ಪ್ರಕಾಶ್ ಕಾರಟ್
2021 ನವೆಂಬರ್ನಲ್ಲಿ ಸ್ವಪ್ನಾಗೆ ಜಾಮೀನು ಸಿಕ್ಕಿತ್ತು. ಅದಾದ ತಕ್ಷಣವೇ ಆಕೆ ಆರ್ಎಸ್ಎಸ್ ಸಂಯೋಜಿತ ಎನ್ಜಿಒ ಒಂದರಲ್ಲಿ ಕಾರ್ಯ ನಿರ್ವಾಹಕಿಯಾಗಿ ಕೆಲಸಕ್ಕೆ ಸೇರಿದ್ದರು. ಸಹ ಆರೋಪಿ ಪಿ.ಎಸ್. ಶ್ರೀನಾಥ್ ಎಂಬಾತನೂ ಅಲ್ಲಿ ಕೆಲಸಕ್ಕೆ ಸೇರಿದ್ದ. ಆ ಎನ್ಜಿಒ ಹೆಸರು ಹೈರೇಂಜ್ ರೂರಲ್ ರೆವಲಪ್ಮೆಂಟ್ ಸೊಸೈಟಿ (ಎಚ್ಆರ್ಡಿಎಸ್). ಇದಾದ ಕೆಲವು ತಿಂಗಳ ನಂತರ ಸ್ವಪ್ನಾ ಮ್ಯಾಜಿಸ್ಟ್ರೇಟ್ ಮುಂದೆ ಸೆಕ್ಷನ್ 164 ರನ್ವಯ ಹೇಳಿಕೆ ದಾಖಲಿಸಿದ್ದರು ಹಾಗೂ ಅದನ್ನು ಬಹಿರಂಗಪಡಿಸಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜಿನಾಮೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಬೀದಿಗಳಲ್ಲಿ ಹೋರಾಟ ನಡೆಸುತ್ತಿವೆ. ಕೆಲವು ಕಡೆಗಳಲ್ಲಿ ಪ್ರತಿಭಟನೆ ಹಿಂಸಾತ್ಮಕವಾಗಿದ್ದು ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದಾರೆ.
ಚಿನ್ನ ಕಳ್ಳಸಾಗಾಟ ಹಗರಣದ ಆರೋಪಿಗಳಲ್ಲಿ ಒಬ್ಬರಾಗಿ ಈಗ ಜಾಮೀನಿನ ಮೇಲೆ ಹೊರಗಿರುವ ಸ್ವಪ್ನಾ ಸುರೇಶ್ ಮಾಡಿದ್ದ ಹಾಸ್ಯಾಸ್ಪದ ಆರೋಪದ ಆಧಾರದಲ್ಲಿ ಈ ಚಳವಳಿ ನಡೆಸಲಾಗುತ್ತಿದೆ. ಮುಖ್ಯಮಂತ್ರಿಯವರ ಸಲಹೆ ಮೇರೆಗೆ ಒಂದು ಬ್ಯಾಗ್ ತುಂಬಾ ವಿದೇಶಿ ಕರೆನ್ಸಿಯನ್ನು ರಾಜತಾಂತ್ರಿಕ ಮಾರ್ಗದ ಮೂಲಕ ದೇಶದಿಂದ ಹೊರಕ್ಕೆ ಸಾಗಿಸಿದೆ ಎಂಬುದು ಸ್ವಪ್ನಾ ಹೆಣೆದ ಹೊಸ ಕಟ್ಟುಕಥೆಯಾಗಿದೆ. ಬಿರ್ಯಾನಿ ಪಾತ್ರೆಗಳಲ್ಲಿ ಚಿನ್ನವಿಟ್ಟು ಮುಖ್ಯಮಂತ್ರಿ ಮನೆಗೆ ಕೊಂಡೊಯ್ದೆ ಎನ್ನುವುದು ಅವರ ಇನ್ನೊಂದು ಕಥೆಯಾಗಿದೆ.
ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನದ ಕಳ್ಳಸಾಗಾಟ ಮಾಡಲಾಗಿತ್ತು ಎನ್ನುವುದು 2020 ಜೂನ್ನಲ್ಲಿ ಮೊದಲ ಬಾರಿಗೆ ಬಹಿರಂಗವಾಗಿದ್ದಾಗ ಇದು ಕಸ್ಟಮ್ಸ್ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಕೇಂದ್ರೀಯ ಸಂಸ್ಥೆಯೊಂದರಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿ ವಿಜಯನ್ ಪತ್ರ ಬರೆದಿದ್ದರು. ಎನ್ಐಎ, ಸಿಬಿಐ, ಇ.ಡಿ. ಮತ್ತು ಕಸ್ಟಮ್ಸ್ ಇಲಾಖೆ ಎರಡು ವರ್ಷ ಕಾಲ ಪ್ರತಿಯೊಂದು ಆಯಾಮದಲ್ಲಿ ವಿಚಾರಣೆ ನಡೆಸಿದ್ದವು. ಪ್ರತಿಪಕ್ಷಗಳು ಮತ್ತು ಮಾಧ್ಯಮಗಳ ಆಧಾರರಹಿತ ಆರೋಪಗಳ ಹೊರತಾಗಿಯೂ ಮುಖ್ಯಮಂತ್ರಿಯಾಗಲೀ ಸರಕಾರದ ಇತರ ಯಾವುದೇ ಸಚಿವರ ವಿರುದ್ಧವಾಗಲೀ ಯಾವುದೇ ಆರೋಪ ಸಾಬೀತಾಗಲಿಲ್ಲ.
ವಿವಿಧ ಸಂಸ್ಥೆಗಳ ಮುಂದೆ ಒಂಬತ್ತು ಬಾರಿ ನೀಡಿದ್ದ ಹೇಳಿಕೆಗಳಲ್ಲಿ ಸ್ವತಃ ಸ್ವಪ್ನಾ ಅವರೇ ಮುಖ್ಯಮಂತ್ರಿಯನ್ನು ಪ್ರಸ್ತಾಪಿಸಿರಲಿಲ್ಲ. ವಾಸ್ತವವಾಗಿ, ಮುಖ್ಯಮಂತ್ರಿಯನ್ನು ಸಿಲುಕಿಸಲು ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆಕೆ ಜೈಲಿನಿಂದ ಕಳಿಸಿದ್ದ ಒಂದು ಧ್ವನಿ ಸಂದೇಶದಲ್ಲಿ ಹೇಳಿದ್ದರು.
ಹಾಗಾದರೆ ಈಗ ಏನು ಬದಲಾವಣೆ ಆಯಿತು? 2021 ನವೆಂಬರ್ನಲ್ಲಿ ಸ್ವಪ್ನಾಗೆ ಜಾಮೀನು ಸಿಕ್ಕಿತ್ತು. ಅದಾದ ತಕ್ಷಣವೇ ಆಕೆ ಆರ್ಎಸ್ಎಸ್ ಸಂಯೋಜಿತ ಎನ್ಜಿಒ ಒಂದರಲ್ಲಿ ಕಾರ್ಯನಿರ್ವಾಹಕಿಯಾಗಿ ಕೆಲಸಕ್ಕೆ ಸೇರಿದ್ದರು. ಸಹ ಆರೋಪಿ ಪಿ.ಎಸ್. ಶ್ರೀನಾಥ್ ಎಂಬಾತನೂ ಅಲ್ಲಿ ಕೆಲಸಕ್ಕೆ ಸೇರಿದ್ದ. ಆ ಎನ್ಜಿಒ ಹೆಸರು ಹೈರೇಂಜ್ ರೂರಲ್ ರೆವಲಪ್ಮೆಂಟ್ ಸೊಸೈಟಿ (ಎಚ್ಆರ್ಡಿಎಸ್). ಇದಾದ ಕೆಲವು ತಿಂಗಳ ನಂತರ ಸ್ವಪ್ನಾ ಮ್ಯಾಜಿಸ್ಟ್ರೇಟ್ ಮುಂದೆ ಸೆಕ್ಷನ್ 164ರನ್ವಯ ಹೇಳಿಕೆ ದಾಖಲಿಸಿದ್ದರು ಹಾಗೂ ಅದನ್ನು ಬಹಿರಂಗಪಡಿಸಿದ್ದರು. ಅದೊಂದು ಗೌಪ್ಯ ದಾಖಲೆಯಾಗಿದ್ದರೂ ಆಕೆ ಹಾಗೆ ಮಾಡಿದ್ದರು.
ಈ ಕಟ್ಟುಕಥೆಗಳ ನಂತರ ಏನೇನು ನಾಟಕಗಳು ಅನಾವರಣಗೊಳ್ಳುತ್ತವೆ ಎಂಬುದು ನಿರೀಕ್ಷಿತವೇ ಆಗಿತ್ತು. ಸ್ವಪ್ನಾ ಹೇಳಿದ್ದ ಹಾಸ್ಯಾಸ್ಪದ ಸುಳ್ಳನ್ನೇ ವೇದವಾಕ್ಯ ಎಂಬಂತೆ ನಂಬಿದ ಕಾಂಗ್ರೆಸ್ ಮುಖ್ಯಮಂತ್ರಿ ರಾಜಿನಾಮೆ ಆಗ್ರಹಿಸಿ ಪ್ರತಿಭಟನೆಗೆ ಇಳಿಯಿತು. ಇಡೀ ಪ್ರಕರಣದ ಸೂತ್ರಧಾರಿಯಾದ ಬಿಜೆಪಿ-ಆರ್ಎಸ್ಎಸ್ ಯೋಜನೆಗೆ ತಕ್ಕಂತೆ ಬೀದಿಗಿಳಿದವು. ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಸಿಎಂ ಮತ್ತು ಎಲ್ಡಿಎಫ್ ಸರಕಾರದ ವಿರುದ್ಧದ ಪ್ರಚಾರಕ್ಕೆ ದನಿಗೂಡಿಸಿದವು. ಸ್ವಪ್ನಾರ ಸುಳ್ಳಿನ ಕಂತೆಗಳನ್ನೇ ಪುಂಖಾನುಪುಂಖವಾಗಿ ಪ್ರಚಾರ ಮಾಡಿದವು.
ಮುಖ್ಯಮಂತ್ರಿಯವರ ಓಡಾಟಕ್ಕೆ ಯುವ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಹಾಗೂ ಕಪ್ಪು ಬಾವುಟ ಪ್ರದರ್ಶಿಸುತ್ತಿದೆ. ಮುಖ್ಯಮಂತ್ರಿಯನ್ನು ದೈಹಿಕವಾಗಿ ಎದುರಿಸುವ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಕಣ್ಣೂರಿನ ಇಬ್ಬರು ಯುವ ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿ ತಿರುವನಂತಪುರಂನಿಂದ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಸಿದ್ದು ವಿಮಾನ ಇಳಿದಾಗ ಮುಖ್ಯಮಂತ್ರಿಯತ್ತ ಧಾವಿಸಿ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ನ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಈ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರತಿಭಟನಾರ್ಥ ಘೋಷಣೆಗಳನ್ನು ಕೂಗಲಾಗಿದೆಯಷ್ಟೇ ಎಂದು ಹೇಳಿದ್ದಾರೆ ಹಾಗೂ ಮುಖ್ಯಮಂತ್ರಿಯತ್ತ ಧಾವಿಸುತ್ತಿದ್ದ ಪ್ರತಿಭಟನೆಕಾರರನ್ನು ತಡೆದು ಅವರನ್ನು ಹಿಂದೆ ತಳ್ಳಿದ ಎಲ್ಡಿಎಫ್ ಸಂಚಾಲಕ ಇ.ಪಿ. ಜಯರಾಜನ್ ವಿರುದ್ಧವೇ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ!
ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಪಿಣರಾಯಿ ವಿಜಯನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ದಿನವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನ್ಯಾಶನಲ್ ಹೆರಾಲ್ಡ್ ಕೇಸ್ನಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಮುಂದೆ ಹಾಜರಾಗಿದ್ದರು. ಈ `ರಾಜಕೀಯ ಸೇಡನ್ನು’ ವಿರೋಧಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ದೆಹಲಿಯಲ್ಲಿ ಬೀದಿಗಿಳಿದಿದ್ದರು. ಆದರೆ ಕೇರಳದಲ್ಲಿ ಪಿಣರಾಯಿ ವಿಜಯನ್ ವಿರುದ್ಧ ಇ.ಡಿ. ಕ್ರಮಕೈಗೊಂಡಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಮೋದಿ ಮತ್ತು ವಿಜಯನ್ ನಡುವೆ ಒಪ್ಪಂದವಾಗಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದೆ.
ಒಂದು ವರ್ಷದ ಹಿಂದೆ, ಚಿನ್ನ ಸ್ಮಗ್ಲಿಂಗ್ ಕೇಸ್ನಲ್ಲಿ ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ವ್ಯಾಪಕ ಪ್ರತಿಭಟನೆ ನಡೆಸಿದ್ದವು. ಈ ಪ್ರಕರಣದಲ್ಲಿ ಸಿಎಂ ಅನ್ನು ಹೆಸರಿಸಲು ಯಾವುದೇ ಪುರಾವೆ ಸಲ್ಲಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳು ವಿಫಲಗೊಂಡ ಹಾಗೂ 2021ರ ಮೇ ಚುನಾವಣೆಗಳಲ್ಲಿ ಈ ಎಲ್ಲ ಆರೋಪಗಳನ್ನು ಜನರು ತಿರಸ್ಕರಿಸಿದ ನಂತರ, ಯುಡಿಎಫ್ ಹತಾಶಗೊಂಡಿದೆ. ಇದೀಗ ತಮ್ಮ ಅವಕಾಶವನ್ನು ಪುನರುಜ್ಜೀವನಗೊಳಿಸಿಕೊಳ್ಳಲು ಆರ್ಎಸ್ಎಸ್-ಪ್ರಾಯೋಜಿತ ಸ್ವಪ್ನಾ ಸುರೇಶ್ ಹೇಳಿಕೆಯ ಬಾಲ ಹಿಡಿದುಕೊಂಡು ಜಗ್ಗಾಡತೊಡಗಿದೆ.
ಕೇರಳದಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ರಾಷ್ಟ್ರಮಟ್ಟದಲ್ಲಿ ಅದರ ದಿವಾಳಿಕೋರತನದ ಪರಿಸ್ಥಿತಿಗೆ ಕಾರಣ ಏನೆಂಬುದು ತಿಳಿಯುತ್ತದೆ. ಎಡ-ನೇತೃತ್ವದ ಸರಕಾರವೊಂದರ ವಿರುದ್ಧ ಹೋರಾಡಲು ಬಿಜೆಪಿ ಜೊತೆ ಸೇರಲೂ ಅದಕ್ಕೆ ಸಂಕೋಚವಿಲ್ಲ. ವಿಜಯನ್ ಅವರು ಮೋದಿಯೊಂದಿಗೆ `ಡೀಲ್-ಮಾಡಿಕೊಳ್ಳುತ್ತಾರೆ’ ಎಂದು ಕೆಸರೆರಚಲೂ ಕಾಂಗ್ರೆಸ್ ನಾಯಕರು ಹೇಸುವುದಿಲ್ಲ. ಆದರೆ ಅವರ ನಾಯಕರೇ ತಂಡೋಪತಂಡವಾಗಿ ಬಿಜೆಪಿ ಸೇರಲು ಧಾವಿಸುತ್ತಿದ್ದಾರೆ. ವಾಸ್ತವವಾಗಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಎಲ್ಡಿಎಫ್ ಸರಕಾರದ ವಿರುದ್ಧ ಆರ್ಎಸ್ಎಸ್-ಬಿಜೆಪಿ ಸಂಚಿನಲ್ಲಿ ದಾಳವಾಗುತ್ತಿದೆ.
ಕೇರಳದಲ್ಲಿ ಕಾಂಗ್ರೆಸ್-ಬಿಜೆಪಿಗಳ ಜಂಟಿ ದಾಳಿಯನ್ನು ಪ್ರಬಲವಾದ ಪ್ರತಿ-ಆಂದೋಲನದೊಂದಿಗೆ ಹಾಗೂ ಜನರನ್ನು ದೊಡ್ಡ ಪ್ರಮಾಣದಲ್ಲಿ ಅಣಿನೆರೆಯಿಸಿ ಎದುರಿಸಬೇಕಾಗಿದೆ. ಎಲ್ಡಿಎಫ್ ಸರಕಾರ ಹಾಗೂ ಅದರ ನೀತಿಗಳಲ್ಲಿ ಕೇರಳ ಜನರಿಗೆ ಸಂಪೂರ್ಣ ವಿಶ್ವಾಸವಿದ್ದು ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ.
ಅನು: ವಿಶ್ವ