ಅಸೆಂಬ್ಲಿ ಚುನಾವಣೆಗಳ ಫಲಿತಾಂಶ ಹೇಳುವುದೇನು?

ಪ್ರಕಾಶ್ ಕಾರಟ್

Prakash Karat
ಪ್ರಕಾಶ್ ಕಾರಟ್

ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದ್ದು ಬಿಜೆಪಿ ಅತಿ ಹೆಚ್ಚಿನ ಲಾಭ ಗಳಿಸಿದೆ. ಕಾಂಗ್ರೆಸ್ ಪಕ್ಷ ಹಿಂದಿನ ಬಲದ ಅಸ್ಥಿಪಂಜರವಾಗಿದ್ದರೂ ವೈಭವದ ಕಾಲದಲ್ಲಿ ಇದ್ದ ರೀತಿಯಲ್ಲಿಯೇ ತಾನೇ ಪ್ರಮುಖ ಪಕ್ಷ ಎನ್ನುವ ರೀತಿಯಲ್ಲಿ ಅದು ವರ್ತಿಸುತ್ತಿದೆ. ಬಿಜೆಪಿ-ವಿರೋಧಿ ಪ್ರತಿಪಕ್ಷದಲ್ಲಿ ಎಸ್‌ಪಿ-ಆರ್‌ಎಲ್‌ಡಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ ಎನ್ನುವುದು ಗೊತ್ತಿದ್ದರೂ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಯಾವ ಆಧಾರದಲ್ಲಿ? ಇದುವೇ ಅದರ ಧೋರಣೆಯನ್ನು ಬಯಲುಗೊಳಿಸುತ್ತದೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ-ಈ ಐದು ರಾಜ್ಯಗಳಿಗೆ ಈಚೆಗೆ ನಡೆದ ಚುನಾವಣೆಗಳಿಂದ ಮೂರು ಪ್ರಮುಖ ಫಲಿತಗಳನ್ನು ಗಮನಿಸಬಹುದಾಗಿದೆ.

ಮೊದಲನೆಯದಾಗಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ನಿರ್ಣಾಯಕ ಜಯ ಗಳಿಸಿರುವುದು ಹಾಗೂ ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಅದು ಸರ್ಕಾರಗಳನ್ನು ಉಳಿಸಿಕೊಂಡಿರುವುದು.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಕಡಿಮೆ ಬಹುಮತ ಗಳಿಸಿದ್ದರೂ ಅವುಗಳ ಮತಗಳ ಪ್ರಮಾಣ ಶೇಕಡ 3.65ರಷ್ಟು ಏರಿಕೆಯಾಗಿ ಒಟ್ಟು 45% ಮತಗಳನ್ನು ಗಳಿಸಿವೆ. ಬಿಜೆಪಿಯ ಯಶಸ್ಸಿಗೆ ಹಲವು ಕಾರಣಗಳಿವೆ. ಜಾತಿ ಗುಂಪುಗಳ ಉತ್ತಮ ನಿರ್ವಹಣೆ, ಭಾರಿ ಪ್ರಮಾಣದಲ್ಲಿ ಹಣಬಲ, ಸಾಮಾಜಿಕ ಮಾಧ್ಯಮ ಮತ್ತು ಸರ್ಕಾರಿ ಯಂತ್ರದ ಬಳಕೆ ಆ ಕಾರಣಗಳು. ಅದಕ್ಕಿಂತ ಮುಖ್ಯವಾಗಿ, ಹೆಚ್ಚುತ್ತಿರುವ ಹಿಂದೂ ಪ್ರಜ್ಞೆಯ ಪ್ರಮುಖ ಅಂಶವನ್ನು ತಳ್ಳಿಹಾಕುವಂತಿಲ್ಲ.

ಅನೇಕ ವರ್ಷಗಳಿಂದ, ಮೇಲ್ಜಾತಿಯವರು ಮಾತ್ರವೇ ಅಲ್ಲದೆ ಜನಸಂಖ್ಯೆಯ ಗಣನೀಯ ವಿಭಾಗದವರು ವಿಶಾಲ-ಹಿಂದೂ ಅಸ್ಮಿತೆಯನ್ನು ಮೈಗೂಡಿಸಿಕೊಂಡಿದ್ದಾರೆ. ರಾಷ್ಟ್ರೀಯವಾದದಲ್ಲಿ ಒಳಗೊಳಿಸಲಾಗಿರುವ ಹಿಂದೂತ್ವವನ್ನು `ಇತರ’, ಅಂದರೆ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಟಾರ್ಗೆಟ್ ಎಂದು ಅಂಗೀಕರಿಸಲಾಗಿದೆ. ಸಿಎಸ್‌ಡಿಎಸ್-ಲೋಕನೀತಿ ನಡೆಸಿದ ಸಮೀಕ್ಷೆ ಹೇಳುವಂತೆ, ಬಿಜೆಪಿಯು ಮೇಲ್ಜಾತಿ, ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಮುಸ್ಲಿಮರು, ಯಾದವರು ಮತ್ತು ಜಾಟವರಿಂದ ಹೊರತಾದ ಪರಿಶಿಷ್ಟ ಜಾತಿ -ಹೀಗೆ ಎಲ್ಲ ವಿಭಾಗಗಳಲ್ಲಿ ಮೇಲುಗೈ ಪಡೆದಿದೆ. ನಿರ್ದಿಷ್ಟ ಜಾತಿ ಅಸ್ಮಿತೆಗಳನ್ನು ಒಳಗೊಳ್ಳುವಂಥ ವಿಶಾಲ-ಹಿಂದೂ ಯೋಜನೆಯು ಬಿಜೆಪಿ ಯಶಸ್ಸಿನಲ್ಲಿ ಕೆಲಸ ಮಾಡುವ ವ್ಯವಸ್ಥೆಯಾಗಿ ಪರಿಣಮಿಸಿದೆ.

ಸಮಾಜವಾದಿ ಪಕ್ಷ(ಎಸ್‌ಪಿ)-ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಪಕ್ಷಗಳ ಸವಾಲು ವಿಫಲವಾಗಲು ಇದು ಕಾರಣವಾಗಿದೆ. ಉತ್ತರ ಪ್ರದೇಶವು ಹಿಂದಿ ಪ್ರದೇಶದ (ಬೆಲ್ಟ್) ಹೃದಯ ಭಾಗವಾಗಿದೆ (ಹಾರ್ಟ್‌ಲ್ಯಾಂಡ್) ಹಾಗೂ ಈ ವಲಯದಾದ್ಯಂತ ಇದೇ ರೀತಿಯ ಪ್ರಕ್ರಿಯೆ ಬೇರೆ ಬೇರೆ ಮಟ್ಟದಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ರೈತರ ಸುದೀರ್ಘ ಹೋರಾಟ ನಡೆದಾಗ ಮತ್ತು ನಿರುದ್ಯೋಗ ಹಾಗೂ ಇತರ ಆರ್ಥಿಕ ಸಂಕಷ್ಟಗಳಿಂದ ಉಂಟಾದ ಅಸಮಾಧಾನವು ಸ್ವಲ್ಪ ಮಟ್ಟಿಗೆ ರಾಜಕೀಯ ಪರಿಣಾಮ ಉಂಟು ಮಾಡಿದ್ದರೂ ಇವುಗಳು ಸಮಾಜದಲ್ಲಿ ಆಳವಾಗಿ ನುಗ್ಗಿರುವ ಹಿಂದೂ-ಪರ ಪ್ರಜ್ಞೆಯನ್ನು ಭೌತಿಕವಾಗಿ ಬದಲಾಯಿಸಲು ಸಾಕಾಗಿಲ್ಲ ಎನ್ನುವುದು ಎದ್ದು ಕಾಣುತ್ತದೆ.

Assembly-Elections-2022-Results-1-784x441ಹಿಂದೂತ್ವ ಸಿದ್ಧಾಂತವನ್ನು ಎದುರಿಸಲು ಹಾಗೂ ಸಾಮಾಜಿಕ-ಸಾಂಸ್ಕೃತಿಕ-ಸೈದ್ಧಾಂತಿಕ ಪರ್ಯಾಯವನ್ನು ಕಟ್ಟಲು ನಿರಂತರ ರಾಜಕೀಯ ಮತ್ತು ಸೈದ್ಧಾಂತಿಕ ಕೆಲಸ ಅಗತ್ಯ ಎನ್ನುವುದನ್ನು ಈ ಸಾಮಾಜಿಕ ವಾಸ್ತವತೆಯು ತೋರಿಸಿಕೊಟ್ಟಿದೆ. ಧಾರ್ಮಿಕ ಕೋಮುವಾದದ ವಿಚಾರ ಮತ್ತು ಮೇಲ್ಜಾತಿ ಮೇಲುಗೈ ಪರಿಸ್ಥಿತಿ ಇವೆರಡನ್ನೂ ಎದುರಿಸಲು ಇದು ಅಗತ್ಯ.

ಎಡ ಪಕ್ಷಗಳು ಮಹತ್ವದ ಪಾತ್ರ ವಹಿಸ ಬೇಕಿರುವುದು ಇಲ್ಲೇ ಆಗಿದೆ. ಹಿಂದಿ ಹಾರ್ಟ್‌ಲ್ಯಾಂಡ್‌ ನಲ್ಲಿ ಇದು ದೊಡ್ಡ ಶಕ್ತಿ ಆಗಿಲ್ಲದಿರಬಹುದು. ಆದರೆ, ಇಂಥ ಒಂದು ಪರ್ಯಾಯ ಕಟ್ಟುವ ಸೈದ್ಧಾಂತಿಕ ನೆಲೆಗಟ್ಟನ್ನು ಅದು ಹೊಂದಿದೆ. ನವ-ಉದಾರವಾದಿ ನೀತಿಗಳ ವಿರುದ್ಧ ಮತ್ತು ಹಿಂದೂತ್ವ ಮತ್ತು ಮನುವಾದಕ್ಕೆ ಸವಾಲೊಡ್ಡುವ ಪ್ರಜಾಸತ್ತಾತ್ಮಕ-ಜಾತ್ಯತೀತ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಗಾಗಿಯೂ ಈ ಪರ್ಯಾಯ ಇರಬೇಕಾಗುತ್ತದೆ. ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳ ಮುನ್ನಡೆಗೆ ಇದು ಆಧಾರವಾಗಲಿದೆ.

ಐದು ರಾಜ್ಯಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಪರಾಭವ ಗೊಂಡಿದ್ದು ಈ ಚುನಾವಣೆಯ ಇನ್ನೊಂದು ಪ್ರಮುಖ ಅಂಶವಾಗಿದೆ. ಪಂಜಾಬ್‌ನಲ್ಲಿ ಮೂರನೇ ಎರಡು ಬಹುಮತದೊಂದಿಗೆ ಕಾಂಗ್ರೆಸ್ ಆಡಳಿತದಲ್ಲಿತ್ತು. ಉತ್ತರಾಖಂಡ ಹೊರತು ಪಡಿಸಿ ಇತರ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ವಹಣೆ ಹಿಂದಿನ ಅಸೆಂಬ್ಲಿ ಚುನಾವಣೆಗಿಂತ ಕಳಪೆಯಾಗಿದೆ. ಮತ ಗಳಿಕೆ ಪ್ರಮಾಣದಲ್ಲೂ ಸ್ಥಾನ ಗಳಿಕೆಯಲ್ಲೂ ಅದರ ಸಾಧನೆ ತೀರಾ ಕಳಪೆಯಾಗಿದೆ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ದಯನೀಯ ಶೇಕಡ 2.3 ಮತ ಗಳಿಸಲಷ್ಟೇ ಸಮರ್ಥವಾಗಿದೆ. ಕಳೆದ ಬಾರಿ ಏಳು ಸ್ಥಾನ ಹೊಂದಿದ್ದ ಅದು ಈಗ ಕೇವಲ ಎರಡು ಕ್ಷೇತ್ರಗಳಲ್ಲಿ ಜಯಿಸಿದೆ.

ಕಾಂಗ್ರೆಸ್ ಪಕ್ಷದ ಅವನತಿಯ ದೀರ್ಘ ಕಾಲೀನ ಪ್ರವೃತ್ತಿಯನ್ನು ಈ ಚುನಾವಣಾ ಫಲಿತಾಂಶ ದೃಢಪಡಿಸುತ್ತದೆ. ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದ್ದು, ಬಿಜೆಪಿ ಅತಿ ಹೆಚ್ಚಿನ ಲಾಭ ಗಳಿಸಿದೆ. ಕಾಂಗ್ರೆಸ್ ಪಕ್ಷ ಹಿಂದಿನ ಬಲದ ಅಸ್ಥಿಪಂಜರವಾಗಿದ್ದರೂ ವೈಭವದ ಕಾಲದಲ್ಲಿ ಇದ್ದ ರೀತಿಯಲ್ಲಿಯೇ ತಾನೇ ಪ್ರಮುಖ ಪಕ್ಷ ಎನ್ನುವ ರೀತಿಯಲ್ಲಿ ಅದು ವರ್ತಿಸುತ್ತಿದೆ. ಬಿಜೆಪಿ-ವಿರೋಧಿ ಪ್ರತಿಪಕ್ಷದಲ್ಲಿ ಎಸ್‌ಪಿ-ಆರ್‌ಎಲ್‌ಡಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ ಎನ್ನುವುದು ಗೊತ್ತಿದ್ದರೂ, ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಯಾವ ಆಧಾರದಲ್ಲಿ? ಇದುವೇ ಅದರ ಧೋರಣೆಯನ್ನು ಬಯಲುಗೊಳಿಸುತ್ತದೆ.

ಕಾಂಗ್ರೆಸ್ ಪಕ್ಷ ಹಿಂದೂತ್ವ ಸಿದ್ಧಾಂತವನ್ನು ಅನುಕರಿಸಲು ಅಥವಾ ಅದರೊಂದಿಗೆ ರಾಜಿ ಮಾಡಿಕೊಳ್ಳಲು ಬಯಸುತ್ತದೆ. ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹಾಗೂ ಕೇರಳದಲ್ಲಿ ಸಿಪಿಐ(ಎಂ) ಮತ್ತು ಎಲ್‌ಡಿಎಫ್‌ಅನ್ನು ಅದು ವಿರೋಧಿಸುತ್ತಿದೆ. ಗಾಂಧಿ ಕುಟುಂಬದ ಮೇಲೆ ಪೂರ್ಣವಾಗಿ ಅವಲಂಬನೆಯಾಗಿರುವುದನ್ನು ಮುರಿಯದೆ ಹೊಸ ಪರಿಣಾಮಕಾರಿ ನಾಯಕತ್ವ ಸೃಷ್ಟಿಸುವುದು ಹೇಗೆಂಬ ಸಂದಿಗ್ಧತೆಯಿಂದ ಕಾಂಗ್ರೆಸ್ ಪಕ್ಷ ಇನ್ನೂ ಹೊರಬಂದಿಲ್ಲ ಎಂದು ಕಾಣಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ, ಬಿಜೆಪಿಗೆ ಒಂದು ಪರಿಣಾಮಕಾರಿ ಪ್ರತಿಪಕ್ಷ ರೂಪಿಸುವ ನಿಟ್ಟಿನಲ್ಲಿ ಒಂದೊಂದೇ ರಾಜ್ಯದಲ್ಲಿ ಬಿಜೆಪಿ-ವಿರೋಧಿ ಶಕ್ತಿಗಳನ್ನು ಅಣಿನೆರೆಯಿಸುವುದು ಅಗತ್ಯವಾಗಿದೆ. ಅದರಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ.

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಅದ್ಭುತ ಜಯ ಗಳಿಸಿರುವುದು ಈ ಚುನಾವಣೆಯ ಮೂರನೇ ಪ್ರಮುಖ ಲಕ್ಷಣವಾಗಿದೆ. ದೆಹಲಿಯಲ್ಲಿ ಮಾಡಿದ್ದ ಅಭೂತಪೂರ್ವ ಸಾಧನೆಯನ್ನೇ ಅದು ಪಂಜಾಬ್‌ನಲ್ಲಿ ಪುನರಾವರ್ತಿಸಿದೆ. ಆದರೆ, ರಾಜ್ಯ ಸ್ಥಾನಮಾನ ಮೊಟಕುಗೊಂಡಿರುವ ದೆಹಲಿಯಂತಲ್ಲದೆ ಒಂದು ಪೂರ್ಣ ಪ್ರಮಾಣದ ರಾಜ್ಯದಲ್ಲಿ ಅದು ಗಳಿಸಿದ ಸಾಧನೆ ಗಮನಾರ್ಹವಾಗಿದೆ. ಸಿಖ್ಖರು, ಹಿಂದೂಗಳು ಮತ್ತು ಅವುಗಳ ಪ್ರಮುಖ ಉಪವಿಭಾಗಗಳ ದೊಡ್ಡ ಪ್ರಮಾಣದ ಮತಗಳನ್ನು ಎಎಪಿ ಪಡೆದಿರುವುದು ಚುನಾವಣಾ ವಿಧಾನ ಹೇಗಿತ್ತು ಎನ್ನುವುದನ್ನು ತೋರಿಸುತ್ತದೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚನೆಯಾಗಿರುವುದು ಒಕ್ಕೂಟತತ್ವ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ದೃಢ ಪ್ರಯತ್ನ ಮಾಡಲು ಪ್ರತಿಪಕ್ಷಗಳ ನೇತೃತ್ವದ ವಿವಿಧ ರಾಜ್ಯ ಸರ್ಕಾರಗಳು ಒಂದಾಗುವಲ್ಲಿ ಒಂದು ಹೆಜ್ಜೆಯಾಗಬಹುದು.

ಅನು: ವಿಶ್ವ

Leave a Reply

Your email address will not be published. Required fields are marked *