ಕರ್ನಾಟಕ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರದ ಪ್ರಮಾಣ ಮಿತಿ ಮೀರಿದ್ದು, ಎಲ್ಲೆಡೆ ವ್ಯಾಪಕವಾಗಿ ಹಲವು ಕ್ಷೇತ್ರಗಳಲ್ಲಿ ಹರಡುತ್ತಿದೆ. ಈ ನಡುವೆ ಶೇ. 40 ಕಮಿಷನ್ ಭ್ರಷ್ಟಾಚಾರ ಮತ್ತು ಬಿಟ್ ಕಾಯಿನ್ ಲೂಟಿ ಅವ್ಯವಹಾರ ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ನೇರವಾಗಿ ಆಡಳಿತ ಪಕ್ಷವೇ ಭಾಗಿಯಾಗಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳ ಜಂಟಿ ಪತ್ರಿಗೋಷ್ಠಿಯನ್ನು ನಡೆಸಿದ್ದು, ಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ ಹೇಳಿಕೆಯನ್ನು ಇಲ್ಲಿ ಪೂರ್ಣವಾಗಿ ಕೊಡಲಾಗಿದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) – ಸಿಪಿಐ(ಎಂ)
ಭಾರತ ಕಮ್ಯುನಿಸ್ಟ್ ಪಕ್ಷ – ಸಿಪಿಐ
ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) – ಎಸ್‌ಯುಸಿಐ(ಸಿ)
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್‌ವಾದಿ)-ಲಿಬರೇಷನ್ – ಸಿಪಿಐ(ಎಂಎಲ್)-ಲಿಬರೇಷನ್
ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ – ಎಐಎಫ್‌ಬಿ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ – ಆರ್‌ಪಿಐ
ಸ್ವರಾಜ್ ಇಂಡಿಯಾ
ರಾಜ್ಯ ಘಟಕಗಳು, ಬೆಂಗಳೂರು.
ಶೇ. 40 ಕಮಿಷನ್ ಭ್ರಷ್ಟಾಚಾರ, ಬಿಟ್ ಕಾಯಿನ್ ಲೂಟಿಯನ್ನು ನ್ಯಾಯಾಂಗ ತನಿಖೆಗೊಳಪಡಿಸಿ ಇಲ್ಲವೇ ತೊಲಗಿ – ಎಡ ಮತ್ತು ಪ್ರಜಾಸತ್ತಾತ್ಮಕ ಏಳು ಪಕ್ಷಗಳ ಒತ್ತಾಯ
ಪ್ರತಿಯೊಂದು ಗುತ್ತಿಗೆ ಕೆಲಸದಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಒಟ್ಟು ಕಾಮಗಾರಿಯ ಶೇ. 40ರಷ್ಟು ಕಮಿಷನ್ ಪಡೆಯುತ್ತಿರುವುದಾಗಿ ಮತ್ತು ಇದರಿಂದ ಕಾಮಗಾರಿ ನಿರ್ವಹಣೆಗೆ, ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗಿದೆಯೆಂದು, ಇದನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ಸ್ವತಃ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ದೇಶದ ಪ್ರಧಾನ ಮಂತ್ರಿಗಳಿಗೆ ಕಳೆದ ಐದಾರು ತಿಂಗಳುಗಳ ಹಿಂದೆಯೇ ಬಹಿರಂಗ ಪತ್ರ ಬರೆದು ಒತ್ತಾಯಿಸಿದೆ.
ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಶ್ರೀ ಸಂತೋಷ ಪಾಟೀಲ್ ಗುತ್ತಿಗೆ ಕಾಮಗಾರಿಯ ಶೇ. 40 ಕಮಿಷನ್ ಒತ್ತಡದಿಂದ ಉಂಟಾದ ಸಾಲದ ಬಾಧೆಯೇ ತನ್ನ ಆತ್ಮಹತ್ಯೆಗೆ ಕಾರಣವೆಂದು ಡೆತ್‌ನೋಟ್ ಬರೆದಿದ್ದಾರೆ ಮತ್ತು ಶ್ರೀ ಕೆ.ಎಸ್. ಈಶ್ವರಪ್ಪರವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಇದರ ನಂತರ ಗೋಶಾಲೆಗಳಿಗೆ ಮೇವು ಒದಗಿಸುವ ಗುತ್ತಿಗೆದಾರರು ಮತ್ತು ಮಠಾಧೀಶರುಗಳು ಮಠಗಳಿಗೆ ನೀಡುವ ಅನುದಾನದಲ್ಲೂ ಈ ಕಮಿಷನ್ ವ್ಯವಹಾರವು ದಟ್ಟವಾಗಿರುವುದನ್ನು ಬಹಿರಂಗಪಡಿಸಿದ್ದಾರೆ.
ದಶ ಸಾವಿರ ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಹಣಕಾಸು ಸಂಸ್ಥೆಗಳ ಸರ್ವರ್‌ಗಳ ಹ್ಯಾಕಿಂಗ್ ಹಗರಣದಲ್ಲಿ ಪಾಲ್ಗೊಂಡ ಆರೋಪಿಯು, ರಾಜ್ಯ ಸರಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಸರ್ವರ್‌ಗಳಿಗೆ ಕನ್ನ ಹಾಕಿ ಅಪಾರ ಪ್ರಮಾಣದ ಹಣವನ್ನು ಲಪಟಾಯಿಸಿರುವುದು ಮತ್ತು ಈತನ ಜೊತೆ ರಾಜ್ಯದ ಕೆಲ ಪ್ರಭಾವಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಕೈ ಜೋಡಿಸಿ ಪಾಲು ಪಡೆದಿರುವುದು ಈಗಾಗಲೇ ಬಯಲಾಗಿದೆ. ಜನಾಧನ ಖಾತೆಯೊಂದರಿಂದಲೇ ಸುಮಾರು 6,000 ಕೋಟಿ ರೂ. ಲಪಟಾಯಿಸಲಾಗಿದೆಯೆನ್ನಲಾಗಿದೆ.
ಇದೇ ಭ್ರಷ್ಟತೆಯ ದುರಾಡಳಿತವನ್ನು ರಾಜ್ಯ ಸರಕಾರದ ವಿವಿಧ ಇಲಾಖೆಗಳು ಮತ್ತು ಅಭಿವೃದ್ದಿ ನಿಗಮಗಳಲ್ಲಿಯೂ ವ್ಯಾಪಕವಾಗಿ ಕಾಣಬಹುದಾಗಿದೆ. ಇವುಗಳ ಫಲಾನುಭವಿಗಳು ನಿಜವಾದ ಜನತೆಯಾಗದೇ, ಬಹುತೇಕ ಶಾಸಕರುಗಳ ಹಿಂಬಾಲಕರು ಮತ್ತು ಹಣ ಅಥವಾ ದೊಡ್ಡ ಪ್ರಮಾಣದ ಲಂಚ ನೀಡುವವರಾಗಿದ್ದಾರೆ. ನಿಜ ಫಲಾನುಭವಿಗಳು ಶಾಸಕರುಗಳ ಕೃಪೆಯಿಲ್ಲದೇ, ಲಂಚ ನೀಡಲಾಗದೇ ಕಛೇರಿಗಳ ಸುತ್ತ ಗಿರಕಿ ಹೊಡೆದು ಬೇಸ್ತು ಬೀಳುತ್ತಿದ್ದಾರೆ.
ಇತ್ತೀಚೆಗೆ ಗಂಗಾ ಕಲ್ಯಾಣ ಯೋಜನೆಯಲ್ಲಿನ ಸಾವಿರಾರು ಕೋಟಿ ರೂ.ಗಳ ಭಾರಿ ಪ್ರಮಾಣದ ಅವ್ಯವಹಾರ ಮತ್ತು ಭ್ರಷ್ಟಾಚಾರವನ್ನು ಸರಕಾರ ರಚಿಸಿದ ಸದನ ಸಮಿತಿಯೇ ಬಹಿರಂಗ ಪಡಿಸಿದೆ.
ಆಸ್ತಿ-ಪಾಸ್ತಿಗಳ ವರ್ಗಾವಣೆ ಮತ್ತು ಪಾಲು ವಿಭಾಗದ ಸಂದರ್ಭಗಳಲ್ಲಿಯೂ, ಭೂಮಿಗಳ ಸರ್ವೇ ಮಾಡಿಸುವಾಗಲೂ, ರೈತರೂ ಸೇರಿದಂತೆ ಎಲ್ಲ ನಾಗರೀಕರು ತೀವ್ರ ಆಕ್ರೋಶಗೊಂಡಿದ್ದಾರೆ. ಕಂದಾಯ ಇಲಾಖೆಯು ಗಬ್ಬೆದ್ದು ನಾರುತ್ತಿದೆ. ಪೊಲೀಸ್ ಇಲಾಖೆಯು ಸೇರಿದಂತೆ ಇತರೆಲ್ಲಾ ಇಲಾಖೆಗಳು ಇದರಿಂದ ಹೊರತಲ್ಲ.
ವೃದ್ಧಾಪ್ಯ, ವಿಧವಾ, ಅಂಗವಿಕಲರ ಮತ್ತು ದೇವದಾಸಿ ಮುಂತಾದ ದುರ್ಬಲರಿಗೆ ನೀಡುವ ಮಾಸಿಕ ಪಿಂಚಣಿಗಳಲ್ಲೂ ಭ್ರಷ್ಟತೆಯು ಮುಖಕ್ಕೆ ರಾಚುತ್ತಿದೆ.
ಈ ಎಲ್ಲವೂ ದೇಶದ ಮುಂದೆ ರಾಜ್ಯವನ್ನು ತಲೆ ತಗ್ಗಿಸುವಂತೆ ಮಾಡಿವೆ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ದೂಡಿವೆ. ಈ ಎಲ್ಲಾ ಅನುಚಿತ ಬೆಳವಣಿಗೆಗಳಿಗೆ ಕಾರಣವಾದ ರಾಜ್ಯ ಸರಕಾರದ ದುರ್ನಡೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ.
ಆದಾಗಲೂ ಕರ್ನಾಟಕ ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಿ ನಿಯಂತ್ರಿಸಲು ಕ್ರಮವಹಿಸಬೇಕೆಂದು ಒತ್ತಾಯವನ್ನು ರಾಜ್ಯದ ಜನತೆ, ರಾಜಕೀಯ ಶಕ್ತಿಗಳು ನಿರಂತರವಾಗಿ ಮಾಡುತ್ತಿದ್ದರೂ, ಆ ಕುರಿತು ಏನೊಂದು ಗಂಭೀರ ಕ್ರಮವಹಿಸದೇ ಮುಂದುವರೆಯುತ್ತಿರುವುದು ತೀವ್ರ ನಾಚಿಕೆ ಗೇಡಿನ ವಿಚಾರವಾಗಿದೆ.
ಆದ್ದರಿಂದ, ಈ ಕೂಡಲೇ ಸದರಿ ಈ ಎಲ್ಲ ಭ್ರಷ್ಠಾಚಾರದ ವಿಚಾರಗಳನ್ನು ಉನ್ನತ ನ್ಯಾಯಾಂಗದ ಸುಪರ್ಧಿಯಲ್ಲಿ ಸ್ವತಂತ್ರ ನ್ಯಾಯಾಂಗದ ತನಿಖೆಗೆ ಒಳಪಡಿಸಬೇಕು.
ಇಲ್ಲವೇ ಈ ಎಲ್ಲದಕ್ಕೂ ತಮ್ಮದೇ ಸರಕಾರ ಮತ್ತು ಮಂತ್ರಿಮಂಡಲವೇ ನೇರ ಹೊಣೆಗಾರನಾಗಿರುವುದರಿಂದ ತಕ್ಷಣವೇ ರಾಜೀನಾಮೆ ನೀಡಿ ಜನರಿಂದ ಮರಳಿ ಆದೇಶ ಪಡೆಯಲು ಚುನಾವಣೆಗೆ ಮುಂದಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಮತ್ತೊಮ್ಮೆ ನಾವು ಬಲವಾಗಿ ಒತ್ತಾಯಿಸುತ್ತೇವೆ.
ವಂದನೆಗಳೊಂದಿಗೆ,
ಯು. ಬಸವರಾಜ, ರಾಜ್ಯ ಕಾರ್ಯದರ್ಶಿ, ಸಿಪಿಐ(ಎಂ)
ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ, ಸಿಪಿಐ
ಕೆ. ಉಮಾ, ರಾಜ್ಯ ಕಾರ್ಯದರ್ಶಿ, ಎಸ್‌ಯುಸಿಐ(ಸಿ)
ಕ್ಲಿಫ್ಟನ್ ರೋಜಾರಿಯೋ, ರಾಜ್ಯ ಕಾರ್ಯದರ್ಶಿ, ಸಿಪಿಐ(ಎಂಎಲ್)-ಲಿಬರೇಷನ್
ಜಿ.ಆರ್. ಶಿವಶಂಕರ್, ರಾಜ್ಯ ಕಾರ್ಯದರ್ಶಿ, ಎಐಎಫ್‌ಬಿ
ಚಾಮರಸ ಮಾಲೀ ಪಾಟೀಲ, ಅಧ್ಯಕ್ಷರು, ಸ್ವರಾಜ್ ಇಂಡಿಯಾ
ಮೋಹನ್ ರಾಜ್, ಅಧ್ಯಕ್ಷರು, ಆರ್‌ಪಿಐ