ವಿಮ್ಸ್‌ ದುರ್ಘಟನೆಯ ಕಾರಣಕರ್ತರ ಮೇಲೆ ಕಠಿಣ ಕ್ರಮವಹಿಸಿ-ಆಸ್ಪತ್ರೆಗೆ ಸೂಕ್ತ ಮೂಲ ಸೌಕರ್ಯ ಒದಗಿಸಿ: ಸಿಪಿಐ(ಎಂ) ಆಗ್ರಹ

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್‌)ಯಲ್ಲಿ ವಿದ್ಯುತ್ ಇಲ್ಲದ ಕಾರಣ ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಸಾವುನಪ್ಪಿರುವ ಘಟನೆಯನ್ನು ಆಳವಾದ ತನಿಖೆಗೆ ಒಳಪಡಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬಳ್ಳಾರಿ ತಾಲೂಕು ಸಮಿತಿಯು ಸರಕಾರವನ್ನು ಆಗ್ರಹಿಸಿದೆ.

ಬಳ್ಳಾರಿ ನಗರದಲ್ಲಿರುವ ವಿಮ್ಸ್‌ಗೆ ಬಳ್ಳಾರಿ ಜಿಲ್ಲೆಯ ನಗರ ಪ್ರದೇಶ ಮಾತ್ರವಲ್ಲದೇ, ಸುತ್ತಲಿನ ತಾಲೂಕುಗಳಿಂದಲೂ ಮತ್ತು ಅಕ್ಕಪಕ್ಕದ ಮೂರು ನಾಲ್ಕು ಜಿಲ್ಲೆಗಳಿಂದಲೂ ನೂರಾರು ಬಡ ಕುಟುಂಬದ ರೋಗಿಗಳು ವ್ಯೆದ್ಯಕೀಯ ಚಿಕಿತ್ಸೆಗಾಗಿ ಆಗಮಿಸುತ್ತಾರೆ.

ಕಳೆದ ಎರಡು ದಿನಗಳ ಹಿಂದೆ, 5 ಗಂಟೆಗಳಿಗೂ ಹೆಚ್ಚು ಸಮಯ ವಿದ್ಯುತ್ ಸರಬರಾಜು ನಿಂತಿದೆ ಮತ್ತು ಅಲ್ಲಿರುವ ಹಳೆಯ ವಿದ್ಯುತ್ ಜನರೇಟರ್ ಕಾರ್ಯನಿರ್ವಹಿಸದ ಕಾರಣ ತುರ್ತು ವಿಭಾಗದಲ್ಲಿ ವೆಂಟಿಲೆಟರ್ ಮೇಲೆ ಇರುವ ಮೂರು ರೋಗಿಗಳಿಗೆ ಆಮ್ಲಜನಕ ಸರಬರಾಜು ಆಗದೇ ಮರಣ ಹೊಂದಿದ್ದಾರೆ.

ಆದರೆ ವಿಮ್ಸ್‌ನ ನಿರ್ದೇಶಕರು ಅವರು ಕಾಯಿಲೆಗಳಿಂದ ಮರಣ ಹೊಂದಿದ್ದಾರೆ ಎಂದು ದುರ್ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ವಿಮ್ಸ್‌ನ ಕಟ್ಟಡ ಹಳೆಯದಾಗಿದ್ದು ದುರಸ್ಥಿ ಮಾಡಲು ಮುಂದಾಗುಬೇಕು ಮತ್ತು ವಿದ್ಯುತ್ ಜನರೇಟರ್‌ಗಳು ಹಳೆಯವಾಗಿರುವುದರಿಂದ ಸರಿಯಾಗಿ ಕೆಲಸ ಮಾಡದೇ ಇದ್ದ ಕಾರಣ ಈ ದುರಂತ ನಡೆದಿದೆ. ಅಧಿಕಾರಿಗಳ ಬೇಜಾಬ್ದಾರಿಯಿಂದ ಸೂಕ್ತವಾಗಿ ಕಾರ್ಯನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಕಾರಣರಾದ ಎಲ್ಲರ ಮೇಲೆ ಕೂಡಲೇ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿ ಒತ್ತಾಯಿಸುತ್ತೇವೆ. ಈ ಕುರಿತು ಜಿಲ್ಲಾಡಳಿತದ ಹೊಣೆಗಾರಿಕೆ ಇರುವ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಮುಂದಾಗಬೇಕೆಂದು ನಾವು ಒತ್ತಾಯ ಮಾಡುತ್ತೇವೆ.

ಈ ಘಟನೆ ಬಗ್ಗೆ ಬಿಗಿಯಾದ ಸೂಕ್ತ ತನಿಖೆ ನಡಸಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ. ಅಲ್ಲದೇ ಆಸ್ಪತ್ರೆಯ ಕಟ್ಟಡವನ್ನು ದುರಸ್ಥಿ ಮಾಡುವುದು ಮತ್ತು ಹೊಸ ವಿದ್ಯುತ್ ಜನರೇಟರ್‌ಗಳನ್ನು ಕೂಡಲೇ ಖರೀದಿ ಮಾಡಲು ಕ್ರಮವಹಿಸಬೇಕೆಂದು ಒತ್ತಾಯಿಸುತ್ತೇವೆ.

ಕೂಡಲೇ ತುರ್ತು ಕ್ರಮ ವಹಿಸಿ ಹೊರ – ಒಳ ರೋಗಿಗಳಿಗೆ ಸುರಕ್ಷತೆ ನೀಡಬೇಕೆಂದು ಸಿಪಿಐ(ಎಂ) ಮನವಿ ಮಾಡುತ್ತದೆ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಿದೆ. ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳದಿದ್ದರೆ ಸಿಪಿಐ(ಎಂ) ಪಕ್ಷ ಹೋರಾಟಕ್ಕೆ ಇಳಿಯುತ್ತದೆ.

ಜೆ ಚಂದ್ರ ಕುಮಾರಿ, ತಾಲೂಕ ಕಾರ್ಯದರ್ಶಿ

Leave a Reply

Your email address will not be published. Required fields are marked *