ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್, ತನ್ನ ಸಾವಿಗೆ ಸಚಿವ ಈಶ್ವರಪ್ಪರವರೇ ನೇರ ಹೊಣೆಗಾರರೆಂದು ಪತ್ರ ಬರೆದು, ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಪತ್ರದಲ್ಲಿ ಗುತ್ತಿಗೆ ಕೆಲಸದ ಸಂಬಂದ ಶೇ 40 ಕಮಿಷನ್ಗಾಗಿ ಒತ್ತಡ ಹೇರಿದ ವಿಚಾರವನ್ನು ಪ್ರಸ್ತಾಪಿಸಿದ್ದಾರೆನ್ನಲಾಗಿದೆ. ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಆದ್ದರಿಂದ, ರಾಜ್ಯ ಸರಕಾರ ಈ ಕೂಡಲೇ ಸಚಿವ ಕೆ.ಎಸ್.ಈಶ್ವರಪ್ಪ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂದಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.
ಇದನ್ನು ಓದಿ: ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ನಿರ್ಣಯ
ಪ್ರತಿಯೊಂದು ಗುತ್ತಿಗೆ ಕೆಲಸದಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಒಟ್ಟು ಕಾಮಗಾರಿಯ ಶೇ 40 ರಷ್ಢು ಕಮಿಷನ್ ಪಡೆಯುತ್ತಿರುವುದಾಗಿ ಮತ್ತು ಇದರಿಂದ ಕಾಮಗಾರಿ ನಿರ್ವಹಣೆಗೆ, ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗಿದೆಯೆಂದು, ಇದನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ಸ್ವತಃ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ದೇಶದ ಪ್ರಧಾನ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ಕಳೆದ ಐದಾರು ತಿಂಗಳುಗಳ ಹಿಂದೆಯೇ ಒತ್ತಾಯಿಸಿದುದನ್ನು ಇಲ್ಲಿ ಸಕಾರಣವಾಗಿ ನೆನಪಿಸಿಕೊಳ್ಳಬಹುದು. ಆಗ ಸಿಪಿಐ(ಎಂ) ಪಕ್ಷವು ಸದರಿ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಮತ್ತು ಕಾಮಗಾರಿಗಳ ಕಳಪೆತನವನ್ನು ಹಾಗೂ ಕಾಮಗಾರಿಗಳು ನಡೆಯದೇ ಬಿಲ್ ಮಾಡುವುದನ್ನು ತಡೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿತ್ತು.
ಇದನ್ನು ಓದಿ: ಭ್ರಷ್ಠತೆಯ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಿ-ವಿಧಾನಸಭೆ ವಿಸರ್ಜಿಸಿ ಜನತೆಯಿಂದ ಹೊಸ ಆದೇಶ ಪಡೆಯಿರಿ
ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಆ ಕುರಿತು ಸೂಕ್ತ ಕ್ರಮವಹಿಸಿದ್ದರೇ ಈ ದಿನ ದೇಶಕ್ಕೆ ಗುತ್ತಿಗೆ ಸೇವೆಯನ್ನು ಒದಗಿಸುತ್ತಿದ್ದ ಒಂದು ಅಮೂಲ್ಯ ಜೀವ ಸಂತೋಷ ಪಾಟೀಲ್ ಎಂಬವರು ನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಡೆಯಬಹುದಿತ್ತು, ಇದರಿಂದಾಗಿ ಅವರ ಕುಟುಂಬ ಬೀದಿಗೆ ಅನಾಥವಾಗದಂತೆ ಮಾಡಬಹುದಾಗಿತ್ತು. ಈ ಕುರಿತು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದೇ ಜವಾಬ್ದಾರಿ ಹೀನ ರೀತಿಯ ವರ್ತನೆ ತೋರಿದುದು ತೀವ್ರ ಖಂಡನೀಯವಾಗಿದೆ.
ಈಗಲಾದರೂ ಬೇರೆ ಗುತ್ತಿಗೆದಾರರು ಅತ್ಮಹತ್ಯೆಗಿಳಿಯದಂತೆ ಮತ್ತು ಅವರ ಕುಟುಂಬಗಳು ಬೀದಿಪಾಲಾಗದಂತೆ ತಡೆಯಲು ಸಂತೋಷ ಪಾಟೀಲ ಪ್ರಕರಣವೂ ಸೇರಿದಂತೆ ಒಟ್ಟು ಈ ಕಮಿಷನ್ ಹಗರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸುವಂತೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಒಕ್ಕೂಟ ಹಾಗೂ ರಾಜ್ಯ ಸರಕಾರಗಳನ್ನು ಬಲವಾಗಿ ಒತ್ತಾಯಿಸುತ್ತದೆ.
ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ