ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸಂತ್ರಸ್ತರು ಹೋರಾಟಕ್ಕೆ ಮಾಡುವ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಆದೇಶಕ್ಕೆ ಖಂಡನೆ, ಎಲ್ಲರ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಕ್ರಮವಹಿಸಬೇಕು
ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಇಟಗಾ ಮತ್ತಿತರೆ ನಾಲ್ಕು ಗ್ರಾಮಗಳ ರೈತರಿಂದ ಓರಿಯಂಟ್ ಸಿಮೆಂಟ್ ಕಂಪನಿಯು ರೈತರಿಂದ ಭೂಮಿ ಖರೀದಿಸುವಲ್ಲಿ ಆಗಿರುವ ಮೋಸ, ಅನ್ಯಾಯಗಳನ್ನು ಸರಿಪಡಿಸಬೇಕು, ಭೂಸ್ವಾದೀನ ಕಾಯ್ದೆ-2013ರ ಅನ್ವಯ ನ್ಯಾಯಯುತ ಪರಿಹಾರವನ್ನು ನೀಡಬೇಕು, ಭೂಮಿಯನ್ನು ನೀಡಿದ ರೈತ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದ ಹೋರಾಟನಿರತ ಮಕ್ಕಳ, ಮಹಿಳೆಯರು ಸೇರಿದಂತೆ ರೈತರನ್ನು ಹಾಗೂ ರೈತ ಮುಖಂಡ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜು ಅವರನ್ನು ಕಲಬುರಗಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಕೂಡಲೇ ಎಲ್ಲರನ್ನು ಬಿಡುಗಡೆ ಮಾಡಬೇಕು ಮತ್ತು ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಆಗ್ರಹಿಸುತ್ತದೆ.
ಚಿತ್ತಾಪುರ ತಾಲ್ಲೂಕಿನ ಇಟಗಾ ಮತ್ತಿತರೆ ನಾಲ್ಕು ಗ್ರಾಮಗಳ ರೈತರಿಂದ ಸುಮಾರು 1,750 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಓರಿಯಂಟ್ ಸಿಮೆಂಟ್ ಕಂಪನಿಯು ಅನೇಕ ಅಕ್ರಮಗಳನ್ನು ಎಸೆಗಿದೆ. ಈ ಅಕ್ರಮಗಳನ್ನು ಸರಿಪಡಿಸಬೇಕು, ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡಿಕೆ, ಭೂಸಂತ್ರಸ್ತರು ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡಿಕೆ, ಸಿಮೆಂಟ್ ಕಾರ್ಖಾನೆಯಿಂದ ಉಂಟಾಗುತ್ತಿರುವ ದೂಳಿನ ದುಷ್ಟಪರಿಣಾಮಗಳನ್ನು ತಡೆಗಟ್ಟುವುದು, ಇದರಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ, ತೊಂದರೆಗೆ ಒಳಗಾಗಿರುವ ಗ್ರಾಮ ಅಭಿವೃದ್ಧಿಯಂತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಎರಡು ದಿನ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ, ಜಿಲ್ಲಾಧಿಕಾರಿ ಅತ್ಯಂತ ಅನಾಗರೀಕವಾಗಿ ವರ್ತಿಸಿರುವುದನ್ನು ಸಿಪಿಐ(ಎಂ) ಖಂಡಿಸುತ್ತದೆ.
ಮಕ್ಕಳು, ಮಹಿಳೆಯರು, ರೈತರು ಹಾಗು ರೈತ ಸಂಘದ ಮುಖಂಡರ ಜೊತೆ ಸೌಜನ್ಯದಿಂದ ಮಾತನಾಡದೇ ಎಲ್ಲವೂ ಕಾನೂನು ರೀತಿಯಲ್ಲಿಯೇ ನಡೆದಿವೆ. ಮನವಿಕೊಟ್ಟು ಹೋಗಿ, ನೋಡೋಣ ಎನ್ನುತ್ತಾ ಏರು ಧ್ವನಿಯಲ್ಲಿ ಮಾತನಾಡುತ್ತಾ ಸಿಮೆಂಟ್ ಕಂಪನಿಯನ್ನು ಸಮರ್ಥಿಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಈ ವರ್ತನೆಯನ್ನು ಪ್ರತಿಭಟಿಸಿದವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿಗಳ ವರ್ತನೆಯನ್ನು ಸಿಪಿಐ(ಎಂ) ಖಂಡಿಸುತ್ತದೆ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಮಧ್ಯಪ್ರವೇಶ ಮಾಡಿ, ರೈತರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿಯು ಆಗ್ರಹಿಸುತ್ತದೆ.
ಜಿ.ಸಿ. ಬಯ್ಯಾರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು