ಮಹಾರಾಷ್ಟ್ರದ ʻಮಹಾ ವಿಕಾಸ್ ಅಘಾಡಿ(ಎಂವಿಎ)ʼ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರೀ ಏಜೆನ್ಸಿಗಳು ಮತ್ತು ಬಿಜೆಪಿ ರಾಜ್ಯ ಸರಕಾರೀ ಯಂತ್ರವನ್ನು ದುರುಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ ಶಿವಸೇನಾ ಪಕ್ಷಕ್ಕೆ ಸೇರಿದ ಶಾಸಕರನ್ನು ಮೊದಲಿಗೆ ಸೂರತ್ಗೆ, ನಂತರ ಗುವಹಾಟಿಗೆ ಹಾರಿಸಿಕೊಂಡು ಹೋಗಿರುವ ರೀತಿ ಅತ್ಯಂತ ಖಂಡನೀಯ ಎಂದು ಹೇಳಿದೆ. ಇವೆರಡೂ ಬಿಜೆಪಿ ಆಳ್ವಿಕೆಯ ರಾಜ್ಯಗಳು. ಇದನ್ನು ಬಿಜೆಪಿ ಎರಡೂ ರಾಜ್ಯಗಳಲ್ಲಿ ಪ್ರಭುತ್ವ ಆಡಳಿತ ಯಂತ್ರವನ್ನು ಉಪಯೋಗಿಸಿಕೊಂಡು ಮಾಡಲಾಗಿದೆ. ‘ಮಂತ್ರಿಗಳು ಮತ್ತು ಶಾಸಕರ ಮೇಲೆ ಗುರಿಯಿಡಲು ಕೇಂದ್ರೀಯ ಏಜೆನ್ಸಿಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಈ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ.
ಪ್ರಭುತ್ವ ಅಧಿಕಾರದ ಈ ನಾಚಿಕೆಗೆಟ್ಟ ಬಳಕೆಯು ವಿಪಕ್ಷಗಳ ಆಳ್ವಿಕೆಯ ರಾಜ್ಯ ಸರ್ಕಾರಗಳನ್ನು ಬೀಳಿಸುವುದಕ್ಕಾಗಿ ನಡೆಸಿದ ಈ ಹಿಂದಿನ ಪ್ರಯತ್ನಗಳಿಗೆ ಅನುಗುಣವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಈ ರೀತಿಯ ದುರುಪಯೋಗದ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರ ವಿರುದ್ಧ ಪ್ರತಿಭಟಿಸುವಂತೆ ಎಲ್ಲಾ ಪ್ರಜಾಪ್ರಭುತ್ವವಾದಿ ವಿಭಾಗಗಳಿಗೆ ಸಿಪಿಐ(ಎಂ) ಕರೆ ನೀಡಿದೆ.