ಇ.ಡಿ.: ಪ್ರತಿಪಕ್ಷದ ವಿರುದ್ಧ ಹೊಸ ಅಸ್ತ್ರ ದುರುಪಯೋಗದ ಪರಾಕಾಷ್ಠೆ

ಪ್ರಕಾಶ್ ಕಾರಟ್‌

Prakash Karat
ಪ್ರಕಾಶ್ ಕಾರಟ್‌

ಪರಸ್ಪರರ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ಬಳಸುವಂತೆ ಬಿಜೆಪಿ ಸರಕಾರವನ್ನು ಆಗ್ರಹಿಸಲು ಪ್ರತಿಯೊಂದು ಪಕ್ಷವೂ ಉತ್ಸುಕವಾಗಿದೆ. ಪ್ರತಿಪಕ್ಷದಲ್ಲಿರುವ ಪಕ್ಷಗಳು ಪರಸ್ಪರ ವಿರುದ್ಧವಾದ ರಾಜಕೀಯ ಮತ್ತು ಹಿತಗಳನ್ನು ಹೊಂದಿರುವುದು ಸಹಜವೇ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರರ ವಿರುದ್ಧ ಸೆಣಸಲು ಅವುಗಳು ಸ್ವತಂತ್ರವಾಗಿವೆ. ಆದರೆ, ಮೋದಿ ಸರಕಾರದ ಸರ್ವಾಧಿಕಾರಿ-ಫ್ಯಾಸಿಸ್ಟ್ ಆಕ್ರಮಣ ನಡೆಯುತ್ತಿರುವಾಗ ಅವುಗಳು ಕನಿಷ್ಠ ಪಕ್ಷ  ತಮ್ಮ ಕ್ಷುಲ್ಲಕ ರಾಜಕೀಯವನ್ನು ಬದಿಗಿಟ್ಟು ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷಗಳ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕೆಂದು ನಿರೀಕ್ಷಿಸಬೇಕಾಗಿದೆ. ಇದಕ್ಕಿಂತ ಬೇರೆಯಾದ ಯಾವುದೇ ನಿಲುವು ಸ್ವಯಂ ಸೋಲಾಗುತ್ತದೆ.

ಮೋದಿ ಸರಕಾರ ಪ್ರತಿಪಕ್ಷದ ವಿರುದ್ಧ ಹೊಸ ದಾಳಿ ಆರಂಭಿಸಿರುವುದರಲ್ಲಿ ಕೇಂದ್ರೀಯ ಸಂಸ್ಥೆಗಳ ಚಟುವಟಿಕೆಗಳ ಮಹಾಪೂರವೇ ಕಾಣಿಸುತ್ತಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಅನುಷ್ಠಾನ ನಿರ್ದೇಶನಾಲಯ (ಇ.ಡಿ.) ಇವೇ ಆ ಕೇಂದ್ರೀಯ ಸಂಸ್ಥೆಗಳು. ಕಳೆದ ಎರಡು ವಾರಗಳಲ್ಲಿ ಸಿಬಿಐ, ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಪ್ರಶ್ನಿಸಲೆಂದು ಕರೆಸಿಕೊಂಡು ಬಂಧಿಸಿದೆ. ಆವಾಗಿನಿಂದ, ಅವರು ಜೈಲಿನಲ್ಲಿರುವಾಗಲೇ ಇ.ಡಿ. ಅವರನ್ನು ಬಂಧಿಸಿದೆ. ಸಿಬಿಐ, ಪಾಟ್ನಾದಲ್ಲಿ ಆರ್‌ಜೆಡಿ ನಾಯಕಿ ಹಾಗೂ ಲಾಲೂ ಪ್ರಸಾದ್ ಯಾದವ್‌ ರ ಪತ್ನಿ ರಾಬ್ಡಿ ದೇವಿಯನ್ನೂ ಪ್ರಶ್ನಿಸಿದೆ. ಅದರ ಬೆನ್ನಲ್ಲೇ ದೆಹಲಿಯಲ್ಲಿ ಲಾಲೂ ಪ್ರಸಾದ್ ಯಾದವ್‌ರನ್ನು ಪ್ರಶ್ನಿಸಿದೆ. ಒಂದು ದಶಕಕ್ಕಿಂತಲೂ ಹಿಂದೆ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಈ ವಿಚಾರಣೆ ನಡೆದಿದೆ. ಸಿಬಿಐ ಕ್ರಮದ ನಂತರ ಇ.ಡಿ. ಕೂಡ ಕಣಕ್ಕಿಳಿದು ದೆಹಲಿ ಸೇರಿದಂತೆ ೨೪ ಸ್ಥಳಗಳಲ್ಲಿ ತೇಜಸ್ವಿ ಯಾದವ್ ಮತ್ತು ಕುಟುಂಬದ ಇತರ ಸದಸ್ಯರು ಮತ್ತು ಸಹಚರರ ಮೇಲೆ ದಾಳಿ ನಡೆಸಿದೆ. ಇದು ಕಾರ್ಯಾಚರಣೆಯ ವಿಧಾನವಾಗಿದೆ (ಮೋಡಸ್ ಆಪರೆಂಡಿ): ಸಿಬಿಐ ತನಿಖಾ ವರದಿ ಸಲ್ಲಿಸುತ್ತದೆ. ಅದರ ಆಧಾರದಲ್ಲಿ ಇ.ಡಿ. ಕಾರ್ಯಾಚರಣೆಗಿಳಿದು ಹಣಕಾಸು ದುರುಪಯೋಗ ತಡೆ ಕಾನೂನು (ಪಿಎಂಎಲ್‌ಎ) ಅನ್ವಯ ಕ್ರಮಕ್ಕೆ ಮುಂದಾಗುತ್ತದೆ. ಪಿಎಂಎಲ್‌ಎ ನಿಯಮಗಳು ಕರಾಳವಾಗಿವೆ. ಬಂಧಿಸಲು, ಶೋಧಿಸಲು ಮತ್ತು ಜೈಲಿನಲ್ಲಿರುವ ವ್ಯಕ್ತಿಗಳ ಆಸ್ತಿ ಮುಟ್ಟುಗೋಲು ಹಾಕಲು ಇ.ಡಿ.ಗೆ ಅದು ವ್ಯಾಪಕ ಅಧಿಕಾರ ನೀಡುತ್ತದೆ. ಬಂಧಿತರು ಜಾಮೀನು ಪಡೆಯುವುದೂ ದುಸ್ತರವಾಗಿದೆ.

ಮೋದಿ ಸರಕಾರವು ಕೇಂದ್ರೀಯ ಸಂಸ್ಥೆಗಳನ್ನು, ಅದರಲ್ಲೂ ವಿಶೇಷವಾಗಿ ಇ.ಡಿ.ಯನ್ನು ಪ್ರತಿಪಕ್ಷದ ವಿರುದ್ಧ ಸಾಧನವಾಗಿ ಪರಿವರ್ತಿಸಿದೆ. ಇ.ಡಿ. ಮತ್ತು ಸಿಬಿಐಗಳನ್ನು ಸಾಧನವಾಗಿ ಬಳಸಿಕೊಳ್ಳುವುದು ರಾಜಕೀಯ ಪ್ರೇರಿತವಾಗಿದೆ. ಅದು ಎರಡು ಉದ್ದೇಶಗಳನ್ನು ಈಡೇರಿಸುತ್ತದೆ. ಒಂದೆಡೆ, ಯಾವುದೇ ವಿಚಾರಣೆ ಅಥವಾ ಶಿಕ್ಷೆಯಿಲ್ಲದೆ ದೀರ್ಘ ಸಮಯದಿಂದ ಜೈಲಿನಲ್ಲಿರುವ ಪ್ರಮುಖ ನಾಯಕರನ್ನು ಟಾರ್ಗೆಟ್ ಮಾಡಿ ಪ್ರತಿಪಕ್ಷವನ್ನು ದಮನಿಸಲು ಅದನ್ನು ಬಳಸಲಾಗುತ್ತಿದೆ. ಈ ಪ್ರಕ್ರಿಯೆಯೇ ಒಂದು ಶಿಕ್ಷೆಯಾಗುತ್ತದೆ. ಇನ್ನೊಂದೆಡೆ, ಸಿಬಿಐ/ಇಡಿ ಕ್ರಮದ ಬೆದರಿಕೆಯೊಡ್ಡಿ ಆಯ್ದ ನಾಯಕರು ಬಿಜೆಪಿ ಸೇರುವಂತೆ ಮಾಡಿ ಪ್ರತಿಪಕ್ಷವನ್ನು ಒಡೆಯುವುದು ಇನ್ನೊಂದು ಉದ್ದೇಶವಾಗಿದೆ.

ಆಮ್ ಆದ್ಮಿ ಪಕ್ಷವನ್ನು(ಆಪ್) ದೆಹಲಿಯಲ್ಲಿ ರಾಜಕೀಯವಾಗಿ ಸೋಲಿಸಲು ಬಿಜೆಪಿಗೆ ಕಷ್ಟವಾಗಿದೆ. ೨೦೨೨ರ ಡಿಸೆಂಬರ್‌ನಲ್ಲಿ ದೆಹಲಿ ಮುನಿಸಿಪಲ್ ಕಾರ್ಪೊರೇಷನ್‌ಗೆ ನಡೆದ ಚುನಾವಣೆಯಲ್ಲಿ ಆಪ್ ಗೆಲುವು ಇತ್ತೀಚಿನ ಉದಾಹರಣೆಯಾಗಿದೆ. ಆಪ್ ಸರಕಾರದ ಆರೋಗ್ಯ ಮಂತ್ರಿ ಸತ್ಯೇಂದ್ರ ಜೈನ್‌ರನ್ನು ೨೦೨೨ರ ಮೇನಲ್ಲಿ ಬಂಧಿಸಲಾಗಿದ್ದು ಒಂಬತ್ತು ತಿಂಗಳ ನಂತರವೂ ಅವರು ಸೆರೆಮನೆಯಲ್ಲಿದ್ದಾರೆ. ಇದೀಗ ಎರಡನೇ ಸಚಿವ ಹಾಗೂ ಆಪ್‌ ನ ಪ್ರಮುಖ ನಾಯಕ ಮನೀಶ್ ಸಿಸೋಡಿಯಾರನ್ನು ತಥಾಕಥಿತ ಮದ್ಯ ಹಗರಣದಲ್ಲಿ ಸೆರೆಮನೆಗೆ ತಳ್ಳಲಾಗಿದೆ. ಸಿಬಿಐ ಮಾಡಿದ ಬಂಧನಕ್ಕೆ ಪೂರಕವಾಗಿ ಇ.ಡಿ. ಕೇಸ್ ದಾಖಲಿಸಿದ್ದು ಅವರಿಗೆ ಜಾಮೀನು ಸಿಗುವುದೂ ಕಷ್ಟವಾಗಿದೆ.

ತೆಲಂಗಾಣದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯದಲ್ಲಿ ಭಾರಿ ಸಾಧನೆ ಮಾಡಲು ಬಿಜೆಪಿ ಹರಸಾಹಸ ಮಾಡುತ್ತಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಪುತ್ರಿ ಕೆ. ಕವಿತಾರನ್ನು ದೆಹಲಿಯ ಅಬಕಾರಿ ಹಗರಣದ ಸಂಬಂಧ ವಿಚಾರಣೆಗಾಗಿ ಇ.ಡಿ. ಕರೆಸಿರುವುದು, ಚುನಾವಣಾ ಲಾಭಕ್ಕಾಗಿ ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಬಿಹಾರದಲ್ಲಿ, ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹಳೇ ಕೇಸೊಂದಕ್ಕೆ ಮರುಜೀವ ಕೊಟ್ಟಿರುವುದಕ್ಕೂ ರಾಜ್ಯದ ರಾಜಕೀಯ ವಿದ್ಯಮಾನಗಳಿಗೂ ನಂಟಿರುವುದನ್ನು ತೋರಿಸುತ್ತದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿ(ಯು), ಮಹಾಘಟಬಂಧನ್ ಸೇರಿರುವುದರಿಂದ ಬಿಜೆಪಿ ಪ್ರತ್ಯೇಕಗೊಂಡಿತ್ತು. ಮಹಾಘಟಬಂಧನ್ ಮೈತ್ರಿಯನ್ನು ಅಸ್ಥಿರಗೊಳಿಸಲು ಭ್ರಷ್ಟಾಚಾರದ ವಿಚಾರ ಮುಂದಿಟ್ಟುಕೊಂಡು ಕೇಂದ್ರೀಯ ಸಂಸ್ಥೆಗಳನ್ನು ಬಳಸುವುದು ಬಿಜೆಪಿಯ ಉದ್ದೇಶವಾಗಿದೆ. ವಿವಿಧ ಪ್ರತಿಪಕ್ಷಗಳ ನಾಯಕರಿಗೆ ಆಮಿಷವೊಡ್ಡಿ, ಒತ್ತಡ ಹೇರಿ ಅವರು ಪಕ್ಷಾಂತರ ಮಾಡಿ ಬಿಜೆಪಿಗೆ ಸೇರುವಂತೆ ಮಾಡಿ, ರಾಜಕೀಯ ಲಾಭ ಗಳಿಸುವುದು ಕೂಡ ಕೇಂದ್ರೀಯ ಸಂಸ್ಥೆಗಳನ್ನು ಬಳಸುವ ಹಿಂದಿನ ಇನ್ನೊಂದು ಉದ್ದೇಶವಾಗಿದೆ. ಅಸ್ಸಾಂನ ಹಾಲಿ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ಇದಕ್ಕೆ ಪ್ರಮುಖ ಉದಾಹರಣೆಯಾಗಿದ್ದಾರೆ. ಶರ್ಮಾ ಕಾಂಗ್ರೆಸ್‌ನಲ್ಲಿದ್ದಾಗ ಶಾರದಾ ಹಗರಣದಲ್ಲಿ ಸಿಬಿಐನ ತನಿಖೆಗೆ ಒಳಗಾಗಿದ್ದರು. ಬಿಜೆಪಿಗೆ ಸೇರ್ಪಡೆಯಾದ ನಂತರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

FqEjm24acAAk0ap
ಸತೀಶ್ ಆಚಾರ್ಯ

ಅದೇ ರೀತಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಹಾರಿದ ಸುವೇಂದು ಅಧಿಕಾರಿ ಮತ್ತು ಮಹಾರಾಷ್ಟ್ರದಲ್ಲಿ ನಾರಾಯಣ ರಾಣೆ ಅವರ ಉದಾಹರಣೆಗಳಿವೆ. ಮಹಾರಾಷ್ಟ್ರದಲ್ಲಿ ಶಿವ ಸೇನೆಯಲ್ಲಿ ಒಡಕುಂಟಾಗಿ ಮಹಾ ವಿಕಾಸ್ ಆಘಾಡಿ (ಎಂವಿಎ) ಸರಕಾರ ಪತನವಾಗಿದ್ದಕ್ಕೆ ಕೂಡ ಇ.ಡಿ. ನಡೆಸಿದ ವ್ಯವಸ್ಥಿತ ಕೆಲಸಕ್ಕೂ ಭಾಗಶಃ ಪಾಲಿದೆ. ಶಿವ ಸೇನೆಯ ಪ್ರತಾಪ್ ಸರನಾಯಕ್, ಯಾಮಿನಿ ಜಾಧವ್‌ರಂಥ ಶಿವ ಸೇನೆ ಶಾಸಕರು ಮತ್ತು ಭಾವನಾ ಗಾವಳಿಯಂಥ ಸಂಸತ್ ಸದಸ್ಯರಿಗೆ ಏಕನಾಥ ಶಿಂಧೆ ಬಣಕ್ಕೆ ಸೇರುವಂತೆ ಒತ್ತಡ ಹೇರಲಾಯಿತು. ಅವರುಗಳ ವಿರುದ್ಧ ಇ.ಡಿ. ಕೇಸ್‌ಗಳನ್ನು ದಾಖಲಿಸಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಈ ರೀತಿ ಮಾಡಲಾಯಿತು.

ಕರ್ನಾಟಕದ ಉದಾಹರಣೆ

ಕರ್ನಾಟಕದ ಇತ್ತೀಚಿನ ಭ್ರಷ್ಟಾಚಾರ ಪ್ರಕರಣವೊಂದು ಕೇಂದ್ರೀಯ ತನಿಖಾ ಸಂಸ್ಥೆಗಳ ಪಕ್ಷಪಾತಿ ದುರುಪಯೋಗ ಮತ್ತು ಅವುಗಳ ಏಕಮುಖ ಸ್ವರೂಪವನ್ನು ಕಣ್ಣಿಗೆ ರಾಚುವಂತೆ ಬಟಾಬಯಲುಗೊಳಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರದಡಿ ಆಳುವ ಬಿಜೆಪಿಯ ಶಾಸಕನ ಪುತ್ರ ಪ್ರಶಾಂತ್ ಮಾಡಾಳ್‌ನನ್ನು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆತನ ಕಚೇರಿ ಮತ್ತು ಮನೆಯಿಂದ ಒಟ್ಟು ೬.೭೩ ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಧ್ಯಕ್ಷರಾಗಿದ್ದ ನಿಗಮದಲ್ಲಿ ಸಂಬಂಧಪಟ್ಟ ಕೆಲಸಗಳನ್ನು ಮಾಡಿಕೊಡಲೆಂದು ಈ ಲಂಚಗಳನ್ನು ಪಡೆಯಲಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ ಶಾಸಕನಿಗೆ ೨೪ ಗಂಟೆಯೊಳಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ ಹಾಗೂ ಶಾಸಕನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಒಂದು ವೇಳೆ ಯಾವುದಾದರೂ ಪ್ರತಿಪಕ್ಷದ ನಾಯಕರಾಗಿದ್ದಿದ್ದರೆ ಸಿಬಿಐ ಮತ್ತು ಇ.ಡಿ. ತಕ್ಷಣವೇ ಕಾರ್ಯ ಪ್ರವೃತ್ತವಾಗುತ್ತಿದ್ದವು.

ರಾಜಕಾರಣಿಗಳ ವಿರುದ್ಧ ಇ.ಡಿ. ದಾಖಲಿಸಿಕೊಂಡಿರುವ ಶೇಕಡ ೯೫ರಷ್ಟು ಪ್ರಕರಣಗಳು ಪ್ರತಿಪಕ್ಷ ನಾಯಕರು ಮತ್ತು ಚುನಾಯಿತ ಜನಪ್ರತಿನಿಧಿಗಳ ವಿರುದ್ಧವಾಗಿವೆ. ಉಳಿದ ೫ ಶೇಕಡ ಪ್ರಕರಣಗಳನ್ನಾದರೂ ದಕ್ಷತೆಯಿಂದ ನಿರ್ವಹಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕಾಗಿದೆ.

ಇ.ಡಿ.ಯು ಸರ್ವಾಧಿಕಾರಿ ಆಡಳಿತದ ಒಂದು ವಿಶಿಷ್ಟ ಸಾಧನವಾಗಿದೆ. ೨೦೨೦ರಲ್ಲಿ ಪಿಎಂಎಲ್‌ಎಗೆ ಮಾಡಿದ ತಿದ್ದುಪಡಿಗಳು ಬಂಧನ, ಶೋಧ, ಆಸ್ತಿಪಾಸ್ತಿ ಮುಟ್ಟುಗೋಲಿಗೆ ವ್ಯಾಪಕ ಅಧಿಕಾರಗಳನ್ನು ಒದಗಿಸಿವೆ. ದುರದೃಷ್ಟವಶಾತ್, ಜಸ್ಟಿಸ್ ಎ.ಎಂ. ಖನ್ವಿಲ್ಕರ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ೨೦೨೨ರ ಜುಲೈನಲಿ ಈ ತಿದ್ದುಪಡಿಗಳನ್ನು ಎತ್ತಿ ಹಿಡಿದಿದೆ. ಎಫ್‌ಐಆರ್‌ಗೆ ಸಮಾನವಾದ ಎನ್‌ಫೋರ್ಸ್‌ ಮೆಂಟ್ ಕೇಸ್ ಇನ್‌ಫರ್ಮೇಶನ್ ರಿಪೋರ್ಟ್ (ಇಸಿಐಆರ್) ಅನ್ನು ಪ್ರತಿಯೊಂದು ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ಕಡ್ಡಾಯವಾಗಿ ನೀಡಬೇಕಾಗಿಲ್ಲ ಎನ್ನುವುದು ಈ ತಿದ್ದುಪಡಿಯಾಗಿದೆ. ಅದರಿಂದ ತೃಪ್ತರಾಗದೇ ಕಳೆದ ವಾರವಷ್ಟೇ ಮಾರ್ಚ್ ೭ರಂದು ಗೆಜೆಟ್ ಅಧಿಸೂಚನೆಯೊಂದನ್ನು ಹೊರಡಿಸಲಾಗಿದೆ. ಹಣಕಾಸು ಸಚಿವಾಲಯದಡಿಯ ಕಂದಾಯ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ರಾಜಕೀಯವಾಗಿ ಎಕ್ಸ್‌ಪೋಸ್ಸ್ ಆದ ವ್ಯಕ್ತಿಗಳು (ಪಿಇಪಿ) ಮತ್ತು ಎನ್‌ಜಿಒಗಳನ್ನು ಪಿಎಂಎಲ್‌ಎ ಕಾನೂನಿನ ವ್ಯಾಪ್ತಿಗೆ ತರಬಹುದಾಗಿದೆ. ಹಿರಿಯ ರಾಜಕಾರಣಿಗಳು, ಸರಕಾರಿ, ನ್ಯಾಯಾಂಗ ಅಥವಾ ಮಿಲಿಟರಿ ಅಧಿಕಾರಿಗಳ ವಿಚಾರದಲ್ಲಿ ಹೇಳುವುದಾದರೆ ಅಂಥ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹಣಕಾಸು ಇತಿಹಾಸವನ್ನು ಇ.ಡಿ. ಪಡೆದುಕೊಳ್ಳಬಹುದಾಗಿದೆ. ಪ್ರತಿಪಕ್ಷ ರಾಜಕಾರಣಿಗಳು ಮತ್ತು ಸರಕಾರೇತರ ಸಂಸ್ಥೆಗಳ ನಾಯಕರನ್ನು ಇನ್ನಷ್ಟು ಟಾರ್ಗೆಟ್ ಮಾಡುವುದಕ್ಕೆ ಬೆದರಿಕೆ ಹಾಕುವಂತಿದೆ ಇದು. ಕೇಂದ್ರೀಯ ಸಂಸ್ಥೆಗಳ ದುರುಪಯೋಗದಿಂದ ಆಗುವ ಅಪಾಯದ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆಯಾದರೂ ಕೆಲವು ಪಕ್ಷಗಳು ಈ ಸಂಬಂಧ ಕೈಗೊಂಡ ನಿಲುವುಗಳು ಒಗ್ಗಟ್ಟು ಹಾಗೂ ಪ್ರಬಲ ಕಾರ್ಯಾಚರಣೆ ನಡೆಸುವುದರಿಂದ ಗಮನವನ್ನು ಬೇರೆಡೆ ಸೆಳೆಯುತ್ತವೆ. ಆಪ್ ಮುಖಂಡ ಸಿಸೋಡಿಯಾರನ್ನು ಸಿಬಿಐ ಬಂಧಿಸಿದಾಗ ಕಾಂಗ್ರೆಸ್ ಪಕ್ಷ, ವಿಶೇಷವಾಗಿ ಅದರ ದೆಹಲಿ ಘಟಕವು ಅದನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕ್ರಮಕೈಗೊಳ್ಳುವಂತೆಯೂ ಆಗ್ರಹಿಸಿತು. ಆಪ್ ಸರಕಾರ ಒಂದು ಫೀಡ್ ಬ್ಯಾಕ್ ಘಟಕ (ಎಫ್‌ಬಿಯು) ಸ್ಥಾಪಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದು, ಸಿಸೋಡಿಯಾರನ್ನು ಭ್ರಷ್ಟಾಚಾರ ಕಾನೂನು ಅನ್ವಯ ತನಿಖೆಗೆ ಒಳಪಡಿಸಲು ಸಿಬಿಐಗೆ ಅನುಮತಿ ನೀಡಿದರಷ್ಟೇ ಸಾಲದು; ಆಪ್ ನಾಯಕರನ್ನು ದೇಶದ್ರೋಹಕ್ಕಾಗಿ ಪ್ರಾಸಿಕ್ಯೂಟ್ ಮಾಡಬೇಕು ಮತ್ತು ಕರಾಳವಾದ ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನನ್ನು (ಯುಎಪಿಎ) ಕೂಡ ಅವರ ವಿರುದ್ಧ ಬಳಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಪ್ ಮುಖಂಡರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹತ್ತು ವರ್ಷದ ಹಿಂದೆ ಎಫ್‌ಐಆರ್ ದಾಖಲಿಸಿದ್ದರೂ ರಾಹುಲ್ ಗಾಂಧಿಯನ್ನು ಬಂಧಿಸಿಲ್ಲವೇಕೆ ಎಂದು ಪ್ರಶ್ನಿಸಿದೆ. ಪರಸ್ಪರರ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ಬಳಸುವಂತೆ ಬಿಜೆಪಿ ಸರಕಾರವನ್ನು ಆಗ್ರಹಿಸಲು ಪ್ರತಿಯೊಂದು ಪಕ್ಷವೂ ಉತ್ಸುಕವಾಗಿದೆ. ಪ್ರತಿಪಕ್ಷದಲ್ಲಿರುವ ಪಕ್ಷಗಳು ಪರಸ್ಪರ ವಿರುದ್ಧವಾದ ರಾಜಕೀಯ ಮತ್ತು ಹಿತಗಳನ್ನು ಹೊಂದಿರುವುದು ಸಹಜವೇ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರರ ವಿರುದ್ಧ ಸೆಣಸಲು ಅವುಗಳು ಸ್ವತಂತ್ರವಾಗಿವೆ. ಆದರೆ, ಮೋದಿ ಸರಕಾರದ ಸರ್ವಾಧಿಕಾರಿ-ಫ್ಯಾಸಿಸ್ಟ್ ಆಕ್ರಮಣ ನಡೆಯುತ್ತಿರುವಾಗ ಅವುಗಳು ಕನಿಷ್ಠ ಪಕ್ಷ  ತಮ್ಮ ಕ್ಷುಲ್ಲಕ ರಾಜಕೀಯವನ್ನು ಬದಿಗಿಟ್ಟು ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷಗಳ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕೆಂದು ನಿರೀಕ್ಷಿಸಬೇಕಾಗಿದೆ. ಇದಕ್ಕಿಂತ ಬೇರೆಯಾದ ಯಾವುದೇ ನಿಲುವು ಸ್ವಯಂ ಸೋಲಾಗುತ್ತದೆ.

ಏನಿದ್ದರೂ ಇಡೀ ಪ್ರತಿಪಕ್ಷವು ಸಾಮಾನ್ಯ ಅಪಾಯವನ್ನು ಎದುರಿಸುತ್ತಿರುವುದರಿಂದ ಸಂಸತ್ತಿನ ಬಜೆಟ್ ಅಧಿವೇಶನದ ಪುನರಾರಂಭದ ವೇಳೆ ಬಹುತೇಕ ಪ್ರತಿಪಕ್ಷಗಳು ಒಟ್ಟಿಗೆ ಬಂದಿವೆ. ಟಾರ್ಗೆಟ್ ಮಾಡುವುದು ಹಾಗೂ ಕಿರುಕುಳ ಕೊಡುವುದಕ್ಕೆ ಅಂತ್ಯ ಹಾಡುವಂತೆ ಮತ್ತು ಅದಾನಿ-ಹಿಂಡನ್‌ಬರ್ಗ್ ಹಗರಣದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿ ೧೮ ಪ್ರತಿಪಕ್ಷಗಳ ಸಂಸದರು ಅನುಷ್ಠಾನ ನಿರ್ದೇಶನಾಲಯ ಕಚೇರಿಗೆ ಮೆರವಣಿಗೆ ಹೋಗಲು ಪ್ರಯತ್ನಿಸಿದ್ದಾರೆ. ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿರುವ ಕಾಂಗ್ರೆಸ್, ಆಪ್ ಮತ್ತು ಬಿಆರ್‌ಎಸ್‌ನಂಥ ಪಕ್ಷಗಳು ಜಂಟಿ ಪ್ರತಿಭಟನೆಯ ಭಾಗವಾಗಿದ್ದುದು ಒಳ್ಳೆಯ ಲಕ್ಷಣವಾಗಿದೆ. ಪ್ರತಿಪಕ್ಷಗಳ ಈ ಒಗ್ಗಟ್ಟಿನ ಜೊತೆಗೆ, ಪಿಎಂಎಲ್‌ಎದ ಕರಾಳ ನಿಯಮಗಳ ಪರಿಶೀಲನೆಗಾಗಿ ಸುಪ್ರೀಂ ಕೋರ್ಟ್ ಅನ್ನು ತುರ್ತಾಗಿ ಸಂಪರ್ಕಿಸಬೇಕಾಗಿದೆ. ಈ ಕಾನೂನುಬಾಹಿರ ಹಾಗೂ ಏಕಪಕ್ಷೀಯವಾದ ಈ ನಿಯಮಗಳನ್ನು ಇ.ಡಿ. ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯಲು ಇದು ಅಗತ್ಯವಾಗಿದೆ.

ಅನು: ವಿಶ್ವ

Leave a Reply

Your email address will not be published. Required fields are marked *