ಆರ್ಎಸ್ಎಸ್ ವಾರಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾಡಿರುವ ಟಿಪ್ಪಣಿಗಳು ಆಕ್ರೋಶಕಾರಿ, ಅವು ಭಾರತದ ಸಂವಿಧಾನಕ್ಕೆ, ಎಲ್ಲಾ ನಾಗರಿಕರ ಸಮಾನ ಹಕ್ಕುಗಳಿಗೆ ಮತ್ತು ಕಾನೂನಿನ ಆಳ್ವಿಕೆಗೆ ಒಡ್ಡಿರುವ ಬಹಿರಂಗ ಮತ್ತು ನಾಚಿಕೆಹೀನ ಸವಾಲಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ಅವರು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವು ಸುರಕ್ಷಿತವಾಗಿ ಉಳಿಯಬೇಕಾದರೆ ʻʻಶ್ರೇಷ್ಠತೆʼʼಯ ವಿಚಾರಗಳನ್ನು ಬಿಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಹಿಂದೂಗಳು ʻʻಯುದ್ಧʼʼ ಭಾವದಲ್ಲಿಇದ್ದಾರೆ ಎಂದು ಹೇಳುವ ಅವರು ಐತಿಹಾಸಿಕ ತಪ್ಪುಗಳ ಹೆಸರಿನಲ್ಲಿ ʻʻಹಿಂದೂ ಸಮಾಜʼʼದ ಆಕ್ರಮಣವನ್ನು ಸಮರ್ಥಿಸುತ್ತಾರೆ, ಅವರು ಈ ಮೂಲಕ ಭಾರತೀಯ ನಾಗರಿಕರ ಒಂದು ವಿಭಾಗದ ವಿರುದ್ಧ ಮತೀಯ ಸಂಯೋಜನೆಯ ಆಧಾರದ ಮೇಲೆ ಹಿಂಸಾಚಾರಕ್ಕೆ ಕರೆ ನೀಡಿದಂತಾಗಿದೆ ಎಂದು ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.
ವಾಸ್ತವವಾಗಿ ಇದು ʻʻಹಿಂದೂ ಸಮಾಜʼʼದ್ದಲ್ಲ, ಬದಲಾಗಿ ಭಾಗವತ್ ರಂತಹ ಮುಖಂಡರ ಬೆಂಬಲದೊಂದಿಗೆ ಆರ್ಎಸ್ಎಸ್ ಸಿದ್ಧಾಂತದಿಂದ ಪ್ರೇರಿತವಾದ ಹಿಂದುತ್ವ ಪಡೆಗಳ ಕೆಲಸ; ಅವು ವಿವಿಧ ಹಂತಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಸಾಂವಿಧಾನಿಕ ಮತ್ತು ಕಾನೂನು ಹಕ್ಕುಗಳ ಮೇಲೆ ನಿರಂತರ ದಾಳಿ ಮಾಡುವ ಮೂಲಕ ಅಲ್ಪಸಂಖ್ಯಾತ ಸಮುದಾಯದಲ್ಲಿ ತಾವು ಮುತ್ತಿಗೆಗೆ ಒಳಗಾಗಿದ್ದೇವೆ ಎಂಬ ಭಾವನೆಯನ್ನು ಸೃಷ್ಟಿಸಿವೆ.
ಭಾಗವತ್ ರವರ ಹೇಳಿಕೆಗಳು ಮುಸ್ಲಿಮರು ಅಧೀನ ಸ್ಥಾನವನ್ನು ಸ್ವೀಕರಿಸಿದರೆ ಮಾತ್ರ ಭಾರತದಲ್ಲಿ ಬದುಕಲು ಸಾಧ್ಯ ಎಂಬ ಆರ್ಎಸ್ಎಸ್ ಆರಾಧಿಸುವ ಹೆಡ್ಗೆವಾರ್ ಮತ್ತು ಗೋಲ್ವಾಲ್ಕರ್ರ ದ್ವೇಷ ತುಂಬಿದ ಕೋಮುವಾದಿ ಬರಹಗಳ ಸಮಕಾಲೀನ ಆವೃತ್ತಿಯಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಅವರ ಈ ಮಾತುಗಳನ್ನು ಬಲವಾಗಿ ಖಂಡಿಸಿದೆ ಮತ್ತು ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಆಧಾರಭೂತ ಸಾಂವಿಧಾನಿಕ ಮೌಲ್ಯಗಳ ಮೇಲಿನ ಈ ದಾಳಿಯ ವಿರುದ್ಧ ದೇಶಪ್ರೇಮೀ ನಾಗರಿಕರು ಮತ್ತು ಶಕ್ತಿಗಳು ಒಗ್ಗಟ್ಟಿನಿಂದ ತಮ್ಮ ದನಿ ಎತ್ತಬೇಕು ಎಂದು ಕರೆ ನೀಡಿದೆ.