ನವೆಂಬರ್ 26ರಂದು ಸಂವಿಧಾನದ ದಿನದಂದು ಭಾರತವನ್ನು “ಪ್ರಜಾಪ್ರಭುತ್ವದ ತಾಯಿ” ಎಂದು ಆಚರಿಸಲು ಭಾರತೀಯ ತತ್ತ್ವಶಾಸ್ತ್ರದಲ್ಲಿ “ಆದರ್ಶ ರಾಜ” ಮುಂತಾದ ವಿಷಯಗಳ ಕುರಿತು, ‘ಖಾಪ್ ಪಂಚಾಯತ್’ಗಳು ಮತ್ತು ಅವುಗಳ “ಪ್ರಜಾಪ್ರಭುತ್ವ ಸಂಪ್ರದಾಯಗಳು” ಕುರಿತಂತೆ ಉಪನ್ಯಾಸಗಳನ್ನು ಏರ್ಪಡಿಸಲು ತಮ್ಮ ರಾಜ್ಯಗಳಲ್ಲಿನ ವಿಶ್ವವಿದ್ಯಾನಿಲಯಗಳನ್ನು “ಪ್ರೋತ್ಸಾಹಿಸಲು” ಎಲ್ಲಾ ರಾಜ್ಯಪಾಲರಿಗೆ ಯುಜಿಸಿ ಅಧ್ಯಕ್ಷರಾದ ಎಂ. ಜಗದೀಶ್ ಕುಮಾರ್ ಪತ್ರ ಬರೆದಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ವಿರೋಧಿಸಿದೆ. ಇದನ್ನು ಬಲವಾಗಿ ತಿರಸ್ಕರಿಸುವುದಾಗಿ ಹೇಳಿರುವ ಅದು ಈ ಸಲಹಾ- ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಇದು ನಮ್ಮ ಸಂವಿಧಾನದ ಚೌಕಟ್ಟಿನ ನೇರ ಉಲ್ಲಂಘನೆಯಾಗಿದೆ. ಹಾಗೆಯೇ ಸಂಸತ್ತು ಜಾರಿಗೊಳಿಸಿದ ಯುಜಿಸಿ ಕಾಯಿದೆಯ ಶಾಸನಬದ್ಧ ನಿಬಂಧನೆಗಳನ್ನು ಕೂಡ ಇದು ಅತಿಕ್ರಮಿಸಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ. ಯುಜಿಸಿ ದೇಶಾದ್ಯಂತ 90 ವಿಶ್ವವಿದ್ಯಾಲಯಗಳಲ್ಲಿ 90 ಉಪನ್ಯಾಸಗಳನ್ನು ಯೋಜಿಸಿರುವುದಾಗಿ ವರದಿಯಾಗಿದೆ.
ಪ್ರಾಚೀನ ಭಾರತವು ವಿಶಿಷ್ಟವಾಗಿದೆ, ಏಕೆಂದರೆ ಯಾವುದೇ ನಿರಂಕುಶಾಧಿಕಾರ ಅಥವಾ ಶ್ರೀಮಂತ ವರ್ಗದ ದರಬಾರು ಆಗ ಇರಲಿಲ್ಲ ಎಂಬ ಯುಜಿಸಿ ಅಧ್ಯಕ್ಷರ ದಾವೆ ಹಾಸ್ಯಾಸ್ಪದವಾಗಿದೆ. ಹೀಗೆ ದಾವೆ ಹೂಡುವುದು ನಮ್ಮ ಆಧುನಿಕ ಪ್ರಜಾಪ್ರಭುತ್ವದ ವಿಕಾಸದಲ್ಲಿ ಒಂದು ಪ್ರಮುಖ ಸವಾಲಾಗಿರುವ ವರ್ಣಾಶ್ರಮ ಮತ್ತು ಜಾತಿ-ಆಧಾರಿತ ಸಾಮಾಜಿಕ ಶ್ರೇಣೀಕರಣವಿದೆ ಎಂಬ ವಾಸ್ತವತೆಯ ನಿರಾಕರಣೆಯಾಗಿದ್ದು, ಇದು ಯುಜಿಸಿಯ ಅಧ್ಯಕ್ಷ ಹುದ್ದೆಯಲ್ಲಿರುವವರಿಗೆ ಶೋಭೆ ತರುವಂತದ್ದಲ್ಲ.
ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಚುನಾಯಿತ ರಾಜ್ಯ ಸರ್ಕಾರಗಳೊಂದಿಗೆ ಪ್ರಜಾಸತ್ತಾತ್ಮಕ ಸಮಾಲೋಚನೆ ನಡೆಸಬೇಕಾದ ಸಾಂವಿಧಾನಿಕ ಅಗತ್ಯವನ್ನು ಯುಜಿಸಿ ಅಧ್ಯಕ್ಷರು ನಿರಾಕರಿಸುತ್ತಾರೆ ಮತ್ತು ಈ ಕಾರ್ಯಸೂಚಿಯನ್ನು ಅನುಸರಿಸಲು ಚುನಾಯಿತರಲ್ಲದ, ಆರೆಸ್ಸೆಸ್-ಬಿಜೆಪಿಯಿಂದ ನೇಮಕಗೊಂಡ ರಾಜ್ಯಪಾಲರನ್ನು ಅವರು ನೇರವಾಗಿ ಸಂಪರ್ಕಿಸಿದ್ದಾರೆ.
ಇದು ನಮ್ಮ ಸಂವಿಧಾನದ ತಳಹದಿಯನ್ನು ದುರ್ಬಲಗೊಳಿಸುತ್ತದಲ್ಲದೆ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ನಾಶಮಾಡುವ ಸಾಧನವಾಗಿ ಶಿಕ್ಷಣವನ್ನು ಬಳಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ನಿಜವಾದ ಉದ್ದೇಶ ಎಂಬುದನ್ನು ಬಯಲಿಗೆಳೆದಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಕಸರತ್ತನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸುವಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ಸಂಘಟನೆಗಳು ಮತ್ತು ವ್ಯಕ್ತಿಗಳು ಸೇರಿಕೊಳ್ಳಬೇಕು ಎಂದು ಆಗ್ರಹಪಡಿಸಿದೆ.