ಯು. ಬಸವರಾಜ
ಕರ್ನಾಟಕದಲ್ಲಿ ಹಿಂಬಾಗಲಿಂದ ಅಧಿಕಾರಕ್ಕೆ ಬಂದ ಫ್ಯಾಸಿಸ್ಟ್ ಮನೋಭಾವದ ಬಿಜೆಪಿಯ ವಿಭಜನಕಾರಿ, ಸುಲಿಗೆಯ ದುರಾಡಳಿತಕ್ಕೆ ಜನತೆ ತತ್ತರಿಸಿದ್ದಾರೆ. ಪರಿಣಾಮಕಾರಿಯಾದ ವಿರೋಧಪಕ್ಷವಾಗಿ ಜನಪರ ನೀತಿಗಳ ಆಧಾರದಲ್ಲಿ ಪ್ರತಿರೋಧವನ್ನು ಒಡ್ಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ, ಜನಪರ ನೀತಿಗಳ ಬದಲಿಗೆ ಲೂಟಿಕೋರ ನೀತಿಗಳನ್ನೇ ಮುನ್ನಡೆಸುವ ರಾಜಕೀಯ ಪಕ್ಷಗಳು ಕೇವಲ ಒಂದರ ಬದಲಿಗೆ ಮತ್ತೊಂದು ಅಧಿಕಾರಕ್ಕೆ ಬರುವ ರಾಜಕಾರಣ ಒಂದೇ, ಸಾಮಾಜಿಕ ಆರ್ಥಿಕ ಮುನ್ನಡೆಯನ್ನು ತರಲು ಸಾಧ್ಯವಿಲ್ಲ. ಜನತೆಗೆ ನಿಜ ಪರಿಹಾರವನ್ನೂ ನೀಡುವುದಿಲ್ಲ ಎನ್ನುವುದು ಅನುಭವ. ರಾಜ್ಯದಲ್ಲಿ ಐಕ್ಯ ಜನಾಂದೋಲನ ಬೆಳೆದು ಬರುತ್ತಿರುವ ಸಂದರ್ಭದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಜನ ಪರ್ಯಾಯ ರಾಜಕಾರಣವೇ ನೈಜ ಪರ್ಯಾಯ ಹೇಗೆ ಎಂಬುದನ್ನು ಸ್ಪಷ್ಟ ಕಣ್ಣೋಟ ಹಾಗೂ ನಿರ್ದಿಷ್ಟ ಪ್ರಮುಖಾಂಶಗಳ ಪ್ರತಿಪಾದನೆಯಿಂದ ವಿವರಿಸಿದ್ದಾರೆ ಸಿಪಿಐ(ಎಂ) ನ ರಾಜ್ಯ ಕಾರ್ಯದರ್ಶಿ ಸಂಗಾತಿ ಯು ಬಸವರಾಜ ರವರು.
ಲೂಟಿಕೋರ ಹಾಗೂ ವಿಭಜನಕಾರಿ ರಾಜಕಾರಣ
ಜನಾದೇಶವನ್ನು ಪಡೆಯದ ಬಿಜೆಪಿ ನೇತೃತ್ವದ ಕರ್ನಾಟಕ ಸರಕಾರ, ಕರ್ನಾಟಕ ರಾಜ್ಯವನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆದು, ಅದರ ವಿರುದ್ಧ ವ್ಯಾಪಕ ಪ್ರತಿರೋಧ ಬಾರದಂತೆ ತಡೆಯುವ ಮತ್ತು ಚಳುವಳಿ ನಿರತ ಜನತೆಯ ದಿಕ್ಕನ್ನು ತಪ್ಪಿಸುವ ಕೆಲಸದಲ್ಲಿ ವ್ಯಾಪಕವಾಗಿ ತನ್ನನ್ನು ತೊಡಗಿಸಿಕೊಂಡಿದೆ.
ಕಾರ್ಪೊರೇಟ್ ಕಂಪನಿಗಳು, ಆರ್.ಎಸ್.ಎಸ್. ಮತ್ತು ಮುಸ್ಲಿಂ ಮತಾಂಧ ಶಕ್ತಿಗಳು ಸಹಯೋಗದಲ್ಲಿ, ಸ್ಥಳೀಯ ಆಳುವ ಜನ ವರ್ಗಗಳ ಜೊತೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಠವಿದೆ. ಇದರ ಭಾಗವಾಗಿಯೇ, ಪ್ರಧಾನ ಮಂತ್ರಿಗಳು ದೇಶದ ರೈತರ ಬೃಹತ್ ಐತಿಹಾಸಿಕ ಚಳುವಳಿಗೆ ಮಣಿದು, ದೇಶದ ಕೃಷಿ ರಂಗವನ್ನು ಕಾರ್ಪೋರೇಟ್ ಕಂಪನಿಗಳಿಗೆ ಒತ್ತೆ ಇಡುವ ರೈತ ಹಾಗೂ ಗ್ರಾಮೀಣ ಸಮುದಾಯದ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ಜಗತ್ತಿನ ಮುಂದೆ ಮಂಡಿಯೂರಿ ಕೈಮುಗಿದು ಕ್ಷಮೆ ಕೋರಿ ವಾಪಾಸು ಪಡೆದಿದ್ದರೂ, ರಾಜ್ಯದ ಶ್ರೀ ಬಸವರಾಜ ಬೊಮ್ಮಾಯಿಯವರ ಸರಕಾರ ಅವುಗಳನ್ನು ಮುಂದುವರೆಸುತ್ತಿದೆ. ರಾಜ್ಯದ ಜನತೆಯ ಪ್ರತಿರೋಧದ ನಡುವೆಯು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ – 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ಇವು ರಾಜ್ಯದ ಎಲ್ಲ ರೈತರು, ಕೃಷಿಕೂಲಿಕಾರರು, ಕಸುಬುದಾರರು, ಹೈನುಗಾರರ ಮತ್ತು ಹೈನೋದ್ಯಮ, ಮಾಂಸೋದ್ಯಮ, ಚರ್ಮೋದ್ಯಮದಲ್ಲಿ ತೊಡಗಿದ ಮತ್ತು ಸಣ್ಣ ಹಾಗೂ ಮದ್ಯಮ ಕೈಗಾರಿಕೊದ್ಯಮದಲ್ಲಿ ತೊಡಗಿದ ಸಣ್ಣ ಬಂಡವಾಳದಾರರು ಮತ್ತು ಕಾರ್ಮಿಕರು ಹಾಗೂ ವ್ಯಾಪಾರಿಗಳ ಬದುಕನ್ನು ಹೊಸಕಿ ಹಾಕಲಿವೆ. ದಲಿತರು ಹಾಗೂ ಅಲ್ಪ ಸಂಖ್ಯಾತರ ಆಹಾರದ ಹಕ್ಕಿನ ಮೇಲೆ ಧಾಳಿ ನಡೆಸಿವೆ.
ಅದೇ ರೀತಿ, ಕಾರ್ಮಿಕರು ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಸಮರ ಶೀಲ ಹೋರಾಟಗಳನ್ನು ನಡೆಸಿ ಪಡೆದುಕೊಂಡು ಕಾರ್ಮಿಕರ ಪರವಾದ ಕಾಯ್ದೆಗಳನ್ನು ಹಿಂಪಡೆದು, ಕಾರ್ಮಿಕರನ್ನು ನಿರ್ಧಯವಾಗಿ ಶೋಷಣೆಗೊಳಪಡಿಸುವ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ, ಕಾರ್ಮಿಕ ವಿರೋಧಿ ಸಂಹಿತೆಗಳ ಜಾರಿಗೆ ಕ್ರಮವಹಿಸುತ್ತಿದೆ. ಮಾತ್ರವಲ್ಲಾ ರಾಜ್ಯದ ಮಹಿಳೆಯರ, ದಲಿತರ, ಎಲ್ಲ ಶೂದ್ರ ಸಮುದಾಯದ ಮತ್ತು ಬಡಜನರ ಶಿಕ್ಷಣದ ಮೇಲೆ ಕಲ್ಲುಹಾಕಿ ಅವರನ್ನು ಶಿಕ್ಷಣದಿಂದ ವಂಚಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದ ಮುಚ್ಚಿದ ಕೈಗಾರಿಕೆಗಳನ್ನು ತೆರೆಯಲು ಸಾರ್ವಜನಿಕ ಬಂಡವಾಳ ಹೂಡದಿರುವುದು, ಸರಕಾರದ ವಿವಿಧ ಇಲಾಖೆಗಳಲ್ಲಿನ ಲಕ್ಷಾಂತರ ಉದ್ಯೋಗಗಳನ್ನು ತುಂಬದಿರುವುದು ಮತ್ತು ರೈಲ್ವೇ, ವಿಮಾನಯಾನ, ಬಿಎಸ್ಎನ್ಎಲ್, ಬ್ಯಾಂಕ್, ವಿಮಾ ಮುಂತಾದ ಸಾರ್ವಜನಿಕ ರಂಗದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಈ ಎಲ್ಲವೂ ನಿರುದ್ಯೋಗವನ್ನು ಹೆಚ್ಚಿಸಲಿವೆ ಮತ್ತು ದುಡಿಯುವ ಜನತೆಯ ಉದ್ಯೋಗ ಭದ್ರತೆಗೆ ಅಪಾಯವನ್ನುಂಟು ಮಾಡುತ್ತಿವೆ. ಸಾರ್ವಜನಿಕ ಶಿಕ್ಷಣ ಮತ್ತು ಉದ್ದಿಮೆಗಳ ಹಾಗೂ ಸಂಸ್ಥೆಗಳ ಖಾಸಗೀಕರಣ, ಸರಕಾರಿ ಇಲಾಖೆಗಳ ಉದ್ಯೋಗಗಳನ್ನು ಖಾಲಿ ಇಡುವ ಮೂಲಕ ಸಾಮಾಜಿಕ ತಾರತಮ್ಯಕ್ಕೊಳಗಾದ ಜನತೆಯ ಮೀಸಲಾತಿ ಸೌಲಭ್ಯವನ್ನು ಕಸಿದುಕೊಂಡಿವೆ. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯಾಚರಣೆಯಲ್ಲಿ ಶೂದ್ರ ಹಾಗೂ ದಲಿತ ಸಮುದಾಯಗಳು ಮತ್ತು ಮಹಿಳೆಯರು ನಲುಗುವಂತೆ ಮಾಡಲು ಮತ್ತು ಅವರ ಮತಾಂತರದ ಹಾಗೂ ಅಂತರ್ಜಾತಿಯ ವಿವಾಹದ ಹಕ್ಕುಗಳನ್ನು ಮೊಟಕು ಮಾಡಲು ಸಂವಿಧಾನ ವಿರೋಧಿಯಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯವು ಈಗಾಗಲೇ ತೀವ್ರತೆರನಾದ ಆರ್ಥಿಕ ಬಿಕ್ಕಟ್ಟಿಗೊಳಗಾಗಿದೆ. ಕರೋನಾ ಕಾಲದಲ್ಲಿ ನಿಜಾರ್ಥದಲ್ಲಿ ಜನತೆಗೆ ನೆರವು ನೀಡಲಿಲ್ಲ ಬದಲಿಗೆ, ಇಂತಹ ಪ್ರಕೃತಿ ವಿಕೋಪವನ್ನು ಲೂಟಿಕೋರರ ಲೂಟಿಗೆ ತೆರೆದು ಬಿಡಲಾಯಿತು. ಇದರಿಂದಾಗಿ ಜನತೆ ಮತ್ತಷ್ಠು ಸಂಕಷ್ಠಕ್ಕೀಡಾಗುವಂತಾಯಿತು. ಕಳೆದ ವರ್ಷ ತೀವ್ರ ಅತೀವೃಷ್ಠಿಗೀಡಾಗಿ ರಾಜ್ಯವು ನಲುಗಿ ಹೋದಾಗಲೂ ಜನರ ರಕ್ಷಣೆಗೆ ಗಂಭೀರ ಕ್ರಮಗಳನ್ನು ವಹಿಸಲಿಲ್ಲ.
ಹೀಗೆ ಸಂಕಷ್ಠಗಳ ಮೇಲೆ, ಸಂಕಷ್ಠಗಳ ಹೊರೆಯನ್ನು ಅನುಭವಿಸುತ್ತಿರುವಾಗಲೇ, ಪೆಟ್ರೋಲ್, ಡೀಸೆಲ್, ರಸಾಯನಿಕ ಗೊಬ್ಬರ, ಬೀಜ, ಕ್ರಿಮಿನಾಶಕ ಹಾಗೂ ಔಷಧಿಗಳ ಮತ್ತು ಎಲ್ಲ ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆಯ ಹೊರೆಯನ್ನು ನಿರ್ಧಯವಾಗಿ ಹೇರಲಾಗಿದೆ.
ಇಂತಹ ಎಲ್ಲ ಸಂಕಷ್ಟಗಳ ವಿರುದ್ದ ಜನತೆ ಧ್ವನಿ ಎತ್ತದಂತೆ ಮತ್ತು ಪ್ರತಿಭಟನೆಯಲ್ಲಿ ತೊಡಗದಂತೆ ಅವರ ಗಮನವನ್ನು ಸಮಸ್ಯೆಯಲ್ಲದ ವಿಷಯಗಳನ್ನು, ಅವುಗಳೇ ಗಂಭೀರ ಸಮಸ್ಯೆಯೆಂಬಂತೆ ಬಿಂಬಿಸಿ ಆ ಕಡೆ ತಿರುಗಿಸಲು ಈ ಆಳುವ ಲೂಟಿಕೋರ ಶಕ್ತಿಗಳು ನಿರಂತರವಾಗಿ ಶ್ರಮಿಸುತ್ತಿವೆ. ರಾಜ್ಯದ ಜನತೆ ಮತ್ತು ಹೋರಾಟ ನಿರತ ಶಕ್ತಿಗಳು, ಇವರು ಎತ್ತುವ ಹೊಸ ಪ್ರಶ್ನೆಗಳಿಗೆ ಸ್ಪಂದಿಸುವಂತಹ ದುಸ್ಥಿತಿಯನ್ನು ನಿರ್ಮಿಸಿ, ಮೂಲ ಲೂಟಿಕೋರತನವನ್ನು ನೇಪತ್ಯದಲ್ಲುಳಿಯುವಂತೆ ಕ್ರಮವಹಿಸುವ ಕುತಂತ್ರ ಮಾಡುತ್ತಿವೆ. ಹಿಜಾಬ್ ಹಲಾಲ್, ಜಟ್ಕಾಕಟ್, ಈಗ ಪಠ್ಯ ಪುಸ್ತಕ ಪರಿಷ್ಕರಣೆ, ಆರ್.ಎಸ್.ಎಸ್. ಪರ, ವಿರೋದ ಇವುಗಳನ್ನು ಗುರುತಿಸಬಹುದು.
ಲೂಟಿಕೋರರ ಮತ್ತೊಂದು ಪಕ್ಷ ಆಡಳಿತ ಪಕ್ಷಕ್ಕೆ ಪರ್ಯಾಯವಲ್ಲ
ರಾಜ್ಯದಲ್ಲಿ ವಿರೋಧ ಪಕ್ಷಗಳೆಂದು ಕರೆಯಲ್ಪಡುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಾಪೇಕ್ಷವಾಗಿ ಎರಡೂ ಒಟ್ಟಾಗಿ ಬಿಜೆಪಿಗಿಂತಲೂ ರಾಜ್ಯದಾದ್ಯಂತ ಹೆಚ್ಚಿನ ಜನ ಬೆಂಬಲ ಹೊಂದಿದ್ದರೂ ಮತ್ತು ಎರಡೂ ಸೇರಿ ವಿಧಾನಸಭೆಯಲ್ಲೂ ಪರಿಣಾಮಕಾರಿ ವಿಧಾನ ಸಭಾ ಸದಸ್ಯರ ಬಲ ಹೊಂದಿದ್ದರೂ ಬಿಜೆಪಿ ಜಾರಿಗೊಳಿಸುತ್ತಿರುವ ಲೂಟಿಕೋರ ಕಾರ್ಪೋರೇಟ್ ನೀತಿಗಳಿಂದ ರಾಜ್ಯವನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮುಂದಾಗುತ್ತಿಲ್ಲ. ಬದಲಿಗೆ ಅವುಗಳನ್ನು ಬೆಂಬಲಿಸುತ್ತಿವೆ. ಕೇವಲ ತೋರಿಕೆಗೆ ವಿರೋಧಿಸುವ ಕ್ರಮವಹಿಸುತ್ತಿವೆ. ಕೋಮುವಾದದ ವಿಚಾರದಲ್ಲಿಯೂ ರಾಜ್ಯದ ಸಮಗ್ರತೆ ಹಾಗೂ ಸೌಹಾರ್ಧತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮವಹಿಸುತ್ತಿಲ್ಲ. ಬದಲಿಗೆ ಹಿಂದುತ್ವವಾದಿಗಳ ಆಟಾಟೋಪ ಜಾಸ್ತಿಯಾದಷ್ಠು ಅಲ್ಪ ಸಂಖ್ಯಾತರ ಹಾಗೂ ದಲಿತರ ಮತ ಬ್ಯಾಂಕ್ ತಮಗೆ ದೊರೆಯುವುದೆಂಬ ಸಂಕುಚಿತ ರಾಜಕಾರಣ ಮೆರೆಯುತ್ತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ, ಹಿಂದುತ್ವವಾದದ ವಿಚಾರದಲ್ಲಿ ಇವು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾಗಿ ತೀವ್ರ ಮಧ್ಯ ಪ್ರವೇಶ ನಡೆಸದೇ ಆ ಕುರಿತ ಮೆದು ಧೋರಣೆ ತಾಳುತ್ತಿರುವುದನ್ನು ನೋಡಬಹುದಾಗಿದೆ.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸುಮಾರು 50 ವರ್ಷಗಳ ಕಾಲ ರಾಜ್ಯಭಾರ ಮಾಡಿದೆ. ಅದೇ ರೀತಿ, ಜೆಡಿಎಸ್ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಹತ್ತಾರು ವರ್ಷಗಳ ರಾಜ್ಯ ಭಾರ ಮಾಡಿದೆ. ಆಗಲೂ ಅವುಗಳು ಜನ ಪರ ರಾಜ್ಯ ಭಾರ ಮಾಡದೇ ಲೂಟಿಕೋರ ಆಳುವ ವರ್ಗಗಳ ಪರವಾಗಿಯೇ ರಾಜ್ಯ ಭಾರ ಮಾಡಿರುವುದು ವೇದ್ಯವಾಗಿದೆ.
ಲೂಟಿಕೋರತನಕ್ಕೆದುರಾಗಿ ನೈಜ ಅಭಿವೃದ್ಧಿಗೆ – ಎಡ ಮತ್ತು ಪ್ರಜಾಸತ್ತಾತ್ಮಕ ಪರ್ಯಾಯ
ಒಂದೆಡೆ ಬಿಜೆಪಿ, ಆರ್.ಎಸ್.ಎಸ್. ಮುಂತಾದ ಕೋಮುವಾದಿಶಕ್ತಿಗಳು ಕಾರ್ಪೊರೇಟ್ ಲೂಟಿಯ ನೆರವಿಗೆ ನಿಂತಿರುವಾಗಲೇ, ಅದೇ ರೀತಿ, ಆಳುವ ಪಕ್ಷಕ್ಕೆದುರಾಗಿ, ವಿರೋಧ ಪಕ್ಷಗಳೆಂದು ಕರೆಸಿಕೊಳ್ಳುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜನತೆಯ ನಿಜವಾದ ಪ್ರತಿಪಕ್ಷಗಳಾಗಿ ಕಾರ್ಯ ನಿರ್ವಹಿಸುವದನ್ನು ಕೈಬಿಟ್ಟು, ಅಧಿಕಾರಶಾಹಿ ಸಂಕುಚಿತ ರಾಜಕಾರಣದಲ್ಲಿ ತೊಡಗಿ, ಲೂಟಿಕೋರತನ ಮುಂದೆ ಸಾಗಲು ಅನುವು ಮಾಡಿಕೊಡುತ್ತಿರುವ ಸಂದರ್ಭದಲ್ಲಿಯೇ, ಇನ್ನೊಂದೆಡೆ, ರಾಜ್ಯದಲ್ಲಿ ಸಣ್ಣ ಶಕ್ತಿಗಳಾದರೂ, ಜನಪರವಾದ, ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳಾದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್), ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ, ಲೆನಿನ್ ವಾದಿ) ಲಿಬರೇಷನ್, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್, ಆರ್ಪಿಐ (ಅಂಬೇಡ್ಕರ್) ಮತ್ತು ಸ್ವರಾಜ್ ಇಂಡಿಯಾ ಈ ಏಳು ಪಕ್ಷಗಳು ಒಟ್ಟಾಗಿ, ಆಳುವ ವರ್ಗಗಳ ಈ ಲೂಟಿಕೋರತನದ ದುರ್ನೀತಿಗಳ ವಿರುದ್ದ ದುಡಿಯುವ ಜನತೆಯ ಅಭಿವೃದ್ಧಿಯ ಪರವಾದ ಹಾಗೂ ಸೌಹಾರ್ಧ, ಸಮೃದ್ಧ ಹಾಗೂ ಜನತಾ ಕರ್ನಾಟಕ ನಿರ್ಮಾಣಕ್ಕಾಗಿ, ಎಡ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ನೀತಿಗಳನ್ನು ರೂಪಿಸಲು ಕ್ರಮವಹಿಸಿವೆ. ಇದೊಂದು ಸಕಾರಾತ್ಮಕ ಹಾಗೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇವುಗಳು ಇದಕ್ಕಾಗಿ ಜುಲೈ 16 ರಂದು ರಾಜ್ಯ ಮಟ್ಟದ ರಾಜಕೀಯ ಸಮಾವೇಶವನ್ನು ಸಂಘಟಿಸಲಿವೆ.
ಇವುಗಳು ವಾಸ್ತವಿಕವಾಗಿ ಲೂಟಿಕೋರ ಮತ್ತು ವಿಭಜನಕಾರಿ ಶಕ್ತಿಗಳ ವಿರುದ್ಧ ಜನ ಸಮುದಾಯಗಳನ್ನು ಸಂಘಟಿಸುತ್ತಾ ಒಟ್ಟಾಗಿ ಚಳುವಳಿಯಲ್ಲಿ ತೊಡಗಿವೆ. ರಾಜ್ಯದಲ್ಲಿ ರಾಜಕೀಯ ಶಕ್ತಿಗಳಾಗಿ ಇವುಗಳು ದುರ್ಬಲವಾಗಿದ್ದರೂ, ಜನ ಚಳುವಳಿಗಳನ್ನು ಸಂಘಟಿಸಿ ಪ್ರತಿರೋಧ ಒಡ್ಡುವಲ್ಲಿ ಇವುಗಳು ಪರಿಣಾಮಕಾರಿ ಪಾತ್ರ ಹೊಂದಿವೆ.
ಲೂಟಿಕೋರ ಆಳುವ ವರ್ಗಗಳ ರಾಜಕೀಯ ಪಕ್ಷಗಳಿಗೆ, ಇವುಗಳು ಬಹುತೇಕ ನಿಜವಾದ ದುಡಿಯುವ ವರ್ಗಗಳನ್ನು ಪ್ರತಿನಿಧಿಸುವ ಮತ್ತು ದುಡಿಯುವ ಜನತೆಯ ಮತ್ತು ರಾಜ್ಯದ ನೈಜ ಅಭಿವೃದ್ಧಿಯನ್ನು ಸಾಧಿಸಲು ಶ್ರಮಿಸುವ ಪಕ್ಷಗಳಾಗಿವೆ. ಭಿನ್ನ ಬಿನ್ನವಾದ ಪರ್ಯಾಯ ಹಾದಿಗಳನ್ನು ಹೊಂದಿದ್ದರೂ, ಜನತೆಯ ತುರ್ತು ಪ್ರಶ್ನೆಗಳ ವಿಚಾರದಲ್ಲಿ ಸಮಾನ ಅಭಿಪ್ರಾಯದೊಂದಿಗೆ ಮಧ್ಯ ಪ್ರವೇಶ ನಡೆಸುತ್ತಿವೆ.
ಈ ಏಳು ಪಕ್ಷಗಳೀಗ ಹಲವು ಸುತ್ತಿನ ಮಾತುಕತೆ ಮತ್ತು ಸಭೆಗಳ ಮೂಲಕ ಕರ್ನಾಟಕ ರಾಜ್ಯದ ನೈಜ ಅಭಿವೃದ್ಧಿ ಸಾಧನೆಗಾಗಿ ಕ್ರಮವಹಿಸಿವೆ.
ಕಳೆದ ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜನತೆಯ ಮೂಲ ಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಘೋರವಾಗಿ ವಿಫಲವಾಗಿರುವುದನ್ನು ಗುರುತಿಸಿವೆ. ಸ್ವಾತಂತ್ರ್ಯ ಹೋರಾಟದ ಘೋಷಣೆಯಾದ ಉಳುವವನನ್ನ ಹೊಲದೊಡೆಯನನ್ನಾಗಿಸಲು ಪರಿಣಾಮಕಾರಿ ಕ್ರಮವಹಿಸದೇ ಹೋದುದರಿಂದ ಈಗಲೂ ಜಾತಿ ಹಾಗೂ ಲಿಂಗ ತಾರತಮ್ಯ, ಅಸ್ಪೃಯಚರಣೆ ಮುಂದುವರೆದಿದೆ ಎಂದಿವೆ.
ಶ್ರೀಮಂತರು ಹಾಗೂ ಬಡವರ ನಡುವೆ ಭಾರೀ ಅಂತರ ನಿರ್ಮಾಣವಾಗಿರುವುದು, ಅದು ಮತ್ತಷ್ಠು ವ್ಯಾಪಕ ಗೊಳ್ಳುತ್ತಿರುವುದು ಬಡವರು, ದಲಿತರು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಮೂಲವಾಗಿದೆಯೆಂದಿವೆಯಲ್ಲದೇ ಜನತೆಯ ಕೊಂಡು ಕೊಳ್ಳುವ ಶಕ್ತಿಯ ತೀವ್ರ ಕುಸಿತವು ಕೈಗಾರಿಕಾಭಿವೃದ್ಧಿಗೆ, ಆ ಮೂಲಕ ನಿರುದ್ಯೋಗ ನಿವಾರಣೆಗೆ ಮತ್ತು ರಾಜ್ಯದ ನೈಜ ಅಭಿವೃದ್ಧಿಗೆ ಮಾರಕವಾಗಿರುವುದನ್ನು ಗುರುತಿಸಿವೆ.
ಇವುಗಳಿಗೆ ಪರ್ಯಾಯವಾಗಿ, ಉಳುವವನನ್ನು ಹೊಲದೊಡೆಯನಾಗಿಸುವುದು, ರೈತ ವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆದು, ಬೆಂಬಲ ಬೆಲೆ ಕಾಯ್ದೆಯ ಮೂಲಕ ಬೆಂಬಲ ಬೆಲೆ ಖಾತರಿಗೆ ಕ್ರಮ. ಋಣ ಮುಕ್ತ ಕಾಯ್ದೆಯ ಮೂಲಕ ರೈತ- ಕೂಲಿಕಾರರ ಸಾಲ ಮನ್ನಗಳಿಗೆ ಕ್ರಮವಹಿಸುವುದು. ಉದ್ಯೋಗ ಖಾತರಿ ವಿಸ್ತರಣೆಯ ಮೂಲಕ ವ್ಯಾಪಕ ಉದ್ಯೋಗ ಸೃಷ್ಠಿಸುವುದು, ಕನಿಷ್ಠ ವೇತನ ಹೆಚ್ಚಳಕ್ಕೆ ಕ್ರಮ, ಮುಂತಾದುವುಗಳ ಮೂಲಕ ಆದಾಯ ಹೆಚ್ಚಿಸಿ, ಸ್ವಾವಲಂಬನೆಗೆ ಕ್ರಮವಹಿಸಿ, ಬಡತನ, ಅನಕ್ಷರತೆ, ಹಸಿವು, ಸಾಲಬಾಧೆಯ ಆತ್ಮಹತ್ಯೆ ಹೆಸರಿನ ಕೊಲೆಗಳು, ನಿರುದ್ಯೋಗ, ಭಿಕ್ಷಾಟನೆ, ಲಿಂಗ ಹಾಗು ಜಾತಿತಾರತಮ್ಯ, ಅಸ್ಪೃಶ್ಯಾಚರಣೆ, ಬಿಟ್ಟಿಚಾಕರಿ, ಜೀತಗಾರಿಕೆ, ದೌರ್ಜನ್ಯದ ದೇವದಾಸಿ ಪದ್ಧತಿ, ದೌರ್ಜನ್ಯದ ವೇಶ್ಯಾವಾಟಿಕೆ, ಕೋಮುವಾದ ಮುಂತಾದ ಮೂಲ ಭೂತ ಸಮಸ್ಯೆಗಳ ನಿವಾರಣೆಗಾಗಿ ಕ್ರಮವಹಿಸುವ ಮತ್ತು ಕೊಂಡುಕೊಳ್ಳುವ ಶಕ್ತಿ ಅಭಿವೃದ್ಧಿಗಾಗಿ, ಆಂತರಿಕ ಮಾರುಕಟ್ಟೆ ವಿಸ್ತರಣೆಗಾಗಿ, ಸಾರ್ವಜನಿಕ ಬಂಡವಾಳ ಹೂಡಿಕೆಯ ಹೆಚ್ಚಳ, ಕೈಗಾರಿಕಾಭಿವೃದ್ಧಿಯ ವಿಸ್ತರಣೆಯ ಮತ್ತು ಪ್ರದೇಶಿಕ ಅಸಮತೋಲನ ನಿವಾರಣೆಯ ಕ್ರಮಗಳ ಸಾಧನೆಯ ನೀತಿಗಳನ್ನು ರೂಪಿಸಿವೆ. ಖಂಡಿತಾ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಈ ಏಳು ಪಕ್ಷಗಳ ಈ ಐಕ್ಯ ನಡೆ ಖಂಡಿತಾ ಭವಿಶ್ಯದ ಜನತಾ ಕರ್ನಾಟಕದ ನಿರ್ಮಾಣದ ನಾಂದಿಯಾಗಿದೆ.
ಈ ಏಳು ಪಕ್ಷಗಳು ಸಮೃದ್ಧ, ಸೌಹಾರ್ಧ ಮತ್ತು ಜನತಾ ಕರ್ನಾಟಕ ನಿರ್ಮಾಣವನ್ನು ಈ ಪರ್ಯಾಯ ನೀತಿಗಳನ್ನು ಪ್ರಚುರಿಸುವ ಮೂಲಕ ಹಾಗೂ ರಾಜ್ಯದ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಜನತಾ ಶಕ್ತಿಗಳನ್ನು ಒಗ್ಗೂಡಿಸುವ ಮೂಲಕ ಸಾಧಿಸುವುದಾಗಿ ಘೋಷಿಸಿವೆ.
ಆಳುವ ಲೂಟಿಕೋರ ವರ್ಗಗಳ ಪರ ಆಡಳಿತ ನಡೆಸುವ ಒಂದು ಪಕ್ಷದ ಬದಲಿಗೆ ಮತ್ತೊಂದು ಅದೇ ಲೂಟಿಕೋರರ ಪರವಾಗಿರುವ ನೀತಿಗಳನ್ನು ಜಾರಿಗೆ ತರುವ ಮತ್ತೊಂದು ಪಕ್ಷ ಜನ ಪರ್ಯಾಯವಾಗಲಾರದೆಂದು ಜನತೆಗೆ ಮನವಿ ಮಾಡಿರುವ ಈ ಪಕ್ಷಗಳು ದುಡಿಯುವ ಜನತೆಯ ಪರವಾದ ಪರ್ಯಾಯ ನೀತಿಗಳನ್ನು ಹೊಂದಿರುವ ತಾವುಗಳೇ ಜನತೆಯ ನೈಜ ಪರ್ಯಾಯವೆಂದು ಬಿಂಬಿಸಿಕೊಂಡಿವೆ.