ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ), ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಸುಮಾರು 6.69 ನೈಜ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದು ಪ್ರಜೆಗಳ ಮತದಾನದ ಹಕ್ಕನ್ನು ಕಸಿಯುವ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಆರೋಪಿಸಿದೆ.
ಮಹದೇವಪುರ ಬಿಬಿಎಂಪಿ ಜಂಟಿ ಆಯುಕ್ತರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಿಪಿಐ(ಎಂ) ಕಾರ್ಯಕರ್ತರು, ಈ ಪ್ರಕರಣದ ತನಿಖೆ ನಡೆಯುತ್ತಿದೆಯಾದರೂ ತನಿಖಾಧಿಕಾರಿಗಳ ಮೇಲೆ ಸರ್ಕಾರ ಪ್ರಭಾವ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಕರ್ನಾಟಕ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ಆಗಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರು, ಬಿಬಿಎಂಪಿ ಮಹದೇವಪುರ ವಲಯ ಅಧಿಕಾರಿಗಳ ಮೂಲಕ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಕೆಯ ವಿವರಣೆ ಹೀಗಿದೆ;
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 30 ಸಾವಿರದಿಂದ 60 ಸಾವಿರದವರೆಗೆ ಮತದಾರರನ್ನು ಕೈಬಿಡಲಾಗಿದೆ. ಚುನಾವಣೆಯಲ್ಲಿ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಪಕ್ಷವು ಎಂತಹ ನೀಚ ಮಟ್ಟಕ್ಕೆ ಇಳಿಯುತ್ತದೆ ಎಂಬುದು ಇದೀಗ ಸಾಬೀತಾಗಿದೆ. ಚಿಲುಮೆ ಎಂಬ ಎನ್.ಜಿ.ಓ. ಸಂಸ್ಥೆಯ ಮೂಲಕ ಈ ಅಕ್ರಮ ನಡೆದಿದ್ದು, ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗಿದೆ.
ಈ ಅಕ್ರಮ ಸುತ್ತ ದೊಡ್ಡ ಜಾಲವೇ ಹರಡಿಕೊಂಡಿದ್ದು ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧ. ನಾಗರೀಕರ ಹಕ್ಕು ಗೌಪ್ಯತೆಯನ್ನು ಕಾಪಡುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ಇದೊಂದು ಗಂಭೀರ ಪ್ರಕರಣವಾಗಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗವು ಇಬ್ಬರು ಉನ್ನತ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಪ್ರಕರಣದ ಗಂಭೀರತೆಗೆ ಸಾಕ್ಷಿಯಾಗಿದೆ.
ಈ ಕೃತ್ಯಕ್ಕೆ ಕೆಳ ಹಂತದಲ್ಲಿ ಕಂದಾಯ ನಿರೀಕ್ಷರು, ಕಂದಾಯ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದ್ದು, ಅಕ್ರಮವಾಗಿ ಇಲಾಖೆಯ ಪಾಸ್ವರ್ಡ್ಗಳನ್ನು ಪಡೆದು ಬಿಜೆಪಿ ಕಛೇರಿಗಳಲ್ಲೇ ಈ ಪರಿಕ್ಷರಣೆ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಿ.ಎಲ್.ಒ. ಹಂತದಲ್ಲಿ ರಾಜಕೀಯ ಪಕ್ಷಗಳ ಸಭೆಯನ್ನು ನಡೆಸದೇ, ಆಡಳಿತರೂಢ ಪಕ್ಷದ ಅಣತಿಯಂತೆ ಪರಿಷ್ಕರಿಸಲಾಗಿದೆ. ಜತೆಗೆ ಚಿಲುಮೆ ಸಂಸ್ಥೆ ಉದ್ಯೋಗಿಗಳಿಗೆ ಇಲಾಖೆಯಿಂದಲೇ ಬಿ.ಎಲ್.ಒ ಮತ್ತು ಬಿ.ಎಲ್.ಸಿ ಅಧಿಕಾರಿಗಳೆಂದು ಗುರುತಿನ ಚೀಟಿ ವಿತರಿಸಿರುವುದು ತನಿಖೆಯ ವೇಳೆ ಬಯಲಾಗಿದೆ. ಈ ವಿಚಾರದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು.
ಮಹದೇವಪುರ, ಚಿಕ್ಕಪೇಟೆ ಸೇರಿದಂತೆ ಇತರೆ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲು 500 ಜನರ ಸಿಬ್ಬಂದಿಯನ್ನು ದಿನಗೂಲಿ ಲೆಕ್ಕದಲ್ಲಿನೇಮಿಸಿಕೊಂಡಿದ್ದ ಚಿಲುಮೆ ಸಂಸ್ಥೆಯು ಅಕ್ರಮವಾಗಿ ಮತದಾರರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದೆ ಎಂಬ ಗಂಭೀರ ಆರೋಪಗಳು ಇವೆ.
ಮತದಾರರ, ಜಾತಿ, ವಿಳಾಸ, ಉಪಜಾತಿ, ಮೊಬೈಲ್ ಸಂಖ್ಯೆ, ಬೆಂಬಲಿಸುವ ಪಕ್ಷ, ನೆಚ್ಚಿನ ರಾಜಕೀಯ ನಾಯಕ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿದೆ. ಈ ಮಾಹಿತಿಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ಸಂಪಾದಿಸಿದೆ ಎಂದು ತನಿಖೆಯ ವೇಳೆ ಗೊತ್ತಾಗಿದೆ. ಹಾಗಾಗಿ ಈ ಪ್ರಕರಣವು ಅತ್ಯಂತ ಗಂಭೀರತೆಯಿಂದ ಇದ್ದು, ಪ್ರಸಕ್ತ ತನಿಖಾಧಿಕಾರಿಗಳ ಮೇಲೆ ಒತ್ತಡದ ಪ್ರಭಾವ ಬೀರುವ ಸಾಧ್ಯತೆಗಳು ಇರುವುದರಿಂದ, ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನಡೆಸಬೇಕೆಂದು ಸಿಪಿಐ(ಎಂ) ಪಕ್ಷದ ಆಗ್ರಹವಾಗಿದೆ.
ಇಂತಿ
ಪಿ.ಮುನಿರಾಜು, ಕಾರ್ಯದರ್ಶಿ
ಸಿಪಿಐ(ಎಂ), ಬೆಂಗಳೂರು ಪೂರ್ವ ವಲಯ ಸಮಿತಿ