ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ದಿನಾಂಕಗಳ ಪ್ರಕಟವಾಗುವ ಹಂತದಲ್ಲಿದ್ದೇವೆ. ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷವು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಿಂದ ಡಾ.ಅನಿಲ್ ಕುಮಾರ್ ಅವರನ್ನು ಕಣಕ್ಕೆ ಇಳಿಸಿದೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು, ದಲಿತರು, ಅಲ್ಪಸಂಖ್ಯಾತರು, ಮಧ್ಯಮ ವರ್ಗಗಳು, ಹೀಗೆ ಎಲ್ಲಾ ಜನರ ಸಮಸ್ಯೆಗಳಿಗಾಗಿ ನಿರಂತರವಾದ ಹೋರಾಟಗಳನ್ನು ನಡೆಸುತ್ತಾ ಸಿಪಿಐ(ಎಂ) ಪಕ್ಷವು ಬಾಗೇಪಲ್ಲಿ ಕ್ಷೇತ್ರದ ಜನತೆಯ ಕಣ್ಮಣಿಯಾಗಿದೆ. ಡಾ.ಅನಿಲ್ ಕುಮಾರ್ ಅವರು ಜನತೆಯ ವೈದ್ಯರಾಗಿ, ಜನಾನುರಾಗಿಯಾಗಿ ಕ್ಷೇತ್ರದ ಎಲ್ಲಾ ವಿಭಾಗದ ಜನರ ನಡುವೆಯೂ ಪ್ರೀತಿಪಾತ್ರರಾಗಿದ್ದಾರೆ. ಹೀಗಾಗಿ ಈ ಬಾರಿ ಸಿಪಿಐ(ಎಂ) ಪಕ್ಷವನ್ನು ವಿಧಾನಸಭೆಗೆ ಗೆಲ್ಲಿಸಿ ಕಳುಹಿಸಬೇಕೆಂದು ಕ್ಷೇತ್ರದ ಜನತೆಯ ಅಪೇಕ್ಷೆಯಾಗಿದೆ.
ಸಿಪಿಐ(ಎಂ)ಗೆ ಪೂರಕವಾದ ಪರಿಸ್ಥಿತಿಯಿಂದ ಗಲಿಬಿಲಿಗೊಂಡಿರುವ ಇತರೆ ಪಕ್ಷಗಳು, ಹೇಗಾದರೂ ಸಿಪಿಐ(ಎಂ) ಪಕ್ಷದ ಗೆಲುವನ್ನು ತಡೆಯಲೇಬೇಕೆಂದು ಅಡ್ಡ ಮಾರ್ಗಗಳನ್ನು ಹಿಡಿದಿದ್ದಾರೆ. ಸಿಪಿಐ(ಎಂ)ನಲ್ಲಿರುವ ಅತೃಪ್ತ ವ್ಯಕ್ತಿಗಳನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸಿಪಿಐ(ಎಂ)ನಲ್ಲಿರುವ ಕೆಲವು ಮುಖಂಡರು ಬಂಡವಾಳಶಾಹಿ ಪಕ್ಷಗಳ ಆಸೆ ಆಮಿಷಗಳಿಗೆ ಬಲಿಬಿದ್ದು ಸಿಪಿಐ(ಎಂ) ಪಕ್ಷಕ್ಕೆ ದ್ರೋಹ ಬಗೆದು ಪಕ್ಷ ಒಡೆಯುವ ಮತ್ತು ಪಕ್ಷದ ಕೇಂದ್ರ ಹಾಗೂ ರಾಜ್ಯ ನಾಯಕತ್ವದ ಮತ್ತು ಅಭ್ಯರ್ಥಿಯ ವಿರುದ್ಧ ನಿಂದನೆಯಲ್ಲಿ ತೊಡಗಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆಚ್.ಪಿ.ಲಕ್ಷ್ಮಿನಾರಾಯಣ (ರಾಜ್ಯ ಸಮಿತಿ ಸದಸ್ಯರು), ಮಂಜುನಾಥ ರೆಡ್ಡಿ, ಮಹಮ್ಮದ್ ಅಕ್ರಂ (ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು), ರವಿಚಂದ್ರಾರೆಡ್ಡಿ, ಆಂಜನೇಯರೆಡ್ಡಿ, ಫಾತಿಮಾ (ಜಿಲ್ಲಾ ಸಮಿತಿ ಸದಸ್ಯರು) ಮತ್ತು ಇವರ ಕೆಲವು ಹಿಂಬಾಲಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಛಾಟನೆ ಮಾಡಲು ಸಿಪಿಐ(ಎಂ)ನ ರಾಜ್ಯ ಸಮಿತಿ ತೀರ್ಮಾನಿಸಿದೆ.
ತಮ್ಮ ತತ್ವಭ್ರಷ್ಟ ಸ್ವಾರ್ಥ ಹಿತಾಸಕ್ತಿಗಳನ್ನು ಮರೆಮಾಚಿಕೊಳ್ಳಲು ಇವರುಗಳು, ಸಿಪಿಐ(ಎಂ)ನ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮುಖಂಡರ ಮೇಲೆ ಅರ್ಥವಿಲ್ಲದ ಅರೋಪಗಳನ್ನು ಮಾಡಿದ್ದಾರೆ. ಪಕ್ಷದ ಸಂಘಟನಾ ನಿಯಮಗಳನ್ನು ಮೀರಿದಂತಹ ಅಪೇಕ್ಷೆಯನ್ನು ಇವರು ಹೊಂದಿದ್ದಾರೆ. ಪಕ್ಷದ ಕೇಂದ್ರ ಸಮಿತಿ ಮತ್ತು ರಾಜ್ಯ ಸಮಿತಿ ಇವರನ್ನ ಸರಿದಾರಿಗೆ ತರುವ ಏನೆಲ್ಲಾ ಪ್ರಯತ್ನಗಳನ್ನು ಮಾಡಿದಾಗಲೂ ಇವರು ಸಿಪಿಐ(ಎಂ) ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ.
ಸಿಪಿಐ(ಎಂ) ಪಕ್ಷವು ದುಡಿಯುವ ಜನತೆಯ ಪಕ್ಷ. ಕೆಲವು ನಾಯಕರ ಸ್ವಾರ್ಥ ನಿಲುವುಗಳಿಗೆ ಪಕ್ಷದ ಸದಸ್ಯರು ಮತ್ತು ಬೆಂಬಲಿಗರು ವಿಚಲಿತಗೊಳ್ಳುವುದಿಲ್ಲ. ಇಡೀ ಕ್ಷೇತ್ರದ ಜನತೆ ಸಿಪಿಐ(ಎಂ)ನ್ನು ಗೆಲ್ಲಿಸಲು ತೀರ್ಮಾನಿಸಿಕೊಂಡಿದ್ದಾರೆ. ಪಕ್ಷವನ್ನು ದುರ್ಬಲಗೊಳಿಸಲು ಮತ್ತು ಬಂಡವಾಳಶಾಹಿ ಪಕ್ಷಗಳ ಜೊತೆಯಲ್ಲಿ ಕೈಜೋಡಿಸಲು ಪಿತೂರಿ ನಡೆಸಿರುವ ಮೇಲೆ ತಿಳಿಸಿದ ವ್ಯಕ್ತಿಗಳನ್ನು ನಿರ್ಲಕ್ಷಿಸಲು ಮತ್ತು ಸಿಪಿಐ(ಎಂ) ಪಕ್ಷವನ್ನು ಗೆಲ್ಲಿಸಲು ಇಡೀ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡುತ್ತೇವೆ.
ತಮ್ಮ ವಿಶ್ವಾಸಿ
ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ