2023ರ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಅಭ್ಯರ್ಥಿಯಾಗಿ ಪಿ.ತಂಗರಾಜ್ ಸ್ಪರ್ಧೆ ಮಾಡಲಿದ್ದಾರೆ.
ಪಿ ತಂಗರಾಜ್ ಸಿಪಿಐ(ಎಂ) ಪಕ್ಷದ ತಾಲ್ಲೂಕು ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯರು. ಇವರು, ಕಾರ್ಮಿಕ ಸಂಘಟನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ನಗರದ ಮಾರಿಕುಪ್ಪಂನ ಸೌತ್ ಗಿಲ್ಬರ್ಟ್ಸ್ ನಲ್ಲಿ 2023ರ ಮಾರ್ಚ್ 19ರಂದು ನಡೆದ ಸಿಪಿಐ(ಎಂ) ರಾಜಕೀಯ ಸಮಾವೇಶದ ಸಭೆಯಲ್ಲಿ ಪಿ.ತಂಗರಾಜ್ ಆಯ್ಕೆ ಆಧಿಕೃತವಾಗಿ ಪ್ರಕಟಿಸಲಾಯಿತು.
ಪ್ರಸಕ್ತ ಹಿಂಬಾಗಿಲಿನಿಂದ ಅಧಿಕಾರವನ್ನು ಹಿಡಿದಿರುವ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಈಗ ಸರ್ಕಾರದಲ್ಲಿ ಆಡಳಿತವೇ ಇಲ್ಲ. ಆಡಳಿತ ವೈಫಲ್ಯ ತೋರಿಸಿರುವ ಈ ಸರ್ಕಾರ ತೊಲಗಿಸಿ ಜಾತ್ಯತೀತ, ಪ್ರಜಾಸತ್ತಾತ್ಮಕ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ. ಇಂತಹ ಸಂದರ್ಭದಲ್ಲಿ ಸಿಪಿಐ(ಎಂ) ಶಾಸಕರು ವಿಧಾನಸಭೆಯಲ್ಲಿ ಇರಬೇಕು. ಕೆಜಿಎಫ್ ಕ್ಷೇತ್ರದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮೊದಲ ಶಾಸಕರಿಂದ ಹಿಡಿದು ನಾಲ್ಕು ಬಾರಿ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿದ್ದವರು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಪ್ರಕಾಶ್ ಹೇಳಿದರು.
ಅಭ್ಯರ್ಥಿ ಪಿ.ತಂಗರಾಜ್ ಮಾತನಾಡಿ, ಬೆಮಲ್ ಕಾರ್ಖಾನೆಯಲ್ಲಿ ಉದ್ಯೋಗವಕಾಶ ಕಡಿಮೆಯಾಗಿದೆ. ಬೆಮಲ್ ಗುತ್ತಿಗೆ ಆಧಾರಿತ ನೌಕರರಿಗೆ ಯಾವುದೇ ಸೌಲಭ್ಯಗಳು ಲಭಿಸುತ್ತಿಲ್ಲ. ನಗರದ ಇತರ ರಾಜಕೀಯ ಪಕ್ಷಗಳ ಮುಖಂಡರಿಗೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಕ್ಷೇತ್ರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪಕ್ಷದ ಸೂಚನೆಯಂತೆ ಸ್ಪರ್ಧೆಗೆ ಇಳಿಯಲಿದ್ದೇನೆ ಎಂದು ಹೇಳಿದರು.
ಸಮಾವೇಶದಲ್ಲಿ ಪಕ್ಷದ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಪಿ.ಶ್ರೀನಿವಾಸ್, ಆನಂದನ್, ಎ.ಆರ್.ಬಾಬು ಇದ್ದರು.