ಮತದಾರ ಗುರುತಿನ ಚೀಟಿ ಮತ್ತು ಆಧಾರ್ ‍ಜೋಡಣೆಯ ಪ್ರಕ್ರಿಯೆಯನ್ನು ಲೋಪ-ದೋಷಗಳ ತನಿಖಾ ವರದಿ ತಯಾರಿಯ ವರೆಗೆ ತಡೆಹಿಡಿಯಬೇಕು

ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ

ಚುನಾವಣಾ ಆಯೋಗ ಈ ಹಿಂದೆ 2015ರಲ್ಲಿ ನಡೆಸಿದ್ದ ಮತದಾರ ಗುರುತಿನ ಚೀಟಿ ಮತ್ತು ಆಧಾರನ್ನು ಜೋಡಿಸುವ ಪ್ರಕ್ರಿಯೆಯಲ್ಲಿ ವಿಶೇಷವಾಗಿ ತೆಲ್ಲಂಗಾಣ ರಾಜ್ಯದಲ್ಲಿ ಹಲವಾರು ಮತದಾರರ ಹೆಸರುಗಳು ಬಿಟ್ಟುಹೋದುವು. ಇದು ಈ ಪ್ರಕ್ರಿಯೆಯಲ್ಲಿನ ಗಂಭೀರ ಲೋಪ-ದೋಷಗಳಿಂದಾಗಿ ಆಗಿದೆ. ಇದರ ಕುರಿತು ಗಂಭೀರ ತನಿಖೆಯನ್ನೂ ನಡೆಸದೆ, ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆಯನ್ನೂ ನಡೆಸದೆ ಈ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿರುವುದು ಕಳವಳಕಾರಿ, ಇಂತಹ ತನಿಖೆ ಆಗುವ ವರೆಗೆ, ಮತ್ತು ಇಂತಹ ಲೋಪಗಳು ಆಗದಂತೆ ತಡೆಯುವ ಕ್ರಮಗಳನ್ನು ರೂಪಿಸುವ ವರೆಗೆ ಈ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮುಖ್ಯ ಚುನಾವಣಾ ಆಯುಕ್ತರಿಗೆ ಆಗಸ್ಟ್ 4ರಂದು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಮತದಾರರ ಹೆಸರುಗಳನ್ನು ತೆಗೆದಿರುವುದು ಮತ್ತು ದತ್ತಾಂಶ ಭಂಗದ ಗಂಭೀರ ಲೋಪದೋಷಗಳನ್ನು ತನಿಖೆ ಮಾಡುವುದು ಭಾರತದ ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಮತದಾರರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಅದಕ್ಕೆ ವಿಧಿಸಲಾಗಿದೆ. ದತ್ತಾಂಶ ಸುರಕ್ಷತೆಯ ಕೊರತೆ, ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ದತ್ತಾಂಶವನ್ನು ಚುನಾವಣಾ ಆಯೋಗದ ದತ್ತಾಂಶದೊಂದಿಗೆ ವಿವಿಧ ರಾಜ್ಯ ನಿಗಾವಣೆ ದತ್ತಾಂಶ ಭಂಡಾರಗಳಿಗೆ  ಒಳಪಡಿಸುವುದು ಜನಪ್ರತಿನಿಧಿ ಕಾಯಿದೆಯ ಉಲ್ಲಂಘನೆಯಾಗುತ್ತದೆ.

ಆಧಾರ್ ಮತ್ತು ಮತದಾರ ಐ.ಡಿ.ಯನ್ನು ಜೋಡಿಸುವ ಘೋಷಿತ ಉದ್ದೇಶವು ಪ್ರಾಥಮಿಕವಾಗಿ ನಕಲಿ ಮತದಾರರನ್ನು ತೆಗೆದುಹಾಕುವುದಾಗಿದೆ,ದರೆ ಯುಐಡಿಎಐ ಮೇಲಿನ ತನ್ನ ವರದಿಯಲ್ಲಿ ಸಿಎಜಿ ನಕಲಿ ಆಧಾರ್‌ ಕುರಿತ ಕಳವಳಗಳನ್ನು ಎತ್ತಿರುವಾಗ, ಇದು ಆತುರದ ಕಸರತ್ತಾಗುತ್ತದೆ. ಭಾರತದ ಚುನಾವಣಾ ಆಯೋಗ ಈ ವಿಷಯದಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸದಿರುವುದು ಮತ್ತು ಪ್ರತಿಯೊಬ್ಬ ಮತದಾರರ ಆಧಾರ್ ಅನ್ನು ಜೋಡಿಸುವ ಆತುರದ ಪ್ರಕ್ರಿಯೆಯು ಈ ಹಿಂದೆ ಸಂಭವಿಸಿದಂತೆ ನಿಜವಾದ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಘಟನೆಗಳಿಗೆ ಕಾರಣವಾಗುತ್ತದೆ.

ಚುನಾವಣಾ ಆಯೋಗವು 2021 ರಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಗೆ ಈ ಜೋಡಣೆಯ ವಿಧಾನಕ್ಕೆ ಅವಕಾಶವನ್ನು ಕೊಡುವ ತಿದ್ದುಪಡಿಯನ್ನು ಮಾಡುವ ಮೊದಲು ಸಂಗ್ರಹಿಸಿದ ಎಲ್ಲಾ ಆಧಾರ್ ದತ್ತಾಂಶವನ್ನು ತೆಗೆದು ಹಾಕಬೇಕು. ಅಧಿಕಾರಿಗಳು ಈ ಹಿಂದಿನ ಜೋಡಣೆಯನ್ನು ಮತದಾರರಿಗೆ ಸೂಕ್ತ ಮಾಹಿತಿ ಕೊಡದೆ ನಡೆಸಿದ್ದರಿಂದ, ಈಗಾಗಲೇ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ನ್ನು ಜೋಡಿಸಿರುವ ಪ್ರತಿಯೊಬ್ಬ ಮತದಾರರಿಗೆ ಅಧಿಸೂಚನೆ ನೀಡಬೇಕು ಎಂದು ಯೆಚುರಿ ಈ ಪತ್ರದಲ್ಲಿ ಒತ್ತಾಯಿಸಿದ್ದಾರೆ.

“ನಾಗರಿಕರ ಮತ್ತು. ಚುನಾವಣಾ ಉದ್ದೇಶಗಳಿಗಾಗಿ ಮಾತ್ರ ಸಂಗ್ರಹಿಸಲಾದ ಈ ದತ್ತಾಂಶವನ್ನು ಇತರ ಉದ್ದೇಶಗಳಿಗಾಗಿ ಬಳಸುವುದನ್ನು ನಾವು ವಿರೋಧಿಸುತ್ತೇವೆ ಮತ್ತು ಈ ದತ್ತಾಂಶದ ಉದ್ದೇಶವನ್ನು ಮಿತಿಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ಭಾರತದ ಚುನಾವಣಾ ಆಯೋಗವು ಖಾಸಗಿತ್ವದ ಅಭ್ಯಾಸಗಳ ಅಗತ್ಯವನ್ನು ಖಚಿತಗೊಳಿಸಬೇಕು” ಎಂದು ಈ ಪತ್ರದಲ್ಲಿ ಸರಕಾರವನ್ನು ಆಗ್ರಹಿಸಲಾಗಿದೆ.

ಸೀತಾರಾಂ ಯೆಚುರಿಯವರ ಈ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಮಾನ್ಯರೇ,

ಭಾರತದ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿ(ಐ.ಡಿ.)ಯೊಂದಿಗೆ ಆಧಾರ್ ನ್ನು ಜೋಡಿಸುವ ಪ್ರಕ್ರಿಯೆಯನ್ನು ಪುನಃ ಪ್ರಾರಂಭಿಸಿದೆ. ಮತದಾರ ಐ.ಡಿ.ಯೊಂದಿಗೆ ಆಧಾರ್ ಅನ್ನು ಜೋಡಿಸುವ ಈ ಪ್ರಕ್ರಿಯೆಯನ್ನು ಈಗಾಗಲೇ 2015 ರಲ್ಲಿ ‘ರಾಷ್ಟ್ರೀಯ ಚುನಾವಣಾ ಪಟ್ಟಿಗಳ ಶುದ್ಧೀಕರಣ – ದೃಢೀಕರಣ ಕಾರ್ಯಕ್ರಮ’ದ ಭಾಗವಾಗಿ, ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯನ್ನು ನಿಲ್ಲಿಸುವವರೆಗೆ. ನಡೆಸಲಾಗಿದೆ ಎಂದು ಸಾರ್ವಜನಿಕವಾಗಿಯೇ ಒಪ್ಪಿಕೊಳ್ಳಲಾಗಿದೆ,

ಈ ಕಸರತ್ತಿನ ಭಾಗವಾಗಿ ದೇಶಾದ್ಯಂತ ಹಲವಾರು ಮುಖ್ಯ ಚುನಾವಣಾ ಅಧಿಕಾರಿಗಳು ಎನ್‍ಪಿಆರ್‍, ಪಿಡಿಎಸ್ ಮತ್ತು ರಾಜ್ಯ ನಿವಾಸಿ ದತ್ತಾಂಶ ಜಾಲಸಂಪರ್ಕಗಳು(ಎಸ್‍.ಆರ್‍.ಡಿ.ಹೆಚ್.) ನಂತಹ ಹಲವಾರು ಇತರ ದತ್ತಾಂಶ ಸಂಗ್ರಹಗಳಿಂದ ಮತದಾರರ ಆಧಾರ್ ದತ್ತಾಂಶಗಳನ್ನು  ಪಡೆದುಕೊಂಡಿದ್ದಾರೆ. ಈ ಚುನಾವಣಾ ಕಚೇರಿಗಳು ವೈಯಕ್ತಿಕ ಮತದಾರರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ, ಬದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ದತ್ತಾಂಶಗಳನ್ನು ಆಧರಿಸಿ ತಂತಾನೇ ಜೋಡಿಸುವ ನಿಬಂಧನಾಂಶ(ಅಲ್ಗಾರಿದಮ್‌)ಗಳನ್ನು ಬಳಸಿ 31 ಕೋಟಿ ಮತದಾರರ ಮತದಾರ ಐ.ಡಿ.ಯೊಂದಿಗೆ ಆಧಾರ್ ಅನ್ನು ಜೋಡಿಸಿವೆ. ಈ ಪ್ರಕ್ರಿಯೆಯ ಫಲಿತಾಂಶವಾಗಿ  ದೇಶಾದ್ಯಂತ, ನಿರ್ದಿಷ್ಟವಾಗಿ, ಮತದಾರ ಐ.ಡಿ.ಯೊಂದಿಗೆ ಆಧಾರ್ ನ್ನು ಜೋಡಿಸುವ ಎನ್‍.ಆರ್‍.ಇ.ಪಿ-ಎ.ಪಿ.ಯನ್ನು ಮೂಲತಃ ಅಭಿವೃದ್ಧಿ ಪಡಿಸಿದ ತೆಲಂಗಾಣ ರಾಜ್ಯದಲ್ಲಿ ಮತದಾರರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿವೆ. ಈ ಪ್ರಕ್ರಿಯೆ 2018 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ತೆಲಂಗಾಣ ರಾಜ್ಯದಾದ್ಯಂತ ಹಲವಾರು ನೈಜ ಮತದಾರರನ್ನು ತಟ್ಟಿದ್ದು, ಹಲವು ಮತದಾರರ ಹೆಸರುಗಳನ್ನು ಪಟ್ಟಿಯಿಂದ  ತೆಗೆಯಲಾಗಿದೆ. ಇದಲ್ಲದೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಧಾರ್‌ಗೆ ಜೋಡಿಸಿದ ಮತದಾರ  ಐ.ಡಿ.ಗಳ ದತ್ತಾಂಶಗಳ ಭಂಗವಾಗಿದೆ.

ಆಧಾರ್‌ಗೆ ಸಂಬಂಧಿಸಿದಂತೆ ಈ ಹಿಂದೆ ಇಂತಹ ಚುನಾವಣಾ ಅಪ-ಆಚರಣೆಗಳೆಲ್ಲ ನಡೆದಿರುವಾಗ, ಈ ಪ್ರಕ್ರಿಯೆಯ ಪ್ರಾರಂಭದ ಮೊದಲು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದಿರುವುದು ಕಳವಳಕಾರಿಯಾಗಿದೆ. ಭಾರತವು ಪ್ರಸ್ತುತ ದತ್ತಾಂಶ  ರಕ್ಷಣೆ ಅಥವಾ ಖಾಸಗಿತ್ವ ಕಾನೂನನ್ನು ಹೊಂದಿಲ್ಲ ಮತ್ತು ಭಾರತದ ಚುನಾವಣಾ ಆಯೋಗವು ಕೂಡ ಮತದಾರರ ಆಧಾರ್ ದತ್ತಾಂಶ ನಿರ್ವಹಣೆಗೆ ಸಂಬಂಧಿಸಿದಂತೆ ಖಾಸಗಿತ್ವ ನೀತಿಯನ್ನು ಹೊಂದಿಲ್ಲ. ಆಧಾರ್ ಮತ್ತು ಮತದಾರ ಐಡಿಯನ್ನು ಜೋಡಿಸುವ ಘೋಷಿತ  ಉದ್ದೇಶವು ಪ್ರಾಥಮಿಕವಾಗಿ ನಕಲಿ ಮತದಾರರನ್ನು ತೆಗೆದುಹಾಕುವುದಾಗಿದೆ, ಆದರೆ ಯುಐಡಿಎಐ ಮೇಲಿನ ತನ್ನ ವರದಿಯಲ್ಲಿ ಸಿಎಜಿ ನಕಲಿ ಆಧಾರ್‌ ಕುರಿತ ಕಳವಳಗಳನ್ನು ಎತ್ತಿರುವಾಗ, ಇದು ಆತುರದ ಕಸರತ್ತು. ಭಾರತದ ಚುನಾವಣಾ ಆಯೋಗ ಈ ವಿಷಯದಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸದಿರುವುದು ಮತ್ತು ಪ್ರತಿಯೊಬ್ಬ ಮತದಾರರ ಆಧಾರ್ ಅನ್ನು ಜೋಡಿಸುವ ಆತುರದ ಪ್ರಕ್ರಿಯೆಯು ಈ ಹಿಂದೆ ಸಂಭವಿಸಿದಂತೆ ನಿಜವಾದ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಘಟನೆಗಳಿಗೆ ಕಾರಣವಾಗುತ್ತದೆ.

ದತ್ತಾಂಶ ಸುರಕ್ಷತೆಯ ಕೊರತೆ, ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ದತ್ತಾಂಶವನ್ನು ಚುನಾವಣಾ ಆಯೋಗದ ದತ್ತಾಂಶದೊಂದಿಗೆ  ವಿವಿಧ ರಾಜ್ಯ ನಿಗಾವಣೆ ದತ್ತಾಂಶ ಭಂಡಾರಗಳಿಗೆ  ಒಳಪಡಿಸುವುದು ಜನಪ್ರತಿನಿಧಿ ಕಾಯಿದೆಯ ಉಲ್ಲಂಘನೆಯಾಗುತ್ತದೆ. ಮತದಾರರ ಹೆಸರುಗಳನ್ನು ತೆಗೆದಿರುವುದು ಮತ್ತು ದತ್ತಾಂಶ ಭಂಗದ ಈ ಗಂಭೀರ ಲೋಪದೋಷಗಳನ್ನು ತನಿಖೆ ಮಾಡುವುದು ಭಾರತದ ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಮತದಾರರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಭಾರತದ ಚುನಾವಣಾ ಆಯೋಗಕ್ಕೆ ವಿಧಿಸಲಾಗಿದೆ. ಚುನಾವಣಾ ಆಯೋಗವು ಈ ಘಟನೆಗಳ ಬಗ್ಗೆ ತನಿಖಾ ವರದಿಯನ್ನು ತಯಾರಿಸುವ ವರೆಗೆ ಮತ್ತು ಸ್ಪಷ್ಟವಾದ ತಪಾಸಣೆ ಮತ್ತು ಸಮತೋಲನ ಕ್ರಮಗಳನ್ನು ಪ್ರಸ್ತುತ ಪಡಿಸುವ ವರೆಗೆ  ಈ ಜೋಡಿಕೆಯ ಕಸರತ್ತನ್ನು ಕಸರತ್ತನ್ನು ತಡೆಹಿಡಿಯಬೇಕು.

ಚುನಾವಣಾ ಆಯೋಗವು 2021 ರಲ್ಲಿ ಈ ಜೋಡಣೆಯ ವಿಧಾನಕ್ಕೆ ಅವಕಾಶವನ್ನು ಕೊಡುವ ತಿದ್ದುಪಡಿಯನ್ನು ಪ್ರಜಾಪ್ರತಿನಿಧಿ ಕಾಯ್ದೆಗೆ ಮಾಡುವ ಮೊದಲು ಸಂಗ್ರಹಿಸಿದ ಎಲ್ಲಾ ಆಧಾರ್ ದತ್ತಾಂಶವನ್ನು ತೆಗೆದು ಹಾಕಬೇಕು. ಅಧಿಕಾರಿಗಳು ಈ ಹಿಂದಿನ ಜೋಡಣೆಯನ್ನು ಮತದಾರರಿಗೆ ಸೂಕ್ತ ಮಾಹಿತಿ ಕೊಡದೆ ನಡೆಸಿದ್ದರಿಂದ, ಈಗಾಗಲೇ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ನ್ನು ಜೋಡಿಸಿರುವ ಪ್ರತಿಯೊಬ್ಬ ಮತದಾರರಿಗೆ ಅಧಿಸೂಚನೆ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಜೋಡಣೆಯ ಈ ಸಂಪೂರ್ಣ ಕಸರತ್ತು  ಸ್ವಯಂಪ್ರೇರಣೆಯಿಂದ ನಡಯುವಂತದ್ದಾದ್ದರಿಂದ ಮತದಾರರು ತಮ್ಮ ಆಧಾರ್ ಜೋಡಣೆಯನ್ನು ತೆಗೆಯುವ ಹಕ್ಕನ್ನು ಚಲಾಯಿಸಲು ಅವಕಾಶ ನೀಡಬೇಕು. ಈ ಕಸರತ್ತು ಪ್ರಾರಂಭವಾಗುವ ಮೊದಲು ಆಧಾರ್ ಮತದಾರ ಐಡಿಯನ್ನು ಜೋಡಿಸಲು ಮತ್ತು ಜೋಡಣೆಯನ್ನು ತೆಗೆಯಲು ಕೋಡ್ ಮತ್ತು ಕೈಪಿಡಿಗಳು ಸೇರಿದಂತೆ ಸಂಪೂರ್ಣ ತಾಂತ್ರಿಕ ಪ್ರಕ್ರಿಯೆ, ಖಾಸಗಿತ್ವ ನೀತಿಗಳನ್ನು ಪ್ರಕಟಿಸಬೇಕು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರೊಂದಿಗೆ ಅವನ್ನು ಹಂಚಿಕೊಳ್ಳಬೇಕು.

ದತ್ತಾಂಶ ಸಂರಕ್ಷಣಾ ಕಾನೂನಿನ ಕೊರತೆಯಿಂದಾಗಿ, ಯಾವುದೇ ರೀತಿಯಲ್ಲಿ ಮತದಾರ ಐಡಿ ಜೋಡಿಸಿದ ಆಧಾರ್ ನ್ನು NATGRID ದತ್ತಾಂಶ ಭಂಡಾರ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ, ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ನಿರ್ಮಿಸುವ ಉದ್ದೇಶಕ್ಕಾಗಿಯಾಗಲೀ ಮತ್ತು ಯಾವುದೇ ಹೊಸ ಮತ್ತು ಮುಂಬರುವ ಜನನ ಮತ್ತು ಮರಣ ದಾಖಲಾತಿಗಳ ದತ್ತಾಂಶ ಬಂಡಾರವನ್ನು ನನಿರ್ಮಿಸುವುದಕ್ಕಾಗಲೀ  ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಯಾವುದೇ ಸಂಭಾವ್ಯ ಹಂಚಿಕೆಯನ್ನು ನಾವು ವಿರೋಧಿಸುತ್ತೇವೆ. ನಾಗರಿಕರ ಮತ್ತು. ಚುನಾವಣಾ ಉದ್ದೇಶಗಳಿಗಾಗಿ ಮಾತ್ರ ಸಂಗ್ರಹಿಸಲಾದ ಈ ದತ್ತಾಂಶವನ್ನು ಇತರ ಉದ್ದೇಶಗಳಿಗಾಗಿ ಬಳಸುವುದನ್ನು ನಾವು ವಿರೋಧಿಸುತ್ತೇವೆ ಮತ್ತು ಈ ದತ್ತಾಂಶದ ಉದ್ದೇಶವನ್ನು ಮಿತಿಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ಭಾರತದ ಚುನಾವಣಾ ಆಯೋಗವು ಖಾಸಗಿತ್ವದ ಅಭ್ಯಾಸಗಳ ಅಗತ್ಯವನ್ನು ಖಚಿತಗೊಳಿಸಬೇಕು.

ಈ ದತ್ತಾಂಶ ಸಂಗ್ರಹಣೆ ಮತ್ತು ಬಳಕೆಯ ಉದ್ದೇಶವು ಮತದಾರರ ನಕಲಿಯನ್ನು ನಿವಾರಿಸುವುದಕ್ಕೆ ಮಾತ್ರ ಸೀಮಿತವಾಗಿರಬೇಕು ಮತ್ತು ಅದು ಕೂಡ ಪುಟ್ಟಸ್ವಾಮಿ Vs ಭಾರತ ಒಕ್ಕೂಟ (2018) ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕಡ್ಡಾಯವಾಗಿರಬಾರದು. ಈ ನಿಟ್ಟಿನಲ್ಲಿ, ಆಯೋಗವು ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಎಲ್ಲಾ ದತ್ತಾಂಶ ಅಭ್ಯಾಸಗಳು ಮತ್ತು ಅದರ ಅಧಿಕಾರಿಗಳು ಅನುಸರಿಸಬೇಕಾದ ಖಾಸಗಿತ್ವದ ಅಭ್ಯಾಸಗಳ ಸೂಚನೆಗಳನ್ನು ನೀಡಬೇಕಾಗಿದೆ. ಈ ಅಭ್ಯಾಸಗಳ ಯಾವುದೇ ಉಲ್ಲಂಘನೆಗಳ ವಿಷಯದಲ್ಲಿ EC ಕಟ್ಟುನಿಟ್ಟಾಗಿ ವ್ಯವಹರಿಸಬೇಕು.

ಧನ್ಯವಾದಗಳು,

ನಿಮ್ಮ ವಿಶ್ವಾಸಿ,

(ಸೀತಾರಾಂ ಯೆಚೂರಿ)

ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *