ತೀವ್ರ ದಾಳಿಗೆ ಒಳಗಾಗಿರುವ ಮಾಧ್ಯಮ – ಪತ್ರಿಕಾ ಸ್ವಾತಂತ್ರ್ಯ ರಕ್ಷಣೆ ಪ್ರಜಾಪ್ರಭುತ್ವವಾದಿಗಳ ಹೊಣೆ

ಪ್ರಕಾಶ್ ಕಾರಟ್

Prakash Karat
ಪ್ರಕಾಶ್ ಕಾರಟ್

ಆದಾಯ ತೆರಿಗೆ ಇಲಾಖೆ, ಅನುಷ್ಠಾನ ನಿರ್ದೇಶನಾಲಯ (ಇ.ಡಿ.) ಮತ್ತಿತರ ಸಂಸ್ಥೆಗಳನ್ನು ಇಂಥ ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ ನೀಡಲು ಬಳಸಲಾಗುತ್ತಿದೆ. ಸರ್ಕಾರದ ನಿಯಂತ್ರಣ ಹೇರುವ ಪ್ರಯತ್ನಗಳು ಹೆಚ್ಚಿದ್ದು ಎಲ್ಲ ರೀತಿಯ ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್ ಹೇರುವ ಯತ್ನದತ್ತ ವಿಸ್ತರಣೆಗೊಂಡಿದೆ. ಮಾಹಿತಿ ತಂತ್ರಜ್ಞಾನ ಕಾನೂನು ಅನ್ವಯ 2021ರಲ್ಲಿ ಹೊಸ ನಿಯಮಗಳನ್ನು ಮಾಡಲಾಗಿದೆ. ಡಿಜಿಟಲ್ ನ್ಯೂಸ್ ಮೀಡಿಯಾ ವೇದಿಕೆಗಳ ಸುದ್ದಿಗಳ ವಿಚಾರ (ಕಂಟೆಂಟ್) ಏನಿರಬೇಕೆಂಬುದನ್ನು ವಾರ್ತೆ ಮತ್ತು ಪ್ರಸಾರ ಸಚಿವಾಲಯವೇ ಡಿಕ್ಟೇಟ್ ಮಾಡಲು ಈ ನಿಯಮಗಳು ಅವಕಾಶ ನೀಡುತ್ತವೆ. ಆಕ್ಷೇಪಾರ್ಹ ಎಂದು ಕಂಡುಬಂದ ಕಂಟೆಂಟ್‌ಗಳನ್ನು ಡಿಲೀಟ್ ಮಾಡುವ ಅಧಿಕಾರವನ್ನು ಅದು ಸರ್ಕಾರಕ್ಕೆ ನೀಡಿದೆ.

ವಿಶ್ವ ಸಂಸ್ಥೆಯ ಘೋಷಣೆಯನ್ವಯ ಮೇ 3ರಂದು `ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ’ ಆಚರಿಸಲಾಗಿದೆ. ಕಾಕತಾಳೀಯ ಎನ್ನುವಂತೆ, `ಗಡಿಯಿಲ್ಲದ ವರದಿಗಾರರು’ (ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್) ಸಂಘಟನೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಪ್ರಕಟಿಸಿದೆ. ಈ ಇಂಡೆಕ್ಸ್‌ ನಲ್ಲಿ (ಸೂಚ್ಯಂಕ) 2021ರಲ್ಲಿ ಭಾರತದ ಸ್ಥಾನ 180 ದೇಶಗಳ ಪೈಕಿ 142 ಆಗಿತ್ತು. 2016ರಲ್ಲಿ 133 ಇದ್ದದ್ದು 2021ರಲ್ಲಿ 142ಕ್ಕೆ ಕುಸಿದಿದೆ. ಮೋದಿ ಸರ್ಕಾರದ ಅಡಿಯಲ್ಲಿ ಮಾಧ್ಯಮ ಸ್ವಾತಂತ್ರ್ಯ ನಿಧಾನವಾಗಿ ಕುಸಿಯುತ್ತಾ ಹದಗೆಡುತ್ತಿರುವುದನ್ನು ಈ ಇಂಡೆಕ್ಸ್‌ ನ ರ‍್ಯಾಂಕಿಂಗ್ ದಾಖಲಿಸಿದೆ.

`ಪತ್ರಕರ್ತರ ವಿರುದ್ಧದ ಹಿಂಸಾಚಾರ, ಮಾಧ್ಯಮದ ರಾಜಕೀಯ ಪಕ್ಷಪಾತಿತನ ಹಾಗೂ ಮಾಧ್ಯಮ ಮಾಲಿಕತ್ವದ ಕೇಂದ್ರೀಕರಣ’ – ಇವುಗಳಿಂದಾಗಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಬಿಕ್ಕಟ್ಟಿನಲ್ಲಿದೆ ಎಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಅಭಿಪ್ರಾಯ ಪಟ್ಟಿದೆ.

ಪತ್ರಿಕಾ ಸ್ವಾತಂತ್ರ್ಯ ಮತ್ತು ಸ್ವತಂತ್ರ ಮಾಧ್ಯಮದ ಕಾರ್ಯ ನಿರ್ವಹಣೆ ಮೋದಿ ಆಡಳಿತದಡಿಯಲ್ಲಿ ತೀವ್ರ ದಾಳಿಗೆ ಒಳಗಾಗಿದೆ. ಪ್ರಭುತ್ವ, ಅಂದರೆ ಸರ್ಕಾರ ಮಾಧ್ಯಮವನ್ನು ಹೆದರಿಸುವುದು ಒಂದು ಪರಿಪಾಠವೇ ಆಗಿಬಿಟ್ಟಿದೆ. ಪತ್ರಕರ್ತರು ಮತ್ತು ಸಂಪಾದಕರ ವಿರುದ್ಧ ಸುಳ್ಳು ಕೇಸ್‌ಗಳನ್ನು ಹೂಡಲಾಗುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ದೆಹಲಿಯಲ್ಲಿ ಪತ್ರಕರ್ತರು ಮತ್ತು ಮಾಧ್ಯಮದ ವಿರುದ್ಧ ಕೇಸ್ ದಾಖಲಿಸಿ ಅವರು ಸಂಬಂಧಪಟ್ಟ ರಾಜ್ಯಗಳ ನ್ಯಾಯಾಲಯಗಳಲ್ಲಿ ಹಾಜರಾಗುವಂತೆ ಮಾಡುವುದು ಸರ್ವೇಸಾಮಾನ್ಯವಾಗಿದೆ. ಅಧಿಕಾರದಲ್ಲಿರುವವರಿಗೆ ಅಪಥ್ಯವಾದ ವರದಿಗಳನ್ನು ಬರೆಯುವ ವರದಿಗಾರರ ವಿರುದ್ಧ ದೇಶದ್ರೋಹದ ಕೇಸ್‌ಗಳನ್ನು ದಾಖಲಿಸಲಾಗುತ್ತಿದೆ. ಕರಾಳವಾದ ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು(ಯುಎಪಿಎ) ಕೂಡ ಪತ್ರಕರ್ತರ ವಿರುದ್ಧ ಬಳಕೆಯಾಗುತ್ತಿರುವುದು ಕಳವಳದ ವಿಚಾರವಾಗಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಫಹಾದ್ ಷಾ ಮತ್ತು ಉತ್ತರ ಪ್ರದೇಶದಲ್ಲಿ ಸಿದ್ದಿಕ್ ಕಪ್ಪನ್ ವಿರುದ್ಧದ ಪ್ರಕರಣಗಳು ಇದಕ್ಕೆ ಉದಾಹರಣೆಗಳು. ಈ ಇಬ್ಬರೂ ಪತ್ರಕರ್ತರು ಇನ್ನೂ ಸ್ಥಾನಬದ್ಧತೆಯಡಿ ಜೈಲಿನಲ್ಲಿದ್ದಾರೆ. ವಿಶೇಷವಾಗಿ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕೋಮುವಾದಿ ಉಗ್ರಗಾಮಿ ಗ್ಯಾಂಗ್‌ಗಳು ಮಾಧ್ಯಮ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ನಡೆಸಿದ ಪ್ರಕರಣಗಳೂ ವರದಿಯಾಗಿವೆ.

ಮಾಧ್ಯಮವನ್ನು ಬೆದರಿಸುವ ಸರ್ಕಾರದ ಪ್ರಯತ್ನಗಳು, ಸರ್ಕಾರದ ಅಣತಿಯನ್ನು ಪಾಲಿಸದ ಮಾಧ್ಯಮ ಸಂಸ್ಥೆಗಳ ಮೇಲೆ ಆರ್ಥಿಕ ಅಪರಾಧಗಳ ಪ್ರಕರಣಗಳನ್ನು ದಾಖಲಿಸುವ ಸ್ವರೂಪ ಪಡೆದುಕೊಳ್ಳುತ್ತಿದೆ.

get-media-coverage-India

ಆದಾಯ ತೆರಿಗೆ ಇಲಾಖೆ, ಅನುಷ್ಠಾನ ನಿರ್ದೇಶನಾಲಯ(ಇ.ಡಿ.) ಮತ್ತಿತರ ಸಂಸ್ಥೆಗಳನ್ನು ಇಂಥ ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ ನೀಡಲು ಬಳಸಲಾಗುತ್ತಿದೆ. ಸರ್ಕಾರದ ನಿಯಂತ್ರಣ ಹೇರುವ ಪ್ರಯತ್ನಗಳು ಹೆಚ್ಚಿದ್ದು ಎಲ್ಲ ರೀತಿಯ ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್ ಹೇರುವ ಯತ್ನದತ್ತ ವಿಸ್ತರಣೆಗೊಂಡಿದೆ. ಡಿಜಿಟಲ್ ಸುದ್ದಿ ವೇದಿಕೆಗಳು ಹೆಚ್ಚಿರುವುದರಿಂದ ಮಾಹಿತಿ ತಂತ್ರಜ್ಞಾನ ಕಾನೂನು ಅನ್ವಯ 2021ರಲ್ಲಿ ಹೊಸ ನಿಯಮಗಳನ್ನು ಮಾಡಲಾಗಿದೆ. ಡಿಜಿಟಲ್ ನ್ಯೂಸ್ ಮೀಡಿಯಾ ವೇದಿಕೆಗಳ ಸುದ್ದಿಗಳ ವಿಚಾರ (ಕಂಟೆಂಟ್) ಏನಿರಬೇಕೆಂಬುದನ್ನು ವಾರ್ತೆ ಮತ್ತು ಪ್ರಸಾರ ಸಚಿವಾಲಯವೇ ಡಿಕ್ಟೇಟ್ ಮಾಡಲು ಈ ನಿಯಮಗಳು ಅವಕಾಶ ನೀಡುತ್ತವೆ. ಆಕ್ಷೇಪಾರ್ಹ ಎಂದು ಕಂಡುಬಂದ ಕಂಟೆಂಟ್‌ಗಳನ್ನು ಡಿಲೀಟ್ ಮಾಡುವ ಅಧಿಕಾರವನ್ನು ಅದು ಸರ್ಕಾರಕ್ಕೆ ನೀಡಿದೆ. ಇದೆಲ್ಲದರ ಜೊತೆಗೆ, ಮಾಧ್ಯಮದ ಕತ್ತು ಹಿಸುಕಲು ಸುದ್ದಿ ವಾಹಿನಿಗಳನ್ನು ನಿರ್ದಿಷ್ಟ ಅವಧಿಗೆ ಅಥವಾ ಕಾಯಂ ಆಗಿ ನಿಷೇಧಿಸುವ ಕ್ರಮಗಳಿಗೂ ಸರ್ಕಾರ ಮುಂದಾಗಿದೆ.

ರಾಜಿ ಮನೋಭಾವ

ಮಾಧ್ಯಮದ ಮಾಲಿಕತ್ವದ ಕಾರಣಗಳಿಂದಾಗಿ ಮಾಧ್ಯಮದ ಸ್ವಾತಂತ್ರ್ಯ ಹಾಗೂ ವಿಶ್ವಾಸಾರ್ಹತೆ ಕೂಡ ರಾಜಿಗೆ ಒಳಗಾಗುತ್ತಿವೆ. ಇಂದಿನ ಬಹುತೇಕ ಮಾಧ್ಯಮಗಳು ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಅಥವಾ ಉದ್ಯಮಿಗಳ ಮಾಲಿಕತ್ವದಲ್ಲಿವೆ. ಕೆಲವು ಅಪವಾದಗಳನ್ನು ಹೊರತುಪಡಿಸಿ, ವಿಶೇಷವಾಗಿ ಇಲೆಕ್ಟ್ರಾನಿಕ್ ಮಾಧ್ಯಮದವರನ್ನು ಮೋದಿ ಸರ್ಕಾರ ತನ್ನ ಚೀರ್‌ಲೀಡರ್‌ಗಳಂತೆ ವರ್ತಿಸಲು ಆಯ್ಕೆ ಮಾಡಿಕೊಂಡಿದೆ. ಆ ಪೈಕಿ ಕೆಲವು ವಾಹಿನಿಗಳು ಹಿಂದುತ್ವ ಕೋಮುವಾದಿ ಅಜೆಂಡಾವನ್ನು ತೀವ್ರ ರೀತಿಯಲ್ಲಿ ಪ್ರಚಾರ ಮಾಡಲು ಹೊರಟಿರುವುದು ಇನ್ನೂ ತುಂಬಾ ಕೆಡುಕಿನ ಸಂಗತಿಯಾಗಿದೆ. ಇದು ಸಮೂಹ ಮಾಧ್ಯಮದ ಮೇಲೆ, ಅದರಲ್ಲೂ ವಿಶೇಷವಾಗಿ ಹಿಂದಿ ಮಾಧ್ಯಮದ ಮೇಲೆ ಹಾನಿಕಾರಕ ಪರಿಣಾಮ ಬೀರಿದೆ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ವಹಿಸಬೇಕಾದ ಪಾತ್ರದ ವಿಡಂಬನೆಯನ್ನು ನಾವಿಂದು ನೋಡುತ್ತಿದ್ದೇವೆ. ಆಡಳಿತಗಾರರ ಬಹುಪರಾಕು ಹೇಳುವ ಜೊತೆ ಮಾಧ್ಯಮದ ಗಣನೀಯ ವಿಭಾಗದವರು ಕೋಮುವಾದಿ ಪ್ರಚಾರದ ವಾಹಕರಾಗಿದ್ದಾರೆ. ದೆಹಲಿಯ ಜಹಾಂಗಿರ್‌ಪುರಿಯಲ್ಲಿ ಬುಲ್ಡೋಜರ್‌ಗಳಿಂದ ನಾಶ ಮಾಡುವ ಕೇಂದ್ರ ಸರ್ಕಾರದ ಕಾರ್ಯದ ಬಗ್ಗೆ ಹಿಂದಿ ಸುದ್ದಿ ವಾಹಿನಿಗಳು ನಡೆದುಕೊಂಡ ರೀತಿಯೇ ಇದಕ್ಕೆ ಉದಾಹರಣೆಯಾಗಿದೆ.

ಪ್ರಾಮಾಣಿಕರಿಗೆ ಸಂಕಷ್ಟ

ನ್ಯಾಯಸಮ್ಮತ ಹಾಗೂ ವಸ್ತುನಿಷ್ಠ ವರದಿ ಮಾಡುವ ಹಾಗೂ ಸಂಪಾದಕೀಯ ವಿಭಾಗದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಪತ್ರಕರ್ತರು ಹಲವು ಅಡ್ಡಿಆತಂಕಗಳನ್ನು ಎದುರಿಸಬೇಕಾಗಿದೆ. ಇಡೀ ಪ್ರಭುತ್ವದ ಶಕ್ತಿಯೇ ಇಂಥ ಪತ್ರಕರ್ತರ ವಿರುದ್ಧ ನಿಲ್ಲುತ್ತದೆ.

ಮಾಧ್ಯಮ ಹಕ್ಕುಗಳ ರಕ್ಷಣೆಗೆ ಇರುವ ನ್ಯಾಯಾಂಗದ ಮಧ್ಯಪ್ರವೇಶದ ಅವಕಾಶ ಕೂಡ ಸೀಮಿತವಾಗಿದೆ. ಕೆಲವು ಪ್ರಕರಣಗಳಲ್ಲಿ ಬಂಧನ ಹಾಗೂ ದೇಶದ್ರೋಹ ಆರೋಪಗಳ ಮೇಲೆ ಕಾನೂನು ಕ್ರಮ ಎದುರಿಸುತ್ತಿರುವ ಪತ್ರಕರ್ತರಿಗೆ ನ್ಯಾಯಾಲಯಗಳಿಂದ ಪರಿಹಾರ ಸಿಕ್ಕಿದೆಯಾದರೂ ಪತ್ರಕರ್ತರ ವಿರುದ್ಧ ಯುಎಪಿಎ ಬಳಕೆ ಅಥವಾ ಮಾಧ್ಯಮ ಕಂಟೆಂಟ್‌ನಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಯುವ ವಿಚಾರದಲ್ಲಿ  ಒಟ್ಟಾರೆಯಾಗಿ ಉನ್ನತ ನ್ಯಾಯಾಂಗವು ವಿಫಲವಾಗಿದೆ. ಅದು ಸೂಕ್ತವಾಗಿ ಮಧ್ಯಪ್ರವೇಶ ಮಾಡಿಲ್ಲ.

ಮಾಧ್ಯಮದ ಮೇಲಿನ ಆಕ್ರಮಣವು ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ವಿಸ್ತೃತ ಹಲ್ಲೆಯ ಭಾಗವಾಗಿದೆ. ಮಾಧ್ಯಮ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಹಕ್ಕುಗಳ ರಕ್ಷಣೆಯು ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಹೋರಾಟದ ಭಾಗವಾಗಬೇಕು. ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಪ್ರತಿಯೊಂದು ಹಲ್ಲೆಯನ್ನು ಎಲ್ಲ ಪ್ರಜಾಪ್ರಭುತ್ವವಾದಿ ಶಕ್ತಿಗಳು ವಿರೋಧಿಸಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *