ನಾವು ನಮ್ಮ ಜಾತಿ-ಮತಗಳ ಬೇಧಭಾವವಿಲ್ಲದೆ ಭಾರತೀಯರಾಗಿ ಹೊಮ್ಮಿದ್ದೇವೆ. ಆದರೆ ಫ್ಯಾಸಿಸ್ಟ್ ತೆರನ ಆರೆಸ್ಸೆಸ್ ನಡೆಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ಪ್ರಸಕ್ತ ಆಳುವ ಪಕ್ಷ ಬಿಜೆಪಿ ನಮ್ಮ ದೇಶದ ಜಾತ್ಯತೀತ ಚಾರಿತ್ರ್ಯವನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿದೆ. ಇದು ದೇಶ ಮತ್ತು ಜನತೆ ಎದುರಿಸುತ್ತಿರುವ ಮೂಲಭೂತ ಸವಾಲು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯ ಪ್ರಕಾಶ ಕಾರಟ್ ಹೇಳಿದ್ದಾರೆ.
ಇದನ್ನು ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಮಹಾಧಿವೇಶನದ ಕರೆ
ಅವರು ಸಿಪಿಐ(ಎಂ) ಮಹಾಧಿವೇಶನದ ಸಂದರ್ಭದಲ್ಲಿ ಕಣ್ಣೂರಿನಲ್ಲಿ ಎಪ್ರಿಲ್ 8ರಂದು ‘ಜಾತ್ಯತೀತತೆಗೆ ಸವಾಲುಗಳು’ ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು.
ಇದಕ್ಕೆ ಕಾಂಗ್ರೆಸ್ ಮುಖಂಡ ಮತ್ತು ಸಂಸತ್ ಸದಸ್ಯ ಶಶಿ ತರೂರ್ ಅವರನ್ನೂ ಆಹ್ವಾನಿಸಲಾಗಿತ್ತು, ಮತ್ತು ಅವರು ಭಾಗವಹಿಸಲು ಒಪ್ಪಿದ್ದರು. ಆದರೆ ಕಾಂಗ್ರೆಸ್ ಮುಖಂಡತ್ವ ಅವರು ಭಾಗವಹಿಸಬಾರದು ಎಂದು ನಿಷೇಧಿಸಿತು. “ಜಾತ್ಯತೀತ ಪ್ರಜಾಪ್ರಭುತ್ವ ಮನಸ್ಸಿನ ಪ್ರತಿಯೊಬ್ಬರೂ ಈ ವಿಷಯದ ಬಗ್ಗೆ ಚರ್ಚೆ ಅಗತ್ಯ ಎಂದು ಒಪ್ಪುತ್ತಾರೆ. ಈ ವಿಷಯದಲ್ಲಿ ಶಶಿ ತರೂರ್ ಅವರ ಹೇಳಿಕೆಯನ್ನು ನೋಡಿದ್ದೇನೆ. ಇದೊಂದು ಮಹತ್ವದ ವಿಚಾರ ಸಂಕಿರಣ, ನಾನು ಇದರಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಅವರು ಬರೆದಿದ್ದರು. ಆದರೆ ಕೇರಳದಲ್ಲಿ ಅವರ ಪಕ್ಷದ ಮುಖಂಡತ್ವ ಮತ್ತು ಎಐಸಿಸಿ ಮುಖಂಡತ್ವ ಅವರಿಗೆ ಭಾಗವಹಿಸಬಾರದೆಂದು ಹೇಳಿದೆ. ಆದ್ದರಿಂದ ಅವರು ಗೈರುಹಾಜರಾಗಿದ್ದಾರೆ” ಎಂದು ಈ ಕುರಿತು ಟಿಪ್ಪಣಿ ಮಾಡುತ್ತ ಹೇಳಿದ ಪ್ರಕಾಶ ಕಾರಟ್, ಕಾಂಗ್ರೆಸ್ ಮುಖಂಡರ ಇಂತಹ ನಿಲುವುಗಳು, ಜನರ ನಡುವೆ ಅವರ ವಿಶ್ವಾಸಾರ್ಹತೆಯನ್ನು ಧ್ವಂಸ ಮಾಡುತ್ತವೆ ಎಂದರು.
ಇದನ್ನು ಓದಿ: ಸಂವಿಧಾನಿಕ ಗಣತಂತ್ರದ ರಕ್ಷಣೆಗೆ ಹಿಂದುತ್ವ ಕೋಮುವಾದದ ವಿರುದ್ಧ ಜಾತ್ಯತೀತ ಶಕ್ತಿಗಳ ವಿಶಾಲ ರಂಗ- ದೇಶಪ್ರೇಮಿಗಳಿಗೆ ಯೆಚುರಿ ಮನವಿ
ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜ ಮತ್ತು ರಾಜ್ಯ ಕಾಂಗ್ರೆಸ್-ಎಸ್ ಅಧ್ಯಕ್ಷ ರಾಮಚಂದ್ರನ್ ಕದನ್ನ ಪ್ಪಲ್ಲಿ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು. ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಇ ಪಿ ಜಯರಾಜನ್ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದರು.