ಕಳೆದ ಕೆಲವು ದಿನಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಸದ್ಯ ಮಳೆ ತಗ್ಗಿದ್ದರೂ ಪ್ರವಾಹದ ಭೀತಿ ದೂರವಾಗಿಲ್ಲ. ಜಲಾಶಯಗಳಿಗೆ ಒಳ ಹರಿವು ಹೆಚ್ಚುತ್ತಿರುವುದರಿಂದ ನದಿಗಳಿಗೆ ನೀರು ಹರಿಸುವ ಪ್ರಮಾಣವೂ ಹೆಚ್ಚಳವಾಗಿದೆ. ಇದರಿಂದ ನದಿ ಪಾತ್ರದ ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ. ಭಾರಿ ಮಳೆಯಿಂದಾಗಿ ಅಪಾರ ಜೀವಹಾನಿ, ಜಾನುವಾರುಗಳು ಮೃತಪಟ್ಟಿವೆ. ಲಕ್ಷಾಂತರ ಮನೆಗಳು ಹಾನಿಗೊಳಗಾಗಿವೆ. ಹಲವೆಡೆ ಮನೆಗಳ ಗೋಡೆಗಳು ಕುಸಿದು ಹಲವು ಮಂದಿ ಸಾವನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಬೃಹತ್ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಸ್ತೆಗಳು, ಸೇತುವೆಗಳು ಮುಳುಗಡೆಯಾಗಿ ಸಾರಿಗೆ ಸಂಪರ್ಕ ಅಸಾಧ್ಯವಾಗಿದೆ.
ವಿಶ್ವವಿಖ್ಯಾತ ಹಂಪಿಯ ಕೆಲ ಸ್ಮಾರಕಗಳು ನೀರಿನಲ್ಲಿ ಮುಳುಗಿವೆ. ಹಲವಾರು ದೇವಸ್ಥಾನಗಳು, ದರ್ಗಾಗಳು, ಚರ್ಚ್ಗಳು ಜಲಾವೃತವಾಗಿವೆ. ಭತ್ತದ ಗದ್ದೆಗಳು, ಬಾಳೆ ತೋಟಗಳು ನಾಶವಾಗಿವೆ. ಕರಾವಳಿಯ ಕಡಲ್ಕೊರೆತ ಮತ್ತು ಬೆಟ್ಟಗುಡ್ಡಗಳಲ್ಲಿ ಸಂಭವಿಸಿದ ಭೂಕುಸಿತದಿಂದ ಬಹಳಷ್ಟು ಹಾನಿಯಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಹಲವೆಡೆ ರಸ್ತೆಗಳಲ್ಲಿ ಭೂಕುಸಿತವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಆಗುಂಬೆ, ಚಾರ್ಮುಡಿ, ಶಿರಾಡಿ ಮೊದಲಾದ ಘಟ್ಟಗಳಲ್ಲಿ ಮಣ್ಣು ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದರಿಂದ ಜನ ಭಯ ಭೀತರಾಗಿದ್ದಾರೆ.
ಹಲವು ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ.
ಸುಮಾರು 216 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡಿರುವ ಪ್ರವಾಹ ಪರಿಹಾರ ಏನೇನು ಸಾಲದು. ಮನೆ ಮತ್ತು ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಜನಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಮುಖ್ಯ ಮಂತ್ರಿಗಳು, ಮಂತ್ರಿಗಳು, ಶಾಸಕರು ಮತ್ತು ನಾಯಕರು ನೆಪ ಮಾತ್ರಕ್ಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತಿದ್ದಾರೆಯೇ ಹೊರತು ಸಂತ್ರಸ್ತರಿಗೆ ಸಹಾಯ ನೀಡುವ ಉದ್ದೇಶದಿಂದಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೀವ ಹಾನಿ, ಆಸ್ತಿ ಪಾಸ್ತಿ ಹಾನಿಯ ಬಗ್ಗೆ ಇದುವರೆಗೂ ಪ್ರಾಥಮಿಕ ಸಮೀಕ್ಷಾ ವರದಿ ಸರ್ಕಾರದ ಕೈ ಸೇರಿಲ್ಲ. ಪ್ರವಾಹ ಪೀಡಿತರಿಗೆ ಪರಿಹಾರ ನೀಡಲು ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಲೆ ಇದ್ದಾರೆ. ಆದರೆ ಪ್ರವಾಹ ಪೀಡಿತರಿಗೆ ಇದುವರೆಗೂ ಬಿಡಿಗಾಲು ನೀಡಿಲ್ಲ.
ಹೆಚ್ಚಿನ ಮಳೆಯಾಗಲಿದ್ದು ಪ್ರವಾಹ ಏರ್ಪಡುವ ಸಾಧ್ಯತೆಳಿವೆ ಎಂದು ಹವಾಮಾನ ಇಲಾಖೆ ಮೊದಲೇ ಎಚ್ಚರಿಸಿತ್ತು. ಹಾಗಿದ್ದರೂ ಸರ್ಕಾರ ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೂಲಿಕಾರರು, ರೈತರು ನಷ್ಟಕ್ಕೆ ಗುರಿಯಾದ ನಂತರ ಹೋಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. 2019ರ ಪ್ರವಾಹದಲ್ಲಿ ಹಾನಿಗೀಡಾದವರಿಗೆ ಇದುವರೆಗೆ ಪುನರ್ವಸತಿ ಕಲ್ಪಿಸಿಲ್ಲ. ಹಿಂದೆ ಪ್ರವಾಹ ಬಂದಾಗ ಊರುಗಳ ಸ್ಥಳಾಂತರ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸ್ಥಳಾಂತರ ಕಾರ್ಯ ನಡೆಯಲೇ ಇಲ್ಲ. ಮೇಲಿಂದ ಮೇಲೆ ಹಾನಿಗೀಡಾಗುತ್ತಿರುವವರಿಗೆ ಶಾಶ್ವತ ಪರಿಹಾರ ದೊರೆಯಬೇಕು. ಕುಸಿದು ಬೀಳುವ ಮನೆಗಳನ್ನು ಒದಗಿಸಬಾರದು. ಗಟ್ಟಿಮುಟ್ಟಾದ ಪಕ್ಕಾ ಮನೆಗಳನ್ನು ಕಟ್ಟಿಕೊಡಬೇಕು. ಒಂದು ಪಕ್ಕಾ ಮನೆ ಕಟ್ಟಲು 5 ಲಕ್ಷ ರೂ. ಕೇಂದ್ರ ಸರ್ಕಾರವೂ 5 ಲಕ್ಷ ರೂ. ಗಳನ್ನು ರಾಜ್ಯ ಸರ್ಕಾರ ನೀಡಬೇಕು. ಮನೆಗಳು ಕುಸಿದು ಜನ, ಜಾನುವಾರು ಜೀವ ಕಳೆದುಕೊಳ್ಳುವುದನ್ನು ಶಾಶ್ವತವಾಗಿ ತಡೆಯಬೇಕು.
ಸದ್ಯ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರ ಒದಗಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಮೂಲ ಸೌಕರ್ಯಗಳ ತುರ್ತು ಮರುಸ್ಥಾಪನೆಗೆ 500 ಕೋಟಿ ರೂ. ಗಳ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ. ಎಷ್ಟೋ ಜನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಆದರೆ ತುರ್ತಾಗಿ ಆಗಬೇಕಾದ ಪರಿಹಾರ ಕಾರ್ಯ ಬಹಳಷ್ಟಿದೆ. ಈಗ ಬಿಡುಗಡೆಗೆ ಘೋಷಣೆಯಾದ ಮೊತ್ತ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ. ಸಂತ್ರಸ್ತರ ಸ್ಥಿತಿಗತಿಗಳ ಬಗ್ಗೆ ಪಾರದರ್ಶಕ ಹಾಗೂ ತ್ವರಿತ ಸಮೀಕ್ಷೆ ನಡೆಯಬೇಕು. ಸಾವನ್ನಪ್ಪಿದ ಕುಟುಂಬಗಳಿಗೆ ಗರಿಷ್ಟ ಪರಿಹಾರ ನೀಡಬೇಕು. ಜಾನುವಾರುಗಳನ್ನು ಕಳೆದುಕೊಂಡವರಿಗೂ ಅಗತ್ಯ ಪರಿಹಾರ ಬಿಡುಗಡೆಯಾಗಬೇಕು. ಪರಿಹಾರದ ಭರವಸೆ ಕೇವಲ ಭರವಸೆಯಾಗಿ ಉಳಿಯಬಾರದು. ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ ದುರಸ್ತಿಗೆ ಆದ್ಯತೆ ನೀಡಬೇಕು. ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ಪರಿಷ್ಕೃತ ದರಗಳಲ್ಲಿ ವಿಳಂಬ ಮಾಡದೆ ಪರಿಹಾರ ವಿತರಣೆಗೆ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಾಪತ್ತೆಯಾದವರನ್ನು, ಅವರ ಶವಗಳನ್ನು ಹುಡುಕಲು ಶೋಧ ಕಾರ್ಯ ತುರ್ತಾಗಿ ನಡೆಯಬೇಕು. ಪ್ರವಾಹ ಪೀಡಿತ ಜನರ ಅಹವಾಲು ಸ್ವೀಕರಿಸಲು ದಿನವಿಡಿ ಕ್ರಮ ಕೈಗೊಳ್ಳಬೇಕು. ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿರುವ ಕುಟುಂಬಗಳಿಗೆ ತಕ್ಷಣದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಗತ್ಯ ಇರುವವರಿಗೆ ಆಹಾರ ಕಿಟ್ಗಳನ್ನು ವಿತರಣೆ ಮಾಡಬೇಕು. ಸರ್ಕಾರ ಅಗತ್ಯವಾದ ಎಲ್ಲ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು. ಪರಿಹಾರ ವಿತರಣೆಯಲ್ಲಿ ಯಾವುದೇ ಮತ, ಜಾತಿ, ಭಾಷೆಗಳ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ಮಳೆ ಮುನ್ಸೂಚನೆ ಆಧಾರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ತುರ್ತು ಪರಿಹಾರ ಕ್ರಮಗಳನ್ನು ಸರ್ಕಾರ ತಾನಾಗಿಯೇ ಮಾಡುವ ಯಾವ ಸಾಧ್ಯತೆಯೂ ಇಲ್ಲ. ಹೀಗಾಗಿ ಜನಪರ ಸಂಘಟನೆಗಳು ಒಂದಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ನ್ಯಾಯ ಪಡೆಯಬೇಕಾಗಿದೆ.