಲವು ರಾಜ್ಯಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರವನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಎಂದೂ ಕೂಡಾ, ಸಾಮಾನ್ಯ ಸಮವಸ್ತ್ರದ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ನೆರೆಯ ಕೇರಳ. ಅಲ್ಲಿನ ಶಾಲೆಗಳಲ್ಲಿ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿರುವ ದಾಖಲೆಯನ್ನು ಕಾಣಬಹುದು. ಕರ್ನಾಟಕ ಸರ್ಕಾರವು ಕೇರಳದ ರೀತಿಯಲ್ಲಿ ಕ್ರಮವಹಿಸುವುದು ಅಗತ್ಯವಿದೆ.

ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದರೆ ಉತ್ತಮವಾಗಿತ್ತು. ಮತೀಯ ಆಚರಣೆಗಳನ್ನು ನಿರ್ದಿಷ್ಟ ಸಂಹಿತೆಯ ವ್ಯಾಪ್ತಿಗೆ ಒಳಪಡಿಸುವುದರಿಂದ, ನೇರವಾಗಿ ಒಂದು ಫಲಿತಾಂಶ ನೀಡಿದರೆ, ಪರೋಕ್ಷವಾಗಿ ಮತ್ತೊಂದು ಫಲಿತಾಂಶವನ್ನು ನೀಡಬಹುದು. ಇದು ದೀರ್ಘಾವಧಿಯಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಸೃಷ್ಟಿಸಬಹುದು.

ಹೈಕೋರ್ಟ್ ತೀರ್ಪು ಬಂದ ನಂತರ ರಾಜ್ಯದಲ್ಲಿನ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಪ್ರತ್ಯಕ್ಷವಾಗಿಯೋ, ಅಪ್ರತ್ಯಕ್ಷವಾಗಿಯೋ ಕೋಮುವಾದಿ ಮತ್ತು ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ದೊರೆತಂತೆ ಭಾಸವಾಗುತ್ತದೆ. ಇದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ಕೂಡಲೇ ಮದ್ಯಪ್ರವೇಶಿಸಿ, ತಾರತಮ್ಯವಿಲ್ಲದ ಸಾರ್ವತ್ರಿಕ ಶೈಕ್ಷಣಿಕ ಹಕ್ಕನ್ನು ಖಾತರಿ ಪಡಿಸುವಂತೆ ಕ್ರಮವಹಿಸುತ್ತದೆಂದು ಸಿಪಿಐ(ಎಂ) ಆಶಿಸುತ್ತದೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *