ನಿಧಾನಗತಿಯ ಆರ್ಥಿಕ ಬೆಳವಣಿಗೆ, ಜೊತೆಗೆ ವಿನಾಶಕಾರಿ ನೋಟು ರದ್ಧತಿ ಮತ್ತು ಜಿಎಸ್‍ಟಿಯಿಂದಾಗಿ ನಿರುದ್ಯೋಗ ಹೆಚ್ಚು ಕಡಿಮೆ ನಿರಂತರವಾಗಿ ಏರುತ್ತಿದೆ. ಇದೊಂದು ಬೃಹತ್ ಸಮಸ್ಯೆಯಾಗಿ ಬೆಳೆಯುತ್ತಿದೆ ಎಂದಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ಒಂದು ನಿರ್ಣಯವನ್ನು ಅಂಗೀಕರಿಸಿ ಸರಕಾರ ಖಾಲಿ ಬಿದ್ದಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಮನರೇಗದಲ್ಲಿ ಕೆಲಸದ ದಿನಗಳನ್ನು 200ಕ್ಕೆ ಏರಿಸಬೇಕು ಮತ್ತು ಈ ಯೋಜನೆಯನ್ನು ನಗರಗಳಲ್ಲೂ ಜಾರಿಗೆ ತರಬೇಕು ಎಂದು ಆಗ್ರಹಿಸಿದೆ. ನವ ಉದಾರವಾದಿ ನೀತಿಗಳನ್ನು ಹಿಮ್ಮೆಟ್ಟಿಸುವ ಮತ್ತು ಎಲ್ಲರಿಗೂ ಘನತೆಯ ಉದ್ಯೋಗಗಳು ಹಾಗೂ ಜೀವನ ವೇತನವನ್ನು ಸೃಷ್ಟಿಸುವ ಪ್ರಜಾಸತ್ತಾತ್ಮಕ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಅದು ಜನಗಳಿಗೆ ಕರೆ ನೀಡಿದೆ.
ಈ ನಿರ್ಣಯದ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:
ಭಾರತದಲ್ಲಿ ನಿರುದ್ಯೋಗವು ಒಟ್ಟು ಸಂಖ್ಯೆಯಲ್ಲಿಯೂ ಮತ್ತು ಶ್ರಮಿಕ ಬಲದ ಪ್ರಮಾಣದಲ್ಲಿಯೂ 22ನೇ ಪಕ್ಷದ ಮಹಾಧಿವೇಶನದ ನಂತರದ ಈ ನಾಲ್ಕು ವರ್ಷಗಳಲ್ಲಿ ತೀವ್ರವಾಗಿ ಏರಿದೆ.
ನಿರುದ್ಯೋಗದ ಅಧಿಕೃತ ದತ್ತಾಂಶವು ಬಹಳಷ್ಟು ಕಡಿಮೆ ಅಂದಾಜನ್ನು ಕೊಡುತ್ತದೆ. ಬಹುಪಾಲು ಜನಸಂಖ್ಯೆಗೆ ಯಾವುದೇ ಅರ್ಥಪೂರ್ಣ ಸಾಮಾಜಿಕ ಭದ್ರತೆಯನ್ನು ಒದಗಿಸದೇ ಇರುವುದರಿಂದಾಗಿ ಸಂಕಟವು ಬಹಳಷ್ಟು ತೀವ್ರವಾಗಿದೆ.
ಕಳೆದ ಹಲವಾರು ವರ್ಷಗಳಿಂದ ನಿರುದ್ಯೋಗದ ಏರಿಕೆಯು, ಅರ್ಥವ್ಯವಸ್ಥೆಯ ನಿಧಾನಗತಿಯ ಜೊತೆಗೆ ವಿನಾಶಕಾರಿ ನೋಟು ರದ್ಧತಿ (ನವೆಂಬರ್, 2016) ನಂತರ ಅನೌಪಚಾರಿಕ ವಲಯಕ್ಕೆ ತೀವ್ರ ಹಿನ್ನಡೆ ಮತ್ತು ಕೆಟ್ಟದಾಗಿ ವಿನ್ಯಾಸಗೊಳಿಸಿದ ಮತ್ತು ಜಾರಿಗೊಳಿಸಿದ ಜಿಎಸ್‍ಟಿ (ಜುಲೈ 1, 2017 ರಿಂದ)ಯಿಂದ ಹೆಚ್ಚು-ಕಡಿಮೆ ನಿರಂತರವಾಗಿದೆ. 2017-18 ರ ಉಲ್ಲೇಖ ವರ್ಷಕ್ಕೆ ‘ಆವಧಿಕ ಶ್ರಮ ಬಲ ಸಮೀಕ್ಷೆ’(Periodic Labour Force Survey )ಯ ದತ್ತಾಂಶವು ಎಲ್ಲಾ ನಿರುದ್ಯೋಗ ಸೂಚಕಗಳು 2011-12 ಮತ್ತು 2017-18 ರ ನಡುವೆ ತೀವ್ರವಾಗಿ ಏರಿರುವುದನ್ನು ತೋರಿಸಿದೆ. ‘ಸಾಮಾನ್ಯ ಸ್ಥಿತಿಗತಿ ನಿರುದ್ಯೋಗ ದರ’ ಎಂದು ಕರೆಯಲ್ಪಡುವ ದರವು 2011-12 ರಲ್ಲಿ ಶೇಕಡಾ 2.2 ರಿಂದ 2017-18 ರಲ್ಲಿ ಶೇಕಡಾ 6.1 ಕ್ಕೆ ಏರಿದೆ. ಇದಕ್ಕೆ ಸಂವಾದಿಯಾದ ‘ಪ್ರಸಕ್ತ ಸಾಪ್ತಾಹಿಕ ಸ್ಥಿತಿಗತಿ’ ದರಗಳು 2017-18 ರಲ್ಲಿ ಯುವಜನರಿಗೆ ಸಂಬಂಧಪಟ್ಟಂತೆ 10%ದ ಹತ್ತಿರ ಮತ್ತು ಕೆಲವು ಮಟ್ಟದ ಔಪಚಾರಿಕ ಶಿಕ್ಷಣವನ್ನು ಹೊಂದಿರುವವರಿಗೆ ಇನ್ನೂ ಹೆಚ್ಚು ಆಗಿದೆ. ಕೇಂದ್ರ ಸರ್ಕಾರವು ಮಹಾಸೋಂಕನ್ನು ನಿರ್ವಹಿಸಿದ ವಿಧಾನದಿಂದ ಮತ್ತು ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನಗದು ಮತ್ತು ಧಾನ್ಯ ವರ್ಗಾವಣೆಯನ್ನು ಒದಗಿಸದೇ ಇರುವ ಅದರ ಅತಿ-ನವ ಉದಾರವಾದಿ ಆರ್ಥಿಕ ನೀತಿಗಳಿಂದ ನಿರುದ್ಯೋಗವು ಗಣನೀಯವಾಗಿ ಹದಗೆಟ್ಟಿದೆ.
15 ರಿಂದ 29 ವಯೋಮಾನದ ವ್ಯಕ್ತಿಗಳಲ್ಲಿ ಮತ್ತು ಕೆಲವು ಔಪಚಾರಿಕ ಶಿಕ್ಷಣ ಹೊಂದಿರುವವರಲ್ಲಿ ನಿರುದ್ಯೋಗ ದರಗಳು ತುಂಬಾ ಹೆಚ್ಚಿವೆ. 20 ರಿಂದ 24 ವರ್ಷಗಳು ಮತ್ತು 25 ರಿಂದ 29 ವರ್ಷ ವಯಸ್ಸಿನವರ, 2020-21 ರ ನಿರುದ್ಯೋಗ ದರಗಳು ಕ್ರಮವಾಗಿ 39% ಮತ್ತು 13%. 12 ವರ್ಷಗಳ ಔಪಚಾರಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ವ್ಯಕ್ತಿಗಳಲ್ಲಿ ಈ ದರವು ಶೇಕಡಾ 10 ಕ್ಕಿಂತ ಹೆಚ್ಚು ಮತ್ತು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರಲ್ಲಿ 20.4 %. ಮಹಿಳೆಯರಲ್ಲೂ ನಿರುದ್ಯೋಗ ಬಹಳ ವೇಗವಾಗಿ ಹೆಚ್ಚುತ್ತಿದೆ. ಸುಮಾರು 35% ಮಹಿಳಾ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಈ ಮಾಹಿತಿಗಳು ಆರ್ಥಿಕತೆಯಲ್ಲಿ ಅರೆಉದ್ಯೋಗದ ಬೃಹತ್ ಸಮಸ್ಯೆಯನ್ನು ಪತ್ತೆ ಹಚ್ಚುವುದಿಲ್ಲ.
ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳಲ್ಲಿ ಹಲವು ಹುದ್ದೆಗಳ ಅಧಿಸೂಚನೆಗಳನ್ನು ರದ್ದು (ಡಿನೋಟಿಫೈ) ಮಾಡಲಾಗುತ್ತಿದೆ. ಈ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕೆಂದು 23 ನೇ ಮಹಾಧಿವೇಶನ ಒತ್ತಾಯಿಸಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗ)ಅಡಿಯಲ್ಲಿ ಪ್ರತಿ ಕಾರ್ಮಿಕರಿಗೆ 200 ವ್ಯಕ್ತಿ-ದಿನಗಳ ಉದ್ಯೋಗವನ್ನು ಒದಗಿಸಬೇಕು ಮತ್ತು ಭಾರತದ ಎಲ್ಲಾ ನಗರ ಪ್ರದೇಶಗಳಲ್ಲಿ ನಗರ ಉದ್ಯೋಗ ಖಾತ್ರಿಯನ್ನು ಆರಂಭಿಸಸಬೇಕು ಎಂದು ಸಿಪಿಐ(ಎಂ)ನ 23 ನೇ ಮಹಾಧಿವೇಶನ ಆಗ್ರಹ ಪಡಿಸಿದೆ. ಸರ್ಕಾರವು ಶಿಕ್ಷಣ ಮತ್ತು ಮೂಲಸೌಕರ್ಯಗಳ ಮೇಲಿನ ತನ್ನ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಬೇಕು ಮತ್ತು ಆ ಮೂಲಕ ಉದ್ಯೋಗವನ್ನು ಸೃಷ್ಟಿಸಬೇಕು. ನವ ಉದಾರವಾದಿ ನೀತಿಗಳನ್ನು ಹಿಮ್ಮೆಟ್ಟಿಸುವ ಮತ್ತು ಎಲ್ಲರಿಗೂ ಘನತೆಯ ಉದ್ಯೋಗಗಳು ಹಾಗೂ ಜೀವನ ವೇತನವನ್ನು ಸೃಷ್ಟಿಸುವ ಪ್ರಜಾಸತ್ತಾತ್ಮಕ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಸಿಪಿಐ(ಎಂ) ಮಹಾಧಿವೇಶನ ಕರೆ ನೀಡಿದೆ.
ಕೆ.ಎನ್.ಉಮೇಶ್ ಮಂಡಿಸಿದ, ಪೊಲಿಟ್ ಬ್ಯುರೊ ಸದಸ್ಯ ಬಿ.ವಿ.ರಾಘವುಲು ಅನುಮೋದಿಸಿದ ಈ ನಿರ್ಣಯವನ್ನು ಮಹಾಧಿವೇಶನ ಸರ್ವಾನುಮತದಿಂದ ಅಂಗೀಕರಿಸಿತು.