ಅಮೆರಿಕ ಸಂಯುಕ್ತ ಸಂಸ್ಥಾನದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ (ಅಂತಾರಾಷ್ಟ್ರೀಯ ಅರ್ಥಶಾಸ್ತ್ರ) ರಷ್ಯಾ ವಿರುದ್ಧದ ಅಮೆರಿಕನ್ ನಿರ್ಬಂಧಗಳನ್ನು ತಪ್ಪಿಸಲು ಮತ್ತು ಮಾಸ್ಕೋದೊಂದಿಗೆ ರಿಯಾಯಿತಿ ದರದಲ್ಲಿ ಇಂಧನ ವ್ಯವಹಾರವನ್ನು ರೂಪಿಸಲು ಭಾರತ ಪ್ರಯತ್ನಿಸಿದರೆ ಆಗುವ “ಪರಿಣಾಮಗಳ” ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದು ತನ್ನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರನ ಮೂಲಕ ಅಮೆರಿಕಾ ಹೊರಡಿಸಿರುವ ಪರೋಕ್ಷ ಬೆದರಿಕೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಇದನ್ನು ಬಲವಾಗಿ ಖಂಡಿಸಿದೆ. ಅಮೆರಿಕನ್ ಡಾಲರನ್ನು ಬದಿಗಿಟ್ಟು ಯಾವುದೇ ಪಾವತಿ ವೇಳಾಪಟ್ಟಿಯನ್ನು ಮಾಡಿಕೊಳ್ಳಬಾರದು , ಅಂದರೆ ರೂಪಾಯಿ-ರೂಬಲ್ ಮಾರ್ಗವನ್ನು ಅನುಸರಿಸಬಾರದು ಎಂಬ ತೀವ್ರ ಒತ್ತಾಯವನ್ನು ಇದು ಸೂಚಿಸುತ್ತದೆ ಎಂದು ಅದು ಹೇಳಿದೆ.
ಮೋದಿ ಸರ್ಕಾರವು ಈಗಲಾದರೂ ಅಮೆರಿಕಾದೊಂದಿಗೆ ಕ್ವಾಡ್ ನಂತಹ ಸಾಮರಿಕ ಮಿಲಿಟರಿ ಮೈತ್ರಿಯಲ್ಲಿ ಸೇರುವುದರ ಗಂಡಾಂತರಗಳನ್ನು, ಅದು ಬ್ಲ್ಯಾಕ್‌ಮೇಲ್ ಮತ್ತು ಒತ್ತಡಗಳ ಪ್ರವಾಹದ ಬಾಗಿಲು ತೆರೆದು ಕೊಟ್ಟಿದೆ ಎಂಬುದನ್ನು ಅರಿಯಬೇಕು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಭಾರತ ಸರ್ಕಾರವು ಭಾರತದ ಸರ್ವೋಚ್ಚ ರಾಷ್ಟ್ರೀಯ ಹಿತಾಸಕ್ತಿಯನ್ನು ಎತ್ತಿಹಿಡಿಯಬೇಕು, ಇಂತಹ ಅಮೆರಿಕನ್ ಒತ್ತಡಗಳಿಗೆ ಶರಣಾಗಬಾರದು ಎಂದು ಆಗ್ರಹಿಸಿದೆ.