ಎಡ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಕೇರಳ ರಾಜ್ಯದ ಥ್ರಿಕ್ಕಕಾರ ಉಪಚುನಾವಣೆಯಲ್ಲಿ ಯುಡಿಎಫ್ ಗೆಲುವು ಸಾಧಿಸಲು ಮತ್ತು ಬಹುಮತವನ್ನು ಹೆಚ್ಚಿಸಲು ಸಾಧ್ಯವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 45,510 ಮತಗಳನ್ನು ಪಡೆದಿದ್ದ ಎಲ್ಡಿಎಫ್ ಮತಗಳ ಸಂಖ್ಯೆ ಈ ಉಪಚುನಾವಣೆಯಲ್ಲಿ 47,754ಕ್ಕೆ ಏರಿಕೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಉಪಚುನಾವಣೆಯಲ್ಲಿ ಎಲ್ಡಿಎಫ್ 2244 ಹೆಚ್ಚು ಮತಗಳನ್ನು ಗಳಿಸಿದೆ. ಎಲ್ಡಿಎಫ್ನ ಮತಗಳ ಪ್ರಮಾಣವೂ ಶೇ.33.32ರಿಂದ ಶೇ.35.28ಕ್ಕೆ ಏರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಎಲ್.ಡಿ.ಎಫ್.ನ ಜನಬೆಂಬಲ ಮತ್ತು ಮತ ನೆಲೆಗೆ ಧಕ್ಕೆಯಾಗಿಲ್ಲ ಎಂಬುದನ್ನು ಈ ಅಂಕಿ ಅಂಶಗಳು ತೋರಿಸುತ್ತವೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ ಹೇಳಿದೆ.
ಬಿಜೆಪಿಯ ಮತ್ತು ಟ್ವೆಂಟಿ-20 ನಂತಹ ಗುಂಪುಗಳ ಮತಗಳು ಹರಿದುಬಂದಿದ್ದರಿಂದ ಯುಡಿಎಫ್ನ ಮತಗಳಿಕೆ 59,839 ರಿಂದ 72,770ಕ್ಕೆ ಏರಿತು. 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 21,249 ಮತ್ತು 2021ರ ವಿಧಾನಸಭೆ ಚುನಾವಣೆಯಲ್ಲಿ 15,483 ಮತಗಳನ್ನು ಪಡೆದಿದ್ದು, ಬಿಜೆಪಿ ಮತಗಳು ಯುಡಿಎಫ್ ಪರವಾಗಿ ಹೋಗುತ್ತಿವೆ ಎಂಬ ಅಂಶವನ್ನು ಸಾಬೀತುಪಡಿಸಿದೆ – ಈ ಪ್ರವೃತ್ತಿ ಉಪಚುನಾವಣೆಯಲ್ಲಿಯೂ ಕಂಡುಬಂದಿದೆ.
ಕಳೆದ ಚುನಾವಣೆಯಲ್ಲಿ ಟ್ವೆಂಟಿ20ಗೆ 13,897 ಮತಗಳು ಬಂದಿದ್ದು, ಈ ಚುನಾವಣೆಯಲ್ಲಿ ಅದು ಅಭ್ಯರ್ಥಿಯನ್ನೂ ಹಾಕಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 14,329 ಮತಗಳ ಬಹುಮತ ಪಡೆದಿದ್ದ ಯುಡಿಎಫ್ ಉಪಚುನಾವಣೆಯಲ್ಲಿ ತನ್ನ ಬಹುಮತವನ್ನು 25,016ಕ್ಕೆ ಹೆಚ್ಚಿಸಿಕೊಳ್ಳಲು ಇದು ಮತ್ತೊಂದು ಕಾರಣವಾಗಿದೆ.
ತೀರ್ಪನ್ನು ಒಪ್ಪಿಕೊಂಡಿರುವ ಸಿಪಿಐ(ಎಂ) ಯುಡಿಎಫ್ನೊಂದಿಗೆ ಯಾವಾಗಲೂ ನಿಂತಿರುವ ಕ್ಷೇತ್ರದಲ್ಲಿ ತನ್ನ ಉಪಚುನಾವಣೆ ಚಟುವಟಿಕೆಗಳನ್ನು ಪರಿಶೀಲಿಸುವುದಾಗಿ ಕಾರ್ಯದರ್ಶಿ ಮಂಡಳಿ ಹೇಳಿದೆ.