ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲಿ ದಾಳಿಯಲ್ಲಿ “ನಾಗರಿಕರ ರಕ್ಷಣೆ ಮತ್ತು ಕಾನೂನು ಹಾಗೂ ಮಾನವೀಯ ಜವಾಬ್ದಾರಿಗಳನ್ನು ಎತ್ತಿಹಿಡಿಯುವುದು” ಎಂಬ ಮಾನವೀಯ ದೃಷ್ಟಿಯ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಭಾರೀ ಬೆಂಬಲದೊಂದಿಗೆ ಅಂಗೀಕರಿಸಿದೆ. ಆದರೆ ಭಾರತ ಇದರಲ್ಲಿ ಗೈರು ಹಾಜರಾಯಿತು ಎಂಬುದು ಆಘಾತಕರ ಸಂಗತಿ ಎಂದು ಸಿಪಿಐ(ಎಂ) ಮತ್ತು ಸಿಪಿಐ ಒಂದು ಜಂಟಿ ಹೇಳಿಕೆಯಲ್ಲಿ ಖೇದ ವ್ಯಕ್ತಪಡಿಸಿವೆ.
ಭಾರೀ ಬೆಂಬಲದೊಂದಿಗೆ ಅಂಗೀಕರಿಸಿದ ಒಂದು ನಿರ್ಣಯದಲ್ಲಿ ಭಾರತವು ಗೈರುಹಾಜರಾಗಿರುವುದು, ಎಷ್ಟರ ಮಟ್ಟಿಗೆ ಭಾರತದ ವಿದೇಶಾಂಗ ಧೋರಣೆಯು ಯುಎಸ್ ಸಾಮ್ರಾಜ್ಯಶಾಹಿಯ ಅಡಿಯಾಳು ಮಿತ್ರತ್ವದಿಂದ ಮತ್ತು ಯುಎಸ್-ಇಸ್ರೇಲ್-ಭಾರತದ ನಂಟನ್ನು ಕ್ರೋಢೀಕರಿಸುವ ಮೋದಿ ಸರ್ಕಾರದ ಕ್ರಮಗಳಿಂದ ರೂಪುಗೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ. ಇದು ಪ್ಯಾಲೇಸ್ಟಿನಿಯನ್ ಗುರಿಸಾಧನೆಗೆ ಭಾರತದ ದೀರ್ಘಕಾಲದ ಬೆಂಬಲಕ್ಕೆ ತದ್ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಸಹಿಮಾಡಿರುವ ಜಂಟಿ ಹೇಳಿಕೆ ಅಭಿಪ್ರಾಯ ಪಟ್ಟಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ನಿರ್ಣಯವನ್ನು ಅಂಗೀಕರಿಸುತ್ತಿದ್ದಂತೆ, ಇಸ್ರೇಲ್ ಗಾಜಾ ಪಟ್ಟಿಯಲ್ಲಿ ತನ್ನ ನರಹಂತಕ ವಾಯು ಮತ್ತು ಭೂ ದಾಳಿಯನ್ನು ಹೆಚ್ಚಿಸಿದೆ. ಇದು 22ಲಕ್ಷ ಪ್ಯಾಲೆಸ್ಟೀನಿಯನ್ನರಿಗೆ ನೆಲೆಯಾಗಿರುವ ಗಾಜಾದಲ್ಲಿ ಎಲ್ಲಾ ಸಂವಹನಗಳನ್ನು ಕಡಿದು ಹಾಕಿದೆ.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಭಾರೀ ಬೆಂಬಲ ಪಡೆದ ಆದೇಶವನ್ನು ಗೌರವಿಸಿ ತಕ್ಷಣವೇ ಕದನ ವಿರಾಮ ನಡೆಯಬೇಕು. 1967- ಪೂರ್ವದ ಗಡಿಗಳೊಂದಿಗೆ, ಪೂರ್ವ ಜೆರುಸಲೇಂನ್ನು ಪ್ಯಾಲೆಸ್ತೀನಿನ ರಾಜಧಾನಿಯಾಗುಳ್ಳ 2-ಪ್ರಭುತ್ವಗಳ ಭದ್ರತಾ ಸಮಿತಿಯ ಆದೇಶವನ್ನು ಜಾರಿಗೆ ತರಲು ವಿಶ್ವಸಂಸ್ಥೆ ತನ್ನನ್ನು ತಾನೇ ಪುನಶ್ಚೇತನಗೊಳಿಸಬೇಕು ಎಂದು ಜಂಟಿ ಹೇಳಿಕೆ ಆಗ್ರಹಿಸಿದೆ.