ಇತ್ತೀಚಿನ ಮೂರು ಚುನಾವಣಾ ಫಲಿತಾಂಶಗಳ ಬಗ್ಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಕೆಳಗಿನ ಹೇಳಿಕೆಯನ್ನು ನೀಡಿದೆ:
ಇದೀಗ ನಡೆದಿರುವ ಮೂರು ಚುನಾವಣೆಗಳಲ್ಲಿ, ಗುಜರಾತಿನಲ್ಲಿ ಬಿಜೆಪಿ ಒಂದು ಭರ್ಜರಿ ವಿಜಯಗಳಿಸಿದೆ. ಆದರೆ ಇನ್ನೆರಡು ಚುನಾವಣೆಗಳಲ್ಲಿ – ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿದೆ.
ಗುಜರಾತಿನಲ್ಲಿ ಬಿಜೆಪಿಯ ಸತತ ಐದನೇ ಗೆಲುವು ಅಲ್ಲಿ ಕಳೆದ ಮೂರು ದಶಕಗಳಲ್ಲಿ ಬಿಜೆಪಿ-ಆರ್ಎಸ್ಎಸ್ ಆಳವಾದ ಕೋಮು ಧ್ರುವೀಕರಣವನ್ನು ಸೃಷ್ಟಿಸಿರುವುದನ್ನು ದೃಢೀಕರಿಸಿದೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಕಳಪೆ ಸಾರ್ವಜನಿಕ ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳಂತಹ ಹೆಚ್ಚು ಪ್ರಮುಖವಾದ ಬದುಕಿನ ಸಮಸ್ಯೆಗಳನ್ನು ಮೀರಿ ಗುಜರಾತೀ ಹೆಮ್ಮೆಯ ಮಾತುಗಾರಿಕೆಯೊಂದಿಗೆ ಹಿಂದೂಗಳೆಲ್ಲ ಒಂದು ಎಂಬ ಐಡೆಂಟಿಟಿಯನ್ನು ಬಿಂಬಿಸಿರುವುದರ ಕೈಮೇಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ಬಿಜೆಪಿಗೆ ಬಲವಾಗಿ ಕುಟುಕುವ ಸೋಲು ತಂದಿದೆ. ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ತನ್ನ ಎಲ್ಲಾ ಸಂಪನ್ಮೂಲಗಳನ್ನು ಮತ್ತು ಪ್ರಭುತ್ವ ಯಂತ್ರವನ್ನು ಬಳಸಿಕೊಂಡಿದ್ದರೂ ಬಿಜೆಪಿ ದುರಾಡಳಿತದ ಬಗ್ಗೆ ಜನಸಾಮಾನ್ಯರ ಅಸಮಾಧಾನ ಮೇಲುಗೈ ಸಾಧಿಸಿದೆ.
ದಿಲ್ಲಿಯಲ್ಲಿ, ಏಕೀಕೃತ ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಕಳೆದ ಹದಿನೈದು ವರ್ಷಗಳಿಂದ ಪಾಲಿಕೆಯನ್ನು ಹಿಡಿದುಕೊಂಡಿದ್ದ ಬಿಜೆಪಿಯನ್ನು ಸೋಲಿಸಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಆಮಿಷಗಳು ಮತ್ತು ತಂತ್ರಗಳನ್ನು ದಿಲ್ಲಿಯ ಜನರು ಎದುರಿಸಿ ನಿಂತಿದ್ದಾರೆ.
ಹಿಮಾಚಲ ಪ್ರದೇಶ ಮತ್ತು ದಿಲ್ಲಿಯ ಫಲಿತಾಂಶಗಳು ಬಿಜೆಪಿಯ ಅಪಾರ ಹಣಬಲ ಮತ್ತು ಸಂಪನ್ಮೂಲಗಳ ಹೊರತಾಗಿಯೂ ಅದು ಹೊಂದಿರುವ ದುರ್ಬಲತೆಯನ್ನು ಬಯಲಿಗೆ ತಂದಿವೆ. ಬಹು-ಪ್ರಚಾರಿತ ಮೋದಿ ಸಂಗತಿಯ ಮಿತಿಗಳೂ ಮುನ್ನೆಲೆಗೆ ಬಂದಿವೆ.
ವಿರೋಧ ಪಕ್ಷಗಳು ಈ ಫಲಿತಾಂಶಗಳಿಂದ ಸರಿಯಾದ ಪಾಠಗಳನ್ನು ಕಲಿಯಬೇಕು ಮತ್ತು ಎಲ್ಲಾ ಶಕ್ತಿಗಳನ್ನು ಸಜ್ಜುಗೊಳಿಸುವ ಮೂಲಕ ರಾಜ್ಯವಾರಾಗಿ ಬಿಜೆಪಿಗೆ ಪರಿಣಾಮಕಾರಿ ಐಕ್ಯ ವಿರೋಧವನ್ನು ಒಡ್ಡಲು ಯೋಜನೆಗಳನ್ನು ರೂಪಿಸಬೇಕು.