ಕೇರಳದ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಅವರು ತಾವು ಹೊಂದಿರುವ ಸಾಂವಿಧಾನಿಕ ಹುದ್ದೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಇದರಲ್ಲಿ ಇತ್ತೀಚಿನದು, ಕೇರಳ ರಾಜ್ಯಪಾಲರ ಅಧಿಕೃತ ಹ್ಯಾಂಡಲ್‌ನಿಂದ ಬಂದಿರುವ ಟ್ವೀಟ್. ಇದರಲ್ಲಿ ಕೇರಳ ರಾಜಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ರಾಜ್ಯಪಾಲರನ್ನು ಉಲ್ಲೇಖಿಸಿ, ಮಂತ್ರಿಗಳ ಹೇಳಿಕೆಗಳು ರಾಜ್ಯಪಾಲರ ಹುದ್ದೆಯ ಘನತೆಯನ್ನು ಇಳಿಸಿದರೆ, ಅದು “ಇಷ್ಟವನ್ನು ಹಿಂತೆಗೆದುಕೊಳ್ಳುವುದು” ಸೇರಿದಂತೆ ಕ್ರಮಗಳನ್ನು ಕೈಗೊಳ್ಳಲು ಆಹ್ವಾನವಾಗಬಹುದು ಎಂದಿದ್ದಾರೆ.
ಅಂದರೆ ರಾಜ್ಯಪಾಲರು ತಮ್ಮ ಇಷ್ಟವನ್ನು ಹಿಂತೆಗೆದುಕೊಂಡು ಸಚಿವರನ್ನು ವಜಾಗೊಳಿಸಬಹುದು ಎಂದು ಹೇಳಿದಂತಾಗುತ್ತದೆ. ಇಂತಹ ನಿರಂಕುಶ ಅಧಿಕಾರಗಳನ್ನು ಸಂವಿಧಾನದಲ್ಲಿ ರಾಜ್ಯಪಾಲರಿಗೆ ನೀಡಲಾಗಿಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಶ್ರೀ ಖಾನ್ ತಮ್ಮ ರಾಜಕೀಯ ಪಕ್ಷಪಾತ ಮತ್ತು ಎಲ್‌ಡಿಎಫ್ ಸರ್ಕಾರದ ಬಗ್ಗೆ ಹಗೆತನವನ್ನು ಬಹಿರಂಗಪಡಿಸಿದ್ದಾರಷ್ಟೇ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಕೇರಳ ರಾಜ್ಯಪಾಲರು ಇಂತಹ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಭಾರತದ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ.