ಬಿಜೆಪಿ ಪಕ್ಷವು ತ್ರಿಪುರಾದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), ಎಡರಂಗ ಮತ್ತು ಪ್ರತಿಪಕ್ಷದ ಕಾರ್ಯಕರ್ತರ ವಿರುದ್ಧ ಚುನಾವಣೋತ್ತರ ಹಿಂಸಾಚಾರವನ್ನುನಡೆಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಮಾರ್ಚ್ 2 ರಂದು ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಮತ್ತು ಬಿಜೆಪಿ ಕಷ್ಟಪಟ್ಟು ಬಹುಮತದತ್ತ ಸಾಗುತ್ತಿದ್ದಂತೆ, ತ್ರಿಪುರಾದಲ್ಲಿ ಹಗಲಿನಲ್ಲೇ ಪ್ರಜಾಪ್ರಭುತ್ವವನ್ನು ಸಾಯಿಸುವ ಹಿಂಸಾಚಾರದ ಕಿಚ್ಚು ಹೊತ್ತಿಸಲಾಯಿತು. ತನ್ನ ಮತ ಗಳಿಕೆಯಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ನಷ್ಟವಾಗಿದೆ, ತೆಳುವಾದ ಬಹುಮತವಷ್ಟೇ ಸಿಕ್ಕಿದೆ, ಮತ್ತು ತನ್ನ ಸಮ್ಮಿಶ್ರ ಕೂಟ 11 ಸ್ಥಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಬಿಜೆಪಿಯು ಅಂತಹ ಹಿಂಸಾಚಾರದ ಬೆಂಕಿ ಹೊತ್ತಿಸಿದೆ ಎಂದು ಸಿಪಿಐ(ಎಂ) ಹೇಳಿದೆ.
ರಾಜ್ಯದೆಲ್ಲೆಡೆ ಸಿಪಿಐ(ಎಂ) ಬೆಂಬಲಿಗರ ಮನೆ ಮತ್ತು ಆಸ್ತಿಪಾಸ್ತಿ ಧ್ವಂಸ, ದೈಹಿಕ ದಾಳಿ, ಹಣ ಸುಲಿಗೆ, ಜನಸಾಮಾನ್ಯರ ಜೀವನೋಪಾಯಕ್ಕೆ ನಿರ್ಬಂಧ ಹೇರುವ ಹಿಂಸಾತ್ಮಕ ದಾಳಿಗಳು ನಡೆಯುತ್ತಲೇ ಇವೆ. ಸಿಪಿಐ(ಎಂ) ಮತ್ತು ಎಡರಂಗದ ನಿಯೋಗವನ್ನು ಭೇಟಿ ಮಾಡಲು ರಾಜ್ಯಪಾಲರು ಅಲಭ್ಯವಾಗಿರುವುದರಿಂದ ಇದುವರೆಗೆ ಮೂರು ಜೀವಗಳನ್ನು ಕಳೆದುಕೊಂಡಿರುವ ಒಟ್ಟು ಸಾವಿರಕ್ಕೂ ಹೆಚ್ಚು ಘಟನೆಗಳ ಪೈಕಿ 668 ಪ್ರಕರಣಗಳ ವಿವರಗಳನ್ನು ರಾಜ್ಯ ಆಡಳಿತಕ್ಕೆ ಸಲ್ಲಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಮತ್ತು ಸಂತ್ರಸ್ತರಿಗೆ ಅಗತ್ಯವಾದ ಆರ್ಥಿಕ ಮತ್ತು ವೈದ್ಯಕೀಯ ಪರಿಹಾರವನ್ನು ಒದಗಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ರಾಜ್ಯ ಆಡಳಿತ ಮತ್ತು ಕಾನೂನು ಜಾರಿ ವ್ಯವಸ್ಥೆಗಳಿಗೆ ಪೊಲಿಟ್ ಬ್ಯೂರೋ ಕೇಳಿದೆ.
ತ್ರಿಪುರಾದಲ್ಲಿ ಬಿಜೆಪಿಯಿಂದ ಈ ಪ್ರಜಾಪ್ರಭುತ್ವದ ಕೊಲೆ ಮತ್ತು ಭಯೋತ್ಪಾದಕ ರಾಜಕಾರಣದ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆಗಳನ್ನು ಸಂಘಟಿಸಲು ಸಿಪಿಐ(ಎಂ) ಪೊಲಿಟ್ ಬ್ಯೂರೋ ತನ್ನ ಘಟಕಗಳಿಗೆ ಕರೆ ನೀಡಿದೆ.