ಕರ್ನಾಟಕ ಸರಕಾರ ರಾಜ್ಯದಾದ್ಯಂತ 13,800 ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿರುವುದು ಬಡವರ ಹಾಗೂ ದಲಿತರ ಮಕ್ಕಳಿಗೆ ಶಿಕ್ಷಣವನ್ನು ವಂಚಿಸುವ ಮತ್ತು ಕನ್ನಡ ವಿರೋಧಿ ನಿಲುಮೆಯಾಗಿದೆಯೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿಯು ಬಲವಾಗಿ ಖಂಡಿಸುತ್ತದೆ ಮತ್ತು ಈ ತಕ್ಷಣವೇ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸುತ್ತದೆ.
ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿಗೆ ಒಕ್ಕೂಟ ಹಾಗೂ ರಾಜ್ಯ ಸರಕಾರಗಳೇ ನೇರ ಹೊಣೆಗಾರರಾಗಿವೆ.
ಶಾಲೆಗೆ ಬರಬೇಕಾದ ಮಕ್ಕಳು ಬರದೇ ಇರುವ ಕಾರಣಕ್ಕೆ ಪ್ರಾಥಮಿಕ ಶಾಲೆಗಳು ಮಕ್ಕಳನ್ನು ಆಕರ್ಷಿಸುತ್ತಿಲ್ಲ. ಅಂತಹ ಆಕರ್ಷಣೀಯ ಶೈಕ್ಷಣಿಕ ಕೇಂದ್ರಗಳನ್ನಾಗಿ ಅವುಗಳನ್ನು ಸಾಕಷ್ಟು ಅನುದಾನ ಒದಗಿಸಿ ಮೇಲ್ದರ್ಜೆಗೆ ಏರಿಸುವ ಅಗತ್ಯ ಕ್ರಮಗಳನ್ನು ಅನುಸರಿಸದೇ ಉಪೇಕ್ಷೆ ಮಾಡಿ, ನಾಯಿಕೊಡೆಗಳಂತೆ ಎದ್ದಿರುವ ಖಾಸಗೀ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ನೆರವಾಗುತ್ತಿರುವುದು ಪ್ರಮುಖ ಕಾರಣವಾಗುತ್ತಿದೆ.
ಪಕ್ಕದ ಕೇರಳ ರಾಜ್ಯದಲ್ಲಿ ಶಾಲೆಗಳ ಗುಣಮಟ್ಟವನ್ನು ವ್ಯಾಪಕವಾಗಿ ಹೆಚ್ಚಿಸಿರುವುದರಿಂದ, ಸಾವಿರಾರು ಖಾಸಗೀ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವಂತಾಗಿ, ಅಲ್ಲಿನ ಲಕ್ಷಾಂತರ ಮಕ್ಕಳು ಸಾರ್ವಜನಿಕ ಶಾಲೆಗಳಿಗೆ ವಾಪಾಸು ಬಂದಿರುವುದು ನಮ್ಮ ಕಣ್ಣ ಮುಂದಿದೆ.
ದೆಹಲಿ ಸರಕಾರ ನಡೆಸುವ ಶಾಲೆಗಳು ಅಂತರ್ರಾಷ್ಟ್ರೀಯ ಗುಣಮಟ್ಟದ ಶಾಲೆಗಳೆಂದು ಸ್ವತಃ ಪ್ರಧಾನ ಮಂತ್ರಿಗಳು ಜಗತ್ತಿಗೆ ಪರಿಚಯಿಸಿದ್ದಿದೆ.
ದೇಶದ ಅನುಭವ ಹೀಗಿರುವಾಗ, ಕರ್ನಾಟಕ ಸರಕಾರ ಶಿಕ್ಷಣವನ್ನು ಖಾಸಗೀಕರಿಸುವ ಮತ್ತು ಕೋಮುವಾದಿಕರಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಬಡವರು ಹಾಗೂ ಕನ್ನಡ ವಿರೋಧಿಯಾದ ನಿಲುಮೆಗಳನ್ನು ಕೈಬಿಟ್ಟು ಸರಕಾರಿ ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಂತಹ ಶೈಕ್ಷಣಿಕ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಬಜೆಟ್ ಒದಗಿಸಿ ಯೋಜಿತ ಕ್ರಮಗಳಿಗೆ ಮುಂದಾಗಬೇಕೆಂದು ಸಿಪಿಐ(ಎಂ) ವಿವರಿಸಿದೆ.
ಯು. ಬಸವರಾಜ, ಸಿ.ಪಿ.ಐ(ಎಂ) ರಾಜ್ಯ ಕಾರ್ಯದರ್ಶಿ