ಜನವರಿ 28-29ರಂದು ಕೋಲ್ಕತಾದಲ್ಲಿ ಸಭೆ ಸೇರಿದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಫೆಬ್ರುವರಿ ಕೊನೆಯ ವಾರದಲ್ಲಿ ಮೋದಿ ಸರಕಾರದ ನೀತಿಗಳ ವಿರುದ್ಧ ರಾಷ್ಟ್ರವ್ಯಾಪಿಯಾಗಿ ಪ್ರತಿಭಟನಾ ಕಾರ್ಯಚರಣೆಗಳನ್ನು ನಡೆಸಲು ಕರೆ ನೀಡಿದೆ.
ಅಲ್ಲದೆ, ಅದಾನಿ ಗುಂಪಿನ ವಿರುದ್ಧ ಕೇಳಬಂದಿರುವ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಸಬೇಕು, ಆಕ್ಸ್ ಫಾಮ್ನ ಇತ್ತೀಚಿನ ವರದಿ ಎತ್ತಿ ತೋರಿರುವ ಅಮಾನತೆಯನ್ನು ತೊಡೆದು ಹಾಕುವ ಕ್ರಮವಾಗಿ, ಶ್ರೀಮಂತರಿಗೆ ನೀಡುತ್ತಲೇ ಇರುವ ತೆರಿಗೆ ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುವ ಸಮಯ ಬಂದಿದೆ, ಸಂಪತ್ತು ತೆರಿಗೆ ಮತ್ತು ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೆ ತರಬೇಕು ಮತ್ತು ಎಲ್ಲಾ ಅಗತ್ಯ ವಸ್ತುಗಳ ಮತ್ತು ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿಯನ್ನು ರದ್ದುಗೊಳಿಸಬೇಕು ಎಂದೂ ಅದು ಆಗ್ರಹಿಸಿದೆ. ಸಭೆಯ ನಂತರ ಅದು ಪ್ರಕಟಿಸಿರುವ ಹೇಳಿಕೆಯ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:
ಅದಾನಿ ಗುಂಪಿನ ವಿರುದ್ಧ ಆರೋಪ
ಅದಾನಿ ಸಮೂಹದ ವಿರುದ್ಧ ಹಿಂಡೆನ್ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಮೇಲೆ ಒಂದು ಉನ್ನತ ಮಟ್ಟದ ತನಿಖೆ ಅತ್ಯಗತ್ಯವಾಗಿದೆ, ಇದನ್ನು ಸುಪ್ರೀಂ ಕೋರ್ಟ್ ಪ್ರತಿದಿನ ವೆಂಬಂತೆ ಮೇಲ್ವಿಚಾರಣೆ ಮಾಡುವಂತಿರಬೇಕು. ಈ ವಿಚಾರಣೆ ಮುಗಿದು ಸತ್ಯ ತಿಳಿಯುವವರೆಗೂ ಭಾರತದ ಮತ್ತು ನಮ್ಮ ಜನರ ಹಿತಾಸಕ್ತಿಯನ್ನು ರಕ್ಷಿಸಬೇಕು. ಎಲ್ಐಸಿಯ ಸುಮಾರು ರೂ. 80,000 ಕೋಟಿಗಳಷ್ಟು ಅದಾನಿ ಕಂಪನಿಗಳಲ್ಲಿ ಹೂಡಿಕೆಯಾಗಿದೆ ಮತ್ತು ಈ ಸಮೂಹವು ರಾಷ್ಟ್ರೀಯ ಬ್ಯಾಂಕ್ಗಳಿಂದ ತೆಗೆದುಕೊಂಡ ಎಲ್ಲಾ ಸಾಲಗಳಲ್ಲಿ 40 ಪ್ರತಿಶತವು ಎಸ್ಬಿಐ ಮೂಲಕವಾಗಿದೆ. ಎಲ್ಐಸಿ ಮತ್ತು ಎಸ್ಬಿಐ ಎರಡೂ ಸಂಸ್ಥೆಗಳು ಕೋಟ್ಯಂತರ ಭಾರತೀಯರು ತಮ್ಮ ಭವಿಷ್ಯದ ಭದ್ರತೆಗಾಗಿ ತಮ್ಮ ಜೀವಮಾನದ ಉಳಿತಾಯವನ್ನು ಇಟ್ಟಿರುವ ಸಂಸ್ಥೆಗಳು. ಈ ವರದಿಯು ಸಾರ್ವಜನಿಕವಾದ ನಂತರ ಅದಾನಿ ಗುಂಪುಗಳ ಬಂಡವಾಳೀಕರಣವು ಶೇರು ಮಾರುಕಟ್ಟೆಯಲ್ಲಿ ಶತಕೋಟಿಯಷ್ಟು ಕುಸಿದಿದೆ. ಇದು ಈ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಜನರ ಜೀವಿತಾವಧಿಯ ಉಳಿತಾಯದ ನಾಶಕ್ಕೆ ಕಾರಣವಾಗುವಂತಾಗಬಾರದು.
ಸಿಪಿಐ(ಎಂ) ಇತರ ಜಾತ್ಯತೀತ ವಿರೋಧ ಪಕ್ಷಗಳೊಂದಿಗೆ ಸಂಯೋಜಿಸಿಕೊಂಡು ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಎತ್ತುತ್ತದೆ.
ಭಾರತೀಯ ಅರ್ಥವ್ಯವಸ್ಥೆ
ಆರ್ಥಿಕ ಹಿಂಜರಿತದ ಪರಿಸ್ಥಿತಿಗಳು ತೀವ್ರಗೊಳ್ಳುವುದರೊಂದಿಗೆ ಭಾರತೀಯ ಅರ್ಥವ್ಯವಸ್ಥೆಯು ಕುಂಠಿತಗೊಳ್ಳುತ್ತಲೇ ಇದೆ. ಆರ್ಥಿಕ ಚೇತರಿಕೆಯ ಕುರಿತು ಸರ್ಕಾರವು ಮಾಡಿದ ಎಲ್ಲಾ ಪ್ರಚಾರ ಮತ್ತು ದಾವೆಗಳ ಹೊರತಾಗಿಯೂ, ಭಾರತದ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ಹೂಡಿಕೆಗಳು ಬೆಳೆಯುತ್ತಿಲ್ಲ. ಇದರರ್ಥ ಉದ್ಯೋಗ ಸೃಷ್ಟಿಯು ಇಳಿಮುಖವಲ್ಲದಿದ್ದರೂ, ಸ್ಥಗಿತಗೊಂಡಿದೆ, ಇದು ಹೆಚ್ಚಿನ ಬಡತನ ಮತ್ತು ದುಃಖಗಳಿಗೆ ಇಂಬು ಕೊಡುತ್ತಿದೆ.
ಹೊಲಸು ರೀತಿಯಲ್ಲಿ ವಿಸ್ತರಿಸುತ್ತಿರುವ ಅಸಮಾನತೆ: ‘ಸರ್ವೈವಲ್ ಆಫ್ ದಿ ರಿಚೆಸ್ಟ್: ದಿ ಇಂಡಿಯಾ ಸಪ್ಲಿಮೆಂಟ್’” ಶೀರ್ಷಿಕೆಯ ಆಕ್ಸ್ಫಾಮ್ ವರದಿಯು ಭಾರತದ ಸಂಪತ್ತಿನ ಶೇಕಡಾ 40 ಕ್ಕಿಂತ ಹೆಚ್ಚು ಅದರ ಜನಸಂಖ್ಯೆಯ ಕೇವಲ ಶೇಕಡಾ 1 ರಷ್ಟು ಮಂದಿಯ ಒಡೆತನದಲ್ಲಿದೆ ಎಂದು ತೋರಿಸುತ್ತದೆ. 10 ಶ್ರೀಮಂತ ಭಾರತೀಯರ ಒಟ್ಟು ಸಂಪತ್ತು 2022 ರಲ್ಲಿ ರೂ. 27.52 ಲಕ್ಷ ಕೋಟಿಗಳು, 2021 ರಿಂದ ಶೇಕಡಾ 32.8 ರಷ್ಟು ಏರಿಕೆಯಾಗಿದೆ. ಜನಸಂಖ್ಯೆಯ ತಳಭಾಗದ ಶೇಕಡಾ 50 ರಷ್ಟು ಜನರದ್ದು ಕೇವಲ ಶೇಕಡಾ 3.
ಭಾರತದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆ 2020 ರಲ್ಲಿ 102 ಇದ್ದದ್ದು 2022 ರಲ್ಲಿ 166 ಕ್ಕೆ ಏರಿತು. ಇದಕ್ಕೆ ತದ್ವಿರುದ್ಧವಾಗಿ ಸುಮಾರು 23 ಕೋಟಿ ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ. ಇದು ವಿಶ್ವದಲ್ಲೆ ಅತಿ ಹೆಚ್ಚು.
ಭಾರತದಲ್ಲಿನ ಪ್ರತಿಗಾಮಿ ತೆರಿಗೆ ವಿಧಾನವನ್ನು ಗಮನಿಸಿದ ವರದಿಯು, ಆದಾಯದ ಶೇಕಡಾವಾರಾಗಿ ನಮ್ಮ ತಳಭಾಗದ ಶೇಕಡಾ 50 ರಷ್ಟು ಜನರು ತೆರುವ ಪರೋಕ್ಷ ತೆರಿಗೆಗಳ ಪ್ರಮಾಣ ಅಗ್ರ 10 ಶೇಕಡಾ ಮಂದಿ ತೆರುವುದರ 6 ಪಟ್ಟು ಹೆಚ್ಚು. ಆಹಾರ ಮತ್ತು ಆಹಾರೇತರ ಅಗತ್ಯವಸ್ತುಗಳಿಂದ ಸಂಗ್ರಹಿಸಲಾದ ಒಟ್ಟು ತೆರಿಗೆಗಳಲ್ಲಿ 64.3 ಪ್ರತಿಶತವನ್ನು ತಳಭಾಗದ ಶೇಕಡಾ 50 ರಷ್ಟು ಜನಗಳು ತೆರುತ್ತಾರೆ.
ಮೋದಿ ಸರ್ಕಾರವು ಶ್ರೀಮಂತರಿಗೆ ನೀಡುತ್ತಲೇ ಇರುವ ತೆರಿಗೆ ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುವ ಸಮಯ ಬಂದಿದೆ, ಸಂಪತ್ತು ತೆರಿಗೆ ಮತ್ತು ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೆ ತರಬೇಕು ಮತ್ತು ಎಲ್ಲಾ ಅಗತ್ಯ ವಸ್ತುಗಳ ಮತ್ತು ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿಯನ್ನು ರದ್ದುಗೊಳಿಸಬೇಕು.
ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿದ್ದಾರೆ
ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಪ್ರಯತ್ನಗಳು ವಿವಿಧ ರೀತಿಯಲ್ಲಿ ಉಲ್ಬಣಗೊಳ್ಳುತ್ತಲೇ ಇವೆ. ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳು ತಂತಮ್ಮ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಘೋಷಿಸಿವೆ. ಇದರೊಂದಿಗೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ರದ್ದುಗೊಳಿಸುವ ಕರ್ಕಶ ಟಿಪ್ಪಣಿಗಳೂ ಇರುತ್ತವೆ. ಎಲ್ಲಾ ಬಿಜೆಪಿ ರಾಜ್ಯ ಸರ್ಕಾರಗಳು ಈಗಾಗಲೇ ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ‘ಲವ್ ಜಿಹಾದ್’ ಅಥವಾ ‘ಗೋಸಂರಕ್ಷಣೆ’ ಹೆಸರಲ್ಲಿ ಕಾನೂನುಗಳನ್ನು ಜಾರಿಗೊಳಿಸಿವೆ ಮತ್ತು ಯಾವುದೇ ಸ್ವಯಂಪ್ರೇರಿತ ಮತಾಂತರಗಳು ಮತ್ತು ಅಂತರ್ಧರ್ಮೀಯ ವಿವಾಹಗಳನ್ನು ನಿಷೇಧಿಸುವಂತಹ ಷರತ್ತುಗಳನ್ನು ವಿಧಿಸಿವೆ. ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ದ್ವೇಷವನ್ನು ಅಪಾಯಕಾರಿ ರೀತಿಯಲ್ಲಿ ತೀವ್ರಗೊಳಿಸುತ್ತಿರುವ ವರದಿಗಳು ಹೆಚ್ಚುತ್ತಿವೆ.
ಉತ್ತರ ಪ್ರದೇಶ ಬಿಜೆಪಿ ರಾಜ್ಯ ಸರ್ಕಾರವು ಮುಸ್ಲಿಂ ಅಲ್ಪಸಂಖ್ಯಾತರಿಗೆ ಮೂಲಭೂತ ಸಾಂವಿಧಾನಿಕ ಖಾತರಿಗಳನ್ನು ನಿರಾಕರಿಸುವ ಉದ್ರೇಕಕಾರಿ ಕೋಮು ಧ್ರುವೀಕರಣವನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ. ಇತ್ತೀಚೆಗೆ, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಜನಪ್ರಿಯ ಉರ್ದು ಪ್ರಾರ್ಥನೆ ಹಾಡನ್ನು ಹಾಡುವ ಮಕ್ಕಳನ್ನು ಅಮಾನತುಗೊಳಿಸಿದ್ದಾರೆ.
ಛತ್ತೀಸ್ಗಢದ ಉತ್ತರ ಬಸ್ತಾರ್ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ದೊಡ್ಡ ಪ್ರಮಾಣದ ದಾಳಿಗಳು ನಡೆಯುತ್ತಿವೆ. ಇಂತಹ ದಾಳಿಗಳಿಗೆ ನೆಪವಾಗಿ ಬಲಾತ್ಕಾರದ ಮತಾಂತರದ ಪ್ರಚಾರದಲ್ಲಿ ಸತ್ಯಾಂಶಗಳು ಕಂಡು ಬಂದಿಲ್ಲ. ಬಲವಂತದ ಮತಾಂತರದ ಒಂದು ಪ್ರಕರಣವೂ ವರದಿಯಾಗಿಲ್ಲ. ಇದು ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಅಜೆಂಡಾವನ್ನು ಅನುಸರಿಸುವ ಮತ್ತು ಆರ್ಎಸ್ಎಸ್/ಬಿಜೆಪಿಯ ಕೃಪಾಪೋಷಣೆಯಲ್ಲಿ ಬಜರಂಗದಳ ‘ಘರ್ ವಾಪ್ಸಿ’ ಸ್ವೀಕರಿಸುವಂತೆ ಬಲವಂತ ಪಡಿಸುವ ಸ್ಪಷ್ಟ ಪ್ರಕರಣವಾಗಿದೆ. ಕ್ರಿಮಿನಲ್ ದಾಳಿಗಳುನ್ನು, ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಹಿಂಸಾಚಾರದೊಂದಿಗೆ ಹರಿಯ ಬಿಡಲಾಗಿದೆ.
ಒಬ್ಬ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪದಕ ಗೆದ್ದ ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಸರಕಾರವಾಗಲಿ, ಆಡಳಿತ ಪಕ್ಷವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.
ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಮಾಫಿ ಮಾಡಿ ಬಿಡುಗಡೆಗೊಳಿಸಿದ ನಂತರ, ಜೂನ್ 2014 ರಲ್ಲಿ ಪುಣೆಯಲ್ಲಿ ನಡೆದ ಗಲಭೆ ಮತ್ತು ಮೊಹ್ಸಿನ್ ಶೇಖ್ ಕಗ್ಗೊಲೆಯ ಪ್ರಕರಣದಲ್ಲಿ ಎಲ್ಲಾ 21 ವ್ಯಕ್ತಿಗಳನ್ನು ಆರೋಪ ಮುಕ್ತಗೊಳಿಸಲಾಗಿದೆ . ಇದನ್ನು ಹಿಂದುತ್ವವಾದಿ ಸಂಘಟನೆಗಳ ದೊಡ್ಡ ಪಡೆಯೇ ಸ್ವಾಗತಿಸಿದೆ. .ಇದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಪೊಲೀಸರು ಮತ್ತು ಆಡಳಿತ ಇದುವರೆಗೆ ಮುಂದಾಗಿಲ್ಲ.
ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಯತ್ನ
‘ಪಳಗಿಸಿದ’ ನ್ಯಾಯಾಂಗವನ್ನು ಹೊಂದುವ ಪ್ರಯತ್ನದಲ್ಲಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೊಲಿಜಿಯಂಗಳು ಶಿಫಾರಸು ಮಾಡಿದ ವಿವಿಧ ಹೆಸರುಗಳನ್ನು ಅನುಮೋದಿಸಲು ವಿಳಂಬ ಅಥವಾ ನಿರಾಕರಿಸುವ ಮೂಲಕ ಸರ್ಕಾರವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ,
ಉನ್ನತ ನ್ಯಾಯಾಂಗವನ್ನು ಕಾರ್ಯಾಂಗಕ್ಕೆ ಅಧೀನಗೊಳಿಸುವುದು ಮೋದಿ ಸರ್ಕಾರದ ಗುರಿಯಾಗಿದೆ. ಸಾಂವಿಧಾನಿಕ ಯೋಜನೆಯಲ್ಲಿರುವ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕೃಶಗೊಳಿಸುವುದು ಸರ್ವಾಧಿಕಾರಶಾಹಿಗೆ ಸಂಪೂರ್ಣ ಪ್ರಾಬಲ್ಯವನ್ನು ಕೊಡುತ್ತದೆ
ರಾಜ್ಯಪಾಲರ ಪಾತ್ರ
ಒಕ್ಕೂಟತತ್ವದ ಮೇಲಿನ ದಾಳಿಯನ್ನು ತೀವ್ರಗೊಳಿಸುತ್ತಾ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜ್ಯಪಾಲರುಗಳು ಮತ್ತು ಉಪರಾಜ್ಯಪಾಲರುಗಳು ಸಾಂವಿಧಾನಿಕ ನಿಲುವನ್ನು ನಿರ್ಲಜ್ಜವಾಗಿ ಉಲ್ಲಂಘಿಸಿ ಆಳುವ ಪಕ್ಷದ ರಾಜಕೀಯ ಉದ್ದೇಶಗಳನ್ನು ಈಡೇರಿಸುವನ್ನು ಮುಂದುವರೆಸುತ್ತಿದ್ದಾರೆ. ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಈಗ ತಮಿಳುನಾಡಿನ ರಾಜ್ಯಪಾಲರುಗಳು ಮತ್ತು ದಿಲ್ಲಿ, ಲಕ್ಷದ್ವೀಪ, ಅಂಡಮಾನ್ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಉಪರಾಜ್ಯಪಾಲರುಗಳು ತಮ್ಮ ಸಾಂವಿಧಾನಿಕ ಸ್ಥಾನಗಳನ್ನು ಸಂಪೂರ್ಣವಾಗಿ ಳ್ಳುತ್ತಾರೆ
ತಮಿಳುನಾಡು ರಾಜ್ಯಪಾಲರು ವಿಧಾನಸಭೆಗೆ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಭಾಗವನ್ನು ಓದಲು ನಿರಾಕರಿಸಿದರು. ಕೇರಳದ ರಾಜ್ಯಪಾಲರು ಚುನಾಯಿತ ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ಕೊಡದೆ ಸುಮ್ಮನೆ ಕುಳಿತುಕೊಳ್ಳುವುದನ್ನು ಮುಂದುವರೆಸಿದ್ದಾರೆ.
ರಾಜ್ಯಪಾಲರ ಹುದ್ದೆಯನ್ನು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಪಾತ್ರವನ್ನು ದುರ್ಬಲಗೊಳಿಸಲು ಒಂದು ಸಾಧನವಾಗಿ ಬಳಸಲಾಗುತ್ತಿದೆ. ಇದರಲ್ಲಿ ಒಕ್ಕೂಟತತ್ವ-ವಿರೋಧಿ ಪ್ರವೃತ್ತಿಯ ಮತ್ತು ಅಧಿಕಾರಗಳ ಕೇಂದ್ರೀಕರಣದ ಗೀಳಿನ ದುರ್ವಾಸನೆ ಬರುತ್ತಿದೆ.
ತ್ರಿಪುರ ವಿಧಾನಸಭೆ ಚುನಾವಣೆ
ಪ್ರಜಾಪ್ರಭುತ್ವ ಮತ್ತು ಕಾನೂನು ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಭಯೋತ್ಪಾದನೆ ಮತ್ತು ಹಿಂಸಾಚಾರದ ರಾಜಕೀಯವನ್ನು ಹರಿಯ ಬಿಟ್ಟಿರುವ ಬಿಜೆಪಿ ರಾಜ್ಯ ಸರ್ಕಾರವನ್ನು ಅದಿಕಾರದಿಂದ ತೆಗೆದುಹಾಕುವಂತೆ ಮಾಡಲು ಸಿಪಿಐ(ಎಂ) ತ್ರಿಪುರಾದ ಎಲ್ಲಾ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ಸಹಕಾರವನ್ನು ಕೋರುತ್ತಿದೆ.
ಹಿಂಸಾಚಾರದ ವಿಧಾನವು ಸ್ಪಷ್ಟವಾಗಿ ಭಯೋತ್ಪಾದನೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಇದು ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನ ನಡೆಯುವಂತೆ ಮಾಡುವುದರ ಮೇಲೆ ಖಂಡಿತವಾಗಿಯೂ ದುಷ್ಪರಿಣಾಮ ಬೀರುತ್ತದೆ. ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನ ನಡೆಯುವಂತೆ ಖಾತ್ರಿಪಡಿಸಲು ಭಾರತದ ಚುನಾವಣಾ ಆಯೋಗ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪೂರ್ವಭಾವಿಯಾಗಿ ಮಧ್ಯಪ್ರವೇಶಿಸಬೇಕು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು.
ಕೇಂದ್ರ ಸಮಿತಿ ಕರೆಗಳು
- ತ್ರಿಪುರಾದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗಳನ್ನು ನಡೆಸಲು ಪೂರ್ವ ಷರತ್ತಾಗಿ.
ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ಮರುಸ್ಥಾಪಿಸಲು ತ್ರಿಪುರಾದ ಜನತೆ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳೊಂದಿಗೆ ಸೌಹಾರ್ದ .
ಸಿಪಿಐ(ಎಂ) ದೇಶಾದ್ಯಂತ ಸೌಹಾರ್ದವನ್ನು ವ್ಯಕ್ತಪಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.
- ಹೆಚ್ಚುತ್ತಿರುವ ನಿರುದ್ಯೋಗ, ಬಡತನ ಮತ್ತು ಅಸಮಾನತೆಗಳೊಂದಿಗೆ ಜನರ ಜೀವನೋಪಾಯದ ಮೇಲಿನ ನಿರಂತರ ದಾಳಿಗಳ ವಿರುದ್ಧ ಫೆಬ್ರವರಿಯ ಕೊನೆಯ ವಾರದಲ್ಲಿ 22 ರಿಂದ 28 ರ ವರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕಾರ್ಯಾಚರಣೆಗೆ ಕರೆ.
2023-24ರ ಕೇಂದ್ರ ಬಜೆಟ್ನಲ್ಲಿ ಉದ್ಭವಿಸುವ ಪ್ರಶ್ನೆಗಳ ಜೊತೆಗೆ, ಈ ಪ್ರತಿಭಟನಾ ಕಾರ್ಯಾಚರಣೆಗಳು ಈ ಕೆಳಗಿನ ಬೇಡಿಕೆಗಳನ್ನು ಎತ್ತಿ ತೋರಿಸುತ್ತವೆ:
- ಉದ್ಯೋಗ ಸೃಷ್ಟಿಸುವ ಮೂಲಸೌಕರ್ಯ ಯೋಜನೆಗಳಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಬೇಕು.
- 5 ಕೆಜಿ ಉಚಿತ ಆಹಾರ ಧಾನ್ಯಗಳ ಜೊತೆಗೆ 5 ಕೆಜಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಮತ್ತೆ ಕೊಡಬೇಕು.
- ಹೆಚ್ಚಿನ ಕೂಲಿಯೊಂದಿಗೆ ಮನರೇಗಕ್ಕೆ ಹಂಚಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಬೇಕು
- ಸಂಪತ್ತು ಮತ್ತು ಪಿತ್ರಾರ್ಜಿತ ತೆರಿಗೆಯನ್ನು ವಿಧಿಸಬೇಕು.
- ಶ್ರೀಮಂತರಿಗೆ ತೆರಿಗೆ ರಿಯಾಯಿತಿಗಳನ್ನು ಹಿಂಪಡೆಯಬೇಕು ಮತ್ತು ಅತಿ ಶ್ರೀಮಂತರ ಮೇಲೆ ಒಂದು ತೆರಿಗೆಯನ್ನು ವಿಧಿಸಬೇಕು.
- ಔಷಧಿಗಳು ಸೇರಿದಂತೆ ಆಹಾರ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಹಿಂಪಡೆಯಬೇಕು.
- ಏಪ್ರಿಲ್ 5, 2023 ರಂದು ಸಂಸತ್ತಿಗೆ ಮಜ್ದೂರ್-ಕಿಸಾನ್ ರ್ಯಾಲಿಯ ಕರೆಗೆ ಸಿಪಿಐ(ಎಂ) ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ.
ಮಾರ್ಚ್ ತಿಂಗಳ ಅವಧಿಯಲ್ಲಿ ಸಿಪಿಐ(ಎಂ) ದೇಶಾದ್ಯಂತ ಈ ಕೆಳಗಿನ ವಿಷಯಗಳ ಮೇಲೆ ರಾಜಕೀಯ ಪ್ರಚಾರಾಂದೋಲನ ಮತ್ತು ಚಟುವಟಿಕೆಗಳನ್ನು ಆಯೋಜಿಸುತ್ತದೆ:
(i) ಒಕ್ಕೂಟತತ್ವದ ಮೇಲೆ ಹೆಚ್ಚುತ್ತಿರುವ ದಾಳಿಗಳೊಂದಿಗೆ, ಚುನಾಯಿತ ರಾಜ್ಯ ಸರ್ಕಾರಗಳ ವಿರುದ್ಧ, ವಿಶೇಷವಾಗಿ ಬಿಜೆಪಿಯೇತರ ರಾಜ್ಯ ಸರ್ಕಾರಗಳ ವಿರುದ್ಧ ಬಿಜೆಪಿಯ ನೀತಿಗಳ ವಿರುದ್ಧ ಪ್ರತಿಭಟನೆ, ಮತ್ತು ಒಕ್ಕೂಟ ರಚನೆಯನ್ನು ನಾಶಪಡಿಸುವ ಏಕಘಟಕ ಪ್ರಭುತ್ವ ರಚನೆಯನ್ನು ಹೇರುವ ಪ್ರಯತ್ನಗಳನ್ನು ವಿರೋಧಿಸುವುದು.
(ii) ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಬಿಜೆಪಿ ಸರ್ಕಾರದ ಪ್ರಯತ್ನಗಳನ್ನು ಖಂಡಿಸುವ ಪ್ರಚಾರಾಂದೋಲನಗಳು. ಉನ್ನತ ನ್ಯಾಯಾಂಗವನ್ನು ಸರ್ಕಾರಕ್ಕೆ ಅಧೀನಗೊಳಿಸುವ ಮೋದಿ ಸರ್ಕಾರದ ಪ್ರಯತ್ನಗಳ ವಿರುದ್ಧ ನ್ಯಾಯಾಂಗದ ಸಾಂವಿಧಾನಿಕ ಪಾತ್ರವನ್ನು ರಕ್ಷಿಸಲು ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸಜ್ಜುಗೊಳಿಸಬೇಕು.
(iii) ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಸುಧಾರಣೆಗಳಲ್ಲಿ ಪ್ರಜಾಪ್ರಭುತ್ವ ಮತ್ತು ಸಮಾನ ಅವಕಾಶ. ಸಿಪಿಐ(ಎಂ)ನ 23ನೇ ಮಹಾಧಿವೇಶನ ತನ್ನ ರಾಜಕೀಯ ನಿರ್ಣಯದಲ್ಲಿ ತುರ್ತಾಗಿ ತರಬೇಕಾದ ಚುನಾವಣಾ ಸುಧಾರಣೆಗಳನ್ನು ಎತ್ತಿ ತೋರಿಸಿದೆ.
(iv) ಬಲಪಂಥೀಯ ಇಸ್ರೇಲಿ ಸರ್ಕಾರದ ದಮನದ ವಿರುದ್ಧ ಪ್ಯಾಲೇಸ್ಟಿನಿಯನ್ ಜನರೊಂದಿಗೆ ಸೌಹಾರ್ದ ಅಭಿಯಾನಗಳನ್ನು ಸಂಘಟಿಸುವುದು.