ಸಿಪಿಐ(ಎಂ) ಸೌಹಾರ್ದತಾ ಸಮಾವೇಶ

ಅಲ್ಪ ಸಂಖ್ಯಾತ ಸಮುದಾಯ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ನಿರಂತರ ಫ್ಯಾಸಿಸ್ಟರ ಆಕ್ರಮಣ
ಬಿಜೆಪಿ ಸಂಘ ಪರಿವಾರದ ಸಮಾಜ ವಿಭಜನೆಯ ದ್ವೇಷ ರಾಜಕಾರಣವನ್ನು ವಿರೋಧಿಸಿ
ಹಿಂದೂ-ಮುಸ್ಲಿಂ-ಕ್ರೈಸ್ತರ ಐಕ್ಯತೆಯ ಸೌಹಾರ್ದ ಕರಾವಳಿ ನಿರ್ಮಾಣಕ್ಕಾಗಿ

ಸಿಪಿಐ(ಎಂ) ಸೌಹಾರ್ದತಾ ಸಮಾವೇಶ

ಪ್ರಮುಖ ಭಾಷಣಕಾರರು: ಬೃಂದಾ ಕಾರಟ್‌, ಸಿಪಿಐ(ಎಂ) ಪೊಲಿಟ್‌ ಬ್ಯೂರೋ ಸದಸ್ಯರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರು
ತಾರೀಖು: 21.03.2022, ಸೋಮವಾರ – ಸಮಯ: ಬೆಳಿಗ್ಗೆ 10.30ಕ್ಕೆ
ಸ್ಥಳ: ಕುದ್ಮಲ್‌ ರಂಗರಾವ್‌ ಪುರಭವನ, (ಟೌನ್‌ಹಾಲ್‌) ಮಂಗಳೂರು.

ಕರಾವಳಿ ಕರ್ನಾಟಕ ಮತೀಯ ದ್ವೇಷದ, ಪರಸ್ಪರ ಅಪನಂಬಿಕೆ, ಅವಿಶ್ವಾಸಗಳ, ಅಮಾನವೀಯತೆ ಮತ್ತು ಅಶಾಂತಿಯ ತಾಣವಾಗಿದೆ. ಈ ಪ್ರದೇಶದಲ್ಲಿ ಒಂದಲ್ಲ ಒಂದು ಕಡೆಗಳಲ್ಲಿ ಮಾನವ ಹಕ್ಕುಗಳ ನಿರಂತರ ದಮನ, ದಾಳಿ, ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿದೆ. ಫ್ಯಾಸಿಸ್ಟ್‌ ಸಂಘ ಪರಿವಾರ ಮತ್ತು ಮುಸ್ಲಿಂ ಮತೀಯ ಸಂಘಟನೆಯೊಂದು ಇವುಗಳ ಹಿಂದೆ ಸಕ್ರೀಯವಾಗಿದೆ. ಇದರಿಂದಾಗಿ ಅರಾಜಕತೆಯು ದಿನನಿತ್ಯದ ವಿದ್ಯಾಮಾನವಾಗಿದೆ.

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾನೂನು, ಗೋಹತ್ಯೆ ಕಾನೂನುಗಳು ನೇರವಾಗಿ ಮತೀಯ ದ್ವೇಷದ ರಾಜಕೀಯ ಕಾನೂನುಗಳಾಗಿವೆ. ಜನವಿರೋಧಿ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳು ಆಡಳಿತವನ್ನು ಮರೆ ಮಾಡಲು, ಭ್ರಷ್ಟಾಚಾರವನ್ನು ವ್ಯಾಪಕಗೊಳಿಸಿ ಜನರಿಗೆ ಮಂಕುಬೂದಿ ಎರಚಲು ಯೋಜನಾ ಬದ್ಧವಾಗಿ ಕೋಮುವಾದಿ ಅಜೆಂಡಾಗಳನ್ನು ಜೀವಂತವಾಗಿ ಇಡಲಾಗಿದೆ. ನಿರುದ್ಯೋಗದಿಂದ ಕಂಗೆಟ್ಟಿರುವ ಯುವಕರಿಗೆ ಮತೀಯ-ಧಾರ್ಮಿಕ ಆಫೀಮನ್ನು ನೀಡಲಾಗಿದೆ. ʻಧರ್ಮ ಯುದ್ಧʼದ ಸೈನಿಕರನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ.

ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸುವ ವ್ಯವಸ್ಥಿತ ಪಿತೂರಿಯನ್ನು ಮತೀಯ ದ್ವೇಷದ ಹಿನ್ನೆಲೆಯಲ್ಲಿ ನಡೆಸಲಾಗುತ್ತಿದೆ. ನೈಜ ಅಪರಾಧಿಗಳನ್ನು ಪತ್ತೆ ಹಚ್ಚುವ ಮೊದಲೇ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಮೇಲೆ ಅಪಪ್ರಚಾರ, ಪ್ರತಿಭಟನೆ, ದ್ವೇಷಪೂರಿತ ಭಾಷಣಗಳನ್ನು ಮಾಡಿ ಇಡೀ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಲವ್‌ ಜಿಹಾದ್‌, ಗೋ ಸಾಗಾಟ ಪ್ರಕರಣಗಳನ್ನು ಇವೇ ಮೊದಲಾದ ಸಾಮಾಜಿಕ-ಆರ್ಥಿಕ ಮತ್ತು ಕಾನೂನಿನಾತ್ಮಕ ದೃಷ್ಟಿಯಲ್ಲಿ ನೋಡುವ ಬದಲು ಅಲ್ಪಸಂಖ್ಯಾತ ಸಮುದಾಯದ ಮೇಲೆ ಮತೀಯ ದ್ವೇಷದ ರಾಜಕಾರಣ ಮುಂದುವರಿಯುತ್ತಿದೆ. ಕೊರೊನಾ ಸಾಂಕ್ರಮಿಕ ರೋಗದ ಪ್ರಾರಂಭದ ಘಟ್ಟದಲ್ಲೂ ಮುಸ್ಲಿಂ ಮತೀಯಸ್ಥರ ಮೇಲೆ ಕೊರೊನಾ ಪ್ರಸರಣದ ಆರೋಪವನ್ನು ಹೊರಿಸಿ ಅಪಪ್ರಚಾರವನ್ನು ನಡೆಸಲಾಯಿತು. ಇತ್ತೀಚೆಗೆ ಸಂಘ ಪರಿವಾರದ ಕೋಮು ದ್ವೇಷದ ಪ್ರಯೋಗ ಶಾಲೆಯ ಬತ್ತಳಿಕೆಗೆ ಹಿಜಾಬ್‌ ಧರಿಸುವಿಕೆಯನ್ನು ಹೊಸದಾಗಿ ಸೇರಿಸಲಾಯಿತು. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅಶಾಂತಿ ಅರಾಜಕತೆ ಮುಂದುವರಿದಿದೆ. ಶಾಸಕರು, ಪ್ರಾಂಶುಪಾಲರುಗಳು ಮತ್ತು ಶಿಕ್ಷಣ ಇಲಾಖೆ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸದೆ ಮತೀಯ ಹಿನ್ನೆಲೆಯಲ್ಲಿ ಕಾರ್ಯಾಚರಿಸಿದ್ದಾರೆ. ಶೈಕ್ಷಣಿಕ ರಂಗವನ್ನು ರಾಡಿ ಎಬ್ಬಿಸಿದ ಈ ಪ್ರಕರಣದಲ್ಲಿ ಮುಸ್ಲಿಂ ಮತೀಯವಾದಿ ಸಂಘಟನೆಯ ಕೊಡುಗೆಯೂ ಇದೆ.

ಮಂಗಳೂರಿನ ಕೂಳೂರು ಪಂಜಿಮೊಗರಿನಲ್ಲಿ ಕಳೆದ 40 ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಕ್ರೈಸ್ತ ಪ್ರಾರ್ಥನಾಲಯದ ಕಟ್ಟಡವನ್ನು ಸಂಘ ಪರಿವಾರದ ಶಕ್ತಿಗಳು ಬುಲ್ಡೋಜರ್‌ ಬಳಸಿ ನೆಲಸಮ ಮಾಡಿರುತ್ತಾರೆ. ದೇಶದ ಕಾನೂನನ್ನು ಗಾಳಿಗೆ ತೂರಲಾಗಿದೆ. ಸ್ಥಳೀಯ ಶಾಸಕರು, ಸರಕಾರಿ ಅಧಿಕಾರಿಗಳು ಮತ್ತು ಪೊಲೀಸರು ಈ ಸಮಾಜಬಾಹಿತ ಶಕ್ತಿಗಳನ್ನು ಬಂಧಿಸಲು ವಿಫಲರಾಗಿದ್ದಾರೆ. ಬದಲಾಗಿ ಅವರಿಗೆ ಸಂಪೂರ್ಣ ರಕ್ಷಣೆ ನೀಡುತ್ತಿದ್ದಾರೆ.

ಒಟ್ಟಾರೆಯಾಗಿ ಕರಾವಳಿ ಕರ್ನಾಟಕದ ದಿನನಿತ್ಯದ ಆಚಾರ-ವಿಚಾರ ವ್ಯವಹಾರಗಳು ಕೋಮುವಾದೀಕರಣಗೊಂಡಿದೆ. ಶಾಂತಿ, ಸೌಹಾರ್ದತೆ ಪ್ರಗತಿ ಬಯಸುವ ಶಕ್ತಿಗಳ ಐಕ್ಯತೆ ಮತ್ತು ಕಾರ್ಯಾಚರಣೆ ತುರ್ತಿನ ಅವಶ್ಯಕತೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸಾರ್ವಜನಿಕ ಸಂವಹನ, ಚರ್ಚೆ ಮತ್ತು ಐಕ್ಯ ಪ್ರತಿರೋಧದ ಹಿನ್ನೆಲೆಯಲ್ಲಿ ಸೌಹಾರ್ದತಾ ಸಮಾವೇಶವನ್ನು ಸಂಘಟಿಸುತ್ತಿದೆ. ಪಕ್ಷದ ಪೊಲಿಟ್‌ ಬ್ಯೂರೋ ಸದಸ್ಯರಾದ ಕಾಮ್ರೇಡ್‌ ಬೃಂದಾ ಕಾರಟ್‌ ರವರು ಭಾಗವಹಿಸಿ ವಿಚಾರ ವಿನಿಮಯ ಸಂವಹನ ನಡೆಸಲಿದ್ದಾರೆ.

ಕೆ. ಯಾದವ ಶೆಟ್ಟಿ, ಕಾರ್ಯದರ್ಶಿ, ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ

Leave a Reply

Your email address will not be published. Required fields are marked *