ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿಯು ಜನರ ಮೇಲೆ ಹೇರಲಾಗುತ್ತಿರುವ ಸಂಕಷ್ಟಗಳು ಮತ್ತು ಅವರ ನಿರ್ದಿಷ್ಟ 14 ಅಂಶಗಳ ಹಕ್ಕೊತ್ತಾಯಗಳ ಮೇಲೆ ಕಾರ್ಮಿಕ ಸಂಘಗಳು, ಕಿಸಾನ್ ಸಭಾ ಮತ್ತು ಕೃಷಿ ಕಾರ್ಮಿಕ ಸಂಘ ಕರೆ ಕೊಟ್ಟಿರುವ ದೇಶವ್ಯಾಪಿ ಪ್ರತಿಭಟನಾ ಕಾರ್ಯಾಚರಣೆಗಳಿಗೆ ಮತ್ತು ಇವುಗಳ ಅಂತಿಮ ಘಟ್ಟವಾಗಿ ಏಪ್ರಿಲ್ 2023ರಲ್ಲಿ ‘ಸಂಸದ್ ಚಲೋ’ಗೆ ಪಕ್ಷದ ಬೆಂಬಲವನ್ನು ವ್ಯಕ್ತಪಡಿಸಿದೆ ಮತ್ತು ಸ್ಥಳೀಯ ಮಟ್ಟದಲ್ಲಿ, ಜನರ ಜೀವನೋಪಾಯಗಳ ಮೇಲೆ ಹೆಚ್ಚುತ್ತಿರುವ ಹೊರೆಗಳು, ದಲಿತರು, ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಮೇಲೆ ಹೆಚ್ಚುತ್ತಿರುವ ದಾಳಿಗಳ ವಿರುದ್ಧ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲಿನ ದಾಳಿಗಳ ವಿರುದ್ಧ ಸ್ಥಳೀಯ ಹೋರಾಟಗಳು ಮತ್ತು ಪ್ರತಿಭಟನಾ ಕಾರ್ಯಾಚರಣೆಗಳನ್ನು ಬಲಪಡಿಸಲು ಪಕ್ಷದ ಎಲ್ಲಾ ಘಟಕಗಳಿಗೆ ಕರೆ ನೀಡಿದೆ. ಈ ಸ್ಥಳೀಯ ಹೋರಾಟಗಳು ಮನರೇಗದ ಸರಿಯಾದ ಜಾರಿ , ಮತ್ತು ಸಕಾಲದಲ್ಲಿ ಕೂಲಿಗಳ ಪಾವತಿಯಾಗುವಂತೆ ಹಾಗೂ ಬೇಡಿಕೆಗೆ ಅನುಗುಣವಾಗಿ ಕೆಲಸಗಳನ್ನು ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸುವುದರ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಅದು ಹೇಳಿದೆ.
ಸಿಪಿಐ(ಎಂ) ಕೇಂದ್ರ ಸಮಿತಿಯು ನವದೆಹಲಿಯಲ್ಲಿ ಅಕ್ಟೋಬರ್ 29, 30 ಮತ್ತು 31, 2022 ರಂದು ನಡೆದ ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿ ಈ ಕರೆ ನೀಡಿದೆ.
ಕೇಂದ್ರ ಸಮಿತಿ, ಗುಜರಾತಿನ ಮೊರ್ಬಿ ಅಪಘಾತ, ಒಕ್ಕೂಟ ತತ್ವದ ಮೇಲೆ ಹೆಚ್ಚುತ್ತಿರುವ ಪ್ರಹಾರಗಳು, ಅದರಲ್ಲಿ ರಾಜ್ಯಪಾಲರುಗಳ ಬಳಕೆ, ಅರ್ಥವ್ಯವಸ್ಥೆಯ ಬಿಕ್ಕಟ್ಟು, ಅದರಿಂದ ಜನಗಳ ಮೇಲೆ ಹೆಚ್ಚುತ್ತಿರುವ ಹೊರೆಗಳು, ಜೀವನೋಪಾಯಗಳ ಮೇಲಷ್ಟೇ ಅಲ್ಲ, ಅವರ ಹಕ್ಕುಗಳ ಮೇಲೂ ಹೆಚ್ಚುತ್ತಿರುವ ದಾಳಿಗಳು, ಇದರ ನಡುವೆಯೇ ಕೋಮು ಧ್ರುವೀಕರಣದ ಪ್ರಯತ್ನಗಳಿಗೆ ಪ್ರಧಾನ ಮಂತ್ರಿಗಳೇ ನೇತೃತ್ವ ನೀಡುತ್ತಿರುವುದು ಇತ್ಯಾದಿ ಪ್ರಶ್ನೆಗಳ ಪರಾಮರ್ಶೇ ನಡೆಸಿತು. ಸಭೆಯ ನಂತರ ನೀಡಿರುವ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:
ಗುಜರಾತ್ನ ಮೊರ್ಬಿಯಲ್ಲಿ ಆಘಾತಕಾರಿ ಅಪಘಾತ
ಗುಜರಾತ್ನ ಮೊರ್ಬಿ ಪಟ್ಟಣದಲ್ಲಿ ಸೇತುವೆಯ ಕುಸಿತದ ದುರಂತದಲ್ಲಿ ಪ್ರಾಣ ಕಳಕೊಂಡ 140 ಕ್ಕೂ ಹೆಚ್ಚು ಜನರ ಕುಟುಂಬಗಳಿಗೆ ಕೇಂದ್ರ ಸಮಿತಿಯು ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಆರೈಕೆ ಮತ್ತು ಸಹಾಯವನ್ನು ತಕ್ಷಣವೇ ಒದಗಿಸಬೇಕು.
ನವೀಕರಣದ ನಂತರ ಸುರಕ್ಷತಾ ಪರಿಶೋಧನೆ ನಡೆಸದೆ ಈ ಸೇತುವೆಯನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ. ಇದಲ್ಲದೆ, ಯಾವುದೇ ಸಮಯದಲ್ಲಿ ಈ ಸೇತುವೆಯ ಮೇಲೆ ಎಷ್ಟು ಜನರು ಹೋಗಲು ಅವಕಾಶ ಕೊಡಲಾಗುವುದು ಎಂಬುದರ ಮಿತಿಯನ್ನು ಘೋಷಿಸಿದ್ದು, ಅದನ್ನು ಅತ್ಯಂತ ದುಃಖಕರ ರೀತಿಯಲ್ಲಿ ಉಲ್ಲಂಘಿಸಲಾಗಿದೆ. ಇದಲ್ಲದೆ, ಈ ಪ್ರದೇಶದಲ್ಲಿ ಯಾವುದೇ ಹಿಂದಿನ ಅನುಭವವಿಲ್ಲದ ಕಂಪನಿಗೆ ನವೀಕರಣ ಗುತ್ತಿಗೆಯನ್ನು ನೀಡಲಾಯಿತು. ಈ ಎಲ್ಲ ಆಯಾಮಗಳನ್ನು ನೋಡುವಾಗ, ಹೊಣೆಗಾರಿಕೆಯನ್ನು ನಿಗದಿ ಪಡಿಸಲು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಅಗತ್ಯವಾಗಿದೆ.
ರಾಜ್ಯಪಾಲರಿಗೆ ತಕ್ಕುದಲ್ಲದ ಕೃತ್ಯಗಳು
ಎಲ್ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸುವ ಆಡಳಿತಾರೂಢ ಬಿಜೆಪಿಯ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಕೇರಳ ರಾಜ್ಯಪಾಲರು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಕೇಂದ್ರ ಸಮಿತಿ ಬಲವಾಗಿ ಖಂಡಿಸಿದೆ. ಕೇರಳದ ವಿವಿಧ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ರಾಜೀನಾಮೆ ಮತ್ತು ನಂತರ ರಾಜ್ಯದ ಹಣಕಾಸು ಸಚಿವರ ರಾಜೀನಾಮೆಗೆ ಅವರು ಆಗ್ರಹಿಸಿದ ರೀತಿಗೆ ಭಾರತೀಯ ಸಂವಿಧಾನದ ಅನುಮೋದನೆ ಇಲ್ಲ. ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿ ರಾಜ್ಯಪಾಲರಿಗೆ ಅಂತಹ ಕ್ರಮಗಳನ್ನು ಪ್ರಾರಂಭಿಸಲು ರಾಜ್ಯ ಶಾಸಕಾಂಗವು ಅಂಗೀಕರಿಸಿದ ವಿಶ್ವವಿದ್ಯಾನಿಲಯ ಕಾಯಿದೆಗಳು ಯಾವುದೇ ಅಧಿಕಾರವನ್ನು ಕೊಟ್ಟಿಲ್ಲ.
ರಾಜ್ಯಪಾಲರ ಈ ಕ್ರಮಗಳು ಕೇರಳದ ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ವೈಜ್ಞಾನಿಕ ಉನ್ನತ ಶಿಕ್ಷಣ ವ್ಯವಸ್ಥೆ ಹಿಂದುತ್ವದ ಸೈದ್ಧಾಂತಿಕ ಕಾರ್ಯಸೂಚಿಯ ಪ್ರಚಾರಕ್ಕೆ ಅನುಕೂಲವಾಗುವಂತೆ ಮಾಡುವ ಗುರಿಯನ್ನು ಹೊಂದಿವೆ. ಬಿಜೆಪಿ ಕೇಂದ್ರ ಸರ್ಕಾರವು ಇದೇ ಉದ್ದೇಶದಿಂದ ಜೆಎನ್ಯು, ಹೈದರಾಬಾದ್ ಮತ್ತು ಇತರ ಹಲವು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಗುರಿಯಾಗಿಸಿಕೊಂಡು ಬಂದಿದೆ. ರಾಜ್ಯಪಾಲರು ತೋರಿರುವ ಇಂತಹ ನಿರ್ಲಜ್ಜ ಪಕ್ಷಪಾತವನ್ನು ಕೇರಳದ ಜನರು ಒಗ್ಗಟ್ಟಿನಿಂದ ಪ್ರತಿರೋಧಿಸುತ್ತಾರೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಲ್ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಸೋಲಿಸುತ್ತಾರೆ.
ತಮಿಳುನಾಡು : ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ರಂಗದ ಸರ್ಕಾರದ ನಾಯಕರು ರಾಜ್ಯಪಾಲರು ಬಿಜೆಪಿಯ ಅಭಿಪ್ರಾಯವನ್ನು ಪ್ರತಿಬಿಂಬಿಸುವ ನೋಟಗಳನ್ನು ವ್ಯಕ್ತಪಡಿಸಿ ಅನಗತ್ಯ ವಿವಾದಗಳು ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರಾಗಿದ್ದಾಗ ಸಂಪ್ರದಾಯಶರಣ ಮತ್ತು ವಿಷಪೂರಿತ ವಿಚಾರಗಳ ಅಭಿವ್ಯಕ್ತಿ ಸಂವಿಧಾನದ ಉಲ್ಲಂಘನೆಯಾಗಿದೆ.
ಸಿಪಿಐ(ಎಂ) ಕೇಂದ್ರ ಸಮಿತಿಯು ಎಲ್ಲಾ ಬಿಜೆಪಿಯೇತರ ಜಾತ್ಯತೀತ ಪ್ರಜಾಸತ್ತಾತ್ಮಕ ಪಕ್ಷಗಳಿಗೆ, ವಿಶೇಷವಾಗಿ ರಾಜ್ಯಗಳಲ್ಲಿ ಸರ್ಕಾರಗಳಿಗೆ ನೇತೃತ್ವ ಕೊಡುತ್ತಿರುವ ಪಕ್ಷಗಳಿಗೆ, ರಾಜ್ಯಪಾಲರ ಇಂತಹ ಪ್ರಜಾಪ್ರಭುತ್ವ ವಿರೋಧಿ ಸಂವಿಧಾನ ವಿರೋಧಿ ಕೃತ್ಯಗಳ ವಿರುದ್ಧ ಒಗ್ಗೂಡಬೇಕು ಮತ್ತು ಭಾರತೀಯ ಸಂವಿಧಾನದ ರಕ್ಷಣೆಯಲ್ಲಿ ಒಗ್ಗಟ್ಟಿನಿಂದ ಎದ್ದು ನಿಲ್ಲಬೇಕು ಎಂದು ಮನವಿ ಮಾಡುತ್ತದೆ.
ಒಕ್ಕೂಟ ತತ್ವವನ್ನು ದುರ್ಬಲಗೊಳಿಸಲಾಗುತ್ತಿದೆ : ನಮ್ಮ ಸಂವಿಧಾನದ ಮೂಲಭೂತ ಲಕ್ಷಣವಾದ ಒಕ್ಕೂಟತತ್ವ ಮತ್ತು ಚುನಾಯಿತ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ದುರ್ಬಲಗೊಳಿಸಲು ಪ್ರಯತ್ನಗಳು ಹೆಚ್ಚುತ್ತಲೇ ಇವೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿದೆ. ಪೊಲೀಸರಿಗೆ ‘ಒಂದು ದೇಶ ಒಂದು ಸಮವಸ್ತ್ರ’ ಎಂಬ ಮೋದಿಯವರ ಕರೆ ಇದನ್ನು ಉಲ್ಲಂಘಿಸುತ್ತದೆ.
ತೆಲಂಗಾಣದಲ್ಲಿ ಟಿಆರ್ಎಸ್ ಶಾಸಕರಿಗೆ ಭಾರಿ ಮೊತ್ತದ ಹಣ ಕೊಟ್ಟು ಬೇಟೆಯಾಡುವ ಬಿಜೆಪಿಯ ಪ್ರಯತ್ನಗಳಲ್ಲಿ ಕಂಡುಬರುವಂತೆ ಚುನಾಯಿತ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಮುಂದುವರಿದಿವೆ.
ಆಳವಾದ ಬಿಕ್ಕಟ್ಟಿನಲ್ಲಿ ಭಾರತೀಯ ಅರ್ಥವ್ಯವಸ್ಥೆ
ಮೋದಿ ಸರ್ಕಾರದ ನೀತಿಗಳು ಬೆಳೆಯುತ್ತಿರುವ ಆರ್ಥಿಕ ಹಿಂಜರಿತದ ಪ್ರವೃತ್ತಿಗಳೊಂದಿಗೆ ಅರ್ಥವ್ಯವಸ್ಥೆಯನ್ನು ಆಳವಾದ ಬಿಕ್ಕಟ್ಟಿಗೆ ನೂಕುತ್ತಿವೆ. ವಿಶ್ವ ಬ್ಯಾಂಕ್ ಮೂರನೇ ಬಾರಿಗೆ ಬೆಳವಣಿಗೆಯ ದರದ ಮುನ್ಸೂಚನೆಯನ್ನು ಹಣಕಾಸು ವರ್ಷ 23ಕ್ಕೆ ಕ್ಕೆ ಆರಂಭಿಕ ಶೇಕಡಾ 8.7 ರಿಂದ ಶೇಕಡಾ 6.5 ಕ್ಕೆ ಕಡಿತಗೊಳಿಸಿದೆ. ಅಂತೆಯೇ, ಆರ್ಬಿಐ ಅದನ್ನು ಶೇಕಡಾ 7.8ರಿಂದ ಶೇಕಡಾ 7 ಕ್ಕೆ ಇಳಿಸಿದೆ. ಕೈಗಾರಿಕಾ ಬೆಳವಣಿಗೆಯು 18 ತಿಂಗಳ ಕನಿಷ್ಠ ಮಟ್ಟವನ್ನು ದಾಖಲಿಸಿದೆ ಮತ್ತು ಅಂಕಿಅಂಶಗಳ ಸಚಿವಾಲಯದ (ಅಕ್ಟೋಬರ್ 12) ಪ್ರಕಾರ ಕಳೆದ ವರ್ಷ ಶೇಕಡಾ 19.4ಕ್ಕೆ ಹೋಲಿಸಿದರೆ 8 ಪ್ರಮುಖ ವಲಯಗಳು ಶೇಕಡಾ 9.8 ರಷ್ಟು ಬೆಳವಣಿಗೆಯನ್ನು ಮಾತ್ರ ದಾಖಲಿಸಿದೆ.
ರೂಪಾಯಿ ಕುಸಿದಿದೆ, ವಿದೇಶಿ ವಿನಿಮಯ ಮೀಸಲು ಕುಸಿಯುತ್ತಿದೆ ಮತ್ತು ವ್ಯಾಪಾರ ಕೊರತೆ ದಾಖಲೆ ಮಟ್ಟಕ್ಕೆ ಏರುತ್ತಿದೆ.
ಜನರ ಮೇಲೆ ಅಸಹನೀಯ ಹೊರೆ
ಈ ಆಳಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು ಜನರ ಜೀವನೋಪಾಯಗಳ ಮೇಲೆ ಹೆಚ್ಚೆಚ್ಚು ಸಂಕಟಗಳನ್ನು ಹೇರುತ್ತಿದೆ. ಹಬ್ಬದ ಋತುವಿನಲ್ಲಿ ನಿರುದ್ಯೋಗ ದರವು ಶೇಕಡಾ 7.8 ಕ್ಕೆ ಏರಿದೆ. ಇದರ ಹೊರತಾಗಿಯೂ, ಮೋದಿ ಸರ್ಕಾರವು ಮನರೇಗ ಯೋಜನೆಗೆ ಹಣವನ್ನು ಬಿಡುಗಡೆ ಮಾಡಲು ನಿರಾಕರಿಸಿದೆ ಮತ್ತು ಏಪ್ರಿಲ್ 1 ಮತ್ತು ಅಕ್ಟೋಬರ್ 21 ರ ನಡುವೆ ಸುಮಾರು 1.5 ಕೋಟಿ ಅರ್ಜಿದಾರರಿಗೆ ಕೆಲಸಗಳನ್ನು ನಿರಾಕರಿಸಿದೆ. ಹಣಕಾಸು ವರ್ಷ 2022ರಲ್ಲಿ 1.73 ಕೋಟಿ ಜನಗಳಿಗೆ ಕೆಲಸ ನಿರಾಕರಿಸಲಾಗಿದೆ. ಮತ್ತು ಹಣಕಾಸು ವರ್ಷ 2021ರಲ್ಲಿ 2.1 ಕೋಟಿ ಜನಗಳಿಗೆ ನಿರಾಕರಿಸಲಾಯಿತು. ಬಡತನವು ಬೆಳೆಯುತ್ತಿದೆ ಮತ್ತು ಜಾಗತಿಕ ಹಸಿವು ಸೂಚ್ಯಂಕವು ಭಾರತವನ್ನು 107/121 ಸ್ಥಾನದಲ್ಲಿದೆ, ಪರಿಸ್ಥಿತಿಯನ್ನು ‘ಗಂಭೀರ’ ಎಂದು ವರ್ಗೀಕರಿಸಲಾಗಿದೆ.
ಈ ಸಂಕಟಗಳ ಮೇಲೆ ಬೆನ್ನು ಮುರಿಯುವ ಬೆಲೆಯೇರಿಕೆ ಬರುತ್ತಿದೆ, ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರವು ಸತತ 9 ತಿಂಗಳ ಕಾಲ ರಿಝರ್ವ್ ಬ್ಯಾಂಕ್ ನಿಗದಿಪಡಿಸಿಕೊಂಡಿರುವ ಮೇಲಿನ ಮಿತಿ ಅಂದರೆ 6%ವನ್ನು ದಾಟಿ ಹೋಗಿದೆ. ಆಹಾರ ಹಣದುಬ್ಬರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಬದುಕುಳಿಯಲು ಅತ್ಯವಶ್ಯವಾದ ಬೆಳೆ/ಹಿಟ್ಟು/ಅಕ್ಕಿಯ ಆಹಾರವು ಬಹುಪಾಲು ಜನರ ಕೈಗೆಟುಕದೆ ಹೋಗುತ್ತಿದ್ದರೆ, ಕೇಂದ್ರ ಗೋದಾಮುಗಳಲ್ಲಿ ಆಹಾರ ದಾಸ್ತಾನುಗಳು 5 ವರ್ಷಗಳ ಕನಿಷ್ಠ ಮಟ್ಟದಲ್ಲಿವೆ. ಆಹಾರದ ಕೊರತೆಯ ಅಪಾಯಗಳು ತೀವ್ರವಾಗಿ ಹೆಚ್ಚಾಗುತ್ತಿವೆ
ಕೋಮು ಧ್ರುವೀಕರಣ ತೀಕ್ಷ್ಣಗೊಳ್ಳುತ್ತಿದೆ
ಈ ಆರ್ಥಿಕ ವಿನಾಶದಿಂದಾಗಿ ಜನರ ಈ ಗೋಳುಗಳನ್ನು ಮತ್ತು ಅವರ ಸಂಕಷ್ಟಗಳನ್ನು ನಿರ್ಲಕ್ಷಿಸಿ, ಮೋದಿ ವೈಯಕ್ತಿಕವಾಗಿ ಜನರ ನಡುವೆ ಕೋಮು ವಿಭಜನೆಯನ್ನು ತೀಕ್ಷ್ಣಗೊಳಿಸುವ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಮಾಧ್ಯಮಗಳ ತುಂಬಾ ಬದರಿನಾಥ್ ಮತ್ತು ಅಯೋಧ್ಯೆಯಲ್ಲಿ ಮೋದಿಯವರ ಧಾರ್ಮಿಕ ಸಮಾರಂಭಗಳೇ ತುಂಬಿ ಹೋಗಿವೆ. ಒಂದಿಲ್ಲೊಂದು ನೆಪದಲ್ಲಿ ಮುಸ್ಲಿಮರ ಮೇಲೆ ಗುರಿಯಿಡುವುದು ಸಾಮಾನ್ಯ ಸಂಗತಿಯಾಗುತ್ತಿದೆ. ಮುಸ್ಲಿಮರು ಹೆಚ್ಚೆಚ್ಚು ಘೋರ ದೈಹಿಕ ಹಲ್ಲೆಗೆ ಒಳಗಾಗುತ್ತಿದ್ದಾರೆ. ವಿಷಪೂರಿತ ದ್ವೇಷ ಮತ್ತು ಹಿಂಸಾಚಾರದ ಪ್ರಚಾರ ಹೆಚ್ಚೆಚ್ಚು ಹರಡುತ್ತಿದೆ. ಗುಜರಾತಿನ ಖೇಡಾ ಎಂಬಲ್ಲಿ ಮುಸ್ಲಿಂ ಯುವಕರನ್ನು ಸಮವಸ್ತ್ರದಲ್ಲಿಲ್ಲದ ಪೊಲೀಸರು ಸಾರ್ವಜನಿಕವಾಗಿ ಥಳಿಸಿರುವುದು ಆಘಾತಕಾರಿಯಾಗಿದೆ.
ಕೋಮು ಧ್ರುವೀಕರಣ ಈ ರೀತಿ ತೀಕ್ಷ್ಣಗೊಳ್ಳುತ್ತಿರುವುದರ ವಿರುದ್ಧ ಜಾತ್ಯತೀತ ಶಕ್ತಿಗಳನ್ನು ಸಾಧ್ಯವಾದಷ್ಟು ವಿಶಾಲ ರೀತಿಯಲ್ಲಿ ಸಜ್ಜುಗೊಳಿಸಬೇಕೆಂಬ ಪಕ್ಷದ ಕರೆಯನ್ನು ಕೇಂದ್ರ ಸಮಿತಿಯು ಪುನರುಚ್ಚರಿಸಿತು.
ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯದ ದರ್ಜೆಯನ್ನು ವಿಸರ್ಜಿಸಿ ಮೂರು ವರ್ಷಗಳಿಗಿಂತ ಹೆಚ್ಚಾಗಿದೆ. ಸನ್ನಿವೇಶವು ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಜೀವನೋಪಾಯದ ಮೇಲೆ ನಿರ್ಬಂಧಗಳನ್ನು ಹೇರುವುದನ್ನು ಮುಂದುವರೆಸಿದೆ.
ಎಡಪಕ್ಷಗಳೊಂದಿಗೆ ಸಿಪಿಐ(ಎಂ) ಜಮ್ಮು ಮತ್ತು ಕಾಶ್ಮೀರ ಪರಿಸ್ಥಿತಿಯ ಮೇಲೆ ಇತರ ಜಾತ್ಯತೀತ ಪಕ್ಷಗಳೊಂದಿಗೆ ಸಮಾಲೋಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮುತುವರ್ಜಿ ವಹಿಸುತ್ತದೆ
ಮುಂಬರುವ ವಿಧಾನಸಭೆ ಚುನಾವಣೆಗಳು
ಚುನಾವಣಾ ಆಯೋಗವು ಹಿಮಾಚಲ ಪ್ರದೇಶ ಮತ್ತು ಗುಜರಾತ್ನ ಚುನಾವಣಾ ವೇಳಾಪಟ್ಟಿಗಳನ್ನು ಪ್ರತ್ಯೇಕಿಸಿರುವುದರಿಂದ, ಗುಜರಾತಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಬಿಜೆಪಿಗೆ ಹೆಚ್ಚು ಸಮಯಾವಕಾಶದ ಪ್ರಯೋಜನ ಸಿಕ್ಕಿದೆ. ಮೋದಿಯವರು ವೈಯಕ್ತಿಕವಾಗಿ ಬಿಜೆಪಿಯ ಚುನಾವಣಾ ಪ್ರಚಾರಗಳನ್ನು ಮುನ್ನಡೆಸುತ್ತಿದ್ದಾರೆ, ಮುಖ್ಯವಾಗಿ ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತಿದ್ದಾರೆ ಮತ್ತು ಕೇಂದ್ರದ ಖಜಾನೆಯಿಂದ ರಾಜ್ಯದ ಜನರಿಗೆ ಹೊಸ ಯೋಜನೆಗಳು ಮತ್ತು ಪ್ರಯೋಜನಗಳನ್ನು ಘೋಷಿಸುತ್ತಿದ್ದಾರೆ. ಇವುಗಳಲ್ಲಿ ಕೆಲವು ಸರ್ಕಾರಿ ಯೋಜನೆಗಳನ್ನು ಜನರಿಗೆ ಅವರ “ವೈಯಕ್ತಿಕ ದೀಪಾವಳಿ ಉಡುಗೊರೆಗಳು” ಎಂದು ವರ್ಣಿಸಲಾಗಿದೆ. ಗುಜರಾತ್ ಬಿಜೆಪಿ ರಾಜ್ಯ ಸರ್ಕಾರ ಏಕರೂಪ ನಾಗರಿಕ ಸಂಹಿತೆಯ ಉದ್ದೇಶವನ್ನು ಘೋಷಿಸಿದೆ.
ಹಿಮಾಚಲ ಪ್ರದೇಶದಲ್ಲಿ ಸಿಪಿಐ(ಎಂ) 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಸಿಪಿಐ ಸ್ಪರ್ಧಿಸುತ್ತಿರುವ ಒಂದು ಸ್ಥಾನದಲ್ಲಿ ಅದಕ್ಕೆ ಬೆಂಬಲ ನೀಡುತ್ತದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಸಿಪಿಐ(ಎಂ) ಕರೆ ನೀಡಿದೆ.
ಗುಜರಾತ್ ನಲ್ಲಿ ಇನ್ನೂ ವೇಳಾಪಟ್ಟಿ ಪ್ರಕಟವಾಗದ ಕಾರಣ, ಬಿಜೆಪಿಯ ಸೋಲನ್ನು ಖಚಿತಪಡಿಸಿಕೊಳ್ಳಲು ಸಿಪಿಐ(ಎಂ) ಇತರ ಜಾತ್ಯತೀತ ಶಕ್ತಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ಬ್ರೆಜಿಲ್ನಲ್ಲಿ ಎಡಶಕ್ತಿಗಳ ವಿಜಯ
ತೀವ್ರ ಸ್ಪರ್ಧೇಯಿದ್ದ ಚುನಾವಣೆಯಲ್ಲಿ ಬ್ರೆಜಿಲ್ ಅಧ್ಯಕ್ಷರಾಗಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರ ವಿಜಯವನ್ನು ಕೇಂದ್ರ ಸಮಿತಿಯು ಶ್ಲಾಘಿಸಿದೆ. ಸ್ವಯಂ ಘೋಷಿತ ಫ್ಯಾಸಿಸ್ಟ್ ತೆರನ ಬಲಪಂಥೀಯ ಜೈರ್ ಬೋಲ್ಸನಾರೊ ಸೋಲು ಲ್ಯಾಟಿನ್ ಅಮೆರಿಕಾದಲ್ಲಿ ಎಡಪಂಥಕ್ಕೆ ಮತ್ತಷ್ಟು ಮುನ್ನಡೆಯನ್ನು ಸೂಚಿಸುತ್ತದೆ. ಸಮಾಜವಾದಿ ಕ್ಯೂಬಾವನ್ನು ಹೊರತುಪಡಿಸಿ, ಚಿಲಿ, ಬೊಲಿವಿಯಾ, ಕೊಲಂಬಿಯಾ, ಪೆರು, ಹೊಂಡುರಾಸ್ ಇತ್ಯಾದಿಗಳಲ್ಲಿ ಎಡ-ಒಲವಿನ ಅಧ್ಯಕ್ಷರುಗಳನ್ನು ಚುನಾಯಿಸಲಾಗಿದೆ.
ಎಂವಿ ಗೋವಿಂದನ್ ಪೊಲಿಟ್ ಬ್ಯೂರೋಗೆ ಆಯ್ಕೆ
ಕೇಂದ್ರ ಸಮಿತಿಯು ಸರ್ವಾನುಮತದಿಂದ ಕಾಂ. ಎಂ.ವಿ.ಗೋವಿಂದನ್, ಸಿಪಿಐ(ಎಂ)ನ ಕೇರಳ ರಾಜ್ಯ ಸಮಿತಿಯ ಕಾರ್ಯದರ್ಶಿಯವರನ್ನು ಪೊಲಿಟ್ಬ್ಯುರೊಗೆ ಚುನಾಯಿಸಿದೆ.
ಕೇಂದ್ರ ಸಮಿತಿ ಕರೆಗಳು
ಕೇಂದ್ರ ಸಮಿತಿಯು ಜನರ ಮೇಲೆ ಹೇರಲಾಗುತ್ತಿರುವ ಸಂಕಷ್ಟಗಳು ಮತ್ತು ಅವರ ನಿರ್ದಿಷ್ಟ 14 ಅಂಶಗಳ ಹಕ್ಕೊತ್ತಾಯಗಳ ಮೇಲೆ ಕಾರ್ಮಿಕ ಸಂಘಗಳು, ಕಿಸಾನ್ ಸಭಾ ಮತ್ತು ಕೃಷಿ ಕಾರ್ಮಿಕ ಸಂಘ ಕರೆ ಕೊಟ್ಟಿರುವ ದೇಶವ್ಯಾಪಿ ಪ್ರತಿಭಟನಾ ಕಾರ್ಯಾಚರಣೆಗಳಿಗೆ ಮತ್ತು ಇವುಗಳ ಅಂತಿಮ ಘಟ್ಟವಾಗಿ ಏಪ್ರಿಲ್ 2023ರಲ್ಲಿ ‘ಸಂಸದ್ ಚಲೋ’ಗೆ ಪಕ್ಷದ ಬೆಂಬಲವನ್ನು ವ್ಯಕ್ತಪಡಿಸಿತು.
ಕೇಂದ್ರ ಸಮಿತಿಯು ಜನರ ಜೀವನೋಪಾಯಗಳ ಮೇಲೆ ಹೆಚ್ಚುತ್ತಿರುವ ಹೊರೆಗಳು, ದಲಿತರು, ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಮೇಲೆ ಹೆಚ್ಚುತ್ತಿರುವ ದಾಳಿಗಳ ವಿರುದ್ಧ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲಿನ ದಾಳಿಗಳ ವಿರುದ್ಧ ಸ್ಥಳೀಯ ಹೋರಾಟಗಳು ಮತ್ತು ಪ್ರತಿಭಟನಾ ಕಾರ್ಯಾಚರಣೆಗಳನ್ನು ಬಲಪಡಿಸಲು ಪಕ್ಷದ ಎಲ್ಲಾ ಘಟಕಗಳಿಗೆ ಕರೆ ನೀಡಿದೆ. ಈ ಸ್ಥಳೀಯ ಹೋರಾಟಗಳು ಮನರೇಗದ ಸರಿಯಾದ ಜಾರಿ, ಮತ್ತು ಸಕಾಲದಲ್ಲಿ ಕೂಲಿಗಳ ಪಾವತಿಯಾಗುವಂತೆ ಹಾಗೂ ಬೇಡಿಕೆಗೆ ಅನುಗುಣವಾಗಿ ಕೆಲಸಗಳನ್ನು ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸುವುದರ ಮೇಲೆ ಗಮನ ಕೇಂದ್ರೀಕರಿಸಬೇಕು.