ವಿ.ವಿ.ಪುರಂ ಸುಬ್ರಮಣ್ಯಸ್ವಾಮಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡುವುದನ್ನು ಬಜರಂಗದಳ ವಿರೋಧಿಸಿರುವ ನಡೆ ಕುರಿತು: ಸಿಪಿಐ(ಎಂ) ಖಂಡನೆ

ವಿ.ವಿ.ಪುರಂ ಸುಬ್ರಮಣ್ಯಸ್ವಾಮಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡುವುದನ್ನು ಬಜರಂಗದಳದವರು ವಿರೋಧಿಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಬಜರಂಗದಳದ ಈ ಅತಿರೇಕದ ವರ್ತನೆ ಪ್ರಜಾಪ್ರಭುತ್ವ ವಿರೋಧಿ ನಡೆಯೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಖಂಡಿಸುತ್ತದೆ.

ನವೆಂಬರ್‌ 26, ಸಂವಿಧಾನ ಸಮರ್ಪಣಾ ದಿನವನ್ನು ದೇಶಾದ್ಯಂತ ಆಚರಿಸುತ್ತಿರುವ ಹೊತ್ತಿನಲ್ಲಿ, ದೇಶದ ಬಹುತ್ವ ಸಂಸ್ಕೃತಿಗೆ ಕೂಡಿ ಬಾಳುವ ಪರಂಪರೆಗೆ ಧಕ್ಕೆ ತರುವ ರೀತಿಯಲ್ಲಿ ಹಿಂದುತ್ವವಾದಿ ಸಂಘಟನೆಗಳ ಅತಿರೇಕ ವರ್ತನೆಯನ್ನು ಸಿಪಿಐ(ಎಂ) ಖಂಡಿಸಿದೆ ಹಾಗೂ ವ್ಯಾಪಾರಿಗಳನ್ನು ದರ್ಮ, ಕೋಮು ಆಧಾರದಲ್ಲಿ ವಿಭಜಿಸುವ ಪ್ರಯತ್ನಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ನೆಲದ ಕಾನೂನು ಮತ್ತು ಸೌಹಾರ್ದ ಪರಂಪರೆಗೆ ವಿರುದ್ಧವಾಗಿ ನಡೆಯುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಕೋರಿ ಬೆಂಗಳೂರು ದಕ್ಷಿಣ ಉಪ ಪೊಲೀಸ್‌ ಆಯುಕ್ತರು(ಡಿಪಿಸಿ) ಇವರಿಗೆ ಪಕ್ಷದಿಂದ ಮನವಿ ಪತ್ರ ಸಹಾ ನೀಡಲಾಗಿದೆ. ಮನವಿ ಪತ್ರ ಸ್ವೀಕರಿಸಿದ ಡಿಸಿಪಿ ಯವರು ನೆಲದ ಕಾನೂನನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಇದು ನಮ್ಮ ಇಲಾಖೆಯ ಕರ್ತವ್ಯವಾಗಿದೆ ಎಂದು ಭರವಸೆಯನ್ನು ನೀಡಿದ್ದಾರೆ.

ಸಾರ್ವಜನಿಕರು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಕಾಯ್ದುಕೊಂಡು ಬಾಳಬೇಕೆಂದು ಸಿಪಿಐ(ಎಂ) ಸಾರ್ವಜನಿಕರಲ್ಲಿ ಮನವಿ ಮಾಡುತ್ತದೆ.

ಬಿ.ಎನ್.ಮಂಜುನಾಥ್‌, ಜಿಲ್ಲಾ ಕಾರ್ಯದರ್ಶಿ, ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ

Leave a Reply

Your email address will not be published. Required fields are marked *