ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಸಮುದಾಯಗಳ ಮೀಸಲಾತಿ ಪ್ತಮಾಣವನ್ನು ಹೆಚ್ಚಿಸುವ ಬೇಡಿಕೆಗಾಗಿ ವಾಲ್ಮೀಕಿ ಮಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದಿರುವ ಧರಣಿ 140 ದಿನಗಳನ್ನು ಪೂರೈಸಿ 150ನೇ ದಿನದತ್ತ ಸಾಗಿದೆ. ಅಧಿಕಾರಕ್ಕೆ ಬರುವ ಮೊದಲು ಅತಿ ದೊಡ್ಡ ದನಿಯಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿಗಳು ಈಗಲೂ ಭರವಸೆಗಳನ್ನು ಕೊಡುವುದು ಬಿಟ್ಟರೆ ಬೇಡಿಕೆಯನ್ನು ಈಡೇರಿಸಿರುವತ್ತ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸರಕಾರದ ಈ ನಿರ್ಲಕ್ಷ್ಯ ಅನಪೇಕ್ಷಣೀಯ ಹಾಗೂ ವಿಷಾದನೀಯ.
ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಯ ಪ್ರಮಾಣವನ್ನು ನಿಗದಿಪಡಿಸಬೇಕು ಎನ್ನುವುದು ಭಾರತ ಸರ್ಕಾರದ ಯೋಜನಾ ಆಯೋಗದ ನಿರ್ದೇಶನ. ಅದನ್ನು ಅನುಸರಿಸಿ ಕೇಂದ್ರ ಮಟ್ಟದಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಶೇ.16.66 ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಶೇ.7.5 ಪ್ರಮಾಣವನ್ನು ನಿಗದಿಗೊಳಿಸಲಾಗಿದೆ. ಹತ್ತು ವರ್ಷಗಳಿಗೊಮ್ಮೆ ಮೀಸಲಾತಿ ಕುರಿತು ಪುನರ್ ವಿಮರ್ಶೆ ನಡೆಸಬೇಕೆಂಬ ಸೂಚನೆಯೂ ಇದೆ. ಪ್ರಮಾಣ ನಿಗದಿಯಾದ ನಂತರದ ಅವಧಿಯಲ್ಲಿ ಹಲವು ಹೊಸ ಸಮುದಾಯಗಳನ್ನು ಸೇರ್ಪಡೆ ಮಾಡಲಾಗಿದೆ. ಹೀಗಿದ್ದರೂ ಕರ್ನಾಟಕ ರಾಜ್ಯದಲ್ಲಿ ಈ ಪ್ರಮಾಣ ಶೇ.15 ಮತ್ತು ಶೇ.3 ನ್ನೇ ಮುಂದುವರಿಸಿರುವುದು ಅನ್ಯಾಯ. ಈ ಪ್ರಮಾಣವನ್ನು ನಿಗದಿಪಡಿಸಿದ್ದು 1958ರಲ್ಲಿ. ಆ ಬಳಿಕ ಕರ್ನಾಟಕದ ಎಸ್.ಟಿ. ಪಟ್ಟಿಗೆ 8 ಬಾರಿ ತಿದ್ದುಪಡಿಗಳು ಬಂದಿವೆ ಮತ್ತು ಹೊಸದಾಗಿ ಒಂದೆರಡು ಸಮುದಾಯಗಳನ್ನು ಸೇರಿಸಲಾಗಿದೆ. ಈ ಸಮುದಾಯಗಳಿಗೆ ಮೀಸಲಾತಿ ನೀಡಿಕೆಯು, ಸುಖಭೋಗದ ಸೌಲಭ್ಯವಲ್ಲ, ಬದಲಾಗಿ ಶತಮಾನಗಳಿಂದಲೂ ಆಗಿರುವ ಅನ್ಯಾಯಕ್ಕೆ ಒಂದು ಸಾಂತ್ವನ ಹಾಗೂ ಸಣ್ಣ ಪ್ರಮಾಣದ ಪರಿಹಾರದ ಸೌಲಭ್ಯ ಕೂಡ. ಆದರೆ ಆಳುವವರ್ಗಗಳು ಮೀಸಲಾತಿ ಸೌಲಭ್ಯವನ್ನು ಸಮುದಾಯಗಳಿಗೆ ಕೊಡುತ್ತಿರುವುದು ದಾನ ಅಥವಾ ಭಿಕ್ಷೆ ಎಂಬಂತೆ ವರ್ತಿಸುವುದು ಖಂಡನೀಯ. ಸಂಕುಚಿತ ರಾಜಕೀಯ ಹಿತಾಸಕ್ತಿ ಗಳಿಗಾಗಿ ಮೀಸಲಾತಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡು ಬರುತ್ತಿರುವುದು ಕೂಡ ಅಂತಹ ಹಿತಾಸಕ್ತಿಗಳಿಗಾಗಿ ಎನ್ನುವುದೂ ಗಮನಾರ್ಹ.
2015ರಲ್ಲಿ ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳ ಮೀಸಲಾತಿಯ ಈಗಿನ ಪ್ರಮಾಣವನ್ನು ಹೆಚ್ಚಿಸಬೇಕೆಂದು ತನ್ನ ಮುಂದೆ ಬಂದ ಪ್ರಕರಣವನ್ನು ಲಕ್ಷಿಸಿ ಸರ್ವೋಚ್ಛ ನ್ಯಾಯಾಲಯವು ನೀಡಿದ ನಿರ್ದೇಶನದಂತೆ ರಾಜ್ಯದ ಉಚ್ಛ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಕ್ರಮವಹಿಸಲು ನಿರ್ದೇಶನ ನೀಡಿತ್ತು. ಮುಂದಿನ ಆರು ತಿಂಗಳೊಳಗಾಗಿ ಮೀಸಲಾತಿ ಪ್ರಮಾಣದ ಹೆಚ್ಚಳಕ್ಕೆ ಸಂಬಂಧಿಸಿ ಸ್ಪಷ್ಟ ನಿಲುವು ತಾಳುವಂತೆ ಮತ್ತು ಕ್ರಮ ವಹಿಸುವಂತೆ ಸೂಚಿಸಿತ್ತು. ಈ ಬಗ್ಗೆ ಮೀನಾ ಮೇಷ ಎಣಿಸಿದ ಸರಕಾರದ ನಡೆಗೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿ ಚುನಾವಣಾ ವಿಷಯವೂ ಆಗಿತ್ತು. ಹಾಗೂ ಆ ಸಮುದಾಯಗಳನ್ಮು ಅಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಎತ್ತಿ ಕಟ್ಟಲು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿತ್ತು. ವಾಲ್ಮೀಕಿ ಸ್ವಾಮೀಜಿಯವರ ಪಾದಯಾತ್ರೆ, ಸಾರ್ವಜನಿಕ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಅವರ ಅದ್ಯಕ್ಷತೆಯ ಆಯೋಗವನ್ನು ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಿ ಅಧ್ಯಯನ ನಡೆಸಿತ್ತು. ಈ ಏಕ ಸದಸ್ಯ ಆಯೋಗ 2020 ರ ಜುಲೈ 7ರಂದು ವಿವರವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಅದಾಗಿ ಎರಡು ವರುಷಗಳಾಗುತ್ತಿದ್ದರೂ ಸರಕಾರ ಆ ವರದಿಯ ಕುರಿತು ತನ್ನ ಅಭಿಪ್ರಾಯವನ್ನು ತಿಳಿಸಿಲ್ಲ. ಮಾತ್ರವಲ್ಲ, ಅದನ್ನು ಸಾರ್ವಜನಿಕರೆದುರು ಮಂಡಿಸಿಯೂ ಇಲ್ಲ. ಬದಲಾಗಿ ನ್ಯಾ.ಅಡಿಯವರ ಇನ್ನೊಂದು ಸಮಿತಿಯನ್ನು ರಚಿಸಿ ಅದರ ವರದಿಗೆ ಕಾಯುತ್ತಿರುವುದು ವಿಳಂಬ ನೀತಿಯೂ ಹಾಗೂ ಹಾದಿ ತಪ್ಪಿಸುವ ಕ್ರಮವೂ ಅಲ್ಲದೇ ಬೇರೆನಲ್ಲ. ಈ ಸಮಿತಿಯ ವ್ಯಾಪ್ತಿಯಲ್ಲಿ ಹೊಸದಾಗಿ ಬೇಡಿಕೆ ಮಂಡಿಸಿರುವ ಕುರುಬ, ಪಂಚಮಸಾಲಿ ಮುಂತಾದ ಸಮುದಾಯಗಳ ಬೇಡಿಕೆಗಳೂ ಅಧ್ಯಯನ ವ್ಯಾಪ್ತಿಯು ಒಳಗೊಂಡಿದೆ. ಹೀಗಾಗಿ ನ್ಯಾ. ಹೆಚ್.ಎನ್.ನಾಗಮೋಹನದಾಸ್ ಅವರ ವರದಿಯ ಕುರಿತು ಸರಕಾರ ನಿಲುವು ತಾಳಲು ನಿರಾಕರಿಸಿರುವುದು ನ್ಯಾಯಾಲಯದ ನಿರ್ದೇಶನದ ಉಲ್ಲಂಘನೆ ಹಾಗೂ ಕಾನೂನು ಬಾಹೀರವೂ ಆಗಿದೆ. ಸರಕಾರದ ಕೊಡುತ್ತಿರುವ ಸಬೂಬು ವಂಚಿತ ಸಮುದಾಯಗಳಿಗೆ ಮತ್ತಷ್ಟೂ ವಂಚಿಸುವುದೇ ಆಗಿದೆ.
ಧರಣಿ ನಿರತ ಸ್ಥಳಕ್ಕೆ ಸ್ವತಃ ಮುಖ್ಯಮಂತ್ರಿಗಳು ಬಂದು ಹದಿನೈದು ದಿನಗಳಲ್ಲಿ ಸಕಾರಾತ್ಮಕವಾದ ಕ್ರಮಗಳನ್ಮು ಕೈಗೊಳ್ಳುವುದಾಗಿ ಹೇಳಿ ಹೋಗಿ ಈಗಾಗಲೇ ತಿಂಗಳೇ ಕಳೆದಿದೆ. ಮೀಸಲಾತಿಯ ಸೌಲಭ್ಯವನ್ನು ಅರ್ಥಹೀನಗೊಳಿಸುವಂತೆ ಇತರೆ ಜಾತಿಗಳನ್ನು ಎತ್ತಿ ಕಟ್ಟುವ ಹುನ್ನಾರವನ್ನು ಬಿಜೆಪಿ-ಸಂಘಪರಿವಾರ ನಡೆಸುತ್ತಿರುವ ಸುದ್ದಿಗಳೂ ಇರುವುದು ಆತಂಕಕಾರಿ. ಸ್ವತಃ ಸಂಘಪರಿವಾರ ಈಗಿನ ಸಾಮಾಜಿಕ ನ್ಯಾಯದ ಕರಿತು ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿಯೂ ವಿರೋಧಿ ಎನ್ನುವುದು ಕಾಲದಿಂದ ಕಾಲಕ್ಕೆ ಬಯಲಾದ ಸತ್ಯವೇ ಆಗಿದೆ. ಇಂತಹ ನಡೆಗಳು ಅತ್ಯಂತ ಅಪಾಯಕಾರಿ.
ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಅಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿವೆ. ಏನೊಂದೂ ಇತ್ಯರ್ಥ ಕಾಣದ ಸರಕಾರದ ನಡೆಯಿಂದ ಜನತೆಯಲ್ಲಿ ಅತೃಪ್ತಿಯು ಹೆಚ್ಚುತ್ತಿರುವುದನ್ನು ಗಮನಿಸಬೇಕು. ಸರಕಾರ ಈಗಲೂ ಅದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಬಾರದು. ಕೂಡಲೇ ಸಕಾರಾತ್ಮಕ ನಿರ್ಧಾರ ಕೈಗೊಂಡು ಧಮನಿತ ಸಮುದಾಯಗಳ ಬೇಡಿಕೆಯನ್ನು ಈಡೇರಿಸಲು ಮುಂದಾಗಬೇಕು.
ಇದೇ ಹೊತ್ತಿನಲ್ಲಿ ಖಾಸಗೀಕರಣ ಮತ್ತು ಉದಾರೀಕರಣದ ಆರ್ಥಿಕ ನೀತಿಗಳ ಜಾರಿಯಿಂದಾಗಿ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳು ಕುಗ್ಗಿ ಹೋಗಿರುವ ಹಿನ್ನೆಲೆಯಲ್ಲಿ ಮೀಸಲಾತಿಯ ಮಿತಿಯನ್ನು ಅರ್ಥಮಾಡಿಕೊಳ್ಳಬೇಕು. ಮೀಸಲಾತಿ ಪ್ರಮಾಣದ ಹೆಚ್ಚಳಕ್ಕಾಗಿ ನಡೆಯುವ ಹೋರಾಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ತರುವಂತಹ ಭೂಮಿ, ಉದ್ಯೋಗ ಮುಂತಾದ ಪ್ರಶ್ನೆಗಳಿಗಾಗಿ ನಡೆಸುವ ಆಂದೋಲನವಾಗಿಯೂ ವಿಸ್ತಾರಗೊಳ್ಳುವುದು ಅತಿ ಅಗತ್ಯ. ಸಾರ್ವಜನಿಕ ಶಿಕ್ಷಣ ಹಾಗೂ ಸಾರ್ವಜನಿಕ ರಂಗ ಉದ್ದಿಮೆಗಳ ಖಾಸಗೀಕರಣವು ಮತ್ತು ಸರಕಾರಗಳು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಅಲ್ಲಿನ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡದೇ ರದ್ದುಪಡಿಸಲು ಕ್ರಮವಹಿಸಿ, ಗುತ್ತಿಗೆ ಪದ್ದತಿ ಜಾರಿಗೊಳಿಸಿರುವ ಈ ಎಲ್ಲವೂ ಇರುವ ಮೀಸಲಾತಿ ಸೌಲಭ್ಯವನ್ನು ಕಿತ್ತುಕೊಂಡಿವೆ. ಇದನ್ನು ಉಳಿಸಿಕೊಳ್ಳದೇ, ಕೇವಲ ಮೀಸಲಾತಿ ಹೆಚ್ಚಳ ಕೇಳುವುದು ಪ್ರಯೋಜನಕಾರಿಯಾಗಿಲ್ಲ. ಈ ಹೋರಾಟ ಸಾರ್ವಜನಿಕ ಶಿಕ್ಷಣ ಹಾಗೂ ಸಾರ್ವಜನಿಕ ಉದ್ದಿಮೆಗಳ ಬಲಪಡಿಕೆಗೆ, ವಿಸ್ತರಣೆಗೆ ಮತ್ತು ಖಾಸಗೀಕರಣ ವಿರೋಧಿಸಲು ಕ್ರಮವಹಿಸಬೇಕು. ಹಾಗೇ ಖಾಲಿ ಇರುವ ಖಾಯಂ ಹುದ್ದೆಗಳನ್ನು ತುಂಬಲು ಒತ್ತಾಯಿಸುವುದು. ಈ ಹಕ್ಕುಗಳನ್ನು ಹೋರಾಟಗಾರರು ತಮ್ಮ ಹಕ್ಕೋತ್ತಾಯಗಳಲ್ಲಿ ಸೇರಿಸಿಕೊಳ್ಳುವುದು ಅವಶ್ಯವಾಗಿದೆ.
ಈಗಿನ ಹೋರಾಟ ಅತ್ಯಂತ ಸಂಯಮ ಮತ್ತು ಪ್ರಜಾಸತ್ತಾತ್ಮಕವಾಗಿ ನಡೆದಿರುವುದು ಶ್ಲಾಘನೀಯ. ಈ ಹೋರಾಟವನ್ನು ಬೆಂಬಲಿಸಿ, ಅದನ್ನು ಮತ್ತಷ್ಟು ಹರಿತಗೊಳಿಸುವತ್ತ ಪ್ರಜಾಸತ್ತಾತ್ಮಕ ಶಕ್ತಿಗಳು ಮುಂದಾಗಬೇಕಿದೆ.