ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು – ನಾಲ್ಕು ದಿನಗಳಲ್ಲಿ ಸುಳ್ಯದಲ್ಲಿ ಎರಡು ಮತ್ತು ಸುರತ್ಕಲ್ ನಲ್ಲಿ ಒಂದು, ಒಟ್ಟು ಮೂವರ ಕೊಲೆಗಳಾಗಿವೆ. ಇದರಿಂದ ಜಿಲ್ಲೆ ಮತ್ತು ರಾಜ್ಯ ತಲ್ಲಣಗೊಂಡಿವೆ. ಮತಾಂಧ ಹಾಗೂ ಕೊಲೆಗಡುಕ ಹೇಡಿತನದ ರಾಜಕಾರಣವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ- ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.
ಈ ಕೊಲೆಗಡುಕ ರಾಜಕಾರಣವು ರಾಜ್ಯದ ಅಭಿವೃದ್ಧಿಗೆ ಮತ್ತು ಸೌಹಾರ್ಧತೆಗೆ ಅಪಾಯವನ್ನುಂಟು ಮಾಡಲಿದೆ. ರಾಜ್ಯ ಸರಕಾರ ಈ ಕೂಡಲೇ, ಈ ಎಲ್ಲ ಕೊಲೆಗಳ ನೆಲೆಯನ್ನು ಭೇದಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಪಿಐ(ಎಂ) ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.
ಅದೇ ರೀತಿ, ಸದರಿ ಕೊಲೆಗಳ ಹಿನ್ನೆಲೆಯಲ್ಲಿ ಕೋಮು ಸೌಹಾರ್ಧತೆಗೆ ಭಂಗ ಉಂಟು ಮಾಡುವ ಶಕ್ತಿಗಳ ನಿಗ್ರಹಕ್ಕೂ ಹಾಗು ಮತಾಂಧ ರಾಜಕಾರಣಕ್ಕೆ ಕೊನೆಯಾಡಲು ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರಕಾರವನ್ನು ವಿನಂತಿಸಿದೆ ಮತ್ತು ರಾಜ್ಯದಲ್ಲಿ ಶಾಂತಿ ಹಾಗೂ ಸೌಹಾರ್ಧತೆ ಮೆರೆಯುವಂತೆ ರಾಜ್ಯದ ಜನತೆಗೆ ಸಿಪಿಐ(ಎಂ) ಮನವಿ ಮಾಡಿದೆ.
ರಾಜ್ಯದ ಮುಖ್ಯಮಂತ್ರಿಗಳು ಕೊಲೆಗೀಡಾದ ಪ್ರವೀಣ ಕುಟುಂಬವನ್ನು ಸಂತೈಷಿ 25 ಲಕ್ಷ ರೂ.ಗಳ ಪರಿಹಾರ ನೀಡಿರುವುದು ಸ್ವಾಗತಾರ್ಹವಾಗಿದೆ. ಅದೇ ರೀತಿ, ಇಂತಹ ಮತಾಂಧತೆಗೆ ಬಲಿಯಾದ ನರಗುಂದದ ಸಮೀರ್, ಸುಳ್ಯದ ಮಹಮದ್ ಮಸೂದ್ ಹಾಗೂ ಸುರತ್ಕಲ್ ನ ಮಹಮದ್ ಫಾಸಿಲ್ ರವರ ಕುಟುಂಬಗಳಿಗೂ ತಲಾ 25 ಲಕ್ಷ ರೂ. ಪರಿಹಾರವನ್ನು ನೀಡಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.
ಈ ವಿಚಾರದಲ್ಲಿ ಸರಕಾರ ತಾರತಮ್ಯ ಎಸಗುವುದನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸುತ್ತದೆ. ರಾಜ್ಯ ಸರಕಾರ ತನ್ನ ತಾರತಮ್ಯ ನೀತಿಯನ್ನು ಕೈಬಿಟ್ಟು ಈ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಮರಳಿ ಸಿಪಿಐ(ಎಂ) ಒತ್ತಾಯಿಸಿದೆ.
ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ