ಧರ್ಮದ ಬಗ್ಗೆ ಮಾರ್ಕ್ಸ್ವಾದದ ತಿಳುವಳಿಕೆ ಎಂದರೆ ತಮ್ಮ ಬದುಕಿನ ಸಂಕಟಗಳ ಕಾರಣಗಳೇನು, ಎಲ್ಲಿಂದ ಹೇಗೆ ಈ ಸಂಕಟಗಳು ಎರಗುತ್ತವೆ ಎಂದು ಅರಿವಾಗದ ಮನುಷ್ಯ ಸಮುದಾಯ ಕೊನೆಗೆ ದೇವರ, ಧರ್ಮದ ಮೊರೆ ಹೋದರು. ವರ್ಗ ಸಮಾಜ ಉದಿಸಿದಂದಿನಿಂದ ಇಲ್ಲಿಯವರೆಗೆ ದುಡಿಯುವವರ ದಮನ, ಶೋಷಣೆಗಳು ಮುಂದುವರೆಯುತ್ತಿರುವವರೆಗೆ ಧರ್ಮ, ದೇವರ ಬಗೆಗಿನ ನಂಬಿಕೆಗಳು ಮುಂದುವರೆಯುತ್ತವೆ. ಜನರಿಗೆ ತಮ್ಮ ಸಂಕಟಗಳ ಕಾರಣಗಳು ಅರಿವಾಗುವುದರ ಜೊತೆಗೆ ಕಾರಣಗಳ ವಿರುದ್ಧ, ತಮ ದಮನ, ಶೋಷಣೆಗಳನ್ನು ಎದುರಿಸಿ ನಿಂತಾಗ, ತಮ್ಮ ಮೇಲೆ ತಮಗೇ ನಂಬಿಕೆ, ಸ್ವ ವಿಶ್ವಾಸ ಬಲಿತಾಗ ದೇವರ, ಧರ್ಮದ ಬಗೆಗಿನ ನಂಬಿಕೆಗಳು ಮಾಯವಾಗುತ್ತವೆ.
ಜಿ.ಎನ್. ನಾಗರಾಜ
ಪ್ರಗತಿಪರರು ಹಬ್ಬ, ಜಾತ್ರೆಗಳೆಂದರೆ ಮೂಗು ಮುರಿಯುವುದು, ದೂರ ಉಳಿಯುವುದು, ಅವುಗಳನ್ನು ಹಾಸ್ಯ ಮಾಡುವುದು, ಅವುಗಳಲ್ಲಿ ಭಾಗವಹಿಸುವ ಸಾಮಾನ್ಯ ಜನರನ್ನು ಕೀಳಾಗಿ ನೋಡುವುದು ದಶಕಗಳಿಂದ ಕಾಣುತ್ತಾ ಬಂದಿರುವ ವರ್ತನೆಗಳು. ಇದಕ್ಕೆ ಅಪವಾದಗಳಿಲ್ಲ ಎಂದಲ್ಲ. ಆದರೆ ಜನರ ಮನಸ್ಸಿನಲ್ಲಿ ಇಂತಹ ಬಿಂಬ ಮೂಡಿರುವುದಂತೂ ನಿಜ. ಪ್ರಗತಿಪರರ ಜೊತೆ ಸೇರಿ ಅನೇಕ ಕಮ್ಯುನಿಸ್ಟರೂ ಇಂತಹ ವರ್ತನೆಗಳನ್ನು ಹಲವು ಬಾರಿ ತೋರಿದ್ದಾರೆ. ಇದೇ ರೀತಿಯ ಅಭಿಪ್ರಾಯ ಅವರ ಬಗ್ಗೆಯೂ ಮೂಡಿದೆ.
ಇದು ಹಬ್ಬ, ಜಾತ್ರೆಗಳನ್ನು, ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸುವ ಜನರನ್ನು ದಾರಿ ತಪ್ಪುವಂತೆ ಮಾಡುವುದರಲ್ಲಿ ಕೋಮುವಾದಿಗಳು ಯಶಸ್ವಿಯಾಗಲು ಅನುವು ಮಾಡಿಕೊಟ್ಟಿದೆ.
ಹಬ್ಬ, ಜಾತ್ರೆ ಎಂದರೆ ಅವು ದೇವರು, ಧರ್ಮ, ಅವುಗಳ ನಿರಂತರ ಜೊತೆಗಾರರಾದ ಮೂಢ ನಂಬಿಕೆ, ಕಂದಾಚಾರಗಳು ಎಂಬ ಭಾವನೆ ಬಹಳ ಜನ ಸಂಗಾತಿಗಳಲ್ಲಿ.
ಆದರೆ ಹಬ್ಬಗಳಿಗೂ ದೇವರುಗಳಿಗೂ ಯಾವುದೇ ಸಂಬಂಧವಿಲ್ಲದ ಅನೇಕ ಹಬ್ಬಗಳಿವೆ. ಜನರ ಬದುಕಿನ ಸಂತಸಗಳಲ್ಲಿ ಅವುಗಳ ಮೂಲ ಇದೆ. ಸಂಕ್ರಾಂತಿ, ಉಗಾದಿ, ದೀಪಾವಳಿ ಅಂತಹ ಕೆಲವು. ರೈತರ ಸುಗ್ಗಿ, ಅವರ ಬಿಡುವು, ಬೇಟೆಯ ಸುಗ್ಗಿ, ಹಾಲಿನ ಸುಗ್ಗಿ ಇಂತಹ ಹಬ್ಬಗಳ ಆಚರಣೆಗೆ ಕಾರಣವಾಗಿವೆ. ಇನ್ನೂ ಹಲವು ಹಬ್ಬಗಳು ಮೂಲದಲ್ಲಿ ಕೇವಲ ಜನರ ಬದುಕಿನಿಂದಲೇ ಹುಟ್ಟಿದ್ದರೂ ನಂತರದ ಕಾಲಘಟ್ಟಗಳಲ್ಲಿ ದೇವರನ್ನು ಪ್ರವೇಶಗೊಳಿಸಲಾಗಿದೆ. ಗೌರಿ ಗಣೇಶ ಅಂತಹ ಒಂದು ಹಬ್ಬ. ಅದೊಂದು ನೀರಾವರಿ ಕೃಷಿಯ ಆಚರಣೆ. ಅದರಲ್ಲಿ ಗಣದ ಮುಖ್ಯಸ್ಥರಾಗಿ ಭಾಗವಹಿಸುತ್ತಿದ್ದ ಗೌರಿ, ಗಣಪತಿಗಳು ಮುಂದೆ ದೇವರುಗಳೆಂದು ಪರಿಗಣಿತವಾದರು. ಓಣಂ ಮತ್ತು ದೀಪಾವಳಿಗಳಲ್ಲಿ ಎಂಬ ಕೃಷಿಯ ಸಂಭ್ರಮದಲ್ಲಿ ಹಿರೇರ ಹಬ್ಬವೆಂದು ಗತಿಸಿದವರನ್ನು ನೆನಪಿಸಿಕೊಳ್ಳುವ ಆಚರಣೆಗಳೂ ಮಿಳಿತವಾಗಿವೆ. ಮತ್ತೆ ಕೆಲವು ಆಹಾರ, ಔಷಧಿ ಮತ್ತಿತರ ಅಗತ್ಯಗಳನ್ನು ಒದಗಿಸಿ ಪ್ರಾಣ ಉಳಿಸಿದ ಸಸ್ಯ, ಪ್ರಾಣಿಗಳನ್ನು ನೆನಪಿಸಿಕೊಳ್ಳುವ ಆಚರಣೆಗಳಾಗಿ ಆರಂಭವಾಗಿ ದೇವರುಗಳ, ದೇವತೆಗಳ ರೂಪವನ್ನು ಪಡೆದಿವೆ. ಎಲ್ಲಮ್ಮ, ಮಾರಮ್ಮ ಜಾತ್ರೆ ಪಂಜುರ್ಲಿ ಕೋಲಗಳು ಇಂತಹವು.
ಈ ಹಬ್ಬಗಳಲ್ಲಿ ಸಾಮಾನ್ಯವಾಗಿ ಒಳ್ಳೆಯ ಊಟವೇ ಪ್ರಧಾನ. ಜೊತೆಗೆ ಉಲ್ಲಾಸ, ಉತ್ಸಾಹ ತರುವ ಸಾಮೂಹಿಕ ಆಟಗಳು, ಚಟುವಟಿಕೆಗಳು.
ಜನರ ಹಲವು ಸಮಸ್ಯೆಗಳ ಪರಿಹಾರದಲ್ಲಿ ಜನರ ಜೊತೆಗಿರುವ ಸಾಮಾಜಿಕ ಚಳುವಳಿಗಾರರು ಇಂತಹ ಹಬ್ಬಗಳಲ್ಲಿ ದೂರವಿರುವ ಬದಲಾಗಿ ಜನರ ಸಂತಸದಲ್ಲಿ ಭಾಗವಹಿಸುವುದು ಅವಶ್ಯ. ಹಲವು ರೀತಿಯಲ್ಲಿ ಭಾಗವಹಿಸಬಹುದು ಮತ್ತು ಜನರ ಸಂತಸವನ್ನು ಹೆಚ್ಚಿಸಬಹುದು. ಜನರಲ್ಲಿ ಅರಿವು ಮೂಡಿಸಲೂ ಇವುಗಳನ್ನು ಬಳಸಿಕೊಳ್ಳಬಹುದು. ಹಾಗೆಂದ ಕೂಡಲೇ ಹಬ್ಬಗಳಲ್ಲಿ ಪ್ರವೇಶ ಮಾಡಿರುವ ದೇವರ, ಧರ್ಮದ ಆಚರಣೆಗಳಲ್ಲಿ ಭಾಗವಹಿಸಬೇಕೆಂದಲ್ಲ.
ಬಿಜಾಪುರದಲ್ಲಿ ಒಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಯನ ಶಿಬಿರ. ಬೃಹತ್ ವಿಧಾನ ಸೌಧ ಚಲೋ ಹೋರಾಟದ ಪೂರ್ವಭಾವಿಯಾಗಿ ಏರ್ಪಟ್ಟಿತ್ತು. ನಾವೆಲ್ಲರೂ ಅಧ್ಯಯನ ಶಿಬಿರ ಏರ್ಪಾಟಾಗಿದ್ದ ಒಂದು ಹಳ್ಳಿಗೆ ನಡೆಯುತ್ತಾ ಹೋಗುತ್ತಿದ್ದೆವು. ಮುಂದೆ ಕೆಂಪಂಗಿ ತೊಟ್ಟ ಮತ್ತು ಕೆಂಪು ಬಾವುಟ ಹಿಡಿದ ಕೆಲ ಸ್ವಯಂ ಸೇವಕರು, ನಂತರ ಬಾವುಟಗಳನ್ನು ಹಿಡಿದ ಅಲ್ಲಿನ ಸಾಮಾನ್ಯ ರೂಢಿಯಂತೆ ಗಾಂಧಿ ಟೋಪಿ ಧರಿಸಿದ್ದ ರೈತರು, ಅವರೊಟ್ಟಿಗೆ ಭೀಮಸೀ ಕಲಾದಗಿ, ಅಣ್ಣಾರಾಯ್ ಮೊದಲಾದ ಮುಖಂಡರೊಡನೆ ನಾನು. ಒಂದು ಮೆರವಣಿಗೆಯಂತೆ ನಡೆಯುತ್ತಿದ್ದೆವು. ಆಗಾಗ ಬೆಂಗಳೂರು ಚಲೋ ಬಗ್ಗೆ ಘೋಷಣೆಗಳನ್ನು ಹಾಕುತ್ತಿದ್ದರು.
ನಾವು ಸ್ವಲ್ಪ ದೂರ ಹೋಗುವಷ್ಟರಲ್ಲಿ ನಮಗೆ ಎದುರಾಗಿ ಮತ್ತೊಂದು ಮೆರವಣಿಗೆ ಬಂತು. ಅವರೆಲ್ಲ ತಲೆಗೆ ಹಳದಿ ಪೇಟಾ ಧರಿಸಿದ್ದರು. ಮುಂದೆ ಒಬ್ಬರು ಒಂದು ಬೆಳ್ಳಿ ಲೇಪನದ ಮುಕುಟ ಇದ್ದ ಕೋಲು ಹಿಡಿದ ಒಬ್ಬ ತನ್ನ ಬಟ್ಟೆಗಳ ಮೇಲೆ ನೇರಳೆ ಬಣ್ಣದ ನಿಲುವಂಗಿ ಧರಿಸಿದ್ದ.
ಅವರೆಲ್ಲ ವಿಠ್ಠಲ ವಿಠ್ಠಲ ಪಾಡುರಂಗ, ಜಯ ಹರಿ ವಿಠ್ಠಲ ಪಾಡುರಂಗ ಎಂದು ಭಜನೆ ಮಾಡುತ್ತಾ ಎದುರು ಬರುತ್ತಿದ್ದರು.
ನಮ್ಮ ಮೆರವಣಿಗೆಗೂ ಅವರ ಮೆರವಣಿಗೆಗೂ ಸಮಾನ ಲಕ್ಷಣಗಳೂ ಮತ್ತು ವೈದೃಶ್ಯಗಳೆರಡೂ ಎದ್ದು ಕಾಣುವಂತಿತ್ತು.
ಮಧ್ಯೆ ಒಂದು ಕುಡಿಯುವ ನೀರಿನ ಬೋರ್ವೆಲ್ ಬಳಿ ಒಂದು ಮರದ ನೆರಳಲ್ಲಿ ಅವರೂ ಉಪಹಾರ ಸೇವಿಸಲು ಕುಳಿತರು. ನಮ್ಮ ಮೆರವಣಿಗೆಯ ಜನರೂ ಮತ್ತೊಂದು ಮರದ ನೆರಳಲ್ಲಿ ಉಪಹಾರ ಸೇವಿಸಲು ಕುಳಿತರು.
ನಾನು ಕುತೂಹಲದಿಂದ ವಿಠ್ಠಲನ ಮೆರವಣಿಗೆ ಬಗ್ಗೆ ವಿಚಾರಿಸಿದೆ. ಇದು ಆ ಪ್ರದೇಶದಲ್ಲಿ ಪ್ರತಿ ವರ್ಷವೂ ನಡೆದು ಬಂದ ರೂಢಿ. ಪಂಡರಾಪುರದ ಜಾತ್ರೆಗೆ ನಡೆದೇ ಹೋಗುವ ಹರಕೆ ಹೊತ್ತು ಹೋಗುವವರು ಅವರು ಎಂದು ನಮ್ಮ ಸಂಗಾತಿಗಳು ತಿಳಿಸಿದರು.
ಆಗ ನಾನು ಇಬ್ಬರು ಸಂಗಾತಿಗಳೊಡನೆ ಅವರ ಬಳಿ ಹೋಗಿ ಮಾತಾಡುತ್ತಾ ಕುಳಿತೆ. ಹೀಗೆ ವಿಚಾರಿಸಿದಾಗ ಅವರೆಲ್ಲ ತಮ್ಮ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ವಿಠ್ಠಲನಿಗೆ ಹರಕೆ ಹೊತ್ತವರು. ತಮ್ಮ ಮಗನನ್ನು ಕಷ್ಟ ಪಟ್ಟು ಓದಿಸಿದ್ದೇವೆ, ಉದ್ಯೋಗ ಸಿಕ್ಕಿಲ್ಲ, ಯಾವ ಬೆಳೆ ಹಾಕಿದರೂ ಲುಕ್ಸಾನಾಗಿ ಪಾಪರಾಗುವಂತಾಗಿದೆ, ಹೆಂಡತಿಗೆ ಮಕ್ಕಳಾಗಿಲ್ಲ, ಮಗಳ ಮದುವೆಗೆ ಸೂಕ್ತ ವರ ಸಿಕ್ಕಿಲ್ಲ, ಮಗನಿಗೆ ವಾಸಿಯಾಗದ ಕಾಯಿಲೆ ಇತ್ಯಾದಿ ಇತ್ಯಾದಿ ಸಮಸ್ಯೆಗಳಿಗಾಗಿ ಹರಕೆ ಹೊತ್ತದ್ದನ್ನು, ಉಪಹಾರದ ಬುತ್ತಿಯ ಜೊತೆಗೆ ತಮ್ಮ ಬದುಕಿನ ಸಂಕಟಗಳ ಬುತ್ತಿಯನ್ನು ಬಿಚ್ಚುತ್ತಾ ಹೊರಟರು.
ನನಗೂ, ನಮ್ಮ ಸಂಗಾತಿಗಳಿಗೂ ‘ಅರೆ, ಇವೆಲ್ಲಾ ಸ್ವಲ್ಪ ನಮ್ಮ ವಿಧಾನ ಸೌಧ ಚಲೋ ಬೇಡಿಕೆಗಳಂತೆಯೇ ಇವೆಯಲ್ಲ, ನಾವೂ ಬೆಳೆದ ಬೆಳೆಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ, ಹಳ್ಳಿಗಳಲ್ಲಿ ಆಸ್ಪತ್ರೆಗಳಿಲ್ಲ, ಇದ್ದರೂ ಡಾಕ್ಟರುಗಳಿಲ್ಲ, ಹೆಚ್ಚು ಉದ್ಯೋಗ ನಿರ್ಮಾಣವಾಗುತ್ತಿಲ್ಲ ಎಂಬ ಬೇಡಿಕೆಗಳು ನಮ್ಮ ಹೋರಾಟದ ಒತ್ತಾಯಗಳು.
ಇದರಿಂದ ಕಲಿತ ಪಾಠವೆಂದರೆ ನಮ್ಮ ವಿಧಾನ ಸೌಧ ಚಲೋದ ಹಿಂದಿನ ಸಮಸ್ಯೆಗಳು ಹಾಗೂ ಅವರ ಪಂಡರಾಪುರ ಯಾತ್ರೆಯ ಅಡಿಪಾಯದ ಹಿಂದಿನ ಸಮಸ್ಯೆಗಳು ಎರಡೂ ಮೂಲತಃ ಒಂದೇ. ನಾವು ಅವುಗಳನ್ನು ಬೇಡಿಕೆ ಎಂದು ಕರೆದರೆ ಅವರು ಹರಕೆ ಎಂದು ಕರೆಯುತ್ತಿದ್ದಾರೆ. ಆದರೆ ಪರಿಹಾರದ ವಿಧಾನ ಮಾತ್ರ ವಿರುದ್ಧ ದಿಕ್ಕಿನಲ್ಲಿ. ನಾವು ಪ್ರಜಾಪ್ರಭುತ್ವದ ಅಧಿಕಾರ ಕೇಂದ್ರದ ಅದಕ್ಷತೆ, ಭ್ರಷ್ಟಾಚಾರ, ಜನ ವಿರೋಧಿ ನೀತಿಗಳಿಗೆ ಧಿಕ್ಕಾರ ಹೇಳುತ್ತಾ, ಅವರು ಇದು ಪ್ರಜಾಪ್ರಭುತ್ವ, ಸಮಸ್ಯೆಗಳ ಮೂಲ ಇರುವುದೇ ಅಧಿಕಾರ ಕೇಂದ್ರದಲ್ಲಿ ಎಂಬ ಅರಿವೇ ಇಲ್ಲದಂತೆ ಸಾವಿರಾರು ವರ್ಷಗಳ ಸಂಪ್ರದಾಯ ಬದ್ಧರಾಗಿ ವಿಠ್ಠಲನಿಗೆ ಜಯಕಾರ ಹಾಕುತ್ತಿದ್ದಾರೆ.
ಈ ಕ್ರಿಯೆ ಕೇವಲ ಪಂಡರಾಪುರ ಜಾತ್ರೆಗೆ ಮಾತ್ರ ಅನ್ವಯಿಸುವಂತಹುದಲ್ಲ, ಇಂತಹ ಸಾವಿರಾರು ವರ್ಷಗಳಿಂದ ನಡೆಯುತ್ತಿರುವ ಸಾವಿರಾರು ಜಾತ್ರೆಗಳ ಭಕ್ತಾದಿಗಳ ಬಗ್ಗೆ ಕೂಡಾ ಇದೇ ಮಾತು ಹೇಳಬಹುದು. ಇದ್ದಕ್ಕಿದ್ದಂತೆ ಹೊಸದಾಗಿ ಹಬ್ಬಿ ಬಿಡುವ ಅಯ್ಯಪ್ಪ, ಓಂ ಶಕ್ತಿ, ರಾಘವೇಂದ್ರ ಮೊದಲಾದ ಹೊಸ ದೇವರುಗಳಿಗೆ ಹೊಸ ಭಕ್ತರು ಸೆಳೆಯಲ್ಪಡುವುದೂ ತಮ್ಮ ಕುಟುಂಬ ಸೇವೆ ಸಲ್ಲಿಸುತ್ತಿದ್ದ ಹಳೆಯ ದೇವರುಗಳಿಗೆ ಹೊತ್ತ ಹರಕೆ ಫಲಿಸುತ್ತಿಲ್ಲ, ಈ ದೇವರುಗಳಾದರು ಸಮಸ್ಯೆಗಳ ಪರಿಹಾರ ಮಾಡಬಹುದು ಎಂದು.
ಈ ಪ್ರಸಂಗ ನಮಗೆ ಕಲಿಸಿದ ಪಾಠ ಅಂತಿಂಹುದಲ್ಲ, ಮಾರ್ಕ್ಸ್ವಾದದ ಮೂಲಭೂತ ಚಿಂತನೆಗಳಿಗೆ, ಲೆನಿನ್ನರ ವಿಚಾರಗಳಿಗೆ ಸಂಬಂಧಿಸಿದ್ದು. ಮಾರ್ಕ್ಸ್ ಹೇಳುತ್ತಾರೆ :
Religion is the general theory of the world,its encyclopaediac compendium, its logic in popular form, its enthusiasm, its moral sanction…
ಇನ್ನೂ ಮುಂದುವರೆದು: religious distress is at the same time the expression of real distress and the protest against real distress. Religion is sigh of the oppressed creature,heart of a heartless world, just as it is the spirit of the spiritless situation. It is the opium of people.
ಆದರೆ ನಮಗೆಲ್ಲಾ ಹೆಚ್ಚಾಗಿ ಗೊತ್ತಿರುವುದು ಕೇವಲ ಕೊನೆಯ ವಾಕ್ಯ. ಧರ್ಮ ಜನರ ಅಫೀಮು ಎಂಬುದು.
ಕೆಲವರು ಕೊನೆಯ ಎರಡು ವಾಕ್ಯಗಳು ಜೊತೆಯಾಗಿವೆ ಎಂಬುದನ್ನು ಗಮನಿಸಿದ್ದಾರೆ. ಆದರೆ ಧರ್ಮದ ಬಗೆಗಿನ ಅವರ ನಿಲುವು ಮೇಲಿನ ವಾಕ್ಯಗಳಲ್ಲಿ ಹೆಚ್ಚು ಸಮಗ್ರವಾಗಿ ಬಿಂಬಿತವಾಗುತ್ತದೆ.
ಈ ಮೇಲಿನ ವಿಚಾರದ ಸಂಕ್ಷಿಪ್ತ ಅರ್ಥ ಹೀಗಿದೆ: `ಧರ್ಮವೆಂಬುದು ಜನರ ನಡುವೆ ಜನಜನಿತವಾದ ವಿಚಾರ, ಅವರ ಚಿಂತನೆಗಳ ವಿಶ್ವಕೋಶ, ವಿಶ್ವದ ಬಗೆಗೆ ಅವರು ರೂಪಿಸಿಕೊಂಡ ಸಾಮಾನ್ಯ ತತ್ವ. ಜಗತ್ತಿನ ಉತ್ಸಾಹ, ಅದರ ನೈತಿಕ ಕಟ್ಟಲೆಗಳೂ ಆಗಿದೆ.
ನಿಜ ಬದುಕಿನ ಸಂಕಷ್ಟಗಳು ಧಾರ್ಮಿಕ ಸಂಕಟಗಳ ಅಭಿವ್ಯಕ್ತಿಯಾಗಿದೆ. ನಿಜ ಸಂಕಟಗಳ ವಿರುದ್ಧದ ಪ್ರತಿಭಟನೆಯೂ ಆಗಿದೆ. ಧರ್ಮ ದಮನಿತ ಜೀವಿಗಳ ನಿಟ್ಟುಸಿರು, ಹೃದಯವಿಲ್ಲದ ಜಗತ್ತಿನ ಹೃದಯ, ಉತ್ಸಾಹಹೀನವಾದ ಜಗತ್ತಿನ ಉತ್ಸಾಹ. ಅದು ಜನರ ಅಫೀಮು.’
ಧರ್ಮದ ಬಗ್ಗೆ ಮಾರ್ಕ್ಸ್ವಾದದ ತಿಳುವಳಿಕೆ ಎಂದರೆ ತಮ್ಮ ಬದುಕಿನ ಸಂಕಟಗಳ ಕಾರಣಗಳೇನು, ಎಲ್ಲಿಂದ ಹೇಗೆ ಈ ಸಂಕಟಗಳು ಎರಗುತ್ತವೆ ಎಂದು ಅರಿವಾಗದ ಮನುಷ್ಯ ಸಮುದಾಯ ಕೊನೆಗೆ ದೇವರ, ಧರ್ಮದ ಮೊರೆ ಹೋದರು. ವರ್ಗ ಸಮಾಜ ಉದಿಸಿದಂದಿನಿಂದ ಇಲ್ಲಿಯವರೆಗೆ ದುಡಿಯುವವರ ದಮನ, ಶೋಷಣೆಗಳು ಮುಂದುವರೆಯುತ್ತಿರುವವರೆಗೆ ಧರ್ಮ, ದೇವರ ಬಗೆಗಿನ ನಂಬಿಕೆಗಳು ಮುಂದುವರೆಯುತ್ತವೆ. ಕೇವಲ ಉಪನ್ಯಾಸಗಳು, ಧರ್ಮ, ದೇವರ ಖಂಡನೆಗಳಿಂದ ಜನರು ಇವುಗಳಲ್ಲಿಟ್ಟಿರುವ ನಂಬಿಕೆ ಮಾಯವಾಗುವುದಿಲ್ಲ. ಜನರಿಗೆ ತಮ್ಮ ಸಂಕಟಗಳ ಕಾರಣಗಳು ಅರಿವಾಗುವುದರ ಜೊತೆಗೆ ಕಾರಣಗಳ ವಿರುದ್ಧ, ತಮ ದಮನ, ಶೋಷಣೆಗಳನ್ನು ಎದುರಿಸಿ ನಿಂತಾಗ, ತಮ್ಮ ಮೇಲೆ ತಮಗೇ ನಂಬಿಕೆ, ಸ್ವ ವಿಶ್ವಾಸ ಬಲಿತಾಗ ದೇವರ, ಧರ್ಮದ ಬಗೆಗಿನ ನಂಬಿಕೆಗಳು ಮಾಯವಾಗುತ್ತವೆ.
ಜನರು ತಮ್ಮ ಸಂಕಟಗಳಿಗೆ ಕಾರಣ ರಾಜ ಪ್ರಭುತ್ವ ಎಂಬುದನ್ನು ಗುರುತಿಸಿ ದಂಗೆ ಏಳುವುದರ ಜೊತೆ ಜೊತೆಗೇ ದೇವರ, ಧರ್ಮದ ಬಗೆಗಿನ ನಂಬಿಕೆಗಳು ಕಳಚಿ ಬೀಳಲಾರಂಭಿಸಿದವು. ಯುರೋಪಿನ ಕೆಲವು ದೇಶಗಳಲ್ಲಿ ಬಹಳಷ್ಟು ಜನ ಸಾಮಾನ್ಯರು ಇವುಗಳಿಂದ ದೂರಾದರು. ರಾಜಪ್ರಭುತ್ವದ ವಿರುದ್ಧ ಸೆಣಸುತ್ತಿದ್ದ ಬಂಡವಾಳಶಾಹಿ ವರ್ಗಕ್ಕೂ ಧರ್ಮ, ದೇವರುಗಳು ಬೇಡವಾಗಿದ್ದವು.
ಆದರೆ ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲೂ ಶೋಷಣೆ ಬೇರೆ ರೂಪದಲ್ಲಿ ಮುಂದುವರೆಯಿತು. ರೈತರ ಭೂಮಿ ಅವರಿಂದ ಕಿತ್ತುಕೊಳ್ಳಲ್ಪಟ್ಟು ಕೂಲಿಕಾರರಾದರು. ಅನೇಕ ಇದ್ದಕ್ಕಿದ್ದಂತೆ ಬಡಿಯುವ ಬಿಕ್ಕಟ್ಟು ಕಾರ್ಮಿಕರನ್ನು ನಿರುದ್ಯೋಗಿಗಳಾಗಿ ಬೀದಿಗೆ ತಳ್ಳಿದರೆ, ಬಂಡವಾಳಿಗರಲ್ಲಿ ಕೆಲವರೂ ದಿನ ಬೆಳಗಾಗುವುದರೊಳಗೆ ಪಾಪಾರಾಗಿ ಬಿಡುವ ಸಂಭವ ದೇವರು, ಧರ್ಮದ ಬಗೆಗಿನ ನಂಬಿಕೆಗಳನ್ನು ಉಳಿಸಿದವು.
ಇಂತಹ ಬಿಕ್ಕಟ್ಟುಗಳ ಸಮಯದಲ್ಲಿ ಸಾಮಾನ್ಯ ದುಡಿಯುವವರ ಸಿಟ್ಟು ತಮ್ಮೆಡೆಗೆ ತಿರುಗದಂತೆ ದೇವರು, ಧರ್ಮಗಳ ವಿರುದ್ಧ ವೈಚಾರಿಕತೆಯನ್ನು ಪಸರಿಸುತ್ತಿದ್ದ ಬಂಡವಾಳಶಾಹಿ ಆಳುವ ವರ್ಗವೂ ತಮ್ಮ ರಕ್ಷಣೆಗಾಗಿ ಧರ್ಮ, ದೇವರುಗಳನ್ನು ಎಳೆತಂದರು.
ಹೀಗೆ ಜನರ ಸಂಕಟಗಳ ಕಾರಣಗಳು, ಮೂಲ ತಿಳಿಯದ ಪರಿಸ್ಥಿತಿಯೇ ದೇವರು, ಧರ್ಮವನ್ನು ತಮ್ಮ ಸಂಕಟಗಳ ಪರಿಹಾರಕ್ಕಾಗಿ ಮೊರೆ ಹೋಗುವಂತೆ ಮಾಡುತ್ತದೆ. ಈ ಸಂಕಟಗಳ ಮೂಲ ಕಾರಣ ತಿಳಿಯುವುದರ ಜೊತೆಗೆ ಅದರ ವಿರುದ್ಧ ಸೆಣಸಲು ಸಂಘಟಿತರಾದಷ್ಟೂ ಈ ನಂಬಿಕೆಗಳು ಕಳಚಿ ಬೀಳುತ್ತವೆ.
ಆದ್ದರಿಂದ ಜಾತ್ರೆ, ಯಾತ್ರೆಗಳಲ್ಲಿ ತೊಡಗುವ ಅನೇಕ ಸಂಕಷ್ಟಗಳಿಂದ ಬಳಲುತ್ತಿರುವ ಶೋಷಿತ ಜನರ ಜೊತೆ ಬೆರೆಯಬೇಕು. ಅವರ ಸಂಕಟಗಳ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಕಾರಣಗಳನ್ನು ವಿವರಿಸಬೇಕು. ಅವುಗಳ ಪರಿಹಾರಕ್ಕಾಗಿ ಹೋರಾಟಗಳನ್ನು ಸಂಘಟಿಸಬೇಕು. ಹಾಗೆಂದ ಕೂಡಲೇ ಸಾಮಾನ್ಯವಾಗಿ ಪ್ರಗತಿಪರರು, ವಿಚಾರ ವಾದಿಗಳು ಎನ್ನಿಸಿಕೊಂಡವರು ಮಾಡುವಂತೆ ಅವರ ಧಾರ್ಮಿಕ ನಂಬಿಕೆಗಳ ವಿರುದ್ಧ ಮಾತಾಡತೊಡಗಬೇಕು, ಹಂಗಿಸಬೇಕು ಎಂದಾಗುವುದಿಲ್ಲ. ಮೊದಲು ಅವರ ಸಂಕಟಗಳ ಕಾರಣವನ್ನು ವಿವರಿಸುವುದು, ಜೊತೆಗೆ ಹೋರಾಟಗಳನ್ನು ಸಂಘಟಿಸುವುದು, ಹೋರಾಟ ನಿರತ ಶೋಷಿತರ ನಡುವೆ ನಿಜ ಕಾರಣಗಳ ಜೊತೆಗೆ ಅವರ ಮೇಲೆ ಹೇರಿದ ಧಾರ್ಮಿಕ ಭ್ರಮಾ ಸಮುಚ್ಚಯದ ಬಗ್ಗೆ ಅರಿವು ಮೂಡಿಸತೊಡಗಬೇಕು. ಜಾತ್ರೆ, ಯಾತ್ರೆಗಳ ಜನರ ನಡುವೆ ಬೆರೆಯಬೇಕು ಎಂದ ಕೂಡಲೇ ಅವರಂತೆಯೇ ಧಾರ್ಮಿಕ ಆಚರಣೆಗಳನ್ನು ಅನುಸರಿಸತೊಡಗಿದರೆ ದೇವರು, ಧರ್ಮಗಳ ಬಗ್ಗೆ ಜನರ ನಂಬಿಕೆ ಗಾಢವಾಗಲು ನಾವೇ ಸಹಾಯ ಮಾಡಿದಂತಾಗುತ್ತದೆ. ಆದ್ದರಿಂದ ಧಾರ್ಮಿಕ ಆಚರಣೆಗಳಿಂದ ಪ್ರಜ್ಞಾಪೂರ್ವಕವಾಗಿ ದೂರ ಇರಬೇಕು.
ಅದೇ ಸಮಯದಲ್ಲಿ ಧಾರ್ಮಿಕ ಆಚರಣೆಗಳು, ದೇವರಲ್ಲಿ ನಂಬಿಕೆಯನ್ನು ಒಳಗೊಳ್ಳದ ಹಲವು ಅಂಶಗಳು, ಜನರ ಬದುಕಿನ, ಉಲ್ಲಾಸದ ಹಲವು ಅಂಶಗಳು ಜಾತ್ರೆಗಳಲ್ಲಿರುತ್ತವೆ. ಅವುಗಳಲ್ಲಿ ಪಾಲ್ಗೊಳ್ಳುವುದು ಅಂತಹವುಗಳನ್ನು ಮುಂದೆ ನಿಂತು ಸಂಘಟಿಸುವುದು ಅಪೇಕ್ಷಣೀಯ.
ಬಂಗಾಳದಲ್ಲಿ ದಸರಾ ಸಮಯದ ದುರ್ಗಾ ಪೂಜೆ ಬಹು ಪ್ರಸಿದ್ಧಿ. ಜನರು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಹಾಗೆಯೇ ಕೇರಳದಲ್ಲಿ ಓಣಂ ಹಬ್ಬದ ಸಮಯದಲ್ಲಿ.
ಈ ಸಮಯದಲ್ಲಿ ಪಕ್ಷದ ಸದಸ್ಯರು, ಘಟಕಗಳು ಜನರಿಗೆ ಉಲ್ಲಾಸ ತರುವ ಚಟುವಟಿಕೆಗಳು, ಅವರು ಹಬ್ನ, ಜಾತ್ರೆಗಳ ಆಚರಣೆಗೆ ಸಹಾಯವಾಗುವ ಚಟುವಟಿಕೆಗಳು ಮುಂತಾದವುಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಾರೆ. ಅದೇ ಸಮಯದಲ್ಲಿ ಪ್ರಗತಿಪರ ವಿಚಾರಗಳನ್ನು ಪಸರಿಸುವ ಮನರಂಜನಾ ಕಾರ್ಯಕ್ರಮಗಳು, ಸಾಹಿತ್ಯ ಮಾರಾಟ ಮುಂತಾದವನ್ನು ಸಂಘಟಿಸುತ್ತಾರೆ.