ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಶಾಮೀಲಿನೊಂದಿಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪಟ್ಟುಬಿಡದೆ ಹೆಚ್ಚಿಸುತ್ತಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) 23ನೇ ಮಹಾಧಿವೇಶನ ಪ್ರತಿಭಟಿಸಿದೆ. ಎನ್ಡಿಎ ಆಡಳಿತದ ಅವಧಿಯಲ್ಲಿ ಹೇರಲಾದ ಹೆಚ್ಚುವರಿ ತೆರಿಗೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದೆ. ಸರ್ಕಾರವು ಶ್ರೀಮಂತರ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕು, ನಿಯಂತ್ರಣಗಳನ್ನು ಹಾಕಬೇಕು ಮತ್ತು ಪೆಟ್ರೋಲ್ ಉತ್ಪನ್ನಗಳ ಚಿಲ್ಲರೆ ಬೆಲೆಗಳನ್ನು ಇಳಿಸಬೇಕು ಮತ್ತು ಪೆಟ್ರೋಲಿಯಂ ರಂಗದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದೂ ಅದು ಒತ್ತಾಯಿಸಿದೆ. ಇದನ್ನು ದೇಶದಾದ್ಯಂತ ಬೃಹತ್ ಪ್ರಮಾಣದಲ್ಲಿ ಪ್ರತಿಭಟಿಸಬೇಕು ಎಂದು ಈ ದೇಶದ ಜನಗಳನ್ನು ಮಹಾಧಿವೇಶನ ಆಗ್ರಹಪಡಿಸಿದೆ.
ಪೆಟ್ರೋಲಿಯಂ ಬೆಲೆಗಳ ಏರಿಕೆಗಳು ಹಣದುಬ್ಬರಕ್ಕೆ ಇಂಧನವಾಗುತ್ತಿವೆ, ಮತ್ತು ಆ ಮೂಲಕ ದುಡಿಯುವ ಜನರಿಂದ ಆಳುವ ವರ್ಗಗಳಿಗೆ ಮತ್ತು ಭಾರತ ಸರ್ಕಾರಕ್ಕೆ ಸಂಪನ್ಮೂಲಗಳ ದೊಡ್ಡ ಪ್ರಮಾಣದ ವರ್ಗಾವಣೆಯನ್ನು ಸೂಚಿಸುತ್ತವೆ. ಬಿಜೆಪಿ ನೇತೃತ್ವದ ಸರ್ಕಾರದ ಮೊದಲ ವರ್ಷವಾದ 2014-15ರಲ್ಲಿ ತೈಲ ವಲಯದಿಂದ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು 0.74 ಲಕ್ಷ ಕೋಟಿಯಿದ್ದದ್ದು 2021-22ರಲ್ಲಿ ಸುಮಾರು 3.5 ಲಕ್ಷ ಕೋಟಿಗಳಿಗೆ ಏರಿದೆ. ಕೇಂದ್ರ ಸರ್ಕಾರದ ಆದಾಯದಲ್ಲಿ ಪೆಟ್ರೋಲಿಯಂ ತೆರಿಗೆಗಳ ಪಾಲು ಶೇ.5.4ರಿಂದ ಶೇ.12.2ಕ್ಕೆ ಏರಿದೆ.
ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳು ಪ್ರತಿದಿನ ಹೆಚ್ಚುತ್ತಲೇ ಇವೆ. ಅಂದಿನಿಂದ ಈ ಮಹಾಧಿವೇಶನದ ಉದ್ಘಾಟನೆಯ ದಿನದ ವರೆಗೆ ಒಟ್ಟಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 10.83ರೂ. ಮತ್ತು 10.47 ರೂ. ಏರಿಕೆಯಾಗಿದೆ ಎಂದು ಈ ನಿರ್ಣಯ ಗಮನಿಸಿದೆ.
ಪೆಟ್ರೋಲಿಯಂ ಬೆಲೆಗಳ ನಿಯಂತ್ರಣವನ್ನು ತೆಗೆದುಹಾಕುವುದು ಮತ್ತು ತೈಲ ಮಡು (ಆಯಿಲ್ ಪೂಲ್) ಖಾತೆ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರಿಂದ, ತೈಲ ಕಂಪನಿಗಳಿಗೆ ಚಿಲ್ಲರೆ ಬೆಲೆಗಳನ್ನು ನಿಗದಿಪಡಿಸಲು ಮುಕ್ತ ಅವಕಾಶವನ್ನು ಕೊಟ್ಟಂತಾಗಿದೆ. ಆಯಿಲ್ ಪೂಲ್ ಖಾತೆಯಿಂದ ಸಬ್ಸಿಡಿ ನೀಡಲಾಗದ ರಿಲಯನ್ಸ್ ಪೆಟ್ರೋಲಿಯಂನಂತಹ ಚಿಲ್ಲರೆ ವಲಯಕ್ಕೆ ಹೊಸದಾಗಿ ಪ್ರವೇಶಿಸುವ ಖಾಸಗಿಯವರಿಗೆ ಅನುಕೂಲಗಳನ್ನು ನೀಡುವುದು ನಿಯಂತ್ರಣಗಳನ್ನು ತೆಗೆಯುವುದರ ಹಿಂದಿನ ನಿಜವಾದ ಉದ್ದೇಶವಾಗಿತ್ತು ಎಂದು ಈ ನಿರ್ಣಯ ಹೇಳಿದೆ.
ಮಾರುಕಟ್ಟೆಗಳು ಬೆಲೆಗಳನ್ನು ನಿಗದಿಪಡಿಸುವುದು ಹೆಚ್ಚು ದಕ್ಷವಾದ ಕ್ರಮ ಎಂಬುದು ಈ ರೀತಿ ನಿಯಂತ್ರಣ ತೆಗೆಯಲು ಕೊಟ್ಟ ತೋರಿಕೆಯ ಕಾರಣ. ಆದರೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಕಚ್ಚಾ ತೈಲದ ಮಾರುಕಟ್ಟೆ ಬೆಲೆಯಲ್ಲಿನ ಇಳಿಕೆಯಿಂದ ಜನರಿಗೆ ಯಾವುದೇ ಪ್ರಯೋಜನವನ್ನು ನಿರಾಕರಿಸುವ ಸಲುವಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರ ತೆರಿಗೆಗಳಲ್ಲಿ ಕೈಚಳಕ ನಡೆಸುತ್ತಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ತೆರಿಗೆಗಳನ್ನು ಕ್ರಮವಾಗಿ 3.5 ಮತ್ತು 9 ಪಟ್ಟು ಹೆಚ್ಚಿಸಲಾಯಿತು. ಕಚ್ಚಾ ತೈಲದ ಅಂತರರಾಷ್ಟ್ರೀಯ ಬೆಲೆಗಳು ತೀವ್ರವಾಗಿ ಕುಸಿಯುತ್ತಿರುವುದರಿಂದ ಹೆಚ್ಚಿನ ತೆರಿಗೆಗಳಿಂದಾಗಿ ಚಿಲ್ಲರೆ ಬೆಲೆಗಳಲ್ಲಿ ಏರಿಕೆಯಾಗವುದಿಲ್ಲ ಎಂದು ಈ ಸಾಟಿಯಿಲ್ಲದ ತೆರಿಗೆ ಹೆಚ್ಚಳವನ್ನು ಸಮರ್ಥಿಸಿಕೊಳ್ಳಲಾಯಿತು. ಅದೇ ತರ್ಕದ ಪ್ರಕಾರ ಈಗ ಅಂತರ್ರಾಷ್ಟ್ರೀಯ ಕಚ್ಚಾ ತೈಲದ ಬೆಲೆಗಳು ಏರಲಾರಂಭಿಸಿರುವಾಗ ಭಾರತ ಸರಕಾರ ತೆರಿಗೆಗಳನ್ನು ಹಿಂದಿನ ಮಟ್ಟಕ್ಕೆ ಇಳಿಸಬೇಕಾಗಿತ್ತು. ಇದರ ಪರಿಣಾಮವೆಂದರೆ ಇತ್ತೀಚಿನ ರಾಜ್ಯ ಚುನಾವಣೆಗಳ ಅವಧಿಯಲ್ಲಿ ಉದ್ದೇಶಪೂರ್ವಕವಾಗಿ ಹಾಕಿದ್ದ ಲಗಾಮನ್ನು ತೆಗೆದ ನಂತರ ಚಿಲ್ಲರೆ ಬೆಲೆಗಳು ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಮಟ್ಟಕ್ಕೆ ಏರಲಾರಂಭಿಸಿವೆ. ಈ ಪ್ರವೃತ್ತಿ ಕೋವಿಡೋತ್ತರ ಅವಧಿಯಲ್ಲಿ ಕಂಡುಬಂದಿದ್ದು ಉಕ್ರೇನ್ ಬಿಕ್ಕಟ್ಟಿನ ಸಮಯದಲ್ಲಿ ತೀವ್ರ ಉಬ್ಬರವನ್ನು ಕಾಣುತ್ತಿದೆ.
ರಾಜ್ಯ ಸರ್ಕಾರಗಳು ರಾಜ್ಯ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರ ಮೇಲಿನ ಹೊರೆಯನ್ನು ತಗ್ಗಿಸಬೇಕು ಎಂದು ಬಿಜೆಪಿ ವಾದಿಸುತ್ತಿದೆ. ಆದರೆ ಕಚ್ಚಾ ತೈಲ ಬೆಲೆ ಕುಸಿದಾಗ ತೆರಿಗೆ ಹೆಚ್ಚಿಸಿದ್ದು ರಾಜ್ಯ ಸರ್ಕಾರಗಳಲ್ಲ ಕೇಂದ್ರ ಸರ್ಕಾರ. ಜನಗಳ ಒತ್ತಡದಿಂದಾಗಿ, ಕೇಂದ್ರ ಸರ್ಕಾರವು ನವೆಂಬರ್ನಲ್ಲಿ ತೆರಿಗೆ ಹೆಚ್ಚಳವನ್ನು ಭಾಗಶಃ ಹಿಂತೆಗೆದುಕೊಳ್ಳಲೇ ಬೇಕಾಯಿತು. ಈಗಲೂ ಸಹ, ಕೋವಿಡ್ ನಂತರದ ಚೇತರಿಕೆಯ ಉಸಿರುಗಟ್ಟಿಸುವ ಬೆಲೆ ಸುರುಳಿಯ ಅಪಾಯವನ್ನು ದೇಶವು ಎದುರಿಸುತ್ತಿರುವಾಗ, ಸರ್ಕಾರವು ವಿಧಿಸಿರುವ ಹೆಚ್ಚುವರಿ ತೆರಿಗೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ನಿರಾಕರಿಸುತ್ತಿದೆ.
ಒಕ್ಕೂಟ ಸರಕಾರ ಕ್ರೋಢೀಕರಿಸಿದ ಹೆಚ್ಚುವರಿ ಆದಾಯವನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಲು, ಹಂಚಿಕೊಳ್ಳಬಹುದಾದ ಸಂಗ್ರಹದ ವ್ಯಾಪ್ತಿಯಿಂದ ಹೊರಗಿರುವ ತೆರಿಗೆಗಳನ್ನು ಅವಲಂಬಿಸುತ್ತಿದೆ. 2018-19 ರ ಬಜೆಟ್ನಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 9 ರೂ.ಗಳಷ್ಟು ಕಡಿಮೆಗೊಳಿಸಿದರೆ, ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗದ ರಸ್ತೆ ಸೆಸ್ ಅನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ನವೆಂಬರ್ 2021ರಲ್ಲಿ, ತೆರಿಗೆಗಳನ್ನು ಕಡಿಮೆ ಮಾಡಲೇ ಬೇಕಾಗಿ ಬಂದಾಗ, ಬಿಜೆಪಿ ಸರ್ಕಾರವು ರಾಜ್ಯ ಸರಕಾರಗಳೊಂದಿಗೆ ಹಂಚಿಕೊಳ್ಳಬೇಕಾದ ಅಬಕಾರಿಯನ್ನು ಕಡಿಮೆ ಮಾಡಿತು.
ಪ್ರಸ್ತುತ ಪೆಟ್ರೋಲಿಯಂ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳ ಕ್ರಮಗಳು ಯಾವುದೇ ರೀತಿಯಲ್ಲಿ ಕೊಡುಗೆ ನೀಡಿಲ್ಲ ಎಂಬ ಸಂಗತಿಯತ್ತವೂ ಗಮನ ಸೆಳೆದಿರುವ ಸಿಪಿಐ(ಎಂ)ನ 23ನೇ ಮಹಾಧಿವೇಶನ ಎನ್ಡಿಎ ಆಡಳಿತದ ಅವಧಿಯಲ್ಲಿ ಹೇರಲಾದ ಹೆಚ್ಚುವರಿ ತೆರಿಗೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದೆ. ಸರ್ಕಾರವು ಶ್ರೀಮಂತರ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕು, ನಿಯಂತ್ರಣಗಳನ್ನು ಹಾಕಬೇಕು ಮತ್ತು ಪೆಟ್ರೋಲ್ ಉತ್ಪನ್ನಗಳ ಚಿಲ್ಲರೆ ಬೆಲೆಗಳನ್ನು ಇಳಿಸಬೇಕು ಮತ್ತು ಪೆಟ್ರೋಲಿಯಂ ರಂಗದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು ಅದು ಒತ್ತಾಯಿಸಿದೆ.
ತಮ್ಮ ಜೀವನೋಪಾಯದ ಮೇಲೆ ಅಭೂತಪೂರ್ವ ಹಲ್ಲೆಗಳ ಬೆನ್ನು ಮುರಿವ ಪರಿಣಾಮಗಳಿಂದ ನರಳುತ್ತಿರುವ ಈ ದೇಶದ ಜನಗಳು ಇದನ್ನು ದೇಶದಾದ್ಯಂತ ಬೃಹತ್ ಪ್ರಮಾಣದಲ್ಲಿ ಪ್ರತಿಭಟಿಸಬೇಕು ಎಂದು ಸಿಪಿಐ(ಎಂ)ನ 23ನೇ ಮಹಾಧಿವೇಶನ ಆಗ್ರಹ ಪಡಿಸಿದೆ.