2002ರ ಗುಜರಾತ್ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅವಿರತ ಹೋರಾಟ ನಡೆಸಿರುವ ತೀಸ್ತಾ ಸೆಟಲ್ವಾಡ್ ಅವರ ಬಂಧನವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಾಲಿಟ್ ಬ್ಯೂರೋ ಖಂಡಿಸಿದೆ. ಆಕೆಯ ಬಂಧನವು ಯಾವ ಆಳ್ವಿಕೆಯ ಅಡಿಯಲ್ಲಿ ಕೋಮು ಹಿಂಸಾಚಾರ ನಡೆಯುತ್ತದೋ ಆ ಪ್ರಭುತ್ವ ಅಥವಾ ಸರ್ಕಾರದ ಪಾತ್ರವನ್ನು ಪ್ರಶ್ನಿಸುವ ಧೈರ್ಯ ಮಾಡಬಾರದು ಎಂದು ಎಲ್ಲಾ ಜನವಾದೀ ಮನೋಭಾವದ ನಾಗರಿಕರಿಗೆ ಕೊಟ್ಟಿರುವ ಕೇಡಿನ ಬೆದರಿಕೆಯಾಗಿದೆ, ಇದು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಮಾಡಿರುವ ಅಪಚಾರವಾಗಿದೆ.
ಆದಾಗ್ಯೂ, ಅವರನ್ನು ಬಂಧಿಸುವ ಗುಜರಾತ್ ಆಡಳಿತದ ಕ್ರಮವು ಸಾಧ್ಯವಾಗಿರುವುದು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠದ ಪ್ರಶ್ನಾರ್ಹ ತೀರ್ಪಿನಿಂದ, ಅದು ದೂರುದಾರರನ್ನು ಆರೋಪಿಯನ್ನಾಗಿ ಮಾಡಿದೆ ಮತ್ತು “ಇಂತಹ ಪ್ರಕ್ರಿಯೆಯ ದುರುಪಯೋಗದಲ್ಲಿ ಭಾಗಿಯಾಗಿರುವ ಎಲ್ಲರೂ ಕಟಕಟೆಯಲ್ಲಿ ನಿಲ್ಲಬೇಕಾಗಿದೆ ಮತ್ತು ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಜರುಗಬೇಕಾಗಿದೆ” ಎಂದು ಆದೇಶಿಸುವ ಪ್ರಶ್ನಾರ್ಹ ತೀರ್ಪು ನೀಡಿದೆ.
ಇದರರ್ಥ ನ್ಯಾಯಾಲಯವು ಸ್ಥಾಪಿಸಿದ ಯಾವುದೇ ಎಸ್ಐಟಿ (ವಿಶೇಷ ತನಿಖಾ ತಂಡ)ಯನ್ನು ನ್ಯಾಯಾಂಗ ಮೇಲ್ಮನವಿಗಳ ವ್ಯಾಪ್ತಿಯಿಂದ ಹೊರಗಿರುವಂತದ್ದು ಎಂದು ಪರಿಗಣಿಸಬೇಕು ಮತ್ತು ಪ್ರಸ್ತುತ ಪ್ರಕರಣದಲ್ಲಿ ಝಾಕಿಯಾ ಜಾಫ್ರಿ ಮತ್ತು ತೀಸ್ತಾ ಸೆಟಲ್ವಾಡ್ ಮಾಡಿದಂತೆ, ಯಾರಾದರೂ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ, ಆಗ ಅವರ ವಿರುದ್ಧ “ಪ್ರಕ್ರಿಯೆಯ ದುರುಪಯೋಗ”ದ ಆರೋಪವನ್ನು ಹೊರಿಸಲಾಗುತ್ತದೆ. 16 ವರ್ಷಗಳ ಕಾಲ ನ್ಯಾಯಕ್ಕಾಗಿ ನಡೆದ ಒಂದು ಹೋರಾಟವನ್ನು “ದುರುದ್ದೇಶದಿಂದ ಮಡಕೆ ಬೇಯುತ್ತಲೇ ಇರು”ವಂತೆ ಮಾಡುವ ಕೆಲಸ ಎಂದು ಅಸಾಮಾನ್ಯ ಅವಹೇಳನಕಾರಿ ಪದಗಳಲ್ಲಿ ವರ್ಣಿಸಲಾಗಿದೆ.
ಈ ಎಸ್ಐಟಿ ಪ್ರಕರಣದಲ್ಲಿ ನ್ಯಾಯಾಲಯವು ನೇಮಿಸಿದ ನ್ಯಾಯ ಸಲಹೆಗಾರ(ಅಮಿಕಸ್ ಕ್ಯೂರಿ) ಕೂಡ, ಎಸ್ಐಟಿಯ ಹಲವು ಶಿಫಾರಸುಗಳನ್ನು ಒಪ್ಪುತ್ತಲೇ, ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಕುರಿತ ಐಪಿಸಿಯ ಕೆಲವು ಸೆಕ್ಷನ್ಗಳನ್ನು ಪರಿಗಣಿಸಬೇಕು ಎಂದು ದಾಖಲಿಸಿದೆ ಎಂಬುದನ್ನು ಗಮನಿಸಬೇಕು. ಈ ಹಿಂದೆ, ಏಪ್ರಿಲ್ 2004 ರಲ್ಲಿ, ಸ್ವತಃ ಸುಪ್ರೀಂ ಕೋರ್ಟ್ ಆಗಿನ ಸರ್ಕಾರದ ನಾಯಕರನ್ನು “ಆಧುನಿಕ ಕಾಲದ ನೀರೋಗಳು” ಎಂದು ಬಣ್ಣಿಸಿತ್ತು. ಪ್ರಸ್ತುತ ತೀರ್ಪು ಈ ಯಾವುದೇ ಸಮಸ್ಯೆಗಳನ್ನು ಪರಿಶೀಲಿಸುವುದಿಲ್ಲ. ತೀಸ್ತಾ ಅವರಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಿಗೆ ಶಿಕ್ಷೆ ನೀಡುತ್ತದೆ. ಇದು ಸರಿಪಡಿಕೆ ಅರ್ಜಿ( ಕ್ಯುರೇಟಿವ್ ಪಿಟಿಷನ್)ಗೆ ಸೂಕ್ತವಾದ ಒಂದು ಪ್ರಕರಣವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ ಕೇಸುಗಳನ್ನು ಹಿಂಪಡೆಯಬೇಕು ಮತ್ತು ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಮತ್ತು ಇತರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.