ಕೋಮು ರಾಜಕೀಯವನ್ನು ಉತ್ತೇಜಿಸಲು ಧಾರ್ಮಿಕ ಹಬ್ಬಗಳ ಬಳಕೆ-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡನೆ

“ಏಳು ರಾಜ್ಯಗಳಲ್ಲಿ ಕೋಮು ಹಿಂಸಾಚಾರ ನಡೆದರೂ ಪ್ರಧಾನಿಗಳ ದಿವ್ಯಮೌನ ಇನ್ನಷ್ಟು ಆತಂಕಕಾರಿ”

ಭಾರತದ ಹಲವಾರು ರಾಜ್ಯಗಳಲ್ಲಿ – ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಇತ್ಯಾದಿಗಳಲ್ಲಿ ರಾಮ ನವಮಿಯಂದು ನಡೆದ ಮೆರವಣಿಗೆಗಳ ಸಂದರ್ಭಗಳಲ್ಲಿ ಕೋಮು ಹಿಂಸಾಚಾರ ಒಂದು ಆಳವಾದ ಕಳವಳ ಉಂಟುಮಾಡುವ ವಿಷಯವಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ. ಈ ಘಟನೆಗಳಲ್ಲಿ ಒಂದು ನಿರ್ದಿಷ್ಟ ವಿಧಾನ ಇದೆ ಎಂಬುದನ್ನು ಇವು ನಡೆದ ಪ್ರದೇಶಗಳಿಂದ ಬಂದಿರುವ ವರದಿಗಳು ಸೂಚಿಸುತ್ತವೆ. ಹಬ್ಬದ ಸಂದರ್ಭವನ್ನು ಬಳಸಿಕೊಂಡು ಆಕ್ರಮಣಕಾರಿ ಶಸ್ತ್ರಸಜ್ಜಿತ ಮೆರವಣಿಗೆಗಳನ್ನು ನಡೆಸಿ ಅವು ಅಲ್ಪಸಂಖ್ಯಾತರು ವಾಸಿಸುವ ಕಾಲನಿಗಳ ಮೂಲಕ ಹಾದುಹೋಗುವಾಗ ಅತ್ಯಂತ ಪ್ರಚೋದನಕಾರಿ ಘೋಷಣೆಗಳನ್ನು ಕೂಗುವುದು, ಅದು ವಾಗ್ವಾದಗಳಿಗೆ, ನಂತರ ಕಲ್ಲು ತೂರಾಟಕ್ಕೆ ಕಾರಣವಾಗುವುದು ಕಂಡು ಬಂದಿದೆ.

ಖಾರ್ಗೋನ್‌ನಲ್ಲಿ ಸಂಭವಿಸಿದ ಅಂತಹ ಮೊದಲ ಘಟನೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಕಪಿಲ್ ಶರ್ಮಾ, ರಾಜಧಾನಿಯಲ್ಲಿ ನಡೆದ ಕೋಮುಗಲಭೆಯ ಮೊದಲು ಮಾಡಿದಂತಹ ದ್ವೇಷದ ವಿಷ ತುಂಬಿದ ಭಾಷಣ ಮಾಡುವ ಸರಣಿ ಅಪರಾಧಿ, ಆ ಪ್ರದೇಶದಲ್ಲಿದ್ದರು ಎಂಬುದು ಕಾಕತಾಳೀಯವಲ್ಲ ಎಂದು ಪೊಲಿಟ್‍ ಬ್ಯುರೊ ಟಿಪ್ಪಣಿ ಮಾಡಿದೆ. ಬಿಹಾರದಲ್ಲಿ ಪೊಲೀಸರ ಸಮ್ಮುಖದಲ್ಲಿ ಮಸೀದಿಯ ಮೇಲೆ ಕೇಸರಿ ಧ್ವಜವನ್ನು ನೆಟ್ಟಂತಹ ಅತ್ಯಂತ ಆಕ್ಷೇಪಾರ್ಹ ಘಟನೆಗಳು ನಡೆದಿವೆ. ದಿಲ್ಲಿಯಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ, ಸಂಘ ಪರಿವಾರಕ್ಕೆ ಸೇರಿರುವ ಎಬಿವಿಪಿ ರಾಮನವಮಿ ಹೆಸರಿನಲ್ಲಿ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಮಾಂಸಾಹಾರಿ ಆಹಾರವನ್ನು ನೀಡುವುದನ್ನು ತಡೆಯಲು ಮೆಸ್ ಕಾರ್ಮಿಕರ ಮೇಲೆ ಹಲ್ಲೆ ನಡೆಸಿತು ಮತ್ತು ನಂತರ ಅವರನ್ನು ರಕ್ಷಿಸಲು ಬಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿತು.

Ram-Navami-PTI

ಮಧ್ಯಪ್ರದೇಶ, ಗುಜರಾತ್ ಮತ್ತು ಬಿಹಾರದ ಆಡಳಿತಗಳು ಸಾಕಷ್ಟು ಪೂರ್ವಸಿದ್ಧತೆಗಳಿಲ್ಲದೆ ಇಂತಹ ಮೆರವಣಿಗೆಗಳನ್ನು ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಹಾದುಹೋಗಲು ಅನುಮತಿ ನೀಡಿರುವುದು ಬಹಳಷ್ಟು ಸಂದೇಹಗಳಿಗೆ ಎಡೆಮಾಡಿ ಕೊಡುತ್ತದೆ… ಇದರ ಜೊತೆಗೆ, ಮಧ್ಯಪ್ರದೇಶದಲ್ಲಿ ಕಾನೂನು ಪ್ರಕ್ರಿಯೆಯಿಲ್ಲದೆ, “ಗಲಭೆಕೋರರು” ಎಂದು ಆರೋಪಿಸಲ್ಪಟ್ಟವರ ಬಹುತೇಕ ಎಲ್ಲಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರ  ಆಸ್ತಿಗಳನ್ನು ನೆಲಸಮ ಮಾಡಲಾಗಿದೆ. ಇದು ಭಾರತದ ಕಾನೂನನ್ನು ಮತ್ತು ಸಂವಿಧಾನವನ್ನು ಮಟ್ಟಹಾಕುವ ಕೆಲಸವಲ್ಲದೆ ಬೇರೇನೂ ಅಲ್ಲ ಎಂದು ಪೊಲಿಟ್‍ ಬ್ಯುರೊ ಅಭಿಪ್ರಾಯ ಪಟ್ಟಿದೆ.

ಏಳು ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆದಿದ್ದರೂ ಪ್ರಧಾನಿಗಳು  ದಿವ್ಯಮೌನ ತಾಳಿರುವುದು ಈ ಘಟನೆಗಳಿಗೆ ಅಧಿಕಾರದಲ್ಲಿರುವವರ ಕೃಪಾಪೋಷಣೆ ಇದೆ ಎಂಬ ಸೂಚನೆ ಮತ್ತಷ್ಟು ಆತಂಕಕಾರಿ ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ಧಾರ್ಮಿಕ ಹಬ್ಬಗಳನ್ನು ಕೋಮು ರಾಜಕೀಯವನ್ನು ಉತ್ತೇಜಿಸಲು ಆರ್‌ಎಸ್‌ಎಸ್ ಸಂಘ ಪರಿವಾರ ಬಳಸುವುದನ್ನು ಸಿಪಿಐ(ಎಂ) ಖಂಡಿಸುವುದಾಗಿ ಹೇಳಿರುವ ಪೊಲಿಟ್‍ ಬ್ಯುರೊ ಶಾಂತಿ ಕಾಪಾಡಬೇಕು ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲು ಬಯಸುವವರ ಉದ್ದೇಶವನ್ನು ವಿಫಲಗೊಳಿಸಬೇಕು ಎಂದು ಎಲ್ಲ ಜನವಿಭಾಗಗಳಿಗೆ ಮನವಿ ಮಾಡಿದೆ. ಸೂಕ್ತ ಚಟುವಟಿಕೆಗಳ ಮೂಲಕ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಕೆಲಸ ಮಾಡಬೇಕೆಂದು ಅದು ತನ್ನ ಘಟಕಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *