ರಾಜ್ಯವನ್ನು ಆರ್ಥಿಕ ದುಸ್ಥಿತಿಯಿಂದ ಮೇಲೆತ್ತಲು, ಬಿಕ್ಕಟ್ಟಿನಿಂದ ಪಾರು ಮಾಡಲು, ಜನತೆಯ ದೌರ್ಜನ್ಯ ದಬ್ಬಾಳಿಕೆಗಳನ್ನು ಗಣನೀಯವಾಗಿ ನಿಯಂತ್ರಿಸಲು, ಸೌಹಾರ್ಧತೆ ಹಾಗೂ ಸಾಮರಸ್ಯ ಸಾಧನೆಗೆ ಕ್ರಮವಹಿಸಲು, ಸ್ವಾವಲಂಬಿ ಬದುಕನ್ನು ವಿಸ್ತರಿಸಲು, ತಲಾ ಆದಾಯವನ್ನು ವಿಸ್ತರಿಸಿ ಬಲಗೊಳಿಸಲು ಮತ್ತು ಸಾಮಾಜಿಕ ತಾರತಮ್ಯದ ನಿವಾರಣೆಗಾಗಿ ಈ ಕೆಳಕಂಡ ಪರ್ಯಾಯ ಕಾರ್ಯಕ್ರಮ ನಮ್ಮದು.
1) ಭೂಮಿ ಹಾಗೂ ಕೃಷಿಯ ಪ್ರಶ್ನೆ:
ಭೂಸುಧಾರಣಾ ತಿದ್ದುಪಡಿ ಕಾಯ್ದೆ – 2020ನ್ನು ವಾಪಾಸು ಪಡೆಯುವುದು. ಭೂ ಮಿತಿಯನ್ನು ಕಡಿತಗೊಳಿಸುವುದು. ಉಳುಮೆಯಲ್ಲಿ ತೊಡಗಿರುವ ದಲಿತರು ಮತ್ತು ಬಡವರಿಗೆ ವಿತರಿಸುವುದು. ಕಾರ್ಪೊರೇಟ್ ಕೃಷಿಗೆ ಬದಲಾಗಿ ಸಹಕಾರಿ ಕೃಷಿಯನ್ನು ಅಭಿವೃದ್ಧಿ ಪಡಿಸುವುದು. ಸರಕಾರಿ ಹಾಗೂ ಅರಣ್ಯ ಜಮೀನು ಸಾಗುವಳಿ ಮಾಡಿದ ಬಡವರಿಗೆ ಹಕ್ಕು ಪತ್ರಕ್ಕೆ ಕ್ರಮವಹಿಸುವುದು. ಅರಣ್ಯ ವಿಸ್ಥರಿಸಲು ಕ್ರಮವಹಿಸುವುದು. ಪ್ಲಾಂಟೇಶನ್ ಭೂಮಿಗಳ ಬಡ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡುವುದು. ಕೃಷಿಕೂಲಿಕಾರರು, ಬಡರೈತರು ಹಾಗೂ ಕಸುಬುದಾರ ಮತ್ತತರೆ ಬಡವರಿಗೆ ಅಗತ್ಯತೆಯನುಸರಿಸಿ ಹಿತ್ತಲು ಹಾಗು ನಿವೇಶನ, ಶೌಚ ಸಹಿತ ಉಚಿತ ವಸತಿ ಒದಗಿಸುವುದು. ಬಲವಂತದ ಭೂ ಸ್ವಾಧೀನವನ್ನು ಕೈಬಿಡುವುದು. ಭೂ ಕಬಳಿಕೆಯನ್ನು ನಿಷೇಧಿಸುವುದು ಮತ್ತು ಭೂ ಕಬಳಿಕೆದಾರರ ಮೇಲೆ ಕಾನೂನಿನ ಕ್ರಮವಹಿಸುವುದು ಹಾಗೂ ಭೂಮಿಯನ್ನು ವಾಪಾಸು ಪಡೆಯುವುದು. ಸಹಕಾರಿ ಹಾಗೂ ಸಾರ್ವಜನಿಕ ಬ್ಯಾಂಕ್ ಸಾಲದ ಜಾಲವನ್ನು ವ್ಯಾಪಕವಾಗಿ ವಿಸ್ಥಾರಗೊಳಿಸುವುದು. ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸುವುದು. ರೈತರ, ಕೃಷಿಕೂಲಿಕಾರರ, ಮಹಿಳೆಯರ, ದಲಿತರು ಮುಂತಾದ ದುರ್ಬಲರ ಸಾಲ ಮನ್ನಾ ಮಾಡುವುದು. ಏಪಿಎಂಸಿ ತಿದ್ದುಪಡಿ ಕಾಯ್ದೆ – 2020 ನ್ನು ವಾಪಾಸು ಪಡೆಯುವುದು. ಸುಗ್ಗಿ ಪೂರ್ವದಿಂದಲೆ ಡಾ.ಎಂ.ಎಸ್ ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಉತ್ಪಾದನಾ ವೆಚ್ಚಕ್ಕೆ ಶೇ 50 ಲಾಭಾಂಶ ಸೇರಿಸಿದ ಬೆಂಬಲ ಬೆಲೆ ಖಾತರಿಗೆ ಕ್ರಮವಹಿಸುವುದು. ಅಗತ್ಯವಿದ್ದರೇ ಪ್ರೋತ್ಸಾಹ ಧನವನ್ನು ಒದಗಿಸುವುದು. ಸುಗ್ಗಿಯ ಪೂರ್ವದಿಂದಲೇ ಖರೀದಿ ಕೇಂದ್ರಗಳನ್ನು ತೆರೆದು ಖರೀದಿಸಲು ಅಗತ್ಯ ಬಂಡವಾಳಕ್ಕೆ ಮತ್ತು ವಿತರಣೆಗೆ ಕ್ರಮವಹಿಸುವುದು. ಮಳೆ ನೀರು ಸಂಗ್ರಹಕ್ಕೆ ಮತ್ತು ಅಂತರ್ಜಲ ಭರ್ತಿಗೆ ಕ್ರಮವಹಿಸುವುದು. ಹನಿ ಹಾಗೂ ತುಂತುರು ನೀರಾವರಿಗಳನ್ನು ಪ್ರೋತ್ಸಾಹಿಸುವುದು. ಪಶ್ಚಿಮ ಘಟ್ಟಗಳಲ್ಲಿ ಸುರಿದು ಸಮುದ್ರಕ್ಕೆ ಸೇರುವ ನೀರನ್ನು ಬಳಸಿಕೊಳ್ಳಲು ಕ್ರಮವಹಿಸುವುದು. ಅಂರ್ರಾಜ್ಯ ನದಿ ನೀರಿನ ವಿವಾದಗಳನ್ನು ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಲು ಕ್ರಮವಹಿಸುವುದು.
ರೈತರು, ಕೃಷಿಕೂಲಿಕಾರರು ಮತ್ತು ಕಸುಬುದಾರರಿಗೆ ಭವಿಷ್ಯ ನಿಧಿ ಯೋಜನೆಗೆ ಕ್ರಮವಹಿಸುವುದು. ಕೃಷಿಕೂಲಿಕಾರರ ಸಾಮಾಜಿಕ ಸುರಕ್ಷತೆ ಮತ್ತು ಕೂಲಿಗಾಗಿ ಕೇಂದ್ರೀಯ ಶಾಸನಕ್ಕಾಗಿ ಒತ್ತಾಯ. ಉದ್ಯೋಗ ಖಾತ್ರಿ ವಿಸ್ಥರಣೆ ಹಾಗೂ ಕೂಲಿ ಹೆಚ್ಚಳಕ್ಕೆ ಅಗತ್ಯ ಕ್ರಮ ಅಗತ್ಯವಿರುವ ಎಲ್ಲರ ಸಾಮಾಜಿಕ ಪಿಂಚಣಿಯನ್ನು 3000 ರೂಗಳಿಗೆ ವಿಸ್ತರಿಸುವುದು.
2) ಕೈಗಾರಿಕಾ ರಂಗ:
ಕಾರ್ಮಿಕ ಸಂಹಿತೆಗಳ ವಾಪಾಸಾತಿಗಾಗಿ ಒತ್ತಾಯ ಮತ್ತು ಜಾರಿಗೊಳಿಸದಿರಲು ಕ್ರಮ. ಗುಪ್ತಮತದಾನದ ಮೂಲಕ ಕಾರ್ಮಿಕ ಸಂಘಗಳಿಗೆ ಮಾನ್ಯತೆ ಎಲ್ಲಾ ಗೌರವ ಧನದಲ್ಲಿ ದುಡಿಯುವವರಿಗೆ ಕನಿಷ್ಠ ವೇತನ. ಎಲ್ಲಾ ದುಡಿಯುವ ಜನತೆಗೆ ಉದ್ಯೋಗದ ಭದ್ರತೆಗೆ ಕ್ರಮ. ಕರ್ನಾಟಕ ಕಾರ್ಮಿಕ ಸಮ್ಮೇಳನಕ್ಕೆ ಕ್ರಮ. ಹಮಾಲಿ, ಕಟ್ಟಡ ಕಾರ್ಮಿಕರು ಮುಂತಾದವರ ಕಲ್ಯಾಣ ಮಂಡಳಿ ಬಲಪಡಿಕೆಗೆ ಕ್ರಮ. ಸಣ್ಣ ಕೈಗಾರಿಕೆಗಳಿಗೆ ನೆರವು. ಕೃಷಿ ಹಾಗೂ ಉಪ ಕಸುಬು ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ಖಾಸಗೀ ಸಹಭಾಗಿತ್ವದಡಿ BOOT ನೀತಿ ಜಾರಿಗೆ ಕ್ರಮ. ಹಿಂದುಳಿದ ಪ್ರದೇಶಗಳ ಕೈಗಾರಿಕಾಭಿವೃದ್ಧಿಗೆ ವಿಶೇಷ ಕ್ರಮಗಳು.
ಸಾರ್ವಜನಿಕ ರಂಗದ ಉದ್ದಿಮೆಗಳ, ಇಲಾಖೆಗಳ ಖಾಸಗೀಕರಣಕ್ಕೆ ವಿರೋಧ.
3) ಶಿಕ್ಷಣ ಮತ್ತು ಉದ್ಯೋಗ:
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಾಪಾಸು ಪಡೆಯುವುದು. ಸಾರ್ವಜನಿಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವುದು. ಮಾತೃ ಭಾಷೆಯ ಶಿಕ್ಷಣ, ಇಂಗ್ಲೀಷ್ ಕಲಿಕೆಗೆ ಕ್ರಮ ವೈಜ್ಞಾನಿಕ ಹಾಗೂ ಧರ್ಮನಿರಪೇಕ್ಷತೆಯ ಜಾತ್ಯತೀತ ಮನೋಭಾವದ ಶಿಕ್ಷಣ. ಜಾತಿತಾರತಮ್ಯಕ್ಕೊಳಗಾದ ದುರ್ಬಲರಿಗೆ ಉನ್ನತ ಹಂತದ ವರೆಗೆ ಉಚಿತ ಶಿಕ್ಷಣ. ಇವುಗಳಿಗಾಗಿ ಅಗತ್ಯ ಹೆಚ್ಚುವರಿ ಅನುದಾನಕ್ಕೆ ಕ್ರಮ. ಖಾಲಿ ಇರುವ ಎಲ್ಲ ಸರಕಾರಿ ಹುದ್ದೆಗಳ ಭರ್ತಿಗೆ ಕ್ರಮವಹಿಸುವುದು. ಕರ್ನಾಟಕದಲ್ಲಿನ ಕೇಂದ್ರ ಸರಕಾರದ ಸಂಸ್ಥೆಗಳಲ್ಲಿನ ಹುದ್ದೆಗಳಲ್ಲಿ ಕರ್ನಾಟಕದವರಿಗೆ ಆದ್ಯತೆಗೆ ಕ್ರಮ ಉದ್ಯೋಗ ಸೃಷ್ಠಿಗೆ ಮುಚ್ಚಿರುವ ಆಯ್ದ ಕೈಗಾರಿಕೆಗಳನ್ನು ಸಾರ್ವಜನಿಕ ರಂಗದಲ್ಲಿ ಮುನ್ನಡೆಸಲು ಕ್ರಮವಹಿಸುವುದು. ಸಾರ್ವಜನಿಕ ಬಂಡವಾಳ ಹೂಡಿಕೆಗೆ ಕ್ರಮವಹಿಸುವುದು. ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ. ಉದ್ಯೋಗ ದೊರೆಯದ ನಿರುದ್ಯೋಗಿಗಳಿಗೆ, ನಿರುದ್ಯೋಗ ಭತ್ಯೆಗೆ ಕ್ರಮ.
4) ಸಾರ್ವಜನಿಕ ಆರೋಗ್ಯ:
ಸಾರ್ವಜನಿಕ ಆರೋಗ್ಯ ಸಂರಕ್ಷಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳ ಖಾಸಗೀಕರಣದಿಂದ ಸಂರಕ್ಷಣೆ, ಸಾರ್ವಜನಿಕ ಆರೋಗ್ಯ ಕೇಂದ್ರಗಳ ಬಲ ಪಡಿಕೆಗೆ ಕ್ರಮಗಳು. ಖಾಸಗೀ ಆರೋಗ್ಯ ಸೌಲಭ್ಯಗಳ ಮೇಲೆ ನಿಯಂತ್ರಣ ಮತ್ತು ಔಷಧಿ ಬೆಲೆಗಳ ಇಳಿಕೆಗೆ ಕ್ರಮ ಮತ್ತು ಒತ್ತಾಯ. ಅಪೌಷ್ಠಿಕತೆ ನಿವಾರಣೆಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲ ಪಡಿಸುವುದು. ಎಲ್ಲಾ ಅಗತ್ಯ ವಸ್ತುಗಳನ್ನು ಪಡಿತರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದು. ಸಾರ್ವಜನಿಕರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು.
5) ಅಧಿಕಾರ ಹಾಗೂ ಸಂಪನ್ಮೂಲಗಳ ವಿಕೇಂದ್ರೀಕರಣ ಮತ್ತು ಒಕ್ಕೂಟ ತತ್ವ:
ಒಕ್ಕೂಟ ಸರಕಾರದ ಕೈನಲ್ಲಿ ಬಹುತೇಕ ಅಧಿಕಾರಗಳು ಸಂಪನ್ಮೂಲಗಳು ಕೇಂದ್ರೀಕರಿಸಲ್ಪಟ್ಟಿವೆ. ಅವುಗಳ ವಿಕೇಂದ್ರೀಕರಣವು ಅಗತ್ಯವಿದೆ. ಅದೇ ರೀತಿ, ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಮತ್ತು ಸಂಪನ್ಮೂಲಗಳ ವಿಕೇಂದ್ರೀಕರಣದ ಅಗತ್ಯವಿದೆ. ರಾಜ್ಯವು ಹೆಚ್ಚಿನ ಅಧಿಕಾರ ಹಾಗು ಸಂಪನ್ಮೂಲಗಳನ್ನು ಒದಗಿಸಬೇಕು. ಒಕ್ಕೂಟ ಸರಕಾರವು ಒಕ್ಕೂಟವಾದಿ ಸ್ವರೂಪದ ಮೇಲೆ ನಿರಂತರವಾದ ದಾಳಿಯನ್ನು ನಡೆಸುತ್ತಿದೆ. ಇರುವ ಅಧಿಕಾರಗಳನ್ನು ಕಿತ್ತುಕೊಂಡು ಸರ್ವಾಧಿಕಾರವನ್ನು ಹೇರುತ್ತಿದೆ. ಅದೇ ರೀತಿ, ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಇದ್ದ ಅವಕಾಶಗಳನ್ನು ಮೊಟಕುಗೊಳಿಸಲಾಗಿದೆ. ಒಕ್ಕೂಟ ಸರಕಾರ ನ್ಯಾಯವಾಗಿ ನೀಡಬೇಕಾದ ಜಿಎಸ್ಟಿ ಪಾಲನ್ನು ನೀಡುತ್ತಿಲ್ಲ. ತೆರಿಗೆ ಪಾಲು ನೀಡುವುದರಲ್ಲು ಸಮಸ್ಯೆಗಳಿವೆ. ತೆರಿಗೇಯೆತರ ಆದಾಯ ಹಂಚಿಕೆಗಳಿಗೆ ಮತ್ತು ತೆರಿಗೆ ಹಕ್ಕುಗಳಿಗಾಗಿ ಒತ್ತಾಯ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಒತ್ತು. ನಿಜಾರ್ಥದಲ್ಲಿ ಹೈದ್ರಾಬಾದ್ ಕರ್ನಾಟಕದಲ್ಲಿ ಸಂವಿಧಾನದ ವಿಧಿ 371ರ ಜಾರಿ. ಮಲೆನಾಡು ಪ್ರದೇಶದ ಅಭಿವೃದ್ಧಿಗೆ ಪರಿಸರ ಸಂರಕ್ಷಣೆಗೆ ಪೂರಕವಾದ ಕ್ರಮಗಳು. ಒಕ್ಕೂಟ ಸರಕಾರವನ್ನು ಸರ್ವಾಧಿಕಾರಿಯಾಗಿಸುವ, ಅಧಿಕಾರ ಮತ್ತು ಸಂಪನ್ಮೂಲಗಳ ಕೊರತೆಯಿಂದ ನರಳುವ ಸಣ್ಣ ಸಣ್ಣ ರಾಜ್ಯಗಳ ರಚನೆಗೆ ವಿರೋಧ. ಇವುಗಳ ಸರಿಪಡಿಕೆಗೆ ಕ್ರಮವಹಿಸಬೇಕಾಗಿದೆ.
6) ಜಾತ್ಯತೀತ ಸ್ವರೂಪದ ಹಾಗೂ ಸೌಹಾರ್ಧತೆ, ಜನ ಪರ ಸಂಸ್ಕೃತಿಯ ಸಂರಕ್ಷಣೆಗೆ ಕ್ರಮ:
ಪ್ರಭುತ್ವ ಮತ್ತು ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸುವ ಬದಲು ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶವೆಂದು ಮತ್ತು ಹಿಂದು ಮತಾಂಧತೆಗೆ ಆಧ್ಯತೆಯೆಂದು ತಿರುಚಲಾಗಿದೆ. ಇದರಿಂದ ರಾಜ್ಯದ ಧರ್ಮ ನಿರಪೇಕ್ಷತೆ ಅಥವಾ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗಿದೆ. ಮತಾಂಧತೆಯ ಆಧಾರದಲ್ಲಿ ಕಾರ್ಯ ನಿರ್ವಹಿಸುವುದನ್ನು ಎಲ್ಲಾ ಆಯಾಮಗಳಲ್ಲಿ ತಡೆಯುವುದು. ದ್ವೇಷ ಮತ್ತು ಹಿಂಸೆಯಾಧಾರಿತ ಪ್ರಚಾರಾಂದೋಲನಗಳ ನಿಷೇಧ ಜನತೆಯಿಂದ ಪ್ರತ್ಯೇಕಿಸಿ ದುರ್ಬಲಗೊಳಿಸಲು ಕ್ರಮವಹಿಸುವುದು. ಸೌಹಾರ್ಧ ವಾತಾವರಣವನ್ನು ಬಲಗೊಳಿಸಲು ಕ್ರಮವಹಿಸುವುದು. ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕ್ರಮವಹಿಸುವುದು. ಸರಕಾರಿ ಸಂಸ್ಥೆಗಳು ಹಾಗೂ ಇಲಾಖೆಗಳನ್ನು ಕೋಮುವಾದದಿಂದ ಮುಕ್ತಿಗೊಳಿಸುವುದು. ಖಾಸಗೀ ಸೇನೆಗಳ ನಿಷೇಧ. ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಸಂಸ್ಕೃತಿಗಳ ಬೆಳವಣಿಗೆಗೆ ಪ್ರೋತ್ಸಾಹ. ಜಾನಪದ ಕಲೆಗಳು ಹಾಗೂ ವೈವಿದ್ಯಮಯ ಸಾಂಸ್ಕೃತಿಕ ಪ್ರಾಕಾರಗಳ ಪೋಷಣೆ. ಸಾಂಸ್ಕೃತಿಕ ವ್ಯಕ್ತಿಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಧಾಳಿಯ ನಿಗ್ರಹಕ್ಕೆ ಧೃಡವಾದ ಕ್ರಮ.
7) ಸಾಮಾಜಿಕ ನ್ಯಾಯ ಮತ್ತು ಜಾತಿ ತಾರತಮ್ಯ ಸಡಿಲಗೊಳಿಸಲು ಕ್ರಮಗಳು:
ಜಾತಿ ವ್ಯವಸ್ಥೆ ಮತ್ತು ಎಲ್ಲಾ ರೀತಿಯ ಜಾತಿ ದಬ್ಬಾಳಿಕೆ ಅಸ್ಪೃಶ್ಯಾಚರಣೆಯ ರದ್ದತಿ, ಅಂತರ್ಜಾತೀಯ ವಿವಾಹಗಳಿಗೆ ಪ್ರೋತ್ಸಾಹ ಮತ್ತು ನೆರವು. ದೌರ್ಜನ್ಯದ ದೇವದಾಸಿ ಪದ್ದತಿ ನಿವಾರಿಸಲು ಮತ್ತು ಬಾಲ ಕಾರ್ಮಿಕ ಪದ್ದತಿ, ಜೀತ ಪದ್ದತಿ, ಬಿಟ್ಟಿ ಚಾಕರಿ, ಮ್ಯಾನುವಲ್ ಸ್ಕ್ಯಾವೆಂಜಿಂಗ್ ಗೆ ಪರಿಣಾಮಕಾರಿ ತಡೆ ಮತ್ತು ಪುನರ್ವಸತಿಗೆ ಕ್ರಮಗಳು. ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆ ನಿವಾರಣೆಯ ಭಾಗವಾಗಿ ದುರ್ಬಲರ ಜನ ಸಂಖ್ಯೆಗನುಗುಣವಾದ ಮೀಸಲಾತಿ ನೀತಿಗೆ ಕ್ರಮ. ಖಾಸಗೀ ವಲಯದ ಮೀಸಲಾತಿಗೂ ಕ್ರಮ. ಪರಿಶಿಷ್ಠ ಜಾತಿ ಮತ್ತು ಪಂಗಡಗಳ ವಿಶೇಷ ಘಟಕ ಯೋಜನೆಯ ಕಾಯ್ದೆಯಲ್ಲಿನ ಸೋರುವಿಕೆಗೆ ತಡೆ ಮತ್ತು ಕೇಂದ್ರೀಯ ಶಾಸನಕ್ಕಾಗಿ ಒತ್ತಾಯ. ಆದಿವಾಸಿ ಜನಗಳ ಅರಣ್ಯ ಭೂಮಿ, ಸಂಸ್ಕೃತಿ ರಕ್ಷಣೆಗೆ ಒತ್ತು. ಜಾತಿಗಣತಿ ಗೆ ಕ್ರಮ. ದಲಿತರು ಮತ್ತು ಮಹಿಳೆಯರು ಮತ್ತು ಅಲ್ಪ ಸಂಖ್ಯಾತರ ಮೇಲಿನ ಧಾರ್ಮಿಕ ದ್ವೇಷದ ಧಾಳಿಗಳನ್ನು ತಡೆಯಲು ಕ್ರಮಗಳು ಮತ್ತು ಪುನರ್ವಸತಿ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ವಿಧೇಯಕ ವಾಪಾಸು ಪಡೆಯಬೇಕು. ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ- 2020 ವಾಪಾಸು ಪಡೆಯುವುದು. ಮರ್ಯಾದ ಹತ್ಯೆಗಳ ನಿಗ್ರಹ. ದೇವದಾಸಿ ಮಹಿಳೆಯರು ಅವರ ಹೆಣ್ಣು ಮಕ್ಕಳು, ಗಂಡ ಸತ್ತವರು, ಒಂಟಿ ಮಹಿಳೆಯರು, ಪರಿತ್ಯಕ್ತೆಯರು, ಅಂಗವಿಕಲ ಮಹಿಳೆಯರ ವಿವಾಹಕ್ಕೆ ಪ್ರೋತ್ಸಾಹ. ಮಹಿಳಾ ಮೀಸಲಾತಿಗೆ ಕ್ರಮ ಮಹಿಳೆಯರ ಸಮಾನ ಹಕ್ಕು ಮತ್ತು ಸಂಭಾವನೆಯ ಖಾತರಿ. ಮಂಗಳಮುಖಿ ನಾಗರೀಕರ ಹಾಗೂ ಅಂಗ ವಿಕಲರ ಹಕ್ಕುಗಳ ರಕ್ಷಣೆಗೆ ಕ್ರಮ. ಗಂಡ- ಹೆಂಡತಿ ಹೆಸರಿನಲ್ಲಿ ಜಂಟಿ ಪಟ್ಟಕ್ಕೆ ಕ್ರಮವಹಿಸುವುದು. ಮಹಿಳೆಯರಿಗೆ ಆಸ್ತಿಯಲ್ಲಿ ಪಾಲನ್ನು ಖಾತರಿ ಪಡಿಸುವುದು.
8) ಆಡಳಿತ ಭಾಷೆ:
ಕನ್ನಡ ಮತ್ತಿತರೆ ಪ್ರಮುಖ ಭಾಷೆಗಳಲ್ಲಿ ಆಡಳಿತಕ್ಕೆ ಕ್ರಮ. ಅಳಿವಿನಂಚಿನಲ್ಲಿರುವ ಭಾಷೆಗಳ ಸಂರಕ್ಷಣೆಗೆ ಕ್ರಮ.
9) ಭ್ರಷ್ಠಾಚಾರ ನಿಗ್ರಹ:
ಲೋಕಾಯುಕ್ತವನ್ನು ಬಲಪಡಿಸುವುದು. ಹಾಲಿ ಗುತ್ತಿಗೆ ಕೆಲಸದಲ್ಲಿ ಶೇ. 40 ಹಾಗೂ ಬಿಟ್ ಕಾಯಿನ್ ಲೂಟಿ ಮತ್ತಿತರೆ ಭ್ರಷ್ಟಾಚಾರದ ಪ್ರಕರಣಗಳನ್ನು ನ್ಯಾಯಾಲಯದ ಸುಪರ್ಧಿಯಡಿ ನ್ಯಾಯಾಂಗ ತನಿಖೆಗೊಳಪಡಿಸುವುದು.
10) ಪ್ರಜಾಸತ್ತಾತ್ಮಕ ಹಕ್ಕುಗಳು ಹಾಗೂ ನಾಗರೀಕ ಸ್ವಾತಂತ್ರ್ಯ ರಕ್ಷಣೆ:
ಸಂವಿಧಾನ ನೀಡಿರುವ ಈ ಹಕ್ಕುಗಳ ರಕ್ಷಣೆಗಾಗಿ ಒತ್ತಾಯ. ಯುಎಪಿಎ ಮತ್ತು ದೇಶದ್ರೋಹದ ಕಾಯ್ದೆ ಎಎಫ್ಎಸ್ಪಿಎ ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆ ಎನ್ಎಸ್ಎ ರದ್ದತಿ, ಮರಣದಂಡನೆ ರದ್ಧತಿ, ಚುನಾವಣಾ ಬಾಂಡ್ ಗಳ ಯೋಜನೆಗೆ ನಿಷೇಧ, ಚುನಾವಣಾ ಸುಧಾರಣೆ, ಕಡ್ಡಾಯ ಸಾಮಾಜಿಕ ಪರಿಶೋಧನೆ ಮತ್ತು ಹೊಣೆಗಾರಿಕೆಯ ಖಾತರಿ, ಮಾಹಿತಿ ಹಕ್ಕು ಕಾಯ್ದೆ ಜಾರಿಗಳಿಗಾಗಿ ಒತ್ತಾಯ.
ಬನ್ನಿ – ಕೈ ಜೋಡಿಸಿ – ನೈಜ ಅಭಿವೃದ್ಧಿಗೆ ಶ್ರಮಿಸಿ
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) – ಸಿಪಿಐ(ಎಂ)
ಭಾರತ ಕಮ್ಯೂನಿಸ್ಟ್ ಪಕ್ಷ – ಸಿಪಿಐ
ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) – ಎಸ್ಯುಸಿಐ(ಸಿ)
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ, ಲೆನಿನ್ ವಾದಿ-ಲಿಬರೇಷನ್) – ಸಿಪಿಐ(ಎಂಎಲ್)
ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ – ಎಐಎಫ್ಬಿ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ – ಆರ್ಪಿಐ
ಸ್ವರಾಜ್ ಇಂಡಿಯಾ
ರಾಜ್ಯ ಘಟಕಗಳು. ಬೆಂಗಳೂರು.