ಸೀತಾರಾಮ್ ಯೆಚೂರಿ
ಇಂದು, ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ಧ್ವಂಸಮಾಡಿ ಒಂದು ಫ್ಯಾಸಿಸ್ಟ್ ತೆರನ ಹಿಂದುತ್ವ ರಾಷ್ಟ್ರವನ್ನು ಹೇರುವ ಹುಚ್ಚು ಪ್ರಯತ್ನಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಾವೆಲ್ಲ ಒಟ್ಟು ಸೇರಿ ಗಟ್ಟಿಗೊಳಿಸಬೇಕಾಗಿದೆ.
ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಮೋದಿ ಸರ್ಕಾರವು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಎಂದು ನಾಮಕರಣ ಮಾಡಿದ್ದು, ಅದನ್ನು ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವುದರ ಮೇಲೆ ಕೇಂದ್ರೀಕರಿಸುವ. ಒಂದು ದೊಡ್ಡ ಅಭಿಯಾನವಾಗಿ ಭಾರೀ ಪ್ರಚಾರ ಮಾಡಲಾಗುತ್ತಿದೆ. ಇದಕ್ಕಾಗಿ, ಭಾರತದ ಧ್ವಜ ಸಂಹಿತೆಯನ್ನು ಡಿಸೆಂಬರ್ 2021 ರಲ್ಲಿ ತಿದ್ದುಪಡಿ ಮಾಡಿ, ಖಾದಿ, ಹತ್ತಿ ಮತ್ತು ರೇಷ್ಮೆಯಂತಹ ನೈಸರ್ಗಿಕ ಬಟ್ಟೆಯಲ್ಲದೆ, ಪಾಲಿಯೆಸ್ಟರ್ ಬಟ್ಟೆಯಲ್ಲೂ ಬಾವುಟಗಳನ್ನು ಮಾಡಲು ಅನುಮತಿ ನೀಡಲಾಗಿದೆ. ದೇಶದ ಅತಿದೊಡ್ಡ ಪಾಲಿಯೆಸ್ಟರ್ ಉತ್ಪಾದಕರು ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ಇದು ಆಯ್ದ ಬಂಟರಿಗೆ ಮಹಾ ಲಾಭದ ಅವಕಾಶಗಳನ್ನು ಒದಗಿಸುತ್ತದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗುವ ವರೆಗೂ ಆರ್‌ಎಸ್‌ಎಸ್-ಬಿಜೆಪಿ ಎಂದೂ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ, ಅವರ ನಿಷ್ಠೆ ಕೇಸರಿ ಧ್ವಜಕ್ಕಷ್ಟೇ ಮೀಸಲು. ಆರ್‌ಎಸ್‌ಎಸ್ ಎಂದಿಗೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ. ಅತ್ಯಂತ ಸಹಾನುಭೂತಿಯುಳ್ಳ ಹಿಂದುತ್ವ ಇತಿಹಾಸಕಾರರೂ ದಾಖಲಿಸಿರುವ ಸತ್ಯಸಂಗತಿ ಇದು ಮತ್ತು ಬ್ರಿಟಿಷ್ ಗುಪ್ತಚರ ವರದಿಗಳು ಇದನ್ನು ದೃಢೀಕರಿಸಿವೆ..
ಕಮ್ಯುನಿಸ್ಟರ ಭವ್ಯ ಪಾತ್ರ
ಇದಕ್ಕೆ ವ್ಯತಿರಿಕ್ತವಾಗಿ, ಸಿಪಿಐ(ಎಂ)ನ ಎಲ್ಲಾ ಒಂಬತ್ತು ಸಂಸ್ಥಾಪಕ ಪೊಲಿಟ್ ಬ್ಯೂರೋ ಸದಸ್ಯರನ್ನು ಬ್ರಿಟಿಷರು ಬಂಧಿಸಿದ್ದರು; ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಹಳ ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು. ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ (ಕಾಲಾಪಾನಿ) ಅಮೃತಶಿಲೆಯಲ್ಲಿ ಕೆತ್ತಿದ ಹೆಚ್ಚಿನ ಹೆಸರುಗಳು ಕ್ರಾಂತಿಕಾರಿ ಕಮ್ಯುನಿಸ್ಟ್ ಚಳುವಳಿಯೊಂದಿಗೆ ಸಂಬಂಧ ಹೊಂದಿದ್ದವು. ಕಾಂ. ಎ.ಕೆ. ಗೋಪಾಲನ್ ಅವರು ಆಗಸ್ಟ್ 15, 1947 ರಂದು ಇನ್ನೂ ಕಣ್ಣಾನೂರು ಜೈಲಿನಲ್ಲೇ ಇದ್ದು, ಅಲ್ಲೇ ರಾಷ್ಟ್ರಧ್ವಜವನ್ನು ಹಾರಿಸಿದರು. 16 ವರ್ಷದ ಹರ್ಕಿಶನ್ ಸಿಂಗ್ ಸುರ್ಜೀತ್ 1932 ರಲ್ಲಿ ಹೋಶಿಯಾರ್‌ಪುರದ ಕಲೆಕ್ಟರೇಟ್‌ನಲ್ಲಿ ಯೂನಿಯನ್ ಜ್ಯಾಕ್ ಅನ್ನು ಕೆಳಗಿಳಿಸಿ ತ್ರಿವರ್ಣವನ್ನು ಹಾರಿಸಿದಾಗ ಬ್ರಿಟಿಷರಿಂದ ಬಂಧಿಸಲ್ಪಟ್ಟರು.. ಕಮ್ಯುನಿಸ್ಟರು ಮತ್ತು ಸಿಪಿಐ(ಎಂ)ಗೆ ದೇಶಭಕ್ತಿ ಮತ್ತು ತ್ಯಾಗದ ಮನೋಭಾವವು ಭಾರತದ ಸಮಾಜವಾದಿ ಪರಿವರ್ತನೆಯ ಕ್ರಾಂತಿಕಾರಿ ಕಣ್ಣೋಟದ ಅವಿಭಾಜ್ಯ ಅಂಗವಾಗಿದೆ.
1920 ರಲ್ಲಿ ಸ್ಥಾಪನೆಯಾದಂದಿನಿಂದಲೇ, ಕಮ್ಯುನಿಸ್ಟ್ ಪಕ್ಷವು ರಾಷ್ಟ್ರೀಯ ಆಂದೋಲನದ ಕಾರ್ಯಸೂಚಿಯ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿತು. 1921 ರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಹಮದಾಬಾದ್ ಅಧಿವೇಶನದಲ್ಲಿ, ಸಿಪಿಐ ಪರವಾಗಿ ಮೌಲಾನಾ ಹಸ್ರತ್ ಮೊಹಾನಿ ಮತ್ತು ಸ್ವಾಮಿ ಕುಮಾರಾನಂದ ಅವರು ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಆಗ್ರಹಿಸುವ ನಿರ್ಣಯವನ್ನು ಮಂಡಿಸಿದರು, ಅದನ್ನು ಆಗ ಗಾಂಧೀಜಿ ಸ್ವೀಕರಿಸಲಿಲ್ಲ, (ಪೂರ್ಣ ಸ್ವರಾಜ್ಯ ಕರೆಯನ್ನು ನೀಡಿದ್ದು 1929 ರಲ್ಲಷ್ಟೇ.) 1922 ರಲ್ಲಿ ಗಯಾದಲ್ಲಿ ನಡೆದ ಮುಂದಿನ ಎಐಸಿಸಿ ಯಲ್ಲಿ ಸಿಪಿಐ ರಾಷ್ಟ್ರೀಯ ಆಂದೋಲನದ ಧ್ಯೇಯೋದ್ದೇಶಗಳ ಒಂದು ಪಟ್ಟಿಯನ್ನು ಸುತ್ತೋಲೆಯಾಗಿ ಪ್ರಸಾರ ಮಾಡಿತು. ಇದು ನಂತರದ ಎಐಸಿಸಿ ಅಧಿವೇಶನಗಳಲ್ಲಿ ಮುಂದುವರೆಯಿತು.
ಸ್ವಾತಂತ್ರ್ಯ ಚಳವಳಿಯ ಕಾರ್ಯಸೂಚಿಯ ಮೇಲೆ ಪ್ರಭಾವ ಬೀರಿದ ಕಮ್ಯುನಿಸ್ಟರ ಪ್ರಮುಖ ಕೊಡುಗೆಯೆಂದರೆ ಭೂಮಿಯ ಪ್ರಶ್ನೆ: 1940 ರ ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕಮ್ಯುನಿಸ್ಟರು ಭೂಪ್ರಶ್ನೆಗೆ ಸಂಬಂಧಿಸಿದ ಹೋರಾಟಗಳನ್ನು ಹರಿ ಬಿಟ್ಟರು- ವಿಶೇಷವಾಗಿ, ಕೇರಳದ ಪುನ್ನಪ್ರ- ವಯಲಾರ್, ಬಂಗಾಳದಲ್ಲಿ ತೆಭಾಗ ಚಳುವಳಿ, ಅಸ್ಸಾಂನಲ್ಲಿ ಸುರ್ಮಾ ಕಣಿವೆ ಹೋರಾಟ, ಮಹಾರಾಷ್ಟ್ರದಲ್ಲಿ ವಾರ್ಲಿ ಬಂಡಾಯ ಇತ್ಯಾದಿ. ಈ ಹೋರಾಟಗಳಲ್ಲಿ ಎದ್ದು ಕಂಡದ್ದು ತೆಲಂಗಾಣದಲ್ಲಿ ನಡೆದ ಸಶಸ್ತ್ರ ಹೋರಾಟ-ಇವು ಭೂಸುಧಾರಣೆ ಮತ್ತು ಜಮೀನ್ದಾರಿ ರದ್ದತಿಯನ್ನು ಕೇಂದ್ರ ಪ್ರಶ್ನೆಯಾಗಿ ಮುಂಚೂಣಿಗೆ ತಂದವು.
ಕಮ್ಯುನಿಸ್ಟರು ಭಾರತದ ಭಾಷಾ ವೈವಿಧ್ಯತೆಯನ್ನು ಪ್ರತಿಪಾದಿಸಿದರು ಮತ್ತು ಸ್ವಾತಂತ್ರ್ಯ ಹೋರಾಟದೊಂದಿಗೆ ವಿವಿಧ ಭಾಷಾ ರಾಷ್ಟ್ರೀಯತೆಗಳನ್ನು ಸಮಗ್ರೀಕರಿಸಿದ್ದು ಅಂತಿಮವಾಗಿ ಸ್ವತಂತ್ರ ಭಾರತದಲ್ಲಿ ರಾಜ್ಯಗಳ ಭಾಷಾವಾರು ಮರುಸಂಘಟನೆಗೆ ದಾರಿ ಮಾಡಿ ಕೊಟ್ಟಿತು.
ಜಾತ್ಯತೀತತೆಗೆ ಕಮ್ಯುನಿಸ್ಟರ ದೃಢವಾದ ಬದ್ಧತೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭುಗಿಲೆದ್ದ ಕೋಮುಗಲಭೆಗಳ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಕಮ್ಯುನಿಸ್ಟರು ಇಂದಿಗೂ ಜಾತ್ಯತೀತತೆಯನ್ನು ಅತ್ಯಂತ ಸ್ಥಿರತೆಯಿಂದ ಎತ್ತಿ ಹಿಡಿಯುತ್ತಿದ್ದಾರೆ.
ಗ್ರಾಮೀಣ ಭಾರತದ ಶೋಷಿತ ಬಹುಸಂಖ್ಯಾತರನ್ನು ಸೆಳೆಯುವುದು; ಸಾಮಾಜಿಕವಾಗಿ ತುಳಿತಕ್ಕೊಳಗಾದ ಜನರನ್ನು ವಿಶೇಷವಾಗಿ ಹೊಲಸು ಜಾತಿ-ಆಧಾರಿತ ದಬ್ಬಾಳಿಕೆ ಮತ್ತು ದೌರ್ಜನ್ಯಗಳಿಗೆ ಒಳಗಾಗುತ್ತಿರುವವರನ್ನು ಸೆಳೆಯುವುದು, ಹಲವಾರು ಭಾಷಾ ರಾಷ್ಟ್ರೀಯತೆಗಳನ್ನು ಸೆಳೆಯುವುದು ಮತ್ತು ಬಹು-ಧರ್ಮೀಯ ಭಾರತೀಯ ಜನಸಂಖ್ಯೆಯನ್ನು ಸೆಳೆಯುವುದು, ಎಲ್ಲಕ್ಕಿಂತ ಹೆಚ್ಚಾಗಿ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಎಲ್ಲರನ್ನೂ ಒಳಗೊಳ್ಳುವ ಹಾದಿಗೆ ಎಲ್ಲಾ ಭಾರತೀಯರನ್ನು ಸೆಳೆಯುವುದು ಸ್ವಾತಂತ್ರ್ಯ ಹೋರಾಟಕ್ಕೆ ಕಮ್ಯುನಿಸ್ಟರ ಕೊಡುಗೆಯ ತಿರುಳಾಗಿದೆ.
ಇತಿಹಾಸದ ಮರುಲೇಖನ ಮತ್ತು ಹುಸಿಗೊಳಿಸುವ ಕೃತ್ಯ
ಆರೆಸ್ಸೆಸ್/ಬಿಜೆಪಿಗೆ, ಈ ಅವಲೋಕನಗಳು ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ತಮ್ಮನ್ನು ಕಳ್ಳತನದಿಂದ ತೂರಿಸುವ ಮೂಲಕ ಇತಿಹಾಸದ ಮರುಲೇಖನಕ್ಕೆ ಅವಕಾಶವನ್ನು ಒದಗಿಸುತ್ತವೆ. ಹಿಂದುತ್ವ ಮತ್ತು ಆರೆಸ್ಸೆಸ್ ನಾಯಕರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸುವ ಒಂದು ಕರ್ಕಶ ಸರ್ಕಾರಿ ಪ್ರಾಯೋಜಿತ ಅಭಿಯಾನವನ್ನು ಹರಿಯ ಬಿಡಲಾಗಿದೆ. ಈ ಅಭಿಯಾನದಲ್ಲಿ ವಿ ಡಿ ಸಾವರ್ಕರ್ ರದ್ದೇ ಪ್ರಮುಖ ಉಲ್ಲೇಖ ಕಾಂಣುತ್ತದೆ. ಸಾವರ್ಕರ್ 1923 ರಲ್ಲಿ ಹಿಂದುತ್ವ ಎಂಬ ಪದವನ್ನು ಸೃಷ್ಟಿಸಿದವರು, ಇದು ಹಿಂದೂ ಧರ್ಮದ ಆಚರಣೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಒಂದು ರಾಜಕೀಯ ಯೋಜನೆ ಎಂದೇ ಅವರು ನಿರೂಪಿಸಿದರು. ಗಾಂಧೀಜಿಯವರ ಹತ್ಯೆಯ ಸಂಚಿನ ಹಿಂದಿನ ಪ್ರಚಂಡ ನಿಯೋಜಕ ಎಂದು ಅವರನ್ನು ಬಂಧಿಸಲಾಯಿತು. ಮಾಫೀದಾರ ಸಾಕ್ಷಿಯ ಸಾಕ್ಷ್ಯವನ್ನು ದೃಢೀಕರಿಸುವ ಸಾಕ್ಷ್ಯಾಧಾರಗಳು ಇರಬೇಕು ಎನ್ನುವುದು ಕ್ರಿಮಿನಲ್ ಕಾನೂನಿನ ಒಂದು ತಾಂತ್ರಿಕ ಅಂಶ. ಇದರ ಕೊರತೆಯಿಂದಾಗಿ ಸಾವರ್ಕರ್ ರನ್ನು ಅಂತಿಮವಾಗಿ ಖುಲಾಸೆಗೊಳಿಸಲಾಯಿತು.. ಸ್ವತಃ ಉತ್ತಮ ಕ್ರಿಮಿನಲ್ ವಕೀಲರಾಗಿದ್ದ ಸರ್ದಾರ್ ಪಟೇಲ್ ಅವರಿಗೆ ಸಾವರ್ಕರ್ ಅವರ ತಪ್ಪಿನ ಬಗ್ಗೆ ವೈಯಕ್ತಿಕವಾಗಿ ಮನವರಿಕೆಯಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸಿದರು.
ಸಾವರ್ಕರ್ ಅವರು ಎರಡು ರಾಷ್ಟ್ರಗಳ ಸಿದ್ಧಾಂತವನ್ನು, ಮೊಹಮ್ಮದ್ ಅಲಿ ಜಿನ್ನಾ ಮುಂದೆ ಬ್ರಿಟಿಶರ ನೆರವು ಮತ್ತು ಪ್ರಚೋದನೆಯಿಂದ ದೇಶದ ದುರದೃಷ್ಟಕರ ವಿಭಜನೆಗೆ ಕಾರಣವಾದ ಪ್ರತ್ಯೇಕ ಮುಸ್ಲಿಂ ಪ್ರಭುತ್ವಕ್ಕಾಗಿ ಹೋರಾಟವನ್ನು ಮುನ್ನಡೆಸುವ ಎರಡು ವರ್ಷಗಳ ಮೊದಲೇ ಪ್ರತಿಪಾದಿಸಿದ್ದರು. ಸೆಲ್ಯುಲರ್ ಜೈಲಿನ ಕೈದಿಯಾಗಿ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಕಳುಹಿಸಿ ತಮ್ಮ ಬಿಡುಗಡೆಗಾಗಿ ಮನವಿ ಮಾಡಿದರು, ಇವುಗಳಲ್ಲಿ ಬ್ರಿಟಿಷರ ಶರತ್ತುಗಳಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದ್ದರು ಎಂದು ಹಿಂದುತ್ವದ ಬಗ್ಗೆ ಸಹಾನುಭೂತಿ ಇರುವ ಇತಿಹಾಸಕಾರರೂ ದಾಖಲಿಸಿದ್ದಾರೆ..
“’ಈಗ ಭಾರತದ ಒಳಿತನ್ನು ಮತ್ತು ಮಾನವೀಯತೆಯನ್ನು ಹೊಂದಿರುವ ಯಾವುದೇ ವ್ಯಕ್ತಿ 1906-1907ರ ಭಾರತದಲ್ಲಿದ್ದ ಉದ್ರೇಕಿತ ಮತ್ತು ಹತಾಶ ಪರಿಸ್ಥಿತಿಯಲ್ಲಿ ಆದಂತೆ ಪ್ರಗತಿ ಮತ್ತು ಶಾಂತಿಯ ಮಾರ್ಗದಿಂದ ಅಡ್ಡದಾರಿಗೆ ತಿರುಗಿಸಿ ಮುಳ್ಳಿನ ಹಾದಿಯಲ್ಲಿ ಕುರುಡಾಗಿ ಹೆಜ್ಜೆ ಹಾಕುವ ಮೋಸಕ್ಕೆ ಒಳಗಾಗುವುದಿಲ್ಲ. ಆದ್ದರಿಂದ, ಸರ್ಕಾರವು ತನ್ನ ಬಹುವಿಧ ಉಪಕಾರ ಮತ್ತು ಕೃಪೆಯಿಂದ ನನ್ನನ್ನು ಬಿಡುಗಡೆ ಮಾಡಿದರೆ, ನಾನು ಸಾಂವಿಧಾನಿಕ ಪ್ರಗತಿಯ ಮತ್ತು ಆ ಪ್ರಗತಿಯ ಪ್ರಪ್ರಥಮ ಷರತ್ತಾದ ಇಂಗ್ಲಿಷ್ ಸರಕಾರಕ್ಕೆ ನಿಷ್ಠೆಯ ಕಟ್ಟಾ ಪ್ರತಿಪಾದಕನಾಗದೇ ಇರುವುದು ಸಾಧ್ಯವಿಲ್ಲ. (ಆರ್.ಸಿ.ಮಜುಂದಾರ್, ಪೀನಲ್ ಸೆಟ್ಲ್ ಮೆಂಟ್ಸ್ ಇನ್ ಅಂಡಮಾನ್ಸ್’, ಪುಟಗಳು. 211–213)
ಬ್ರಿಟಿಷರೊಂದಿಗೆ ಶಾಂತಿ ಮಾಡಿಕೊಂಡ ನಂತರ ಅವರ ಜೀವನದ ಬಹುಪಾಲು, ಅವರ ರಾಜಕೀಯವು ಬ್ರಿಟಿಷರಿಗಿಂತ ಹೆಚ್ಚಾಗಿ ಕಾಂಗ್ರೆಸ್ ಮತ್ತು ಎಡ ನೇತೃತ್ವದ ಚಳುವಳಿಗಳಿಗೆ ವಿರುದ್ಧವಾಗಿತ್ತು. ಹಿಂದೂ ಮಹಾಸಭಾದ ನಾಯಕರಾಗಿ, ಅವರು 1942 ರ ಕ್ವಿಟ್ ಇಂಡಿಯಾ ಚಳುವಳಿಯಂತಹ ಚಳುವಳಿಗಳಲ್ಲಿ ಹಿಂದೂ ಮಹಾಸಭಾ ಅಥವಾ ಸಂಘಟನಾವಾದಿ (ಆರ್‌ಎಸ್‌ಎಸ್)ಗಳು ಯಾವುದೇ ರೀತಿಯಲ್ಲಿ ಭಾಗವಹಿಸದಂತೆ ನೋಡಿಕೊಂಡರು.
ಈ ಸಂದರ್ಭದಲ್ಲಿ ಅವರು ನೀಡಿದ್ದ ಸೂಚನೆ ಹೀಗಿತ್ತು: “ಸರ್ಕಾರಿ ಸೇವೆಗಳಲ್ಲಿ ಯಾವುದೇ ಹುದ್ದೆ ಅಥವಾ ಆಯಕಟ್ಟಿನ ಸ್ಥಾನಮಾನವನ್ನು ಹೊಂದಿರುವ ಎಲ್ಲಾ ಹಿಂದೂ ಸಂಘಟನೆಗಳವರು ಅದಕ್ಕೆ ಅಂಟಿಕೊಳ್ಳಬೇಕು ಮತ್ತು ತಮ್ಮ ನಿಯಮಿತ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ನಾನು ಈ ಖಚಿತ ಸೂಚನೆಯನ್ನು ನೀಡುತ್ತೇನೆ”’ (ನೂರಾನಿ, ಫ್ರಂಟ್‌ಲೈನ್, ಡಿಸೆಂಬರ್ 1, 1995 ರಲ್ಲಿ ಉಲ್ಲೇಖಿಸಲಾಗಿದೆ),
ವಾಸ್ತವವಾಗಿ, 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಬಾಂಬೆ ಗೃಹ ಇಲಾಖೆಯು “ಸಂಘವು ತನ್ನನ್ನು ತಾನು ಕಾನೂನಿನೊಳಗೆ ನಿಷ್ಠುರವಾಗಿ ಇಟ್ಟುಕೊಂಡಿದೆ ಮತ್ತು ನಿರ್ದಿಷ್ಟವಾಗಿ ಆಗಸ್ಟ್ 1942 ರಲ್ಲಿ ಭುಗಿಲೆದ್ದ ಗಲಭೆಗಳಲ್ಲಿ ಭಾಗವಹಿಸದೆ ದೂರ ಉಳಿದಿದೆ’” ಎಂದು ದಾಖಲಿಸಿದೆ.
ಹೀಗಿದೆ ಸಾವರ್ಕರ್ ಅವರ ನಾಚಿಕೆಗೆಟ್ಟ ದಾಖಲೆ.
ಈ ವಾಸ್ತವವನ್ನು ಮರೆಮಾಚಲು ಅವರು ಕಮ್ಯುನಿಸ್ಟರ ವಿರುದ್ಧ ಅಪಪ್ರಚಾರ ಮಾಡಿದರು. ದೇಶವು ಕ್ವಿಟ್ ಇಂಡಿಯಾ ಚಳುವಳಿಯ 50 ನೇ ವರ್ಷಾಚರಣೆಯನ್ನು ಆಚರಿಸುತ್ತಿದ್ದಾಗ, 1992 ರ ಆಗಸ್ಟ್ 9/10 ರ ಮಧ್ಯರಾತ್ರಿಯಲ್ಲಿ ಸಂಸತ್ತಿನ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಅಂದಿನ ರಾಷ್ಟ್ರಪತಿ ಡಾ ಶಂಕರ್ ದಯಾಳ್ ಶರ್ಮಾ ಅವರು “ಕಾನ್ಪುರ್, ಜಮ್ಶೆಡ್‌ಪುರದ ಮತ್ತು ಅಹಮದಾಬಾದ್ ನಲ್ಲಿ ‘ಗಿರಣಿಗಳಲ್ಲಿ ದೊಡ್ಡ ಪ್ರಮಾಣದ ಮುಷ್ಕರದ ನಂತರ ದೆಹಲಿಯಿಂದ 5 ಸೆಪ್ಟೆಂಬರ್ 1942 ರಂದು, ಲಂಡನ್‌ನಲ್ಲಿದ್ದ ಸೆಕ್ರೆಟರಿ ಆಫ್ ಸ್ಟೇಟ್ ಗೆ ರವಾನೆ ಮಾಡಿದ ಒಂದು ಸುದ್ದಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಬಗ್ಗೆ ಮಾಡಿದ ವರದಿಯಲ್ಲಿ “ಅದರ ಅನೇಕ ಸದಸ್ಯರ ನಡವಳಿಕೆಯು ಯಾವಾಗಲೂ ಸ್ಪಷ್ಟವಾಗಿದ್ದನ್ನು ಅಂದರೆ, ಇದು ಬ್ರಿಟಿಷ್ ವಿರೋಧಿ ಕ್ರಾಂತಿಕಾರಿಗಳಿಂದ ಕೂಡಿದೆ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಹೇಳಲಾಗಿತ್ತು” ಎಂದು ಹೇಳಿದರು.
ಇದಕ್ಕೆ ವ್ಯತಿರಿಕ್ತವಾಗಿ, ಕಮ್ಯುನಿಸ್ಟರ ಬಗ್ಗೆ ಬಿಡಿ, ಜವಾಹರಲಾಲ್ ನೆಹರೂರವರ ಉಲ್ಲೇಖ ಕೂಡ ಈ ಸರ್ಕಾರಿ ಪ್ರಚಾರಗಳಲ್ಲಿ ಬಹು ಕಡಿಮೆ. ಇದರಲ್ಲಿ ಆಶ್ಚರ್ಯವೇನಿಲ್ಲ ಏಕೆಂದರೆ ನೆಹರೂ ಅವರು ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಅತ್ಯಂತ ಉಗ್ರ ಪ್ರತಿಪಾದಕರಾಗಿದ್ದರು, ಭಾರತೀಯ ಸಂವಿಧಾನದ ರಚನೆಗೆ ಮತ್ತು ಸ್ವತಂತ್ರ ಭಾರತವನ್ನು ಆಧುನಿಕ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪಿಸಲು ಕಾರಣವಾದ ಪ್ರಮುಖ ಚರ್ಚೆಗಳು ಮತ್ತು ನಿರ್ಣಯಗಳನ್ನು ಸಾದರ ಪಡಿಸಿದವರು. ಇವು ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಪ್ರತಿಪಾದಿಸಿದ ಉಗ್ರ ಅಸಹಿಷ್ಣು ಫ್ಯಾಸಿಸ್ಟ್ ತೆರನ ‘ಹಿಂದ್ತುತ್ವ ರಾಷ್ಟ್ರ’ ಎಂಬ ಕಣ್ಣೋಟವನ್ನು ನೇರವಾಗಿಯೇ ವಿರೋಧಿಸುವಂತದ್ದು. ಆರ್‌ಎಸ್‌ಎಸ್‌ನ ರಾಜಕೀಯ ಅಂಗವಾಗಿ ಬಿಜೆಪಿ ಇಂದು ಈ ಫ್ಯಾಸಿಸ್ಟ್ ತೆರನ ಹಿಂದುತ್ವ ರಾಷ್ಟ್ರದ ಈಡೇರಿಕೆಗೆ ತೀವ್ರ ಧಾವಂತ ನಡೆಸಿದೆ.
ಭಾರತದ ಸಂವಿಧಾನದ ಮೇಲೆ ಹಲ್ಲೆ
ಈ ಫ್ಯಾಸಿಸ್ಟ್ ತೆರನ ಯೋಜನೆಯು ಯಶಸ್ವಿಯಾಗಬೇಕಾದರೆ ಸಂವಿಧಾನದಿಂದ ಸ್ಥಾಪಿಸಲ್ಪಟ್ಟ ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪದ ಮೇಲೆ ಪ್ರಹಾರ ಮಾಡಬೇಕಾಗಿದೆ, ಅದನ್ನು ದುರ್ಬಲಗೊಳಿಸಬೇಕಾಗಿದೆ ಮತ್ತು ಅಂತಿಮವಾಗಿ ನಾಶಪಡಿಸುವ ಅಗತ್ಯವಿದೆ ಎಂಬುದು ಸ್ಪಷ್ಟ. ಸಿಪಿಐ(ಎಂ) 23ನೇ ಮಹಾಧಿವೇಶನ ಗಮನಿಸಿದಂತೆ, ವಿಶೇಷವಾಗಿ 2019 ರಲ್ಲಿ ಮೋದಿ ಸರ್ಕಾರವು ಮರಳಿದ ನಂತರ, ನಮ್ಮ ಸಂವಿಧಾನದ ನಾಲ್ಕು ಮೂಲ ಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಒಕ್ಕೂಟ ತತ್ವ, ಸಾಮಾಜಿಕ ನ್ಯಾಯ, ಆರ್ಥಿಕ ಸಾರ್ವಭೌಮತ್ವ-ಇವುಗಳ ಮೇಲೆ ತೀವ್ರ ಏಟುಗಳನ್ನು ಕೊಡಲಾಗುತ್ತಿದೆ.
ಸಂವಿಧಾನದ ಮೇಲಿನ ಈ ಏಟುಗಳ ಜೊತೆಗೆ ಎಲ್ಲಾ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು ಮತ್ತು ಪ್ರಾಧಿಕಾರಗಳನ್ನು ದುರ್ಬಲಗೊಳಿಸುವುದು ಕೂಡ ಅವರಿಗೆ ಅಗತ್ಯವಾಗಿದೆ. ಏಕೆಂದರೆ ಇವುಗಳನ್ನು ಸಂವಿಧಾನದ ಕಾರ್ಯಶೀಲತೆಯನ್ನು ಕಾಪಾಡಲು ಮತ್ತು ಜನಗಳಿಗೆ ಸಂವಿಧಾನದ ಖಾತರಿಗಳು ತಲುಪುವಂತೆ ಖಾತ್ರಿಪಡಿಸಲು ತಪಾಸಣೆ ಮತ್ತು ಸಮತೋಲನಗಳ ಸಾಧನಗಳಾಗಿ ವಿನ್ಯಾಸಗೊಳಿಸಲಾಗಿದೆ.
ಇವುಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಸಂಸತ್ತು ತೀವ್ರವಾಗಿ ದುರ್ಬಲಗೊಳ್ಳುತ್ತಿದೆ. ಅದರ ಎಲ್ಲಾ ಸ್ಥಾಪಿತ ಕಾರ್ಯವಿಧಾನಗಳು, ಸಮಿತಿಗಳ ಮೂಲಕ ಕಾರ್ಯನಿರ್ವಹಣೆ ಮತ್ತು ಕಲಾಪಗಳ ವಿಧಾನಗಳನ್ನು ತೊರೆಯಲಾಗುತ್ತಿದೆ. ಯಾವುದೇ ಚರ್ಚೆ ಅಥವಾ ಪರಿಶೀಲನೆಯಿಲ್ಲದೆ ವಿವೇಚನಾರಹಿತ ಬಹುಮತದಿಂದ ಶಾಸನಗಳನ್ನು ಮಾಡಲಾಗುತ್ತಿದೆ. ಪ್ರಸಕ್ತ ಅಧಿವೇಶನದಲ್ಲಿ, ಅಂಕೆಯಿಲ್ಲದೆ ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗ ನಾಗಾಲೋಟದಂತಹ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಒಂದು ಗಣನೀಯ ಚರ್ಚೆ ನಡೆಯಬೇಕೆಂದು ಒತ್ತಾಯಿಸಿದ ‘ಅಪರಾಧ’ಕ್ಕಾಗಿ ಹಿಂದೆಂದೂ ಕಂಡಿರದ ರೀತಿಯಲ್ಲಿ 27 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸರಿಯಾಗಿ ಕಾರ್ಯನಿರ್ವಹಿಸದ ಸಂಸತ್ತು ಅಪಾಯಕಾರಿ ಏಕೆಂದರೆ, ಜನತೆಯ ಸಾರ್ವಭೌಮತೆ ಭಾರತೀಯ ಸಂವಿಧಾನದ ಕೇಂದ್ರ ಅಂಶ – ಜನತೆಯ ಸಾರ್ವಭೌಮತ್ವವನ್ನು ಸಂಸದರು ಜನರಿಗೆ ಜವಾಬ್ದಾರರಾಗಿರುವುದರ ಮೂಲಕ ಮತ್ತು ಸರ್ಕಾರವು ಸಂಸತ್ತಿಗೆ ಜವಾಬ್ದಾರರಾಗಿರುವ ಮೂಲಕ ಚಲಾಯಿಸಲಾಗುತ್ತದೆ. ಸಂಸತ್ತನ್ನು ದುರ್ಬಲಗೊಳಿಸುವುದು ಎಂದರೆ ಜನರ ಸಾರ್ವಭೌಮತ್ವವನ್ನು ಶೂನ್ಯಗೊಳಿಸುವುದು ಮತ್ತು ಸರ್ಕಾರವು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ತಪ್ಪಿಸಿಕೊಂಡು ಮತ್ತು ಫ್ಯಾಸಿಸ್ಟ್ ತೆರನ ವಿಧಾನಗಳನ್ನು ಬಳಸಿಕೊಂಡು ನಿರಂಕುಶ ಸರ್ವಾಧಿಕಾರದತ್ತ ಕಡೆಗೆ ದೇಶಕ್ಕೆ ಕೇಂಡುಂಟು ಮಾಡುವ ರೀತಿಯಲ್ಲಿ ಚಲಿಸುವುದು..
ಸುಮಾರು ಮೂರು ವರ್ಷಗಳಿಂದ ಸಂವಿಧಾನದ ಕಲಮು 370 ಮತ್ತು 35 ಎ ರದ್ದತಿಗೆ ಸವಾಲುಗಳು; ಸಿಎಎ; ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬ್ಧಗೊಳಿಸುವ ಚುನಾವಣಾ ಬಾಂಡ್‌ಗಳು ನಮ್ಮ ಸಂವಿಧಾನದ ಉಲ್ಲಂಘನೆ ಎಂಬ ಸವಾಲು ಇತ್ಯಾದಿಗಳು ವಿಚಾರಣೆಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಾಗದೇಯೇ ಉಳಿದಿವೆ. ನ್ಯಾಯಾಂಗದ ನಿಷ್ಪಕ್ಷಪಾತತೆ ಮತ್ತು ಸ್ವಾತಂತ್ರ್ಯವು ತೀವ್ರವಾಗಿ ರಾಜಿಗೊಳಗಾಗಿರುವಾಗ, ಸಾಂವಿಧಾನಿಕ ನಿಬಂಧನೆಗಳು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳು ಹಾಗೂ ನಾಗರಿಕ ಸ್ವಾತಂತ್ರ್ಯಗಳ ಖಾತರಿಗಳ ಅನುಷ್ಠಾನದ ಮೇಲೆ ನ್ಯಾಯಾಂಗದ ಮೇಲ್ವಿಚಾರಣೆ ಅಸ್ತಿತ್ವದಲ್ಲೇ ಇಲ್ಲದಂತಾಗುತ್ತದೆ.
ಹಾಗೆಯೇ, ಚುನಾವಣಾ ಆಯೋಗದ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತತೆಯು ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಒಂದು ಸಮ ಮಟ್ಟದ ಅವಕಾಶವಿರುವ, ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವ ಮೂಲೆಗಲ್ಲಾಗಿದೆ. ಇದು ರಾಜಿಗೊಳಗಾದಾಗ ಸರ್ಕಾರಗಳು ಪ್ರಜಾಸತ್ತಾತ್ಮಕ ಅಭಿಪ್ರಾಯವನ್ನು ಮತ್ತು ಜನಾದೇಶವನ್ನು ಪ್ರತಿಬಿಂಬಿಸದೇ ಹೋಗುತ್ತವೆ.
ಸಿಬಿಐ, ಇಡಿ ಮುಂತಾದ ಕೇಂದ್ರೀಯ ಸಂಸ್ಥೆಗಳು ಮೋದಿ ಸರಕಾರದ ರಾಜಕೀಯ ಅಜೆಂಡಾವನ್ನು ಅನುಷ್ಠಾನಕ್ಕೆ ತರುವ ಅಸ್ತ್ರವಾಗುತ್ತಿರುವುದನ್ನು ಇಡೀ ದೇಶವೇ ನೋಡುತ್ತಿದೆ. ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸುವುದು, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಸ್ಥಿರಗೊಳಿಸುವುದು, ಚುನಾವಣೆಯಲ್ಲಿ ಸೋತ ನಂತರವೂ ಬಿಜೆಪಿ ಸರ್ಕಾರ ರಚಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಪಕ್ಷಾಂತರಗಳ ಬಲವಂತ ಪ್ರಜಾಪ್ರಭುತ್ವದ ಅಣಕವಾಗಿದೆ, ಮತ್ತು ಅದನ್ನು ನಾಶಪಡಿಸುತ್ತಿವೆ.
ಉನ್ಮತ್ತ ಕೋಮು ಧ್ರುವೀಕರಣ
ನಮ್ಮ ಸಾಂವಿಧಾನಿಕ ವ್ಯವಸ್ಥೆಯ ಇಂತಹ ದೊಡ್ಡ ಪ್ರಮಾಣದ ನಾಶದೊಂದಿಗೆ ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ಧ್ವಂಸಗೊಳಿಸಲು ಕೋಮು ಧ್ರುವೀಕರಣದ ದುಷ್ಟ ಪ್ರಚಾರಗಳು ನಡೆಯುತ್ತಿವೆ. ‘ಇವು ವಿಷಪೂರಿತ ದ್ವೇಷ ಮತ್ತು ಭಯೋತ್ಪಾದನೆಯನ್ನು ಹರಡಿಸುವ ಆಧಾರದ ಮೇಲೆ ನಡೆಯುತ್ತಿವೆ. ಬುಲ್ಡೋಜರ್ ರಾಜಕೀಯ’ವನ್ನು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ ದೊಡ್ಡ ಪ್ರಮಾಣದಲ್ಲಿ ನಿಯೋಜಿಸುತ್ತಿರುವುದು ಹಲವಾರು ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ. ಮತ್ತು ಹೊಸ ಸಂಸತ್ತಿನ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸುವಾಗ ಹಿಂದೂ ಧಾರ್ಮಿಕ ಆಚರಣೆಗಳನ್ನು ನಡೆಸಿರುವುದು ಭಾರತೀಯ ಪ್ರಭುತ್ವ ಮತ್ತು ಸರ್ಕಾರವನ್ನು ಹಿಂದುತ್ವದೊಂದಿಗೆ ಗುರುತಿಸುತ್ತದೆಯೇ ಹೊರತು ಭಾರತದ ಸಂವಿಧಾನದೊಂದಿಗೆ ಅಲ್ಲ ಎಂಬುದನ್ನು ಸೂಚಿಸುತ್ತದೆ.
ಸರ್ವಾಧಿಕಾರಿ ಹಲ್ಲೆಗಳು
ಹೀಗೆ ಕೋಮು ಧ್ರುವೀಕರಣದ ಇಂತಹ ಬೆದರಿಕೆಯು ಕೇಂಡು ತರುವ ರೀತಿಯಲ್ಲಿ ಏರುತ್ತಿರುವುದರೊಂದಿಗೆ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ಅಭೂತಪೂರ್ವ ಹಲ್ಲೆಗಳು ನಡೆಯುತ್ತಿವೆ. ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿ ಸ್ಥಾನಬದ್ಧತೆಯಲ್ಲಿಟ್ಟಿರುವ ರೀತಿಯಲ್ಲಿ, ಭೀಮಾ ಕೋರೆಗಾಂವ್ ಬಂಧಿತರು ಮತ್ತು ಹಲವಾರು ಪತ್ರಕರ್ತರು ಮತ್ತು ಇತರರು ಕೂಡ ಕರಾಳ ಕಾನೂನುಗಳ ಅಡಿಯಲ್ಲಿ ಜೈಲಿನಲ್ಲಿ ಕೊಳೆಯುತ್ತಿರುವುದರಲ್ಲಿ ಇದನ್ನು ಕಾಣಬಹುದು. ಭಿನ್ನಾಭಿಪ್ರಾಯದ ಪ್ರತಿಯೊಂದು ಅಭಿವ್ಯಕ್ತಿಯನ್ನೂ ‘ದೇಶ-ವಿರೋಧಿ’ ಎಂದು ಪರಿಗಣಿಸಲಾಗುತ್ತದೆ, ಕಣ್ಗಾವಲು ಪ್ರಭುತ್ವದ ‘ದುಷ್ಟ ಕಣ್ಣು’ಗಳ ನಿಗಾವಣೆಗೆ ಗುರಿ ಮಾಡಲಾಗುತ್ತದೆ.
ವೈಚಾರಿಕತೆ ಮತ್ತು ತಾರ್ಕಿಕತೆಯ ಮೇಲೆ ಹಲ್ಲೆ
ಈ ಹಿಂದುತ್ವದ ಕಥನ ಯಶಸ್ವಿಯಾಗಲು, ಭಾರತೀಯ ಇತಿಹಾಸವನ್ನು ಈ ಫ್ಯಾಸಿಸ್ಟ್ ತೆರನ ಯೋಜನೆಯ ಸೈದ್ಧಾಂತಿಕ ಹೂರಣವನ್ನು ಪೋಷಿಸಿಕೊಳ್ಳುವಂತೆ ಹೊಂದಿಸಿಕೊಳ್ಳಲು ಮರುಲೇಖನ ಮಾಡುವುದು ಅತ್ಯಗತ್ಯವಾಗುತ್ತದೆ. ಆದ್ದರಿಂದ, ಶಿಕ್ಷಣ ವ್ಯವಸ್ಥೆಯನ್ನು ಪರಿಷ್ಕರಿಸಲಾಗುತ್ತಿದೆ, ವೈಚಾರಿಕತೆಯ ಬದಲಿಗೆ ಚಿಂತನೆ ಮತ್ತು ಅಭ್ಯಾಸದಲ್ಲಿ ಅವೈಚಾರಿಕತೆಯನ್ನು ಉತ್ತೇಜಿಸಲಾಗುತ್ತದೆ; ವೈಜ್ಞಾನಿಕ ಮನೋಭಾವವನ್ನು ನಿರಾಕರಿಸಿ ಕುರುಡು ನಂಬಿಕೆ / ಅಂಧಶ್ರದ್ಧೆ /ಪುರಾಣವನ್ನು ಪ್ರಾಯೋಜಿಸಲಾಗುತ್ತದೆ; ಭಾರತೀಯ ಸಂಸ್ಕೃತಿಯ ಸಮ್ಮಿಶ್ರ ವಿಕಸನದ ಸ್ಥಾನದಲ್ಲಿ ಏಕಸಂಸ್ಕೃತಿಯ ಏಕರೂಪದ ಕಥನವನ್ನು ಹೇರುವ ಪ್ರಯತ್ನ ನಡಸಲಾಗುತ್ತದೆ. ಇದು ಭಾರತದ ಶ್ರೀಮಂತ ವೈವಿಧ್ಯತೆ ಮತ್ತು ಬಹುತ್ವವನ್ನು ನಾಶಪಡಿಸುತ್ತದೆ ಮತ್ತು ಇತಿಹಾಸದ ಸ್ಥಾನದಲ್ಲಿ ಹಿಂದೂ ಪುರಾಣವನ್ನು ಹಾಗೂ ತತ್ವಜ್ಞಾನದ ಸ್ಥಾನದಲ್ಲಿ ಹಿಂದೂ ಧರ್ಮಶಾಸ್ತ್ರವನ್ನು ಕೂರಿಸುತ್ತದೆ.
ಬಲಿಷ್ಟ ಜನತಾ ಪ್ರತಿರೋಧವನ್ನು ಹರಿಯಬಿಡಬೇಕು
ಜನರ ನಡುವೆ ಈ ರೀತಿಯ ಹಿಂದುತ್ವ ಅಸ್ಮಿತೆಯ ಮಂಟಪವನ್ನು ನಿಲ್ಲಿಸಿ, ಅದನ್ನು ಜೀವನೋಪಾಯದ ಮೇಲೆ ದೈನಂದಿನ ದಾಳಿಗೆ ಒಳಗಾಗುವ ನಮ್ಮ ಜನರ ಶೋಚನೀಯ ಜೀವನ ಪರಿಸ್ಥಿತಿಗಳನ್ನು ನೇಪಥ್ಯಕ್ಕೆ ತಳ್ಳಲು ಬಳಸಿಕೊಳ್ಳಲಾಗುತ್ತಿದೆ. ಭಾರತದ ಜಾತ್ಯತೀತ ಪ್ರಜಾಸತ್ತಾತ್ಮಕ ಸಂವಿಧಾನವನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು, ಬೆಲೆ ಏರಿಕೆ, ನಿರುದ್ಯೋಗ, ಹಸಿವು, ಅಪೌಷ್ಟಿಕತೆ ಮುಂತಾದ ಜನಗಳ ದಿನನಿತ್ಯದ ಸಮಸ್ಯೆಗಳ ವಿರುದ್ಧ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯಗಳು ಮತ್ತು ಜಾತ್ಯತೀತತೆಯ ರಕ್ಷಣೆಗಾಗಿ ದೊಡ್ಡ ಪ್ರಮಾಣದ ಜನಪ್ರತಿರೋಧ ಮತ್ತು ಜನಹೋರಾಟಗಳ ಮೂಲಕ ಕೈಗೊಳ್ಳಬೇಕಾಗಿದೆ, ಈ ಹೋರಾಟಗಳನ್ನು ತೀಕ್ಷ್ಣ ಗೊಳಿಸಬೇಕಾಗಿದೆ.
ಪ್ರಬಲವಾದ ಜನಪರ ಹೋರಾಟಗಳ ಮೂಲಕ ಸಿಪಿಐ(ಎಂ)ನ ಸ್ವತಂತ್ರ ಬಲವನ್ನು ಹೆಚ್ಚಿಸುವುದು, ಎಡ ಶಕ್ತಿಗಳ ಏಕತೆಯನ್ನು ಬಲಪಡಿಸುವುದು; ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಟ್ಟುಗೂಡಿಸುವುದು ಮತ್ತು ಹಿಂದುತ್ವ ಕೋಮುವಾದದ ವಿರುದ್ಧ ಜಾತ್ಯತೀತ ಶಕ್ತಿಗಳನ್ನು ವಿಶಾಲ ಸ್ವರೂಪದಲ್ಲಿ ಸಜ್ಜುಗೊಳಿಸುವುದು- ಈ ವಿಧಾನದಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಬೇಕಾಗಿದೆ, ಆಮೂಲಕ ನಮ್ಮ ಸಾಂವಿಧಾನಿಕ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರಕ್ಷಿಸಬೇಕಾಗಿದೆ. ಈ ಉದ್ದೇಶದ ಸಾಧನೆಗಾಗಿ ಆಗಸ್ಟ್ 15ರಂದು, ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ದಿನ ದೇಶಪ್ರೇಮದ ಹೆಮ್ಮೆಯಿಂದ ಸಿಪಿಐ(ಎಂ) ಪಕ್ಷದ ಎಲ್ಲಾ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ ಮತ್ತು ನಮ್ಮ ಸಂವಿಧಾನದ ಪೀಠಿಕೆಯ ಮೇಲೆ ಪ್ರತಿಜ್ಞೆ ಕೈಗೊಳ್ಳಲಾಗುತ್ತದೆ.
ನಾವೆಲ್ಲ ಒಟ್ಟು ಸೇರಿ, ಇಂದು ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಧ್ವಂಸಮಾಡಿ ಒಂದು ಫ್ಯಾಸಿಸ್ಟ್ ತೆರನ ಹಿಂದುತ್ವ ರಾಷ್ಟ್ರವನ್ನು ಹೇರುವ ಹುಚ್ಚು ಪ್ರಯತ್ನಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಗಟ್ಟಿಗೊಳಿಸೋಣ.