ಬೇಜವಾಬ್ದಾರಿ ಗೃಹಮಂತ್ರಿ ಅಧಿಕಾರದಲ್ಲಿರಬೇಕೇ?

ಕೇಂದ್ರ ಸರಕಾರದ ಮಟ್ಟದಲ್ಲಿ ಆಗಲಿ ಅಥವಾ ರಾಜ್ಯದಲ್ಲಿಯೇ ಆಗಲಿ ಗೃಹ ಇಲಾಖೆ ಅತ್ಯಂತ ಪ್ರಮುಖವಾದದ್ದು. ನಮ್ಮ ಸಂವಿಧಾನದ ಪ್ರಕಾರ ಕಾನೂನು-ಸುವ್ಯವಸ್ಥೆ ರಾಜ್ಯಗಳ ಹೊಣೆಗಾರಿಕೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ, ಕಾನೂನುಬದ್ಧ ಆಡಳಿತದ ಕಾರ್ಯನಿರ್ವಹಣೆಯನ್ನು ಜತನದಿಂದ ಕಾಪಾಡಿಕೊಂಡು ನಾಗರಿಕರ ಪ್ರಾಣ ಮತ್ತು ಆಸ್ತಿಯನ್ನು ಸಂರಕ್ಷಿಸಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಬಹುದೊಡ್ಡ ಜವಾಬ್ದಾರಿ ಗೃಹ ಇಲಾಖೆಗೆ ಇರುತ್ತದೆ. ಹಿಂದೆಲ್ಲಾ ಮುಖ್ಯಮಂತ್ರಿಯವರಷ್ಟೇ ದಕ್ಷತೆ ಮತ್ತು ಪ್ರಾಮುಖ್ಯತೆಯಿಂದ ಕೆಲಸ ಮಾಡಿದ ಹಲವಾರು ಗೃಹ ಸಚಿವರುಗಳನ್ನು ನಾವು ಕಂಡಿದ್ದೇವೆ. ಆದರೆ, ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬಂದಿರುವಾಗಲೆಲ್ಲಾ ರಾಜ್ಯದಲ್ಲಿ ಅಂತಹ ಬದ್ಧತೆ ಮತ್ತು ಸೂಕ್ಷ್ಮ ಸಂವೇದನೆ ಇರುವವರನ್ನು ನೇಮಿಸುವ ಪರಿಪಾಠ ತೀರಾ ವಿರಳವಾಗಿದೆ. ಬಹುತೇಕವಾಗಿ ಸಂಘಪರಿವಾರದ ಆಜ್ಞೆಗಳನ್ನು ಪಾಲಿಸುವ ಕೈಗೊಂಬೆಗಳನ್ನೇ ನೇಮಿಸಲಾಗುತ್ತದೆ ಎನ್ನುವ ಆರೋಪಗಳನ್ನು ಸುಲಭವಾಗಿ ತಳ್ಳಿಹಾಕುವಂತೆಯೂ ಇಲ್ಲ.

ಅದರಲ್ಲೂ ಈ ಬಾರಿಯಂತೂ ಬಸವರಾಜ ಬೊಮ್ಮಾಯಿಯವರನ್ನು ಅಧಿಕಾರಕ್ಕೆ ತಂದ ನಂತರ ಗೃಹ ಇಲಾಖೆಯ ಮಂತ್ರಿಯಾಗಿರುವ ಆರಗ ಜ್ಞಾನೇಂದ್ರ ರವರು ತಮ್ಮ ನಡೆ-ನುಡಿಗಳಿಂದ ಅಪ್ರಬುದ್ಧರು ಮತ್ತು ಸಾಮಾಜಿಕ ಸೂಕ್ಷ್ಮತೆ, ಸಂವಿಧಾನ ಬದ್ಧತೆ ಇಲ್ಲದವರು ಎನ್ನುವುದನ್ನು ಹೆಜ್ಜೆಗಳಲ್ಲಿ ತೋರಿಸುತ್ತಿದ್ದಾರೆ. ಹೀಗಾಗಿ ಅತ್ಯಂತ ಅಪ್ರಬುದ್ಧ ಬೆನ್ನೆಲುಬಿಲ್ಲದ ಮಂತ್ರಿಯ ಬಗ್ಗೆ ಮತ್ತು ಸಂಘಪರಿವಾರದ ಸುಪರ್ದಿಗೆ ಇಲಾಖೆಯನ್ನು ಒಪ್ಪಿಸಿ ಬಿಟ್ಟಿರುವ ಅನುಮಾನ, ಆರೋಪಗಳು ಬರುತ್ತಲೇ ಇವೆ. ಅವರು ಗೃಹ ಸಚಿವರಾದ ಅಂದಿನಿಂದ ಇಂದಿನವರೆಗೆ ಅತ್ಯಂತ ಸೂಕ್ಷ್ಮ ಮತ್ತು ನಿರ್ಣಾಯಕವಾದ ಸಂದರ್ಭಗಳಲ್ಲಿ ಬೇಜವಾಬ್ದಾರಿತನ, ಸಂಕುಚಿತತೆ, ಪಕ್ಷಪಾತತೆ ಮತ್ತು ಸ್ಥಾನಕ್ಕೆ ತಕ್ಕುದಲ್ಲದ ರೀತಿಯಲ್ಲಿ ಅವರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಸಂವಿಧಾನ ಮತ್ತು ಕಾನೂನುಬದ್ಧ ಆಡಳಿತವನ್ನು, ಶಾಂತಿ, ಸುರಕ್ಷತೆ, ಸಾಮರಸ್ಯವನ್ನು ಕಾಪಾಡಿಕೊಳ್ಳುವ ಪ್ರಮಾಣವಚನವನ್ನು ಧಿಕ್ಕರಿಸಿದ್ದಾರೆ.

legislative-council-sessionಅತ್ಯಂತ ಪ್ರಮುಖ ಖಾತೆಯಾಗಿರುವ ಗೃಹ ಖಾತೆಯ ಸಚಿವರು ಮತ್ತು ಸಂಪುಟದ ಇಂತಹದೇ ಇತರ ಮಂತ್ರಿಗಳ ವರ್ತನೆಗಳು ಆಡಳಿತ ವ್ಯವಸ್ಥೆಯನ್ನು ಸಿಥಿಲಗೊಳಿಸುತ್ತವೆ. ಹಲವು ಓರೆಕೋರೆಗಳ ನಡುವಿನಲ್ಲಿಯೂ ಕರ್ನಾಟಕದ ಪೊಲೀಸರು, ಗೃಹ ಇಲಾಖೆ ವೃತ್ತಿಪರತೆ, ಕಾನೂನಿನ ನಿಷ್ಟತೆಯಲ್ಲಿ ದೇಶದಲ್ಲಿ ಒಂದು ಒಳ್ಳೆಯ ಹೆಸರನ್ನು ಪಡೆದಿತ್ತು. ಆದರೀಗ ನಿಧಾನಕ್ಕೆ ಪೊಲೀಸ್ ಇಲಾಖೆಯಲ್ಲಿ ಸಂವಿಧಾನ, ಕಾನೂನು ಬದ್ಧತೆ ಮತ್ತು ನಾಗರೀಕ ನಿಷ್ಟ ಹೊಣೆಗಾರಿಕೆಯನ್ನು ಧಿಕ್ಕರಿಸುವ ವರ್ತನೆಗಳು ಪುನರಾವರ್ತನೆಯಾಗುವುದು, ಆಳುವ ಪಕ್ಷಕ್ಕೆ ಮತ್ತು ಸರ್ಕಾರೇತರ ಶಕ್ತಿಗಳ ಅಣತೆಗಳಿಗೆ ತಲೆಬಾಗುವುದು ರೂಢಿಯಾಗುತ್ತಿರುವುದು ಅತ್ಯಂತ ಅಪಾಯಕಾರಿ ಸೂಚನೆಯಾಗಿದೆ.

ಸಮಾಜದಲ್ಲಿ ಉಂಟಾದ ದ್ವೇಷ ತಗ್ಗಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು, ಎಲ್ಲಾ ನಾಗರೀಕರ ಆಸ್ತಿ ಮತ್ತು ಜೀವವನ್ನು ಕಾಪಾಡುವುದು ಗೃಹ ಇಲಾಖೆಯ, ಅದರ ಸಚಿವರ ಜವಾಬ್ದಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲದಕ್ಕೂ ವಿರುದ್ಧವಾಗಿ ಬಜರಂಗದಳ ಅಥವಾ ಸಂಘಪರಿವಾರದ ಕಾರ್ಯಕರ್ತನಂತೆ ಆರಗ ಜ್ಞಾನೇಂದ್ರರವರು ಮಾತನಾಡುತ್ತಿರುವುದು ಶೋಭೆ ತರುವ ವಿಚಾರವಲ್ಲ.

ಇತ್ತೀಚೆಗೆ ಬೆಂಗಳೂರಿನ ಜೆ.ಜೆ. ನಗರದಲ್ಲಿ ಎರಡು ಬೈಕುಗಳು ಪರಸ್ಪರ ಡಿಕ್ಕಿಯಾಗಿ ಒಬ್ಬ ಸಾವಿಗೀಡಾದ ಪ್ರಕರಣವನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನಿಸಲಾಯಿತು ಎನ್ನುವುದನ್ನೇ ಗಮನಿಸಬಹುದು. ಸವಾರರಿಬ್ಬರ ನಡುವೆ ನಡೆದ ವಾಗ್ವಾದ ಅತಿರೇಕಕ್ಕೆ ತಿರುಗಿ ಶಾಹಿದ್ ಎನ್ನುವಾತ ಇನ್ನೊಂದು ಬೈಕನ್ನು ಚಲಾಯಿಸುತ್ತಿದ್ದ ಚಂದ್ರಶೇಖರ್ ಎನ್ನುವಾತನಿಗೆ ಚೂರಿಯಿಂದ ಕಾಲಿಗೆ ಚುಚ್ಚಿದ ಪ್ರಸಂಗವೊಂದು ನಡೆದಿದೆ. ಆ ಯುವಕ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಈ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ವಿವರಣೆ ನೀಡುತ್ತಾ `ಉರ್ದು ಭಾಷೆ ಮಾತನಾಡದ ಕಾರಣಕ್ಕೆ ದಲಿತ ಯುವಕನನ್ನು ತಿವಿದು ಕೊಲ್ಲಲಾಗಿದೆ’ ಎನ್ನುವ ಮಾತನ್ನು ಗೃಹಸಚಿವ ಅರಗ ಜ್ಞಾನೇಂದ್ರ ರವರು ಆಡಿದ್ದಾರೆ. ಇದು ಎರಡು ಕೋಮುಗಳ ನಡುವಿನ ಜಗಳ, ದ್ವೇಷ ಕಾರಣ ಎನ್ನುವ ರೀತಿಯಲ್ಲಿ ಆ ಮಾತು ಅರ್ಥ ಹೊರಡಿಸುತ್ತದೆ. ಇದು ಸರಿಯಾದ ಮಾಹಿತಿ ಅಲ್ಲ. ಒಂದು ವೇಳೆ ಇಂತಹ ಸೂಕ್ಷ್ಮ ಮಾಹಿತಿಯನ್ನು ವಿಧಾನಸಭೆಯೊಳಗೆ ಹಂಚಿಕೊಳ್ಳಬೇಕಾದಾಗ ಅದರ ಸತ್ಯಾಸತ್ಯತೆಯ ಖಚಿತತೆಯನ್ನು ಪಡೆದಿರಬೇಕು. ಮೇಲಾಗಿ ಅದು ಸಮಾಜದ ಸ್ವಾಸ್ಥ್ಯತೆಯ ಮೇಲೆ ಬೀರುವ ಪರಿಣಾಮಗಳನ್ನು ಸರಿಯಾಗಿ ಗ್ರಹಿಸಬೇಕು. ಆದರೆ ಇಂತಹ ಯಾವ ಹೊಣೆಗಾರಿಕೆ ಇಲ್ಲದೆ ಗೃಹಸಚಿವರು ಬೇಕಾಬಿಟ್ಟಿ ಆಡಿರುವುದು ಅತ್ಯಂತ ಗಂಭೀರ ವಿಷಯ. ಇದರಿಂದಾಗಿ ಈಗಾಗಲೇ ರಾಜ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗೆ ಮತ್ತಷ್ಟು ಪೆಟ್ರೋಲ್ ಸುರಿದಂತೆ ಆಗಲಿತ್ತು. ಇವರು ನೀಡಿದ ಕಾರಣ ವದಂತಿಯಾಗಿ ರಾಜ್ಯದಾದ್ಯಂತ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿ ಬಿಟ್ಟಿತ್ತು. ಅಷ್ಟರಲ್ಲಿ ಪೊಲೀಸ್ ಇಲಾಖೆ ತನ್ನ ತನಿಖೆಯ ಬಳಿಕ ‘ಇದು ಎರಡು ಬೈಕ್ ಸವಾರರುಗಳ ನಡುವೆ ನಡೆದಿರುವ ಡಿಕ್ಕಿ. ನಂತರದ ಬೆಳವಣಿಗೆ ವೈಯುಕ್ತಿಕ ಕಾರಣದಿಂದಾದ ಜಗಳ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೇನು? ಒಂದು ಪ್ರಮುಖ ವೇದಿಕೆಯಲ್ಲಿ ಪ್ರಮುಖ ಸಚಿವರ ಮಾತುಗಳು ವದಂತಿಯಾಗಿ ಎಲ್ಲ ಕಡೆಗಳಲ್ಲಿ ಪಸರಿಸಿತ್ತು. ಆಶಾದಾಯಕ ಸ್ಥಿತಿ ಎಂದರೆ ಜನತೆ ಇಂತಹುದಕ್ಕೆ ಉದ್ರಿಕ್ತವಾಗಿ ಪ್ರತಿಕ್ರಿಯಿಸಲಿಲ್ಲ ಎನ್ನುವುದು.

ಇಲ್ಲಿ ಒಂದು ಪ್ರಶ್ನೆ ಬರುವುದೆಂದರೆ ಪೊಲೀಸ್ ಇಲಾಖೆಯ ಸೂಕ್ತವಾದ ತನಿಖೆಯ ನಂತರದಲ್ಲಿ ಮಾಹಿತಿಗಳನ್ನು ಪಡೆಯುವ ಮೊದಲೇ ಇಂತಹ ಕಪೋಲಕಲ್ಪಿತ ವದಂತಿಯನ್ನು ಗೃಹಸಚಿವರಿಗೆ ತಲುಪಿಸಿದವರು ಯಾರು? ಅದನ್ನವರು ಯಾಕೆ ತಿರುಚಿ ಹೇಳಿದರು? ಮತ್ತು ಅದನ್ನು ಪರಿಶೀಲಿಸದೇ ವಿಧಾನಸಭೆಯಲ್ಲಿ ಸಚಿವರು ಪ್ರಸ್ತಾಪಿಸಿದರೇ? ಹಾಗಾದರೆ ಇದು ಬೇಜವಾಬ್ದಾರಿತನದ ನಡತೆಯಲ್ಲವೇ? ಜಗಳವಾಡಿಕೊಂಡವರ ಮತ ಧರ್ಮಗಳು ಬೇರೆ ಎಂದಾಕ್ಷಣ ಅದನ್ನು ದುರ್ಬಳಕೆ ಮಾಡಿಕೊಳ್ಳುವ ಧಾವಂತವೇಕೆ? ಘಟನೆಯ ಸತ್ಯಾಸತ್ಯತೆಗಳು ನಿಚ್ಚಳವಾಗಿ ಹೊರಬಂದರೂ ಈಗಲೂ ಶಾಸಕ, ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಸಿ.ಟಿ. ರವಿ ಯಂಥವರು ಜಗಳದಲ್ಲಿ ಉರ್ದು ಭಾಷೆಯ ಸಮಸ್ಯೆ ಇತ್ತು ಎನ್ನುವುದನ್ನು ಪುನರುಚ್ಚರಿಸುತ್ತಿರುವುದು ಏನನ್ನು ಸೂಚಿಸುತ್ತದೆ?

ಇವುಗಳ ನಡುವೆಯೇ ಧಾರವಾಡ ನುಗ್ಗಿಕೇರಿಯ ಆಂಜನೇಯ ದೇವಸ್ಥಾನದ ಬಳಿ ಹಣ್ಣಿನ ಬಡ ವ್ಯಾಪಾರಿಗಳ ಅಂಗಡಿಗಳ ಮೇಲೆ ಧಾಳಿ ಮಾಡಿ ಜೀವದಾಸರೆಯಾಗಿದ್ದ ಹಣ್ಣು, ಅಂಗಡಿಗಳನ್ನು ಬಜರಂಗದಳದ ಪುಂಡರು ಧ್ವಂಸ ಮಾಡಿದ್ದಾರೆ. ಕ್ರಮವಹಿಸದ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಪ್ರಶ್ನಿಸಿದ ವಿರೋಧ ಪಕ್ಷದ ನಾಯಕರಿಗೆ ತಾನೇನೂ ನಿಮ್ಮಿಂದ ಬುದ್ದಿಕಲಿಯಬೇಕಿಲ್ಲ ಎಂಬ ದಾರ್ಷ್ಯದ ಮಾತುಗಳನ್ನು ಗೃಹ ಸಚಿವರು ಆಡಿದ್ದಾರೆ.

ಇಂತಹ ವರ್ತನೆಗಳನ್ನು ಹಿಂದೆಯೂ ಸತತವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೋರಿಸುತ್ತಾ ಬಂದಿದ್ದಾರೆ. ಸಮಾಜದ ಎಲ್ಲಾ ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯುವ ಕಾಳಜಿ, ಕನಿಷ್ಠ ಅರಿವು ಇಲ್ಲದ ಸೂಕ್ಷ್ಮಮತಿ ಮತ್ತು ಸಾಮಾಜಿಕ, ರಾಜಕೀಯ, ನೈತಿಕ ಹೊಣೆಗಾರಿಕೆ ಇಲ್ಲದ ಇಂಥವರು ಗೃಹ ಸಚಿವರಾಗಿ ಮುಂದುವರೆಯುವುದು ಇನ್ನಷ್ಟು ದುರಂತಗಳನ್ನು ತರಲಿದೆ. ಇಂಥವರು ಕೂಡಲೇ ರಾಜೀನಾಮೆ ಸಲ್ಲಿಸಿ ಕೆಳಗಿಳಿಯ ಬೇಕೆನ್ನುವ ಪ್ರಬಲ ಆಗ್ರಹ ಸೂಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂಥವರನ್ನು ಸಂಪುಟದಿಂದ ಹೊರ ಹಾಕುವುದು ಯಾವಾಗ ಎಂಬುದು ಜನತೆಯ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *