2018-20 ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆಂದು ಮೀಸಲಿಟ್ಟ ಮೊತ್ತದಲ್ಲಿ 7885 ಕೋಟಿ ರೂ.ಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿರುವುದು ಬಿಜೆಪಿ ಸರ್ಕಾರದ ದುರಾಡಳಿತವನ್ನು ತೆರೆದಿಟ್ಟಿದೆ. ಶತಮಾನಗಳಿಂದಲೂ ತುಳಿತಕ್ಕೊಳಗಾಗಿ ಅತ್ಯಂತ ಅಮಾನವೀಯ, ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಬದುಕುತ್ತಿವೆ. ಇತರೆ ಜನ ವಿಭಾಗಗಳೊಂದಿಗೆ ಸಮಾನತೆ ಸಾಧಿಸಲು ಸಾಮಾಜಿಕ ನ್ಯಾಯದ ಮೂಲಕ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯಬೇಕು ಎನ್ನುವ ಮೂಲ ಆಶಯದಿಂದಲೂ ಈ ಸಮುದಾಯಗಳನ್ನು ವಂಚಿಸಿ ದ್ರೋಹ ಬಗೆದಿದೆ.
ಸಾಮಾಜಿಕ, ಆರ್ಥಿಕ ಅಸಮಾನತೆ ಮತ್ತು ತಾರತಮ್ಯಗಳನ್ನು ಗಮನದಲ್ಲಿರಿಸಿ ಸಂವಿಧಾನದ ಆಶಯಗಳ ನಿಜ ಜಾರಿಗಾಗಿ ಶೋಷಿತ ಸಮುದಾಯಗಳು ತಲೆ ಎತ್ತಿ ನಿಲ್ಲಬೇಕಾದರೆ ವಿಶೇಷ ಗಮನ ಮತ್ತು ವಿಶಿಷ್ಟ ಕಾರ್ಯಯೋಜನೆ ಅತ್ಯವಶ್ಯಕ ಎಂಬ ಕೇಂದ್ರದ ಆಯೋಗಗಳ ಸಲಹೆಯಂತೆ 70 ರ ದಶಕದಲ್ಲಿ ಎಸ್.ಸಿ.ಎಸ್.ಪಿ ಮತ್ತು1975 ರಲ್ಲಿ ಟಿ.ಎಸ್.ಪಿ. ಹೆಸರಿನಲ್ಲಿ ವಿಶೇಷ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿತು. ಇದನ್ನು ಅನುಸರಿಸಿ ಪ್ರತಿ ಬಜೆಟ್ ನಲ್ಲಿ ಮೀಸಲಿಟ್ಟ ವಿಶೇಷ ಅಭಿವೃದ್ಧಿ ನಿಧಿ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿತ್ತು ಮತ್ತು ಬಜೆಟಿನಲ್ಲಿ ಇಟ್ಟಿರುವ ಮೊತ್ತದ ಅಲ್ಪ ಭಾಗ ಮಾತ್ರ ಖರ್ಚಾಗಿ ಉಳಿದ ಹಣ ಮತ್ತೆ ಸರ್ಕಾರದ ಖಜಾನೆಗೆ ಹಿಂತಿರುಗಿ ಬರುತ್ತಿತ್ತು. ಯೋಜನೆ ಆರಂಭಗೊಂಡ ಹಲವು ವರ್ಷಗಳಲ್ಲಿ ಮೀಸಲಿಟ್ಟ ಕಡಿಮೆ ಇದ್ದ ಮೊತ್ತ 2013 ರ ನಂತರದಲ್ಲಿ ಗಣನೀಯವಾಗಿ ಹೆಚ್ಚಳವನ್ನು ಕಂಡಿತು. ವಾಸ್ತವದಲ್ಲಿ ಈ ಸಮುದಾಯಗಳಿಗೆಂದು ಮೀಸಲಿಟ್ಟ ಹಣ ಪೂರ್ತಿಯಾಗಿ ದಕ್ಕದೆ ಕೇವಲ ಕನ್ನಡಿಯೊಳಗಿನ ಗಂಟಾಗಿ ಉಳಿದಿದ್ದೇ ಸತ್ಯ. ಆದಿವಾಸಿ, ದಲಿತ ಹಾಗೂ ಪ್ರಜಾಸತ್ತಾತ್ಮಕ ಜನಚಳುವಳಿಗಳ ತೀವ್ರ ಆಕ್ಷೇಪದಿಂದ ಹಂಚಿಕೆಯಾದ ಹಣ ಯಾವುದೇ ಕಾರಣಕ್ಕೆ ಹಿಂದೆ ವಾಪಸು ಆಗಬಾರದು ಮತ್ತು ಅದನ್ನು ಈ ಉದ್ದೇಶಕ್ಕೆ ಮಾತ್ರವೇ ಮರುಬಳಕೆ ಮಾಡುವಂತೆ ಒತ್ತಡ ಹೇರಲಾಗಿತ್ತು.
ಇಂಥದೊಂದು ಕಾಯ್ದೆಯನ್ನು ರೂಪಿಸಬೇಕೆಂದು ಅವಿಭಜಿತ ಆಂಧ್ರಪ್ರದೇಶದಲ್ಲಿ ಸಿಪಿಐ(ಎಂ)ನ ಪೊಲಿಟ್ ಬ್ಯೂರೋ ಸದಸ್ಯ ಬಿ.ವಿ.ರಾಘವಲು ರವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹದ ಬಳಿಕ ಅಲ್ಲಿ ಕಾಯ್ದೆಯೊಂದನ್ನು ರೂಪಿಸಿ ಜಾರಿಗೆ ತಂದದ್ದು ಉಲ್ಲೇಖನೀಯ. ಅದರಂತೆ ಕರ್ನಾಟಕದಲ್ಲಿಯೂ 2013 ರಲ್ಲಿ ಬೆಳಗಾವಿ ಅಧಿವೇಶನದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಕರ್ನಾಟಕ ಸರ್ಕಾರ ಅಂತಹ ಕಾಯ್ದೆಯೊಂದನ್ನು ರೂಪಿಸಿತು. ಅದರಂತೆ ಖರ್ಚಾಗದೆ ಉಳಿದ ಹಣ ಮುಂದಿನ ಸಾಲಿನ ಬಜೆಟ್ ಜೊತೆಯಲ್ಲಿ ಬಳಕೆಗೆ ಲಭ್ಯವಾಗುವಂತೆ, ಮೀಸಲಾದ ಹಣ ಖರ್ಚಾಗದಿದ್ದಲ್ಲಿ ಅದಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವುದು ಮತ್ತು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವ ಅಧಿಕಾರ ಇರುವ, ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಬಜೆಟ್ ನಲ್ಲಿ ಹಣ ತೆಗೆದಿಡುವ ಮಹತ್ವದ ಅಂಶಗಳನ್ನು ಕಾಯ್ದೆ ಒಳಗೊಂಡಿದೆ.
ಹೀಗಿರುವಾಗಲೂ ಪ್ರತಿ ಆಯವ್ಯಯದ ಸಾಲಿನ ವರ್ಷದಲ್ಲಿ ಸಾವಿರಾರು ಕೋಟಿ ಖರ್ಚಾಗದ ಮೊತ್ತ ಉಳಿದು 2020 -21ರ ಸಾಲಿನಲ್ಲಿ ಅಂತಹ ಮೊತ್ತ 10,000 ಕೋಟಿಗೂ ಮೀರಿ ಮತ್ತೇ ಹೊಸ ಬಜೆಟ್ ನಲ್ಲಿಸೇರಿತ್ತು. ಕಳೆದ ವರ್ಷದ ಬಜೆಟ್ ಹಣವೂ ಸೇರಿದಂತೆ ಈ ಯೋಜನೆ 30 ಸಾವಿರ ಕೋಟಿ ರೂ.ಗಳನ್ನು ದಾಟಿತ್ತು.ಈ ಭಾರಿ ಸರ್ಕಾರದ ಕಾಳಜಿ ಮತ್ತು ಕಾರ್ಯವೈಖರಿಯ ವೈಫಲ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ. ಇಷ್ಟಾದರೂಸರ್ಕಾರದ ಯಾವೊಬ್ಬ ಅಧಿಕಾರಿಯ ಮೇಲೆ ಕಾನೂನು ಕ್ರಮಗಳನ್ನೇಕೆ ಜರುಗಿಸಿಲ್ಲ? ಈಗ ದೊರೆತ ಮಾಹಿತಿಯಂತೆ ಖರ್ಚು ಮಾಡಿದ ಹಣದಲ್ಲಿಯೇ 7885 ಕೋಟಿ ರೂ.ಗಳನ್ನು ರಸ್ತೆ, ಸೇತುವೆ, ಕುಡಿಯುವ ನೀರು, ನೀರಾವರಿ ಮುಂತಾದ ನಾಗರಿಕ ಸೌಲಭ್ಯಗಳನ್ನು ಒದಗಿಸಲೆಂದು ದುರ್ಬಳಕೆ ಮಾಡಲಾಗಿದೆ. ಈ ಹಣ ಬಹುತೇಕ ದಲಿತ, ಆದಿವಾಸಿಗಳ ನೆಲೆಗಳಿರದ ಪ್ರದೇಶಗಳಲ್ಲಿಯೇ ವೆಚ್ಚವಾಗಿರುತ್ತದೆ ಕೂಡ. ಇಂತಹ ದುರುಪಯೋಗಕ್ಕೆ ಮುಕ್ತಾವಕಾಶ ಕಲ್ಪಿಸುವಂತೆ ಈ ಕಾಯ್ದೆಯಲ್ಲಿ 7(ಡಿ) ಎನ್ನುವ ಕಳ್ಳ ಕಿಂಡಿಯನ್ನು ಸರ್ಕಾರ ಇಟ್ಟಿದೆ. ಅದರ ಮೂಲಕ ಹಸಿದ ಈ ಸಮುದಾಯಗಳ ಅನ್ನಕ್ಕೆ ಕೈಹಾಕಿ ದೋಚಲು ಅವಕಾಶ ಮಾಡಿದೆ. ಕಾಯ್ದೆಯ ಈ ಅಂಶಕ್ಕೆ ತಿದ್ದುಪಡಿಯನ್ನು ತರಬೇಕೆಂದು ಪ್ರಬಲ ಆಗ್ರಹವಿದ್ದರೂ ಸರ್ಕಾರ ಪ್ರಜ್ಞಾಪೂರ್ವಕವಾಗಿಯೇ ನಿರ್ಲಕ್ಷಿಸುತ್ತಿದೆ.
ಬಿಜೆಪಿ ಸರ್ಕಾರ ಮಾಡಿರುವ ವಂಚನೆಯ ಪ್ರಮಾಣವನ್ನು ಗಮನಿಸಿದರೆ ಯಾಕೆ ತಿದ್ದುಪಡಿಯನ್ನು ತಂದು ಬಿಗಿ ಕ್ರಮ ವಹಿಸಲು ಹಿಂದೇಟು ಹಾಕಲಾಗುತ್ತಿದೆ ಎನ್ನುವುದು ನಿಚ್ಚಳವಾಗಿ ಅರ್ಥವಾಗುತ್ತದೆ. ಇದು ಕೇವಲ ಬಿಜೆಪಿ ಮಾತ್ರವಲ್ಲ ಹಿಂದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇದೇ ನೀತಿಯನ್ನು ಅನುಸರಿಸುತ್ತಾ ಬಂದಿರುವುದು ಅವುಗಳ ಪಾಳೇಗಾರಿ ಹಿತಾಸಕ್ತಿಗಳ ಪರಿಣಾಮವಾಗಿದೆ. ಅತ್ಯಂತ ಕಡಿಮೆ ಪ್ರತಿರೋಧ ಒಡ್ಡುವ ಎಸ್.ಸಿ, ಎಸ್.ಟಿ, ಅಲೆಮಾರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಎಂದರೆ ಯಾಮಾರಿಸುವ ಪ್ರಚಾರದ `ತುಟ್ಟಿ ಸೇವೆ’ ಎಂದೇ ಈ ಪಕ್ಷಗಳು ಭಾವಿಸಿವೆ.
ಸಾಮಾನ್ಯವಾಗಿ, ಎಸ್ಸಿ ಮತ್ತು ಎಸ್ಟಿ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಮುದಾಯಗಳ ನಡುವೆ ಈ ವಿಶೇಷ ನಿಧಿಯೂ ಸಮನಾಗಿ ಹಂಚಿಕೆ ಆಗುತ್ತದೆ ಎನ್ನುವುದು ಕೂಡ ಹುಸಿಯಾಗಿದೆ. ಬಹುತೇಕ ಆದಿವಾಸಿ ಮತ್ತು ಅತ್ಯಂತ ದುರ್ಬಲ ದಲಿತ, ಅಲೆಮಾರಿ ವಿಭಾಗಗಳು ಇಂತಹ ವಿಶೇಷ ನಿಧಿಯ ಒಂದೆರಡು ಹನಿಗಳನ್ನು ಬಳಸಿಕೊಳ್ಳಲು ಅಸಮರ್ಥವಾಗಿವೆ. ಪರಿಣಾಮವಾಗಿ, ಈಗಲೂ ಅತ್ಯಂತ ದೀನ ಸ್ಥಿತಿಯಲ್ಲಿಯೇ ಬದುಕುತ್ತಿವೆ. ಸೋಲಿಗರು ಪಣಿಯ, ಪಂಜರಿ, ಎರವರು, ಜೇನು ಕುರುಬರು,ಬೆಟ್ಟ ಕುರುಬರು,ಕೊರಗರು ಹಸಲರು ಮುಂತಾದ ಬಹಳಷ್ಟು ಸಮುದಾಯಗಳು ಒಂದರ ನಂತರ ಮತ್ತೊಂದರಂತೆ ಅಳಿವಿನಂಚಿಗೆ ಸರಿಯುತ್ತಿವೆ. ಈ ಸಮುದಾಯಗಳ ಕಲ್ಯಾಣಕ್ಕೆಂದು ಮೀಸಲಿಟ್ಟ ಸಾವಿರಾರು ಕೋಟಿ ಹಣ ಅವರ ಮೂಲಭೂತ ಸಮಸ್ಯೆಗಳ ಪರಿಹಾರದ ನೆರವಿಗೆ ಬರುತ್ತಿಲ್ಲ.
ಒಂದು ವೇಳೆ ಈ ಸಮುದಾಯಗಳ ಬದುಕಿನಲ್ಲಿ ಪರಿವರ್ತನೆ ತರಲು ಹಣವನ್ನು ಬಳಸುವುದೆಂದರೆ ಅವರಿಗೆ ಮುಖ್ಯವಾಗಿ ಭೂಮಿ, ನಿವೇಶನ, ವಸತಿ ಮತ್ತು ಶಿಕ್ಷಣ ಹಾಗೂ ನಾಗರಿಕ ಸೌಲಭ್ಯಗಳು ಸಿಗುವಂತಾಗಬೇಕು. ಜೊತೆಗೆ ಪ್ರಗತಿಗೆ ಸಹಾಯಕವಾಗುವಂತೆ ಇತರೆ ಯೋಜನೆಗಳೂ ಜಾರಿಯಾಗಬೇಕು. ಅರಣ್ಯ ಹಕ್ಕುಗಳು ದೊರೆತು ಅವರ ಪಾರಂಪರಿಕ ಬದುಕು, ಜ್ಞಾನ ಮತ್ತು ಸಂಸ್ಕೃತಿ ಉಳಿಸಿಕೊಳ್ಳಬೇಕು. ಒಟ್ಟಾರೆ ಜೀವನ ನಿರ್ವಹಣೆ ಉತ್ತಮಗೊಳ್ಳಬೇಕು. ಮುಖ್ಯವಾಗಿ, ಈ ಸಮುದಾಯಗಳು ಬದುಕುಳಿಯ ಬೇಕೆಂದರೆ ಆರೋಗ್ಯ ರಕ್ಷಣೆ ಹಾಗೂ ವರ್ಷ ಪೂರ್ತಿ ಪೌಷ್ಟಿಕ ಆಹಾರದ ನಿರಂತರ ನೀಡಿಕೆ ಆಗಬೇಕು. ಆದರೆ ದಲಿತ ಮತ್ತು ಆದಿವಾಸಿ ಸಮುದಾಯಗಳ ಏಳಿಗೆಗೆ, ಸಾಮಾಜಿಕ ನ್ಯಾಯದ ಸಾಧನೆಗೆ ಮೀಸಲಿಟ್ಟ ಹಣ ಇಂತಹ ಮೂಲಭೂತ ಅಗತ್ಯಗಳಿಗೆ ಖರ್ಚಾಗುವುದಿಲ್ಲ. ಬದಲಾಗಿ ಮೇಲ್ಪದರಿನಲ್ಲಿಯೇ ಸುಲಭವಾಗಿ ಸೋರಿ ಹೋಗುತ್ತದೆ. ವಾಸ್ತವದಲ್ಲಿ, ಈ ಸಮುದಾಯಗಳಿಗೆ ಪರಿವರ್ತನೆಯ ಗಂಧಗಾಳಿಯೂ ಸೋಂಕದಂತೆ ನೋಡಿಕೊಳ್ಳುವ ದುಷ್ಟ ಸಂಚಿನ ಭಾಗವಾಗಿ ಈ ಕ್ರಿಮಿನಲ್ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ರಾಜಕೀಯ ಇಚ್ಛಾಶಕ್ತಿ ಹೀನತೆ ಮತ್ತು ಸಂವಿಧಾನಾತ್ಮಕ ಬದ್ಧತೆ, ಕಳಕಳಿ ಇಲ್ಲದೆ ಕೇವಲ ಇವರ ಹೆಸರಿನಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ದುಡ್ಡುಮಾಡುವ ದಂಧೆಯಾಗಿ ಯೋಜನೆಯ ಜಾರಿಯನ್ನು ಮಾರ್ಪಡಿಸಲಾಗಿದೆ. ಪರಿಣಾಮ ಈ ಸಮುದಾಯಗಳ ಪರಿಸ್ಥಿತಿ ಯಥಾರೀತಿ ಮುಂದುವರಿಯುತ್ತಿದೆ. ಇದು ಆಳುವವರ ಮಹಾ ಪಿತೂರಿ.
ಮತ್ತೂ ವಿಚಿತ್ರವೆಂದರೆ ಇಲ್ಲಿಯವರೆಗೂ ಯೋಜನೆಯ ಅಡಿಯಲ್ಲಿ ಮಾಡಲಾದ ವೆಚ್ಚಗಳ ಒಟ್ಟು ಸಾಮುದಾಯಿಕ ಪರಿಣಾಮಗಳ ಮೌಲ್ಯಮಾಪನವೇ ನಡೆದಿಲ್ಲ. ಹಾಗೆ ನಡೆದಲ್ಲಿ ಆಳುವವರ ವಂಚನೆಗಳು, ಉದ್ಧಾರದ ಸೋಗಲಾಡಿತನ ಬಯಲುಗೊಂಡು ಸಮುದಾಯಗಳ ದೀನ ಸ್ಥಿತಿ ಹೊರಬರುತ್ತಿತ್ತು. ಹೊಸ ಕಾರ್ಯತಂತ್ರವನ್ನು ರೂಪಿಸಬಹುದಿತ್ತು.
ಗಂಗಾ ಕಲ್ಯಾಣ ಯೋಜನೆಯ ಜಾರಿ ಹಗರಣದಿಂದ ತುಂಬಿದೆ. ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿಲ್ಲ. ಪದೇ ಪದೇ ಫಲಾನುಭವಿಗಳು ಅರ್ಜಿ ಹಾಕಲು ಕೇಳಬೇಕಾಗಿಲ್ಲ. ದಲಿತರ ಹೆಸರಿನಲ್ಲಿ ಎಂಎಲ್ಎ ಹಿಂಬಾಲಕರ ಲೂಟಿ ನಡೆಯುತ್ತದೆ. ಕೇಂದ್ರ ಸರ್ಕಾರ ಜನ ಸಂಖ್ಯೆಗನುಗುಣವಾದ ಅನುದಾನ ನೀಡುತ್ತಿಲ್ಲ.
ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ಇಷ್ಟು ದುರುಪಯೋಗ ನಡೆಯುತ್ತಿದ್ದರೂ ಸಂಬಂಧಿಸಿದ ಮಂತ್ರಿಗಳು ಆಯಾ ಸಮುದಾಯಗಳಿಗೆ ಸೇರಿದ ಸಚಿವರು, ಶಾಸಕರಾಗಲಿ ಒಂದು ಸಣ್ಣ ಆಕ್ಷೇಪವನ್ನೂ ಎತ್ತದೇ ಬಾಯಿ ಮುಚ್ಚಿ ಕೊಂಡಿರುವುದು ಅವರು ಆಳುವ ವರ್ಗದ ಭಾಗ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅದರಲ್ಲಿ ತಮಗೊಂದು ಪಾಲು ಸಿಕ್ಕರೆ ಸಾಕು ಎನ್ನುವಂತಿದೆ ಅವರ ವರ್ತನೆ. ಈ ವಿಭಾಗಗಳಿಂದಲೇ ಅತಿ ಹೆಚ್ಚಿನ ಶಾಸಕರು ಆಳುವವರು ಬಿಜೆಪಿಗೆ ಸಂಬಂಧಸಿದವರಾಗಿದ್ದಾರೆ ಎನ್ನುವುದು ಗಮನಾರ್ಹ.
2022-23 ರ ಸಾಲಿನ ಮೊತ್ತದಲ್ಲಿಯೂ 5000 ಕೋಟಿ ರೂ.ಗಳನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಯಾವುದೇ ಅಳುಕಿಲ್ಲದೆ ಪ್ರಕಟಿಸಿದ್ದರು. ಇದರ ವಿರುದ್ಧ ತೀವ್ರ ಪ್ರತಿಭಟನೆ ವಿಧಾನಸಭೆಯಲ್ಲಿ ಮತ್ತು ಸಾರ್ವಜನಿಕವಾಗಿ ಎದ್ದಾಗ ಆ ನಿರ್ಧಾರವನ್ನು ಕೈಬಿಡುವುದಾಗಿ ಹೇಳಲಾಯಿತು. ಮುಜುಗರ ಅನುಭವಿಸಿದ ಸರಕಾರ ಇನ್ನು ಮುಂದೆ ಎಲ್ಲಾ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳ ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ವಹಿಸಿಕೊಳ್ಳುವುದಾಗಿ ಹೇಳಿರುವುದು ಕೂಡ ನಡೆದಿರುವ ಹಗರಣವನ್ನು ಮುಚ್ಚಿ ಹಾಕಲು ನಡೆಸಿದ ಪ್ರಯತ್ನ ಆಗಿರಬಹುದೇ? ಭಾರೀ ಕಾಳಜಿ ಇರುವಂತೆ ನಟಿಸಿ ಜನರ ಗಮನ ಬೇರೆಡೆಗೆ ಸೆಳೆಯುವ ಕುತಂತ್ರವಾಗಿರಬಾರದೇಕೆ? ಏಕೆಂದರೆ ಈಗಲೂ ಎಸ್ಸಿ ಮತ್ತು ಎಸ್ಟೀ ಸಮುದಾಯಗಳ ಅಭಿವೃದ್ಧಿಗೆ ಸಂಬಂಧಿಸಿ ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿ ನಿಯತಕಾಲಿಕವಾಗಿ ವಿಮರ್ಶೆ ನಡೆಯಬೇಕಿರುವುದು ಆದ್ಯ ಹೊಣೆಗಾರಿಕೆ ಆಗಿದೆ. ಯಾವುದೇ ಬದ್ಧತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವದ ಸೂಕ್ಷ್ಮತೆ ಇಲ್ಲದ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳುತ್ತದೆ ಎಂದು ನಂಬುವುದಾದರೂ ಹೇಗೆ? ಆದ್ದರಿಂದ ಹೀಗೆ ದುರುಪಯೋಗ ಮಾಡಲ್ಪಟ್ಟ ಎಲ್ಲ ಹಣವನ್ನು ಈ ಸಮುದಾಯಗಳ ವಿಶೇಷ ನಿಧಿಗೆ ಮರಳಿಸಬೇಕು ಮತ್ತು ನಿರ್ಲಕ್ಷ್ಯವಹಿಸಿದ ಸಚಿವರು, ಸತತವಾಗಿ ಕಾಯ್ದೆಯನ್ನು ಉಲ್ಲಂಘಿಸಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಲೇಬೇಕು. ಇದರ ಸಂವಿಧಾನಾತ್ಮಕ ಹೊಣೆಗಾರಿಕೆ ಮುಖ್ಯಮಂತ್ರಿಗಳ ಹೆಗಲ ಮೇಲಿದ್ದು ಸಾರ್ವಜನಿಕ ಉತ್ತರದಾಯಿತ್ವ ಮತ್ತು ಕಾನೂನಾತ್ಮಕ ಕ್ರಮಗಳಿಂದ ಅವರು ತಪ್ಪಿಸಿಕೊಳ್ಳುವಂತಿಲ್ಲ. ಇದೀಗ ಬಸವರಾಜ ಬೊಮ್ಮಾಯಿಯವರೂ ಕಟಕಟೆಯಲ್ಲಿ ನಿಂತಿದ್ದಾರೆ.