ಪ್ರಕಾಶ್ ಕಾರಟ್
ಆರ್ಥಿಕ ಕುಸಿತ ಆರಂಭವಾದಾಗಿನಿಂದ ಆಹಾರ, ಇಂಧನ ಮತ್ತು ಔಷಧಿಗಳ ಕೊರತೆ ಹಾಗೂ ಗಗನಕ್ಕೇರಿದ ಬೆಲೆಗಳಿಂದಾಗಿ ಜನರು ಪಡಬಾರದ ಕಷ್ಟ ಅನುಭವಿಸಿದರು. ಅಸಹನೀಯ ಪರಿಸ್ಥಿತಿಯಿಂದಾಗಿ ಸಹನೆಯ ಕಟ್ಟೆಯೊಡೆದು ಪ್ರತಿಭಟನೆ ನಡೆಸಲು ಜನರು ಬೀದಿಗಿಳಿದರು. ಮಾರ್ಚ್ 31 ರಿಂದ ಪ್ರತಿಭಟನೆಕಾರರು ಕೇಂದ್ರ ಕೊಲಂಬೊದ ಗಾಲೆ ಫೇಸ್ ಗ್ರೀನ್ ಮತ್ತು ಪ್ರಧಾನಿ ನಿವಾಸದ ಹೊರಗಡೆ ಬೀಡು ಬಿಟ್ಟು ಚಳವಳಿ ಆರಂಭಿಸಿದರು.
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮೇ 9 ರಂದು ನಡೆದ ಹಿಂಸಾತ್ಮಕ ಘಟನೆಗಳು ದೇಶದ ಆರ್ಥಿಕ ಬಿಕ್ಕಟ್ಟಿನಿಂದ ಉದ್ಭವಿಸಿರುವ ಪರಿಸ್ಥಿತಿ ಬಿಗಡಾಯಿಸಿರುವುದನ್ನು ಸೂಚಿಸುತ್ತದೆ. ಆರ್ಥಿಕ ಬಿಕ್ಕಟ್ಟು ಈಗ ರಾಜಕೀಯ ಕ್ಷೇತ್ರ ಹಾಗೂ ಇಡೀ ಸಮಾಜವನ್ನೂ ಆವರಿಸಿದೆ.
ಈ ಸುಂಟರಗಾಳಿಯ ಕೇಂದ್ರದಲ್ಲಿರುವುದು ರಾಜಪಕ್ಸ ಕುಟುಂಬದ ಆಡಳಿತ. ಅಲುಗಾಡುತ್ತಿರುವ ಅಧಿಕಾರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ, ಅಪಾರ ಅಧಿಕಾರ ಬಲ ಹೊಂದಿರುವ ಅಧ್ಯಕ್ಷ ಗೋತಬಯ ರಾಜಪಕ್ಸ, ತನ್ನ ಅಣ್ಣ ಮಹಿಂದ ರಾಜಪಕ್ಸ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡುವಂತೆ ಒತ್ತಡ ಹೇರಿದ್ದರು. ಅದಕ್ಕೂ ಮುನ್ನ ಇಡೀ ಸಚಿವ ಸಂಪುಟ ರಾಜಿನಾಮೆ ನೀಡಿದ್ದು ಮಹಿಂದ ನೇತೃತ್ವದಲ್ಲಿ ಹೊಸ ಸಂಪುಟವನ್ನು ನೇಮಿಸಲಾಗಿತ್ತು.
ಆರ್ಥಿಕ ಬಿಕ್ಕಟ್ಟಿಗೆ ಕೊಡುಗೆ ಕೊಟ್ಟ ವಿನಾಶಕಾರಿ ನಿರ್ಧಾರಗಳಿಗೆ ರಾಜಪಕ್ಸ ಆಡಳಿತ ಹೊಣೆಯಾಗಿದೆ. ತೆರಿಗೆ ಕಡಿತ, ಕೃಷಿಯಲ್ಲಿ ಬಳಸುವ ರಸಗೊಬ್ಬರಗಳ ಆಮದು ಸ್ಥಗಿತ, ಹಾಗೂ ಕೆಲವು ಐಷಾರಾಮಿ ಯೋಜನೆಗಳಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮುಂತಾದ ನಿರ್ಧಾರಗಳನ್ನು ಸರ್ವಾಧಿಕಾರದ ದರ್ಪದಿಂದ ಕೈಗೊಳ್ಳಲಾಗಿತ್ತು. ಇದರಿಂದಾಗಿ ಆದಾಯ ಕುಸಿದು ಕೃಷಿ ಉತ್ಪಾದನೆ ಅಸ್ತವ್ಯಸ್ತಗೊಂಡಿತು. ಹೆಚ್ಚುತ್ತಿರುವ ಸಾಲದ ಹೊರೆ ಮೇಲೆ ಇನ್ನಷ್ಟು ಸಂಕಟ ಸೇರಿಕೊಂಡಿತು.
ಕೋವಿಡ್ ಸಾಂಕ್ರಾಮಿಕತೆಯು ದೇಶದ ಮೇಲೆ ತೂಗುತ್ತಿದ್ದ ಬಿಕ್ಕಟ್ಟನ್ನು ಬಿಗಡಾಯಿಸಿತು. ಪ್ರವಾಸೋದ್ಯಮ ನಿಂತಿದ್ದರಿಂದ ವಿದೇಶಿ ವಿನಿಮಯ ಆದಾಯ ಖೋತಾಗೊಂಡಿತು. ವಿದೇಶಗಳಲ್ಲಿರುವ ಶ್ರೀಲಂಕಾದ ಕಾರ್ಮಿಕರು ದೇಶಕ್ಕೆ ಹಣ ಕಳಿಸುವುದು ನಿಂತಿತ್ತು. ಇವೆಲ್ಲವೂ ಸಮಸ್ಯೆ ಬಿಗಡಾಯಿಸಲು ಕಾರಣವಾಯಿತು.
ಆರ್ಥಿಕ ಕುಸಿತ ಆರಂಭವಾದಾಗಿನಿಂದ ಆಹಾರ, ಇಂಧನ ಮತ್ತು ಔಷಧಿಗಳ ಕೊರತೆ ಹಾಗೂ ಗಗನಕ್ಕೇರಿದ ಬೆಲೆಗಳಿಂದಾಗಿ ಜನರು ಪಡಬಾರದ ಕಷ್ಟ ಅನುಭವಿಸಿದರು. ಅಸಹನೀಯ ಪರಿಸ್ಥಿತಿಯಿಂದಾಗಿ ಸಹನೆಯ ಕಟ್ಟೆಯೊಡೆದು ಪ್ರತಿಭಟನೆ ನಡೆಸಲು ಜನರು ಬೀದಿಗಿಳಿದರು. ಮಾರ್ಚ್ 31 ರಿಂದ ಪ್ರತಿಭಟನೆಕಾರರು ಕೇಂದ್ರ ಕೊಲಂಬೊದ ಗಾಲೆ ಫೇಸ್ ಗ್ರೀನ್ ಮತ್ತು ಪ್ರಧಾನಿ ನಿವಾಸದ ಹೊರಗಡೆ ಬೀಡು ಬಿಟ್ಟು ಚಳವಳಿ ಆರಂಭಿಸಿದರು. ಈ ಶಾಂತಿಯುತ ಪ್ರತಿಭಟನೆಗಳಲ್ಲಿ ಸಾವಿರಾರು ಜನರು ಭಾಗವಹಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು, ನೌಕರರು ಮತ್ತು ಟ್ರೇಡ್ ಯೂನಿಯನ್ ಸದಸ್ಯರು ಪಾಲ್ಗೊಂಡರು.
ದುಡಿಯುವ ವರ್ಗದ ಪಾತ್ರ
ಲಂಕಾದಲ್ಲಿ ಈಗ ನಡೆಯುತಿರುವ ಜನಾಂದೋಲನದಲ್ಲಿ ದುಡಿಯುವ ವರ್ಗ ಪ್ರಮುಖ ಪಾತ್ರ ವಹಿಸುತ್ತಿದೆ. ಏಪ್ರಿಲ್ 28 ರಂದು ಸಾರ್ವತ್ರಿಕ ಮುಷ್ಕರ ನಡೆಸಲು ಟ್ರೇಡ್ ಯೂನಿಯನ್‌ಗಳ ಸಮನ್ವಯ ಸಮಿತಿ ನೀಡಿದ್ದ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು ಲಕ್ಷಾಂತರ ಜನರು ಪಾಲ್ಗೊಂಡರು. ಮೇ 5 ರಂದು ಇನ್ನೊಂದು ಸಾರ್ವತ್ರಿಕ ಹರತಾಳಕ್ಕೆ ಕೊಡಲಾಗಿದ್ದು ಅದರಲ್ಲಿ ವೈದ್ಯರು, ನರ್ಸ್‌ಗಳು ಮತ್ತಿತರ ವೃತ್ತಿಪರರು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು ಗಮನಾರ್ಹವಾಗಿತ್ತು. ಅಧ್ಯಕ್ಷರು ಮತ್ತು ಸರ್ಕಾರದ ರಾಜಿನಾಮೆಗೆ ಆಗ್ರಹಿಸಿ ಈ ಮುಷ್ಕರಗಳಿಗೆ ಕರೆ ಕೊಡಲಾಗಿತ್ತು.
ಈ ತೀಕ್ಷ್ಣ ಮುಷ್ಕರಗಳಿಂದ ಕಂಗಾಲಾದ ಅಧ್ಯಕ್ಷ ಗೋತಬಯ, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಇದು ಕೇವಲ ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ ಎರಡನೇ ಬಾರಿ ಹೇರಲಾದ ತುರ್ತು ಪರಿಸ್ಥಿತಿ. ಸರ್ಕಾರ ಹೇರಿದ್ದ ಕರ್ಫ್ಯೂವನ್ನು ಜನರು ಉಲ್ಲಂಘಿಸಿದರು.
ಅಂತಿಮ ಘಟ್ಟ
ನಿಜವಾಗಿಯೂ ಲಂಕಾ ಸರ್ಕಾರದ ಅಂತ್ಯ ಕಾಲ ಸನ್ನಿಹಿತವಾಗಿದೆ. ಮೇ 9 ರಂದು ಭುಗಿಲೆದ್ದ ಹಿಂಸಾಚಾರ ಶಾಂತಿಯುತ ಚಳವಳಿಯನ್ನು ಹಾಳುಮಾಡುವ ರಾಜಪಕ್ಸರ ಕೊನೆಯ ಪ್ರಯತ್ನವಾಗಿತ್ತು. ಸುಮ್ಮನೆ ಬಾಯಿ ಮುಚ್ಚಿಕೊಂಡು ರಾಜಿನಾಮೆ ನೀಡುವ ಬದಲು ಪ್ರಧಾನಿ ಮಹಿಂದ ರಾಜಪಕ್ಸ ತಮ್ಮ ಎಸ್‌ಎಲ್‌ಪಿಪಿ ಪಕ್ಷದ ಬೆಂಬಲಿಗರನ್ನು ಅಧಿಕೃತ ನಿವಾಸಕ್ಕೆ ಕರೆಸಿಕೊಂಡರು. ಅಲ್ಲಿ ಅವರು ಪ್ರಚೋದನಕಾರಿ ಭಾಷಣ ಮಾಡಿದ ನಂತರ ಬೆಂಬಲಿಗರು ಪ್ರಧಾನಿ ನಿವಾಸದ ಹೊರಗಡೆ ಒಂದು ತಿಂಗಳಿಂದ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಜನರ ಮೇಲೆ ದಾಳಿ ಮಾಡಿ ಡೇರೆಗಳನ್ನು ನಾಶ ಮಾಡಿದರು. ಗಾಲೆ ಫೇಸ್‌ನಲ್ಲಿ ಕೂಡ ರಾಜಪಕ್ಸ ನಿಷ್ಠರು ಆಕ್ರಮಣ ಮಾಡಿದ್ದು ನೂರಾರು ಜನರು ಗಾಯಗೊಂಡಿದ್ದಾರೆ. ಪುಂಡಾಟ ತಡೆಯಲು ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಹೊರಗಡೆಯಿಂದ ಬಂದ ಆಳುವ ಪಕ್ಷದ ಬೆಂಬಲಿಗರು ನಡೆಸಿದ ನಗ್ನ ಹಿಂಸಾಚಾರವೇ ಪ್ರತಿ ದಾಳಿಗೆ ಕಾರಣವಾಯಿತು. ಪ್ರಧಾನಿ ನಿವಾಸ ಟೆಂಪಲ್ ಟ್ರೀ ಬಳಿ ಜಮಾಯಿಸಿದ ಸಾವಿರಾರು ಜನರು ಮನೆಯೊಳಗೆ ನುಗ್ಗಲೂ ಯತ್ನಿಸಿದರು. ಅಂತಿಮವಾಗಿ, ಅದಾಗಲೇ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಹಿಂದ ಮತ್ತು ಕುಟುಂಬದವರನ್ನು ಮಿಲಿಟರಿಯವರು ಪಾರು ಮಾಡಿ ಹೆಲಿಕಾಪ್ಟರ್‌ನಲ್ಲಿ ನೌಕಾ ನೆಲೆಯೊಂದಕ್ಕೆ ಕರೆದೊಯ್ಯಬೇಕಾಯಿತು. ರಾಜಪಕ್ಸ ಕುಟುಂಬ ಸದಸ್ಯರು, ಮಾಜಿ ಮಂತ್ರಿಗಳು ಮತ್ತು ಆಳುವ ಪಕ್ಷದ ಸಂಸದರ ಮನೆಗಳ ಮೇಲೆ ಉದ್ರಿಕ್ತ ಪ್ರತಿಭಟನೆಕಾರರು ದಾಳಿ ನಡೆಸಿದ್ದಲ್ಲದೆ ಕೆಲವಕ್ಕೆ ಬೆಂಕಿಯನ್ನೂ ಹಚ್ಚಿದರು.
ಪ್ರತಿಪಕ್ಷ ನಕಾರ
ಈ ನಡುವೆ, ಪ್ರಮುಖ ಪ್ರತಿಪಕ್ಷವಾದ ಎಸ್‌ಜೆಬಿ ಮೈತ್ರಿಕೂಟ ಅಧ್ಯಕ್ಷ ಗೋತಬಯ ನೇತೃತ್ವದ ಯಾವುದೇ ಮಧ್ಯಂತರ ಸರ್ಕಾರ ಸೇರಲು ನಿರಾಕರಿಸಿದೆ. ಗೋತಬಯ ಕೂಡ ಪದತ್ಯಾಗ ಮಾಡಬೇಕೆನ್ನುವುದು ಅದರ ಬೇಡಿಕೆಯಾಗಿದೆ. ಎಡಪಕ್ಷವಾದ ಜನತಾ ವಿಮುಕ್ತಿ ಪೆರುಮನ (ಜೆವಿಪಿ) ಕೂಡ ಹೊಸ ಚುನಾವಣೆಗಳು ನಡೆಯುವವರೆಗೆ ಹಂಗಾಮಿ ಅಧ್ಯಕ್ಷ ಹಾಗೂ ಮಧ್ಯಂತರ ಸರ್ಕಾರ ರಚನೆಯಾಗಬೇಕೆಂದು ಆಗ್ರಹಿಸಿದೆ.
ಅಧ್ಯಕ್ಷ ಗೋತಬಯರಲ್ಲೇ ಹೆಚ್ಚಿನ ಕಾರ್ಯ ನಿರ್ವಾಹಕ ಅಧಿಕಾರಗಳು ಕೇಂದ್ರೀಕೃತವಾಗಿರುವುದರಿಂದ ಅವರು ಸ್ಥಾನದಿಂದ ಕೆಳಗಿಳಿಯಬೇಕೆಂಬ ಬೇಡಿಕೆ ಸಮರ್ಥನೀಯವಾಗಿದೆ. ದೇಶದ ಆರ್ಥಿಕ ಅವ್ಯವಸ್ಥೆಗೆ ಅವರೇ ಹೊಣೆ ಹಾಗೂ ಸರ್ವಾಧಿಕಾರಿ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಕೂಡ ಅವರೇ ಜವಾಬ್ದಾರರು. ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಒಂದಕ್ಕೊಂದು ತಳಕು ಹಾಕಿ ಕೊಂಡಿದೆ.
ರಾಜಪಕ್ಸ ಕುಟುಂಬವನ್ನು ಅಧಿಕಾರದಿಂದ ತೊಲಗಿಸುವುದರ ಜೊತೆಯಲ್ಲೇ ದೇಶದ ರಾಜಕೀಯ ಮತ್ತು ಆರ್ಥಿಕ ಸಂರಚನೆಯನ್ನು ಜನತಾಂತ್ರಿಕವಾಗಿ ಪರಿವರ್ತಿಸುವುದು ಅಗತ್ಯ. ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನ ಮತ್ತು ಕೇಂದ್ರೀಕೃತ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ದೇಶದ ಆರ್ಥಿಕ ನೀತಿಗಳಿಗೆ ಆಧಾರವಾಗಿರುವ ನವ-ಉದಾರವಾದಿ ಚೌಕಟ್ಟನ್ನು ತೆಗೆದು ಹಾಕಿ ಅಭಿವೃದ್ಧಿಯ ಜನಪರ ಹಾದಿಯನ್ನು ತುಳಿಯಬೇಕು. ರಾಜಪಕ್ಸ ಕುಟುಂಬ ಕುರಿತು ಜನರಲ್ಲಿ ಉಂಟಾಗಿರುವ ಭ್ರಮನಿರಸನವು ಸಿಂಹಳ ಬೌದ್ಧ ರಾಷ್ಟ್ರೀಯವಾದ ಕ್ಷೀಣಗೊಳ್ಳಲು ಕಾರಣವಾಗಬಹುದೆಂದು ಆಶಿಸೋಣ. ಭಾಷೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಪ್ರಜಾಸತ್ತಾತ್ಮಕ ಧೋರಣೆ ಅನುಸರಿಸುವುದರೊಂದಿಗೆ ಜನರ ಏಕತೆಗೆ ಅಡಿಗಲ್ಲಿಡಲು ಅದು ನೆರವಾಗಬಹುದೆಂದು ಭಾವಿಸೋಣ.
ಐಎಂಎಫ್ ಸಾಲದಿಂದ ಸಂಕಷ್ಟವೇ ಸರಿ…
ಶ್ರೀಲಂಕಾ ಸರ್ಕಾರ ಸಾಲ ಪಡೆಯಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ (ಐಎಂಎಫ್) ಮಾತುಕತೆ ನಡೆಸುತ್ತಿದೆ. ಅದರಿಂದಾಗಿ ಕಲ್ಯಾಣ ಕಾರ್ಯಕ್ರಮಗಳ ವೆಚ್ಚ ಕಡಿತಗೊಳ್ಳಲಿದೆ, ಮಿತವ್ಯಯ ಕ್ರಮಗಳು ಬರಲಿದ್ದು ಅದು ಇನ್ನಷ್ಟು ಖಾಸಗೀಕರಣಕ್ಕೆ ದಾರಿಯಾಗಲಿದೆ.
ಶ್ರೀಲಂಕಾದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೆ ಐಎಂಎಫ್ ನಿರ್ದೇಶನಗಳನ್ನು ಪಾಲಿಸುವುದಲ್ಲದೆ ಅನ್ಯ ಮಾರ್ಗ ಕಾಣಿಸುತ್ತಿಲ್ಲ. ಆದರೆ ಅದು ಆಳವಾದ ಸಂರಚನಾತ್ಮಕ ಬಿಕ್ಕಟ್ಟಿಗೆ ಪರಿಹಾರವಲ್ಲ. ಜನರ ಹಿತಗಳನ್ನು ಕಾಪಾಡುವ ಮತ್ತು ಶ್ರೀಲಂಕಾವನ್ನು ಹಣಕಾಸು ಬಂಡವಾಳದ ಆಕ್ರಮಣದಿಂದ ರಕ್ಷಿಸಬಲ್ಲ ಪರ್ಯಾಯ ಮಾರ್ಗ ಅನುಸರಿಸುವುದು ಅತ್ಯಗತ್ಯ. ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳ ಪುನರ್‌ರಚನೆಗೆ ಮುಂದಾಗಲು ಒಂದು ಅಪರೂಪದ ಅವಕಾಶ ತಮ್ಮ ಮುಂದೆ ಇರುವುದನ್ನು ಶ್ರೀಲಂಕಾದ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಅರ್ಥ ಮಾಡಿಕೊಳ್ಳಬೇಕು ಹಾಗೂ ಅಂಥದ್ದೊಂದು ಬದಲಾವಣೆಗಾಗಿ ಹೋರಾಡಲು ಜನರನ್ನು ಅಣಿಗೊಳಿಸಬೇಕು.
ಅನು: ವಿಶ್ವ